ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಹಳೆ ಸೀರೆ ಏನು ಮಾಡಿದ್ರಿ?

Last Updated 21 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಅಮ್ಮನ ಸೀರೆ ಹಳತಾದಾಗ ಮಗಳಿಗೆ ಉದ್ದ ಲಂಗ, ರವಿಕೆ ಹೊಲಿಸುತ್ತಿದ್ದರು. ಅದನ್ನು ಧರಿಸಿ ಸರಭರ ಸದ್ದು ಮಾಡಿಕೊಂಡು ಓಡಾಡುವಾಗ ಮಗಳ ಮುಖದಲ್ಲೂ, ಹಾವಭಾವದಲ್ಲೂ ಅಮ್ಮನದೇ ಝಲಕ್‌!ಮಗಳು, ತನ್ನ ಸೀರೆ ‘ಔಟ್‌ ಆಫ್‌ ಫ್ಯಾಷನ್‌’ ಅನಿಸಿದಾಗ ಈಗಿನ ಜಮಾನಕ್ಕೆ ಒಪ್ಪುವ ಉಡುಪುಗಳನ್ನು ಹೊಲಿಸಿಕೊಳ್ಳುತ್ತಾಳೆ.

ವಾರ್ಡ್‌ರೋಬ್‌ನ ಮೂಲೆಯಲ್ಲಿ ಕುಳಿತು ಮಡಿಕೆಯಲ್ಲೇ ಹರಿದುಹೋಗುವ ಬದಲುಹಳೆಯ ಸೀರೆಗಳನ್ನು ಆಧುನಿಕ ಉಡುಪುಗಳನ್ನಾಗಿ ಮಾರ್ಪಡಿಸಿ ಧರಿಸುವ ಟ್ರೆಂಡ್‌ನಲ್ಲಿ ಸೆಲೆಬ್ರಿಟಿಗಳೂ ಹಿಂದೆಬಿದ್ದಿಲ್ಲ.

ಕೆಲವೊಮ್ಮೆ ಇಸ್ತ್ರಿ ಮಾಡುವಾಗ ಸೀರೆ ಹಾಳಾಗುವುದುಂಟು. ಪ್ಯಾಚ್‌ ವರ್ಕ್‌ ಅಥವಾ ಡಾರ್ನಿಂಗ್‌ ಮಾಡಿಸಿಕೊಂಡು ಉಡಬಹುದು. ಹರಿದ ಸೀರೆ ಉಡಬಾರದು ಎಂಬ ನಂಬಿಕೆಯುಳ್ಳವರು ಅಂತಹ ಸೀರೆಗಳನ್ನು ಮೂಲೆಗೆ ಹಾಕುವುದೇ ಹೆಚ್ಚು. ಅಂತಹ ಸೀರೆಯಿಂದ ಈಗಿನ ಜಮಾನಕ್ಕೆ ಒಪ್ಪುವ ಉಡುಗೆ ಸಿದ್ಧಪಡಿಸಿಕೊಂಡು ನೋಡಿ.

ಯಾವ ಸೀರೆಯಿಂದ ಯಾವ ಉಡುಪು ಸಿದ್ಧಪಡಿಸಬಹುದು ಎಂಬ ಸರಿಯಾದ ಯೋಜನೆ ಹಾಕಿಕೊಳ್ಳಬೇಕು. ಬನಾರಸ್, ಕಾಂಜೀವರಂ, ಟಸ್ಸಾರ್‌, ಚಂದೇರಿ ಕಚ್ಚಾ ರೇಷ್ಮೆ, ಪಟ್ಟು ಸೀರೆ, ಸಾಫ್ಟ್‌ ಸಿಲ್ಕ್‌ನಂತಹ ಹೆಚ್ಚಾಗಿ ಬಳಕೆಯಿಲ್ಲಿರುವ ರೇಷ್ಮೆ ಸೀರೆಗಳು ಲೆಹೆಂಗಾ, ಲಾಂಗ್‌ ಸ್ಕರ್ಟ್‌, ಡಿಸೈನರ್‌ ಟಾಪ್‌ಗಳಿಗೆ ಸೂಕ್ತ. ಲಾಂಗ್‌ ಸ್ಕರ್ಟ್‌ನ್ನು ಪಟ್ಟಿ ನೆರಿಗೆ ಇಟ್ಟಾದರೂ ಹೊಲಿಸಿಕೊಳ್ಳಿ ಅಥವಾ ಮ್ಯಾಕ್ಸಿ ಮಾದರಿಯಲ್ಲಿ ಸೊಂಟದ ಭಾಗ ಬಿಗಿಯಾಗಿಯೂ ಕೆಳಗೆ ಸಡಿಲವಾಗಿಯೂ ವಿನ್ಯಾಸ ಮಾಡಿಸಬಹುದು. ಯಾವುದೇ ಬಗೆಯ ರೇಷ್ಮೆ ಸೀರೆಯಿಂದ ಈ ಎರಡೂ ಮಾದರಿ ಅತ್ಯುತ್ತಮವಾಗಿ ಮೂಡಿಬರುತ್ತವೆ. ಇಕತ್‌ ವಿನ್ಯಾಸದ ಸೀರೆಗಳೂ ಇವುಗಳಿಗೆ ಸೂಕ್ತ.

ಕಾಟನ್‌ ಸಿಲ್ಕ್‌, ಖಾದಿ ಸಿಲ್ಕ್‌, ಜೂಟ್‌ ಸಿಲ್ಕ್‌, ರಾ ಸಿಲ್ಕ್‌ನಂತಹ ಫ್ಯಾಬ್ರಿಕ್‌ಗಳು ಉದ್ದ ಲಂಗಕ್ಕೆ ಹೊಂದುತ್ತವೆ. ಇದಕ್ಕೆ ವಿರುದ್ಧ ಬಣ್ಣದ ಟಾಪ್‌/ಜಾಕೆಟ್‌ ಧರಿಸಿದರಾಯಿತು. ಶಿಫಾನ್‌, ಜಾರ್ಜೆಟ್‌ನಂತಹ ಸೀರೆಗಳು ಮ್ಯಾಕ್ಸಿ, ಕಫ್ತಾನ್‌, ಸಾರಂಗ್‌ನಂತಹ ಟ್ರೆಂಡಿ ಉಡುಗೆಗಳಿಗೆ ಸೂಕ್ತ.

ಬ್ರೊಕೇಡ್‌, ಲೇಸ್‌ ವರ್ಕ್‌ ಇರುವಫ್ಯಾನ್ಸಿ ಸೀರೆಗಳು ಲೆಹೆಂಗಾ ಸೆಟ್‌ಗೆ ಹೇಳಿಮಾಡಿಸಿದಂತಿರುತ್ತವೆ. ಆ ಸೀರೆಗೆ ಬಳಸಿದ ಸ್ಯಾಟಿನ್‌ ಲಂಗವನ್ನು (ಸ್ಲಿಪ್‌) ಲೆಹೆಂಗಾದ ಸೊಂಟಕ್ಕೆ ಜೋಡಿಸಿ ಹೊಲಿಗೆ ಹಾಕಿಬಿಡಿ!

ಶರಾರ–ಕುರ್ತಾ ನಿಮಗಿಷ್ಟವಾದರೆ ಸಿಂಥೆಟಿಕ್‌ ಸೀರೆಯನ್ನೇ ಆಯ್ದುಕೊಳ್ಳಿ. ಧಾರಾಳವಾಗಿ ನೆರಿಗೆ, ಬೆಲ್‌, ಫ್ರಿಲ್‌ ಕೊಟ್ಟು ಹೊಲಿದರೂ ಮೈಗೆ ಅಂಟಿಕೊಂಡಂತೆ ಕೂರುತ್ತದೆ.

ಸ್ಲಿಮ್‌ ಆ್ಯಂಡ್ ಟ್ರಿಮ್‌ ಆಗಿರಲು ಬಯಸುವವರು ಈ ವಿನ್ಯಾಸವನ್ನು ಆಯ್ದುಕೊಳ್ಳಬಹುದು. ಅನಾರ್ಕಲಿ ಉಡುಪುಗಳು ಈಗ ಇನ್ನಷ್ಟು ಸ್ಟೈಲಿಶ್‌ ಆಗಿವೆ. ಸಿಂಥೆಟಿಕ್‌ ಮತ್ತು ಸಾಫ್ಟ್‌ ಸಿಲ್ಕ್‌ ಸೀರೆಗಳಿಂದ ಅನಾರ್ಕಲಿ ಶೈಲಿಯ ಲಾಂಗ್‌ ಕುರ್ತಾ ಸುಂದರವಾಗಿ ವಿನ್ಯಾಸ ಮಾಡಬಹುದು.

ಸೆರಗನ್ನು ದುಪಟ್ಟಾಕ್ಕಿಂತ ಜಾಕೆಟ್‌ ಅಥವಾ ಟಾಪ್‌ಗೆ ಬಳಸಿದರೆ ಇಡೀ ಉಡುಪಿನ ಅಂದ ಇಮ್ಮಡಿಯಾಗುತ್ತದೆ. ಆದರೆ ದುಪ‍ಟ್ಟಾ ಅತ್ಯಗತ್ಯ ಅನಿಸಿದರೆ ಹೊಂದುವ ಅಥವಾ ವಿರುದ್ಧ (ಕಾಂಟ್ರಾಸ್ಟ್‌) ಬಣ್ಣದ್ದನ್ನು ಖರೀದಿಸಬೇಕು. ಲೆಹೆಂಗಾಗಳಿಗೆ ಉದ್ದನೆಯ ದುಪಟ್ಟಾ ಬೇಕಾಗುವ ಕಾರಣ ಎರಡೂವರೆ ಮೀಟರ್‌ಟಿಶ್ಯೂ ಅಥವಾ ಸ್ಯಾಟಿನ್‌ ಫ್ಯಾಬ್ರಿಕ್‌ ಖರೀದಿಸಿ ಪ್ರತ್ಯೇಕವಾಗಿ ಅಂಚನ್ನೂ ಹೊಂದಿಸಿಕೊಳ್ಳಬೇಕಾಗುತ್ತದೆ.

ಕೆಲವು ಜಾಣೆಯರು ತಮ್ಮ ಇಷ್ಟದ ವಿನ್ಯಾಸ ಮತ್ತು ಫ್ಯಾಬ್ರಿಕ್‌ನ ಸೀರೆ ಖರೀದಿಸಿ ತಮಗೆ ಬೇಕಾದ ಆಧುನಿಕ ಉಡುಪುಗಳನ್ನು ಹೊಲಿಸಿಕೊಳ್ಳುವುದೂ ಉಂಟು!

ನೋಡಿದಿರಲ್ಲ... ಉಟ್ಟು ಹಳತಾದ, ಇಟ್ಟು ಹಳತಾದ, ಉಡಲು ಕಷ್ಟವೆನಿಸುವ ಸೀರೆಗಳಿಗೆ ಹೀಗೆ ಹೊಸ ರೂಪ ಕೊಟ್ಟರೆ ನೀವೆಷ್ಟು ಟ್ರೆಂಡಿಯಾಗಿ ಕಾಣಿಸಿಕೊಳ್ಳಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT