ದರ ಏರಿಕೆಗಿಂತ ಸಹಾಯಧನ ಉತ್ತಮ

7
ಬಿಎಂಟಿಸಿ ನೂತನ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಅಭಿಮತ

ದರ ಏರಿಕೆಗಿಂತ ಸಹಾಯಧನ ಉತ್ತಮ

Published:
Updated:
Prajavani

ಬೆಂಗಳೂರು: ಬಿಎಂಟಿಸಿಯು ನಷ್ಟದಿಂದ ಹೊರಬರುವಂತಾಗಲು ಸರ್ಕಾರವೇ ಒಂದಿಷ್ಟು ಸಹಾಯಧನ ಕೊಟ್ಟರೆ ಒಳ್ಳೆಯದು ಎಂದು ಸಂಸ್ಥೆಯ ನೂತನ ಅಧ್ಯಕ್ಷ, ಶಾಸಕ ಎನ್‌.ಎ.ಹ್ಯಾರಿಸ್‌ ಹೇಳಿದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ‘ಸಂಸ್ಥೆ ನಷ್ಟದಲ್ಲಿದೆ ನಿಜ. ಅದನ್ನು ಭರಿಸಲು ಟಿಕೆಟ್‌ ದರ ಏರಿಸಿದರೆ ಪ್ರಯೋಜನವಾಗದು. ಸರ್ಕಾರವೇ ನೆರವಾಗಬೇಕು. ಇಲ್ಲಿ ಲಾಭ–ನಷ್ಟಕ್ಕಿಂತಲೂ ಪ್ರಯಾಣಿಕರಿಗೆ ಸೇವೆ ನೀಡುವುದು ಮುಖ್ಯ. ಸೇವೆಯ ಹೆಸರಿನಲ್ಲಿ ನಷ್ಟದಲ್ಲೇ ಸಂಸ್ಥೆಯನ್ನು ನಡೆಸುವುದೂ ಕಷ್ಟ’ ಎಂದು ಅವರು ಹೇಳಿದರು. 

‘ಸಾರಿಗೆ ಸಂಸ್ಥೆಯನ್ನು ಇನ್ನಷ್ಟು ಪ್ರಯಾಣಿಕಸ್ನೇಹಿಯನ್ನಾಗಿ ಮಾಡುವ ಬಗ್ಗೆ ಚಿಂತನೆ ನಡೆದಿದೆ. ನಿಗಮದ ವ್ಯವಸ್ಥೆಯನ್ನು ಅಧ್ಯಯನ ಮಾಡುತ್ತಿದ್ದೇನೆ. ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಒಯ್ಯುವುದು ಸುಲಭದ ಕೆಲಸವಲ್ಲ’ ಎಂದು ಅವರು ವಿಶ್ಲೇಷಿಸಿದರು. 

ಕೊನೇ ಹಂತದ ಪ್ರದೇಶಗಳಿಗೂ ಬಸ್‌ ಸೌಕರ್ಯ ಲಭಿಸುವಂತೆ ಮಾಡುವುದು, ಮೆಟ್ರೊ– ಬಸ್‌ ಸೌಲಭ್ಯವನ್ನು ಒಂದಕ್ಕೊಂದು ಬೆಸೆಯುವುದು ಸೇರಿದಂತೆ ಹಲವು ಪರಿಕಲ್ಪನೆಗಳನ್ನು ಅನುಷ್ಠಾನಗೊಳಿಸಬೇಕಿದೆ. ಈಗಾಗಲೇ ಅಧಿಕಾರಿಗಳ ಜತೆ ಒಂದು ಸುತ್ತಿನ ಸಭೆ ನಡೆಸಿದ್ದೇನೆ. ಮುಂದೆ ತಜ್ಞರ, ಪ್ರಯಾಣಿಕರೂ ಸೇರಿದಂತೆ ಹಲವರ ಸಲಹೆ ಪಡೆದು ಅವುಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಹೇಳಿದರು.

ಸರ್ವಧರ್ಮ ಪ್ರಾರ್ಥನೆ: ಅಧಿಕಾರ ಸ್ವೀಕಾರದ ವೇಳೆ ಸರ್ವಧರ್ಮದ ಗುರುಗಳು, ಸ್ವಾಮೀಜಿಯವರಿಂದ ಪ್ರಾರ್ಥನೆ ನಡೆಯಿತು. ವನ್ನಾರಪೇಟೆಯ ವೆಲ್ಲರಾಮ ದೇವಸ್ಥಾನದ ತ್ಯಾಗರಾಜ ಸ್ವಾಮೀಜಿ, ಸಿಟಿ ಜಾಮಿಯಾ ಮಸೀದಿಯ ಮೌಲಾನಾ ಮಕ್ಸೂದ್ ಇಮ್ರಾನ್, ವಿವೇಕನಗರದ ಜೀಸಸ್ ಚರ್ಚ್‌ನ ಫಾದರ್ ಜೋಸೆಫ್ ಮೆನ್ನಿಸ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಹ್ಯಾರಿಸ್‌ ಅವರನ್ನು ಆಶೀರ್ವದಿಸಿದರು. 

ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ, ಮಾಜಿ ಅಧ್ಯಕ್ಷ ನಾಗರಾಜ ಯಾದವ್ ಮತ್ತು ಹ್ಯಾರಿಸ್ ಅವರ ಪುತ್ರ ಮಹಮದ್ ನಲಪಾಡ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !