ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗುವ ಸಮಯದಲ್ಲೇ ಮನೆಯ ಅಂದವಾಗಿಡಿ!

Last Updated 8 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

‘ನಮ್ಮ ಮನೆಯನ್ನು ಸುಂದರವಾಗಿ ಅಲಂಕರಿಸಿಟ್ಟುಕೊಳ್ಳಬೇಕು’ – ಇದು ಪ್ರತಿಯೊಬ್ಬರ ಆಸೆ. ಆದರೆ ಕೆಲಸದ ಒತ್ತಡ, ಸಮಯದ ಕೊರತೆ ಈ ಆಸೆಗೆ ಅಡ್ಡಿಯಾಗುತ್ತಿದೆ. ಆದರೂ, ನೆಂಟರಿಷ್ಟರು, ಸ್ನೇಹಿತರು ಭೇಟಿ ನೀಡುತ್ತಾರೆಂದಾಗ, ಮನೆಯನ್ನು ಚೆನ್ನಾಗಿಟ್ಟುಕೊಳ್ಳಬೇಕು. ಹಾಗಾಗಿ, ಸಿಗುವ ಸಮಯದಲ್ಲೇ ಮನೆಯಲ್ಲಿರುವ ವಸ್ತುಗಳನ್ನೇ, ಆಚೀಚೆ ಜೋಡಿಸಿ, ಮನೆಯ ಅಂದವನ್ನು ಹೆಚ್ಚಿಸಬೇಕು, ಮನೆಯನ್ನು ಚೊಕ್ಕಟವಾಗಿ ಇಟ್ಟುಕೊಳ್ಳಬೇಕು. ಮನೆಯನ್ನು ಚಂದವಾಗಿ ಇಟ್ಟುಕೊಳ್ಳಬೇಕು ಎನ್ನುವುದೇನೋ ಸರಿ. ಆದರೆ, ಕಡಿಮೆ ಸಮಯದಲ್ಲಿ ಮನೆಯನ್ನು ಅಂದವಾಗಿಸುವುದು ಹೇಗೆ? ಇಲ್ಲಿದೆ ಟಿಪ್ಸ್‌..

ಪೀಠೋಪಕರಣ ಜೋಡಣೆ

ಹಲವರು ತಮ್ಮ ಮನೆಗಳಲ್ಲಿ ಪೀಠೋಪಕರಣಗಳನ್ನು ಒತ್ತೊತ್ತಾಗಿ ಜೋಡಿಸಿರುತ್ತಾರೆ. ಜಾಗದ ಅಭಾವವೂ ಇದಕ್ಕೆ ಕಾರಣ, ಎನ್ನಿ. ಆದರೆ, ಇದರಿಂದ ಮನೆಯ ಅಂದ ಹಾಳಾಗಬಹುದು. ಹಾಗಾಗಿ ಅಗತ್ಯವಿರುವಷ್ಟು ಪೀಠೋಪಕರಣಗಳನ್ನು ಇಟ್ಟುಕೊಳ್ಳಿ. ಅವುಗಳನ್ನು ಜೋಡಿಸುವಾಗ, ನಡುವೆ ಜಾಗ ಬಿಡಿ. ಹೀಗೆ ಬಿಡಿ ಬಿಡಿಯಾಗಿ ಜೋಡಿಸುವುದರಿಂದ ಮನೆಯೊಳಗೆ ಗಾಳಿ, ಬೆಳಕು ಚೆನ್ನಾಗಿ ಬರಲು ಸಹಾಯವಾಗುತ್ತದೆ. ಇದು ಮನೆಯ ಒಳಾಂಗಣವನ್ನು ಆಹ್ಲಾದಕರವಾಗಿಡಲು ನೆರವಾಗುತ್ತದೆ. ಹಾಗೆಯೇ,ಗೋಡೆಗೆ ತಾಗದಂತೆ ಪೀಠೋಪಕರಣಗಳನ್ನು ಇಡಬೇಕು. ಇದರಿಂದ ಗೋಡೆಯ ಅಂದ ಕೆಡದಂತೆ ರಕ್ಷಿಸಬಹುದು.

ತಾಜಾ ಹೂಗಳನ್ನು ಇರಿಸಿ

ಮನೆಯ ಅಲಂಕಾರದಲ್ಲಿ ಹೂವಿನ ಪಾತ್ರ ದೊಡ್ಡದು. ತಾಜಾ ಹೂಗಳು ಮನೆಯ ಅಂದ ಹೆಚ್ಚಿಸುವ ಜೊತೆಗೆ ಮನಸ್ಸಿಗೂ ಮುದ ನೀಡುತ್ತವೆ. ತಾಜಾ ಹೂವುಗಳನ್ನು ವಾಸ್‌ಗಳಲ್ಲಿ ಇರಿಸುವುದರಿಂದ ಮನೆಯ ಒಳಗೆ ಹೊಸತೊಂದು ಕಳೆ ಮೂಡುತ್ತದೆ. ಇದೂ ಸಹ ಕಡಿಮೆ ಸಮಯದಲ್ಲಿ ಮನೆಯ ಅಂದ ಹೆಚ್ಚಿಸಲು ನೆರವಾಗುತ್ತದೆ.

ಪ್ರತಿದಿನ ಹೊರಗಡೆಯಿಂದ ಹೂವು ಖರೀದಿಸಿ ತಂದು ಜೋಡಿಸುವುದು ಖರ್ಚು ಎನ್ನಿಸಬಹುದು. ಹಾಗಾಗಿ, ಮನೆಯ ಅಂಗಳದಲ್ಲೋ, ತಾರಸಿ ಮೇಲೋ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸಬಹುದು. ಇದರಿಂದ ಮನೆಯ ಒಳಗೆ ಹಾಗೂ ಹೊರಗೆ ಎರಡೂ ಕಡೆ ಆಹ್ಲಾದ ವಾತಾವರಣವಿರುತ್ತದೆ.

‘ಕೊಳ್ಳುವ’ ಅಭ್ಯಾಸಕ್ಕೆ ಕಡಿವಾಣ ಹಾಕಿ

ಕೆಲವರಿಗೆ ಮನೆ ತುಂಬಾ ವಸ್ತುಗಳನ್ನು ಇರಿಸಿಕೊಳ್ಳುವ ಹವ್ಯಾಸ. ಆದರೆ ಸಮಯದ ಅಭಾವದಿದಾಗಿ ಬಿಕರಿ ಮಾಡಿದ್ದ ವಸ್ತುಗಳನ್ನು ಸರಿಯಾಗಿ ಜೋಡಿಸಿಡಲು ಆಗುವುದಿಲ್ಲ. ಹೀಗಾಗಿ ಮನೆಯ ಅಂದವೂ ಕೆಡುತ್ತದೆ. ಹೀಗೆ ಸಮಯದ ಕೊರತೆ ಇರುವವರು, ಅನಗತ್ಯವಾದ ವಸ್ತುಗಳನ್ನು ಖರೀದಿಸಬೇಡಿ.

ಅಷ್ಟೇ ಅಲ್ಲ, ಈಗ ಮನೆಯಲ್ಲಿ ಯಾವುದು ನಿಮಗೆ ನಿರುಪಯುಕ್ತ ಎನ್ನಿಸುತ್ತದೋ ಆ ವಸ್ತುಗಳನ್ನು ವಿಲೇವಾರಿ ಮಾಡಿಬಿಡಿ. ಇಲ್ಲವೇ, ಸ್ಟೋರ್‌ರೂಮ್‌ನಲ್ಲಿ ಜೋಡಿಸಿಡಿ.ಬೇಕೆಂದಾಗ ಮಾತ್ರ ಆ ವಸ್ತುಗಳನ್ನು ಹೊರಗೆ ತೆಗೆದು ಬಳಸಿ. ಆಗ ಮನೆಯ ಒಳಗೆ ಜಾಗದ ಕೊರತೆಯೂ ನೀಗುತ್ತದೆ.

ಕಣ್ಣಿಗೆ ಕಂಡಿದ್ದೆಲ್ಲವನ್ನು ತಂದು ರಾಶಿ ಹಾಕಿಕೊಳ್ಳುತ್ತಿದ್ದರೆ, ಅವುಗಳ ವಿಲೇವಾರಿ ಮಾಡುವುದು ಕಷ್ಟ, ಮನೆಯನ್ನು ಅಂದವಾಗಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಬದಲು ಕಡಿಮೆ ವಸ್ತುಗಳಲ್ಲೇ ಮನೆ ಅಂದವಾಗಿ ಕಾಣುವಂತೆ ಜೋಡಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT