ಆಹಾ.. ಪ್ರಾಣಿಗೂ ರೆಸಾರ್ಟು

7

ಆಹಾ.. ಪ್ರಾಣಿಗೂ ರೆಸಾರ್ಟು

Published:
Updated:

ರೆಸಾರ್ಟ್ ಎಂದ ಕೂಡಲೇ ತಲೆಗೆ ಬರುವುದು, ನಮ್ಮ ರಾಜಕಾರಣಿಗಳು ‘ಕುದುರೆ ವ್ಯಾಪಾರ’ದ ಭಯದಿಂದಲೋ ಅಥವಾ ‘ಕುದುರೆ ವ್ಯಾಪಾರ’ಕ್ಕೆ ಒಳಗಾಗಿ ಸೇರಿಕೊಳ್ಳುವ ಎಲ್ಲ ಸೌಕರ್ಯಗಳುಳ್ಳ ಜಾಗ. ಇದು ಯಾವುದಪ್ಪ ‘ಪೆಟ್ ರೆಸಾರ್ಟ್’ ಎಂದು ತಲೆ ಕೆರೆದುಕೊಳ್ಳಬೇಡಿ. ಈ ರೆಸಾರ್ಟ್‌ನಲ್ಲಿ ಕುದುರೆ ವ್ಯಾಪಾರ ನಡೆಯಲ್ಲ, ಬದಲಿಗೆ ಸಾಕು ಪ್ರಾಣಿಗಳು ಆರಾಮವಾಗಿ ವಿಶ್ರಾಂತಿ ಪಡೆಯಬಹುದು.

‘ಪೆಟ್‌ ಕೇರ್’ ಸಂಸ್ಥೆಯು ಇಂತಹದ್ದೊಂದು ರೆಸಾರ್ಟ್‌ ಅನ್ನು ಸರ್ಜಾಪುರ ರಸ್ತೆಯಲ್ಲಿ ನಿರ್ಮಿಸಿದೆ. ರೆಸಾರ್ಟ್ ನಿರ್ಮಾಣಕ್ಕೂ ಮುನ್ನ ಅಮೆರಿಕ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಚಾಲ್ತಿಯಲ್ಲಿರುವ ಇಂತಹ ಪೆಟ್ ರೆಸಾರ್ಟ್‌ಗಳ ಬಗ್ಗೆ  ಮೂರು ವರ್ಷಗಳಷ್ಟು ಅಧ್ಯಯನ ನಡೆಸಿದೆ. ಎರಡು ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿರುವ ಈ ರೆಸಾರ್ಟ್ ಅನ್ನು ಸಾಕುಪ್ರಾಣಿಗಳನ್ನೇ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ.‌

ಮನೆಯಲ್ಲಿಯೇ ಮುದ್ದಾಗಿ ಸಾಕಿದ ಪ್ರಾಣಿಗಳನ್ನು ಈ ರೆಸಾರ್ಟ್‌ನಲ್ಲಿ ಬಿಟ್ಟು ಹೋಗಬಹುದು. ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ಸಾಕುಪ್ರಾಣಿಗಳೊಂದಿಗೆ ಈ ರೆಸಾರ್ಟ್‌ಗೆ ಬಂದು, ಪ್ರಾಣಿಗಳ ಜೊತೆಗೆ ಅವುಗಳ ಪೋಷಕರೂ ನಲಿಯಬಹುದು.

ಪ್ರಾಣಿಗಳಿಗೆಂದೇ ವಿಶೇಷವಾಗಿ ನಿರ್ಮಿಸಿದ ಈಜುಕೊಳ, ವಿಸ್ತಾರವಾದ ಎರಡು ಆಟದ ಮೈದಾನ, ಪ್ರಾಣಿಗಳು ತಂಗಲು ಅಥವಾ ಅವುಗಳೊಂದಿಗೆ ಪೋಷಕರು ತಂಗಲು 70 ಪರಿಸರ ಸ್ನೇಹಿ ಗುಡಿಸಲುಗಳು ಇವೆ. ಸಮಯಕ್ಕೆ ಸರಿಯಾಗಿ ಪ್ರಾಣಿಗಳಿಗೆ ಆಹಾರವನ್ನು ಒದಗಿಸುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಪ್ರಾಣಿಗಳ ಆರೋಗ್ಯ ಪಾಲನೆಗಾಗಿ ಪಶು ವೈದ್ಯರನ್ನು ನಿಯೋಜಿಸಲಾಗಿದೆ.

ತಮ್ಮ ಮುದ್ದಿನ ಪ್ರಾಣಿಗಳನ್ನು ಇಲ್ಲಿ ಬಿಟ್ಟು ದೂರದ ಊರುಗಳಿಗೆ ಹೋದವರಿಗೆ ಕುಂತರೂ ನಿಂತರೂ ಇವುಗಳದ್ದೇ ಚಿಂತೆ. ಯಾವುದೋ ಅಪರಿಚಿತ ಜಾಗದಲ್ಲಿ ಪ್ರಾಣಿಗಳನ್ನು ಬಿಟ್ಟು ಬಂದೆವಲ್ಲ, ಅವುಗಳನ್ನು ಚೆನ್ನಾಗಿ ಪೋಷಣೆ ಮಾಡುತ್ತಿದ್ದಾರೆಯೇ? ಎಂಬ ಆತಂಕ, ಸಂಶಯ ಕಾಡುತ್ತದೆ. ಅದನ್ನು ದೂರ ಮಾಡಲೆಂದೇ ರೆಸಾರ್ಟ್‌ನಲ್ಲಿ ವಿಡಿಯೊ ಕಾಲಿಂಗ್ ವ್ಯವಸ್ಥೆ ಮಾಡಲಾಗಿದೆ. ಪೋಷಕರು ವಿಡಿಯೊ ಕರೆ ಮಾಡಿ ಪ್ರಾಣಿಗಳನ್ನು ನೋಡಬಹುದಾಗಿದೆ.

ಸದ್ಯದ ಮಟ್ಟಿಗೆ ಇಲ್ಲಿ ಸಾಕುಪ್ರಾಣಿಗಳನ್ನು ರೆಸಾರ್ಟ್‌ಗೆ ತಂದು ಬಿಡುವ ಹಾಗೂ ಅವುಗಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆಯಿದೆ. ಮುಂದಿನ ದಿನಗಳಲ್ಲಿ, ರೆಸಾರ್ಟ್‌ನ ಸಿಬ್ಬಂದಿಯೇ ಮನೆಬಾಗಿಲಿಗೆ ಬಂದು ಪ್ರಾಣಿಗಳನ್ನು ಕರೆದುಕೊಂಡು ಹೋಗುವ ಹಾಗೂ ಬಿಡುವ ವ್ಯವಸ್ಥೆಯನ್ನು ಚಾಲ್ತಿಗೆ ತರಲಾಗುತ್ತಿದೆ. ಅದಕ್ಕೆ, ಪೋಷಕರು ಮಾಡಬೇಕಾದದ್ದು ಒಂದು ಕರೆಯಷ್ಟೇ.

ಮಹಾನಗರಗಳಲ್ಲಿ ಸಂಬಂಧಿಕರು ಅಥವಾ ಸ್ನೇಹಿತರು ಮನೆಗಳಿಗೆ ಬಂದಾಗ ಮತ್ತು ಎಲ್ಲೋ ಹೊರಗಡೆ ಹೋದಾಗ ಸಾಕು ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತದೆ. ಮನೆಗೆ ಬಂದವರಿಗೆ ಸಾಕು ಪ್ರಾಣಿಗಳಿರುವುದೂ ಕಿರಿಕಿರಿ ಉಂಟುಮಾಡಲೂಬಹುದು. ಹೀಗಾಗಿ, ಇಂತಹ ಸಂದರ್ಭದಲ್ಲಿ ಅವುಗಳನ್ನು ನಮ್ಮ ರೆಸಾರ್ಟ್‌ಗೆ ತಂದು ಬಿಡಬಹದು’ ಎನ್ನುತ್ತಾರೆ ಪೆಟ್‌ಕಾರ್ಟ್ ನೆಸ್ಟ್ ಸ್ಥಾಪಕ ಮತ್ತು ಸಿಇಒ ಶೇಖರ್ ಗಾಂವ್ಕರ್.

‘ವಾಸ್ತವವಾಗಿ ಅಥವಾ ಸಂಶೋಧನೆಯ ಪ್ರಕಾರ ಹೇಳುವುದಾದರೆ, ನಮ್ಮ ಸುತ್ತಲು ಸಾಕು ಪ್ರಾಣಿಗಳಿದ್ದರೆ ಅವು ನಮ್ಮನ್ನು ಒಳ್ಳೆಯ ಮನುಷ್ಯರನ್ನಾಗಿಸುತ್ತವೆ. ಒಳ್ಳೆಯ ರೀತಿಯಲ್ಲಿ ಪೋಷಣೆ ಮಾಡುವುದು ನಮ್ಮ ಕರ್ತವ್ಯ. ಅವುಗಳನ್ನು ಆಗಾಗ್ಗೆ ಹೊರಗಡೆ ಕರೆದೊಯ್ದು ಸುತ್ತಾಡಿಸಿದರೆ, ಸಂತೋಷಗೊಳ್ಳುತ್ತವೆ’ ಎನ್ನುತ್ತಾರೆ ಅವರು.

ಸಂಸ್ಥೆಯ ಸಂಸ್ಥಾಪಕರಾದ ನೀಲೆಂದು ಮೈತಿ, ‘ರೆಸಾರ್ಟ್‌ಗೆ ಬರುವ ಪ್ರತಿಯೊಂದು ಪ್ರಾಣಿಗೂ ಆದರದ ಸ್ವಾಗತವಿರುತ್ತದೆ. ಅಲ್ಲದೇ, ಅವುಗಳು ಇಲ್ಲಿರುವಷ್ಟು ದಿನ ಯಾವ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂಬುದರ ಮಾಹಿತಿಯನ್ನು ಪೋಷಕರಿಗೆ ನೀಡುತ್ತೇವೆ’ ಎನ್ನುತ್ತಾರೆ. ಪೆಟ್‌ಕಾರ್ಟ್ ಸ್ಟೋರ್ ಹಾಗೂ ಪೆಟ್‌ಕಾರ್ಟ್ ಪಲ್ಸ್ ಎಂಬ ಎರಡು ಆನ್‌ಲೈನ್ ಸಹಾಯ ವ್ಯವಸ್ಥೆಯನ್ನೂ ಹೊಂದಿವೆ.


ಹೆಚ್ಚಿನ ಮಾಹಿತಿಗೆ: www.petcart.com

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !