ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್ನಂಥ ಮಗಳೂ ಇಲ್ಲ...

Last Updated 23 ಜನವರಿ 2019, 19:45 IST
ಅಕ್ಷರ ಗಾತ್ರ

ಮಗು ಗಂಡಾದರೆ ಸಂಭ್ರಮ ಎನ್ನುವವರ ನಡುವೆ ಹೆಣ್ಣಾದರೆ ಸಾರ್ಥಕತೆ ಎನ್ನುವ ಮನೋಧರ್ಮವರೂ ಈಗ ಹೆಚ್ಚಾಗುತ್ತಿದ್ದಾರೆ. ಆರೋಗ್ಯಕರ ಬೆಳವಣಿಗೆ.ಗಂಡೋ ಹೆಣ್ಣೋ ನಮ್ಮ ಮನೆಯಲೊಂದು ಪುಟ್ಟ ಮಗುವಿರಲಿ, ಅದರ ನಗುವಿರಲಿ ಎನ್ನುವುದು ನಗರದ ಬಹುತೇಕ ಪೋಷಕರ ನಿಜವಾದ ಅಪೇಕ್ಷೆ.

ಒಂದು ಕಾಲದ ಸಮಾಜ ಹೆಣ್ಣು ಹುಟ್ಟಿದರೆ ಹಿಡಿ ಶಾಪ ಎನ್ನುವಂತಿತ್ತು. ಅದು ಧೋರಣೆಯಾಗಿ ಜನರೇಶನ್‌ ಆಳಿತು. ಆಧುನಿಕ ಯುಗದಲ್ಲೂ ಆ ಸೊಕ್ಕು ಉಳಿದುಕೊಂಡೇ ಬಂದಿದೆ. ಹೆಣ್ಣುಮಗುವಿನ ಉಳಿವಿಗೆ ಸರ್ಕಾರವೂ ಯೋಜನೆಗಳನ್ನು ರೂಪಿಸಬೇಕಾದ ಅನಿವಾರ್ಯತೆ ಬಂದಿತು ಅಂದರೆ! ಮತ್ತೊಂದೆಡೆ ಆಧುನಿಕ ಕಾಲದ ಒತ್ತಡದ ಬದುಕು ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಸಂತಾನ ಭಾಗ್ಯವೇ ಅಪರೂಪ ಎನ್ನುವಂತಾಗಿದೆ. ಇದು ಕೆಲವರ ಅನುಭವಕ್ಕೂ ಬಂದಿದೆ. ಹೆಣ್ಣೋ ಗಂಡೋ.. ಅಯ್ಯೋ ಮಗುವಾದರೆ ಸಾಕು ಎನ್ನುವವರು ಎಷ್ಟಿಲ್ಲ? ಈ ನಡುವೆ ಇದೋ ಬಂತು ನೋಡಿಜ. 24. ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ. ಸಂಭ್ರಮದ ಸಾರ್ಥಕದ ದಿನ.

ವಿದ್ಯಾವಂತ ಪೋಷಕರಲ್ಲಿ ಹೆಣ್ಣುಮಗುವಿನ ಕುರಿತ ತಾತ್ಸಾರ ಕಡಿಮೆಯಾಗಿಲ್ಲ ಎನ್ನುವ ಕೆಲ ವೈದ್ಯರು. ಗೆಳತಿಯಂಥ ಮಗಳೇ ಮನೆಯ ಸುಖ, ಸಂತಸ ಎಂಬ ಸಾರ್ಥಕ ಭಾವದ ಕೆಲ ಪೋಷಕರ ಸಂಭ್ರಮ. ಈ ಎರಡೂ ಭಾವ ಪ್ರಪಂಚದಲ್ಲಿ ನಡೆಸಿದ ಒಂದು ಪುಟ್ಟ ಪಯಣದಲ್ಲಿ ‘ಮೆಟ್ರೊ‘ಗೆ ದಕ್ಕಿದ್ದಿಷ್ಟು. ನಿಮ್ಮ ಮುಂದಿಡುತ್ತಿದ್ದೇವೆ.

**

ಮಗುವಾದರೆ ಸಾಕಪ್ಪಾ!

ಈ ಹಿಂದೆ ವರದಕ್ಷಿಣ ಇತ್ತು. ಇನ್ಮುಂದೆ ವಧುದಕ್ಷಿಣೆ ಬಂದರೆ ಆಶ್ಚರ್ಯವಿಲ್ಲ. ಉತ್ತರದ ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಲಿಂಗಾನುಪಾತ ಕುಸಿತ ಕಂಡಿದೆ. ಆದರೆ, ಬೆಂಗಳೂರಿನ ಒತ್ತಡದ ಬದುಕು, ಜೀವನಶೈಲಿಯಲ್ಲಿ ಹೆಣ್ಣೋ ಗಂಡೋ ಒಟ್ಟಿನಲ್ಲಿ ಒಂದು ಮಗುವಾದರೆ ಸಾಕು ಅನ್ನುವ ಭಾವನೆ ಇದೆ. ನಗರದಲ್ಲಿ ಭ್ರೂಣಲಿಂಗ ಪತ್ತೆ ಮಾಡುವುದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲಾ ಆಸ್ಪತ್ರೆ, ನರ್ಸಿಂಗ್ ಹೋಂಗಳಲ್ಲಿ ಈ ಬಗ್ಗೆ ಫಲಕಗಳನ್ನು ಅಳವಡಿಸಲಾಗಿದೆ.

–ಡಾ.ಪ್ರಕಾಶ್, ಜಿಲ್ಲಾ ಆರೋಗ್ಯಾಧಿಕಾರಿ

**

ಬದುಕಿನ ವಿನ್ಯಾಸಕ್ಕೆ ರಂಗು ತುಂಬಿದ ಮಗಳು!

ಇದೇ ಫೆ. 16ಕ್ಕೆ ಮಗಳು ಜನ್ಯಾಗೆ ನಾಲ್ಕು ವರ್ಷ ತುಂಬುತ್ತದೆ. ಮಗಳು ಹುಟ್ಟಿದಾಗ ಕಂಪಿಸುತ್ತಲೇ ಅವಳನ್ನು ಕೈಗೆತ್ತಿಕೊಂಡ ಕ್ಷಣವಿನ್ನೂ ಹಸಿರಾಗಿದೆ. ಅದು ಯಾವ ಭಾಗ್ಯಕ್ಕೂ ಸಾಟಿಯಿಲ್ಲದ ಕ್ಷಣ. ಆ ಸಂತಸ ಪದಗಳಿಗೆ ನಿಲುಕದ್ದು.

ಹೆಣ್ಣು ಮಗುವಿನ ಜೊತೆಗೊಬ್ಬಳು ಅಮ್ಮ ಹುಟ್ಟುತ್ತಾಳೆಂಬುದು ಲೋಕರೂಢಿಯ ಮಾತು. ಮಗಳು ಜನ್ಯಾ ವಿಚಾರದಲ್ಲಿಯೂ ಇದು ಅಕ್ಷರಶಃ ಸತ್ಯ. ನನ್ನ ತಂದೆ ಮತ್ತು ಮಡದಿಯ ಮನೆಯವರಿಗೆ ಗಂಡು ಮಗುವಾಗಲಿ ಅಂತೊಂದು ಆಸೆ ಇದ್ದರೂ ಇದ್ದಿರಬಹುದು. ಅದಕ್ಕೆ ಆ ಮನೆಯಲ್ಲಿ ಹೆಣ್ಣುಮಕ್ಕಳೇ ತುಂಬಿದ್ದರ ಹೊರತಾಗಿ ಮತ್ಯಾವ ಕಾರಣವೂ ಇರಲಿಲ್ಲ. ಆದರೆ ಈ ಕೂಸು ಹುಟ್ಟಿದ ನಂತರ ಅಂಥಾ ಆಸೆಗಳೆಲ್ಲ ಅದರ ಅಬೋಧ ನಗುವಿನಲ್ಲಿ, ಎದೆಗೇ ನಾಟಿದಂಥಾ ಮಿಸುಕಾಟಗಳಲ್ಲಿ ಕಳೆದು ಹೋಗಿ ಬಿಟ್ಟಿದೆ.

ಈಗ ಜನ್ಯಾ ಇಡೀ ಕುಟಂಬದ ಪ್ರೀತಿಯ ಕೂಸು. ನಮ್ಮೆಲ್ಲ ಆಲೋಚನೆಗಳ ಕೇಂದ್ರಬಿಂದು. ಅವಳ ಅಗಾಧ ನೆನಪಿನ ಶಕ್ತಿ ಬೆರಗು ಹುಟ್ಟಿಸುತ್ತೆ. ಒಮ್ಮೊಮ್ಮೆ ವಯಸ್ಸಿಗೆ ಮೀರಿದ ಆಲೋಚನೆಗಳ ಮೂಲಕ ಅಚ್ಚರಿ ಹುಟ್ಟಿಸಿ ಬಿಡುತ್ತಾಳೆ. ಮಗಳು ತೊಡೆಯೇರಿ ಕೂತಾಗ, ಕಣ್ಣೆದುರಿನ ಹೊಸಾ ಜಗತ್ತಿಗೆ ಹೊಳಪುಗಣ್ಣಿನಿಂದಲೇ ಮುಖಾಮುಖಿಯಾಗುವಾಗ ಈ ಎರಡೆರಡು ಕೆಲಸದೊತ್ತಡಗಳೆಲ್ಲವೂ ಮಾಯವಾಗಿ ನಿರಾಳವಾದಂತಾಗುತ್ತದೆ.

ಮನಸು ಧಾವಂತಕ್ಕೆ ಬಿದ್ದಾಗ ಜಗತ್ತಿನಲ್ಲಿ ನೆಮ್ಮದಿ ನೀಡೋ ಜಾಗ ಅಮ್ಮನ ಮಡಿಲು ಅನ್ನೋದಿದೆ. ಆದರೆ ಸದ್ಯದ ಒತ್ತಡದ ಸ್ಥಿತಿಯಲ್ಲಿ ತಬ್ಬಿಬ್ಬಾದಾಗೆಲ್ಲ ಈ ಪುಟ್ಟ ಅಮ್ಮನಂಥ ಜೀವ ಬಂದು ಮಡಿಲೇರಿ ಕೀಟಲೆ ಶುರುವಿಟ್ಟುಕೊಳ್ಳುತ್ತದೆ. ಗಂಡು ಮಗುವಿಗಿಂತ ಹೆಣ್ಣು ಮಗುವೇ ಅಪ್ಪನೆಂಬ ಸ್ಥಾನವನ್ನ ತೀವ್ರವಾಗಿ ಆಪ್ಯಾಯವಾಗಿಸುತ್ತದೆ. ಜನ್ಯಾ ನಿಜಕ್ಕೂ ನನ್ನಿಡೀ ಬದುಕಿನ ವಿನ್ಯಾಸಕ್ಕೆ ಹೊಸ ರಂಗು ತುಂಬಿದ್ದಾಳೆ.

-ಅರುಣ್‌ಕುಮಾರ್ ಜಿ., ಪುಸ್ತಕ ವಿನ್ಯಾಸಕಾರ

**

ಮಗಳೇ ಚೆಂದ!

ನಾನು ಬಸುರಿಯಿದ್ದಾಗ ಹಿರಿಯರು ಗಂಡೇ ಆಗುತ್ತೆ ಅನ್ನುತ್ತಿದ್ದರು. ನನಗೆ ಮತ್ತು ನನ್ನ ಗಂಡನಿಗೆ ಮಗು ಯಾವುದೇ ಆಗಲಿ ಆರೋಗ್ಯವಾಗಿದ್ದರೆ ಸಾಕೆನಿಸಿತ್ತು.

ನಮ್ಮ ತಾಯಿಗೆ ನಾವು ಮೂವರು ಹೆಣ್ಣುಮಕ್ಕಳು. ಏಕತಾನತೆ ಹೋಗಲಿ ಅಂತ ಗಂಡು ಮಗು ಅಂತ ಬಯಸಿದ್ದು ನಿಜ. ಆದರೆ, ಮಗಳು ಹುಟ್ಟಿದಾಗ ತುಂಬಾ ಸಂಭ್ರಮಪಟ್ಟೆ. ಅವಳ ಪ್ರತಿ ಆಟ, ನೋಟ ಎಲ್ಲವೂ ನಮ್ಮ ಕುಟುಂಬದವರನ್ನು ಸಂತಸದಲ್ಲಿಟ್ಟಿದ್ದೆ. ಮಗಳಿಂದಾಗಿ ನಮ್ಮ ಬದುಕು ಅಭಿವೃದ್ಧಿ ಕಾಣಲಿ ಅಂತ ಅವಳಿಗೆ ವೃದ್ಧಿ ತಾರಾಜ್ ಅಂತ ಹೆಸರಿಟ್ಟಿದ್ದೇವೆ.

–ತ್ರೀವೇಣಿ ಎನ್., ಸೆಕ್ಯುರಿಟಿ ಎಂಜಿನಿಯರ್

**

ಗೆಳತಿಯಂಥ ಮಗಳು!

ನನಗೆ ಹೆಣ್ಣುಮಗಳು ಬೇಕು ಅಂತ ಬಹಳ ಆಸೆ ಇತ್ತು. ಮಗಳು ಹುಟ್ಟಿದಾಗಿನಿಂದ ಅವಳು ಗೆಳತಿಯಂತಿದ್ದಾಳೆ. ಗಂಡು ಮಕ್ಕಳು ಹಾಗಿರಲ್ಲ ಅಂತ ನಾನು ಹೇಳಲಾರೆ. ನಾವು ಬೆಳೆಸುವ ರೀತಿಯನ್ನು ಅದು ಅವಲಂಬಿಸಿರುತ್ತದೆ. ಆದರೆ, ಹೆಣ್ಣುಮಗುವಿನಲ್ಲಿ ಸಹಜವಾಗಿ ತಾಯ್ತನದ ಅಂತಃಕರಣ, ಮಮತೆ ಇರುತ್ತದೆ.

ನನ್ನ ಮಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ. ಮಗಳಿಗೆ ಅಡುಗೆಯ ಜತೆಗೆ ಇತರ ವೃತ್ತಿಯನ್ನೂ ಹೇಳಿಕೊಡುತ್ತಿದ್ದೇನೆ. ನಮ್ಮನೆಯಲ್ಲಿ ನಮ್ಮಪ್ಪ ಅಪ್ಪ ತಾರತಮ್ಯರಹಿತವಾಗಿ ಬೆಳೆಸಿದ್ದರು. ಈ ನಿಟ್ಟಿನಲ್ಲಿ ನಾನು ಒಂದು ಹೆಜ್ಜೆ ಮುಂದೆಯೇ ಇದ್ದೇನೆ. ನಾವಿಬ್ಬರೂ ಗೆಳತಿಯರಂತಿದ್ದೇವೆ. ಗೆಳೆತನ ಜತೆಗೆ ಮಾರ್ಗದರ್ಶನ, ಕಾಳಜಿಯಂತೂ ಸದಾ ಇದ್ದೇ ಇರುತ್ತದೆ.

ಮಗಳು ತಪ್ಪು ಮಾಡಿಯೇ ಕಲಿಯಬೇಕೆಂಬ ಅಭಿಮತ ನನ್ನದು. ಅವಳಿನ್ನೂ ಚಿಕ್ಕವಳು ಅವಳ ವಯಸ್ಸು, ಅನುಭವಕ್ಕೆ ತಕ್ಕಂತೆ ಬೆಳೆಯುತ್ತಿದ್ದಾಳೆ. ಶಾಲೆಯಲ್ಲಿ ಸರಿಯಾಗಿ ಅಂಕ ಗಳಿಸದಿದ್ದರೆ ಅದಕ್ಕೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವಳು ಹೀಗೇ ಆಗಬೇಕೆಂದು ನಾನಂದುಕೊಂಡಿಲ್ಲ. ಅವಳ ಆಸಕ್ತಿ ಏನಿದೆಯೋ ಅವಳ ಅದನ್ನೇ ಆಯ್ಕೆ ಮಾಡಿಕೊಳ್ಳಲಿ. ಪ್ರಯೋಗಶೀಲತೆಗೆ ಅವಕಾಶ ಮಾಡಿಕೊಟ್ಟಿದ್ದೀನಿ.

ನಾನು ಬಸುರಿಯಿದ್ದಾಗ ಐದು ತಿಂಗಳ ತನಕ ಶೂಟಿಂಗ್‌ ಮಾಡ್ತಾ ಇದ್ದೆ. ಅವಳು ಹುಟ್ಟಿದಾಗಿನಿಂದಲೂ ಸಿನಿಮಾ ನೋಡಿಕೊಂಡೇ ಬೆಳೆದವಳು. ಅವಳಿಗೆ ಹಳ್ಳಿಯ ಬದುಕಿನ ಪರಿಚಯ ಚೆನ್ನಾಗಿದೆ. ಅವಳಿಗೆ ಸಿನಿಮಾವೆಂದರೆ ಇಷ್ಟ. ಇದರ ಜತೆಗೆ ಪರ್ಯಾಯ ಕೆರಿಯರ್ ಇಟ್ಟುಕೊಳ್ಳಮ್ಮಾ ಅಂತ ಹೇಳಿದ್ದೀನಿ. ಸ್ವರಕ್ಷಣೆಯ ಕಲೆಗಿಂತ ಅವಳು ಮಾನಸಿಕವಾಗಿ ಸದೃಢಳಾಗಬೇಕೆಂಬುದೇ ನನ್ನಾಸೆ. ನಾನು ಓವರ್ ಪ್ರೊಟೆಕ್ಟಿವ್ ಅಲ್ಲ. ಆಟೋ, ಓಲಾ, ಸಾರ್ವಜನಿಕ ಸಾರಿಗೆಗಳಲ್ಲಿ ಒಬ್ಬಳೇ ಓಡಾಡು ಅಂತ ಹೇಳಿದ್ದೀನಿ. ಪ್ರತಿಕ್ಷಣವೂ ಅವಳ ಜತೆಗೆ ನಾನಿರಲು ಆಗದು ಅಲ್ಲವೇ? ಅವಳೂ ನಿಭಾಯಿಸುವುದನ್ನು ಕಲಿಯಬೇಕಲ್ಲವೇ? ಮೊನ್ನೆ ನಮ್ಮ ತಾಯಿಗೆ ಹುಷಾರಿಲ್ಲದಿದ್ದಾಗ ಅವಳೇ ಹೋಗಿ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಬಂದಿದ್ದಾಳೆ.

ಮಗಳು ಇಶಾ ನನ್ನ ಜತೆ ಗೆಳತಿಯಂತೆ ಎಲ್ಲವನ್ನೂ ಹಂಚಿಕೊಳ್ಳುತ್ತಾಳೆ. ಒಂದು ವೇಳೆ ಅವಳು ಪ್ರೀತಿಯಲ್ಲಿ ಬಿದ್ದರೆ, ಕುಡಿಯಬೇಕೆನಿಸಿದರೆ ನನಗೆ ಹೇಳಿ ಮಾಡು ಅಂತ ಹೇಳಿದ್ದೀನಿ. ಅದೆಲ್ಲಾ ಬೆಳವಣಿಗೆಯ ಸಹಜ ಹಂತಗಳು.ನನಗೆ ಗೊತ್ತಿರಬೇಕಷ್ಟೇ.

–ಕವಿತಾ ಲಂಕೇಶ್, ಚಿತ್ರ ನಿರ್ದೇಶಕಿ

**

ಬದಲಾಗದ ಮನಸ್ಥಿತಿ

ಹೆಣ್ಣುಮಗು ಹುಟ್ಟಿದಾಗ ನಗರದ ವಿದ್ಯಾವಂತರಲ್ಲಿ ಶೇ 30ರಷ್ಟು ಮಂದಿ ಬೇಸರಪಟ್ಟುಕೊಳ್ಳುತ್ತಾರೆ. ಅದರಲ್ಲೂ ಮೊದಲ ಮಗು ಹೆಣ್ಣು ಇದ್ದು, ಎರಡನೇ ಮಗು ಹೆಣ್ಣಾದರೆ ಪೋಷಕರಲ್ಲಿ ಸಂಭ್ರಮ ಕಾಣದು. ಮೊದಲ ಮಗು ಹೆಣ್ಣಾಗಿದ್ದರೆ, ಎರಡನೇ ಮಗು ಗಂಡಾಗಲು ಸಾಧ್ಯವೇ? ಅದಕ್ಕೆ ಏನಾದರೂ ಔಷಧಿಗಳಿವೆಯೇ ಎಂದು ಪೋಷಕರು ಕೇಳಿಕೊಂಡು ಬರುತ್ತಾರೆ. ಇದರರ್ಥ ಹೆಣ್ಣುಮಗುವಿನ ಬಗ್ಗೆ ಓದಿದವರಲ್ಲಿ ಇನ್ನೂ ಬದಲಾವಣೆ ಆಗಿಲ್ಲ ಅನ್ನುವುದು ಸ್ಪಷ್ಟ. ಹೆಣ್ಣು ಮಗು ಹುಟ್ಟಿದೆ ಶುಭಾಶಯ ಅಂತ ಹೇಳಿದರೆ ಕೆಲ ಪೋಷಕರ ಮುಖದಲ್ಲಿ ಸಂತಸ ಕಾಣುವುದೇ ಇಲ್ಲ.

–ಡಾ.ಶ್ರೀಪ್ರದಾ ವಿನೇಕರ್, ಸ್ತ್ರೀರೋಗ ತಜ್ಞೆ, ಅಪೋಲೊ ಆಸ್ಪತ್ರೆ

**

ಚಿತ್ರಣ ಬದಲಾಗಿದೆ

ನನ್ನ ಕೆರಿಯರ್ ಆರಂಭದ ದಿನಗಳಲ್ಲಿ ಗಂಡು ಮಗು ಹುಟ್ಟಿದ ಪೋಷಕರಲ್ಲಿ ಸಂಭ್ರಮ ಕಾಣುತ್ತಿತ್ತು. ಆದರೆ, ಈಗ ಅವರಲ್ಲಿ ಬದಲಾವಣೆ ಕಾಣುತ್ತಿದ್ದೇನೆ. ಅದರಲ್ಲೂ ಬಹುತೇಕ ತಾಯಂದಿರು ತಮಗೆ ಹೆಣ್ಣುಮಗುವೇ ಬೇಕು ಡಾಕ್ಟ್ರೇ ಅಂತಾರೆ.

ದತ್ತು ಪಡೆಯುವವರು ಕೂಡಾ ಹೆಣ್ಣು ಮಗುವೇ ಬೇಕೆಂದು ಇಚ್ಛೆಪಡುತ್ತಿದ್ದಾರೆ. ಈಗಿನ ದಿನಗಳಲ್ಲಿ ಹೆರಿಗೆ ಸಮಯದಲ್ಲಿ ಪೋಷಕರು ಮಗು ಯಾವುದಾದರೂ ಆಗಲಿ ಒಟ್ಟಿನಲ್ಲಿ ಆರೋಗ್ಯವಾಗಿರಲಿ ಅಂತ ಬಯಸುತ್ತಿದ್ದಾರೆ. ತಾಯಿಯ ಜತೆ ತಂದೆ ಕೂಡಾ ಹೆಣ್ಣು ಮಗುವನ್ನು ಇಷ್ಟಪಡುತ್ತಿದ್ದಾರೆ.

–ಡಾ.ನಿಸರ್ಗ ರಾಮಲಿಂಗೇಗೌಡ, ಮಕ್ಕಳ ತಜ್ಞ, ನಿಸರ್ಗ ಮಕ್ಕಳ ಕ್ಲಿನಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT