ಎರಡೂವರೆ ನಿಮಿಷದೊಳಗೆ ನಾಡಗೀತೆ ಗಾಯನಕ್ಕೆ ಒಪ್ಪಿಗೆ

7
ಕಸಾಪದಲ್ಲಿ ಸಾಹಿತಿ, ಚಿಂತಕರ ಸಭೆ, ಸರ್ಕಾರಕ್ಕೆ ಶಿಫಾರಸು

ಎರಡೂವರೆ ನಿಮಿಷದೊಳಗೆ ನಾಡಗೀತೆ ಗಾಯನಕ್ಕೆ ಒಪ್ಪಿಗೆ

Published:
Updated:
Deccan Herald

ಬೆಂಗಳೂರು: ನಾಡಗೀತೆ ಗಾಯನವನ್ನು ಎರಡೂವರೆ ನಿಮಿಷಕ್ಕೆ ಇಳಿಸಲು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದ ಹಿರಿಯ ಸಾಹಿತಿಗಳು, ಚಿಂತಕರು ಮತ್ತು ಹೋರಾಟಗಾರರ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಸಭೆಯ ಶಿಫಾರಸ್ಸನ್ನು ಒಂದೆರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಹೇಳಿದರು. 

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಈಗ ನಾಡಗೀತೆ ಹಾಡುವ ಅವಧಿ ದೀರ್ಘವಾಗಿದೆ. ಅಷ್ಟು ಕಾಲ ಎದ್ದು ನಿಲ್ಲುವುದೂ ಹಲವರಿಗೆ ತೊಂದರೆ. ಒಂದೊಂದು ಕಡೆ ಒಂದೊಂದು ರಾಗದಲ್ಲಿ, ಒಂದೊಂದು ಅವಧಿಯಲ್ಲಿ ಹಾಡಲಾಗುತ್ತಿದೆ. ಇದೆಲ್ಲದಕ್ಕೂ ಕಡಿವಾಣ ಹಾಕಬೇಕು. ಎಲ್ಲ ಕಡೆ ಏಕರೂಪದಲ್ಲಿ ಹಾಡುವಂತಾಗಬೇಕು. ಅದಕ್ಕಾಗಿ ಪರಿಷತ್‌ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಅವರು ವಿವರಿಸಿದರು. 

‘ಎರಡೂವರೆ ನಿಮಿಷದಲ್ಲಿ ಹಾಡಿನ ಯಾವುದೇ ಸಾಲುಗಳಿಗೆ ಕತ್ತರಿ ಹಾಕದೆ ಹಾಡಲು ಸಾಧ್ಯವಿದೆ. ಖ್ಯಾತ ಗಾಯಕರು ಇದನ್ನು ತೋರಿಸಿಕೊಟ್ಟಿದ್ದಾರೆ. ಅಂತರರಾಷ್ಟ್ರೀಯ ಗಾಯಕರಿಂದಲೂ ಹಾಡಿಸಲಾಗಿದೆ. ಹಲವು ಮಾದರಿಗಳೂ ನಮ್ಮಲ್ಲಿವೆ. ಆದರೆ, ಯಾವ ದಾಟಿಯಲ್ಲಿ ಹಾಡಬೇಕು ಎಂಬ ಕುರಿತ ವರದಿ ಈಗಾಗಲೇ ಸರ್ಕಾರದ ಮುಂದಿದೆ. ದಾಟಿಯ ಆಯ್ಕೆ ಸರ್ಕಾರಕ್ಕೆ ಬಿಟ್ಟದ್ದು. ಸಮಯವನ್ನು ಇಳಿಕೆ ಮಾಡಲು ಮಾತ್ರ ನಮ್ಮ ಒತ್ತಾಯ’ ಎಂದರು.

ನಾಡಧ್ವಜ ಸಂಬಂಧಿಸಿದ ಪ್ರಸ್ತಾವವನ್ನು ಸರ್ಕಾರಕ್ಕೆ ಈಗಾಗಲೇ ಕಳುಹಿಸಲಾಗಿದ್ದು, ಸರ್ಕಾರ ಅದನ್ನು ಒಪ್ಪಿಕೊಂಡಿದೆ. ರಾಜ್ಯ ಸರ್ಕಾರ ಆದಷ್ಟು ಬೇಗ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಈ ಸಂಬಂಧಿಸಿದ ನಿರ್ಧಾರವನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !