ನಾನು ಸಿ.ಎಂ ಪರ: ಎನ್‌. ಮಹೇಶ್‌

7
ಪಕ್ಷೇತರರು ದೂರವಾದರೆ ಸರ್ಕಾರಕ್ಕೆ ತೊಂದರೆ ಇಲ್ಲ– ಬಿಎಸ್‌ಪಿ ಶಾಸಕ ಹೇಳಿಕೆ

ನಾನು ಸಿ.ಎಂ ಪರ: ಎನ್‌. ಮಹೇಶ್‌

Published:
Updated:
Prajavani

ಚಾಮರಾಜನಗರ: ‘ಪಕ್ಷೇತರ ಶಾಸಕರು ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆದು ಬಿಜೆಪಿಗೆ ಹೋಗಿದ್ದರೂ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ’ ಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಹೇಳಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷೇತರರು ಬಿಜೆಪಿಗೆ ಹೋಗಿರುವುದು ನನಗೆ ಗೊತ್ತಿಲ್ಲ. ನನ್ನನ್ನು ಇದುವರೆಗೆ ಯಾರೂ ಸಂಪರ್ಕ ಮಾಡಿಲ್ಲ. ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರವಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಬಿಜೆಪಿ ಮುಖಂಡರು ಅವರ ಶಾಸಕರನ್ನು ದೆಹಲಿಯಲ್ಲಿ ಯಾಕೆ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಬಹುಶಃ ಅವರಿಗೆ ಭಯ ಕಾಡುತ್ತಿರಬಹುದು’ ಎಂದು ವ್ಯಂಗ್ಯವಾಡಿದರು.

ಮಾತುಕತೆ ಸಾಧ್ಯವೇ ಇಲ್ಲ: ‘ಲೋಕಸಭಾ ಚುನಾವಣೆಯ ಮೇಲೆ ನಾನು ಕಣ್ಣಿಟ್ಟಿಲ್ಲ. ಚುನಾವಣೆ ವಿಚಾರವಾಗಿ ಬಿಜೆಪಿ ಜೊತೆ ಮಾತುಕತೆಗೆ ಅವಕಾಶವೇ ಇಲ್ಲ. ಬಿಎಸ್‌ಪಿಯು ಎಲ್ಲ ಕಡೆ ಸ್ಪರ್ಧೆ ಮಾಡಲಿದೆ. ಒಂದು ವೇಳೆ ಮೈತ್ರಿ ಆದರೆ, ಮೈಸೂರು ಭಾಗ, ಮುಂಬೈ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದಲ್ಲಿ ಟಿಕೆಟ್‌ ಕೇಳುತ್ತೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಧ್ರುವನಾರಾಯಣ ಕಿಡಿ: ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಆರ್‌. ಧ್ರುವನಾರಾಯಣ ಅವರು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಅತೃಪ್ತ ಶಾಸಕರನ್ನು ಮನವೊಲಿಸುವ ಕೆಲಸವನ್ನು ವರಿಷ್ಠರು ಮಾಡುತ್ತಿದ್ದಾರೆ. ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆದಿದ್ದರೂ ಸರ್ಕಾರಕ್ಕೆ ಧಕ್ಕೆ ಇಲ್ಲ ಎಂದರು.

‘ಅಪರೇಷನ್ ಕಮಲ ಎಂಬುದು ಬಿಜೆಪಿ ಹುಟ್ಟುಹಾಕಿರುವ ಕೆಟ್ಟ ಸಂಪ್ರದಾಯ. ಎಂದು ಅವರು ಕಿಡಿ ಕಾರಿದರು. ಬಿಜೆಪಿಯವರು ಈ ಹಿಂದೆಯೂ ಶಾಸಕರಿಗೆ ಆಮಿಷಗಳನ್ನು ಒಡ್ಡಿ ರಾಜೀನಾಮೆ ಕೊಡಿಸಿದ್ದರು. ಇದರಿಂದ ಬಿಜೆಪಿಗೆ ಹಾನಿಯಾಗಲಿದೆಯೇ ವಿನಾ ಮೈತ್ರಿ ಸರ್ಕಾರಕ್ಕೆ ಅಲ್ಲ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !