ಪುಟಗೋಸಿಗಳಿಗೆ ಉತ್ತರ ಕೊಡಲ್ಲ; ಬಬಲೇಶ್ವರ

ಶನಿವಾರ, ಏಪ್ರಿಲ್ 20, 2019
31 °C
ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ವಾಗ್ದಾಳಿ

ಪುಟಗೋಸಿಗಳಿಗೆ ಉತ್ತರ ಕೊಡಲ್ಲ; ಬಬಲೇಶ್ವರ

Published:
Updated:

ವಿಜಯಪುರ: ‘ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯಂಥಹ ಪುಟಗೋಸಿ ರಾಜಕಾರಣಿಗಳಿಗೆ ಉತ್ತರ ಕೊಡುವಷ್ಟು ವ್ಯವಧಾನ, ಸಮಯವೂ ನಮ್ಮಲ್ಲಿಲ್ಲ’ ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ವಾಗ್ದಾಳಿ ನಡೆಸಿದರು.

‘ಜಿಲ್ಲೆಯ ವಿವಿಧೆಡೆಯಿಂದ ರೈತರು ಒತ್ತಡ ಹಾಕುತ್ತಿದ್ದಾರೆ. ನಡಹಳ್ಳಿ ಗೃಹ ಸಚಿವ ಎಂ.ಬಿ.ಪಾಟೀಲರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದರೂ, ಏಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಈ ಪತ್ರಿಕಾಗೋಷ್ಠಿ’ ನಡೆಸುತ್ತಿದ್ದೇವೆ ಎಂದು ಭಾನುವಾರ ನಗರದಲ್ಲಿ ಹೇಳಿದರು.

‘ಬುದ್ದಿ ಭ್ರಮಣೆಗೊಳಗಾಗಿರುವ ನಡಹಳ್ಳಿಯ ಸರ್ಟಿಫಿಕೇಟ್‌ನ ಅಗತ್ಯ ನಮಗಿಲ್ಲ. ಸಿದ್ಧೇಶ್ವರ ಸ್ವಾಮೀಜಿ ಎಂ.ಬಿ.ಪಾಟೀಲ ಅಂದರೇ ನೀರು, ನೀರು ಅಂದರೇ ಎಂ.ಬಿ.ಪಾಟೀಲ ಎಂಬ ಮೆಚ್ಚುಗೆ ನೀಡಿದ್ದಾರೆ. ಕೇಂದ್ರದ ಮಾಜಿ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಪ್ರಶಂಸಿಸಿದ್ದಾರೆ. ಇದಕ್ಕಿಂತ ಇನ್ನೇನು ಬೇಕು’ ಎಂದು ತಿರುಗೇಟು ನೀಡಿದರು.

‘ನಿಮ್ಮ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಈ ಹಿಂದೆ ತಿಕೋಟಾದಲ್ಲಿ ಭ್ರಷ್ಟಾಚಾರ ಬಹಿರಂಗಗೊಳಿಸುವೆ ಎಂಬ ಅರಿವೆ ಹಾವು ಬಿಟ್ಟು ಹೋಗಿದ್ದಾರೆ. ಇನ್ನು ನೀವ್ಯಾವ ಲೆಕ್ಕ. ನಿಮ್ಮ ಅಭಿವೃದ್ಧಿ ಏನು ಎಂಬುದನ್ನು ತಿಳಿಸಿ’ ಎಂದು ನಡಹಳ್ಳಿಗೆ ಕೆಪಿಸಿಸಿ ಕಾರ್ಯದರ್ಶಿ ಟಾಂಗ್‌ ಕೊಟ್ಟರು.

‘ಸಮಾಜ ಸೇವೆಯ ಮುಖವಾಡ ಹೊತ್ತು ಬಂದ ನಡಹಳ್ಳಿ ನಾಲಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ. ಹೆಂಡ ಕುಡಿದ ಮಂಗನಂತೆ ಮಾತನಾಡುವುದು ಒಳ್ಳೆಯದಲ್ಲ. ದೇವರಹಿಪ್ಪರಗಿ ಕ್ಷೇತ್ರದ ಜನರಿಗೆ ವಂಚನೆ ಮಾಡಿದ ಮುದ್ದೇಬಿಹಾಳ ಶಾಸಕರಿಗೆ, ಗೃಹ ಸಚಿವ ಎಂ.ಬಿ.ಪಾಟೀಲರನ್ನು ಪ್ರಶ್ನಿಸುವ ಯಾವ ನೈತಿಕತೆಯಿದೆ’ ಎಂದು ಕಿಡಿಕಾರಿದರು.

‘ಕೋರವಾರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೇ ಕೊರಳಪಟ್ಟಿ ಹಿಡಿದು ಹುಚ್ಚು ನಾಯಿಯನ್ನು ಹೊರ ಹಾಕಿದಂತೆ ದಬ್ಬಿದ್ದನ್ನು ನಡಹಳ್ಳಿ ಮರೆತಿರಬೇಕು. ನೀರಾವರಿ ಕೆಲಸ ಎಲ್ಲೆಲ್ಲಿ ಎಷ್ಟೆಷ್ಟು ನಡೆದಿವೆ ಎಂಬುದನ್ನು ಜಿಲ್ಲೆಯ ರೈತರೇ ಕೊರಳಪಟ್ಟಿ ಹಿಡಿದು ಕರೆದೊಯ್ದು ತೋರಿಸುವ ದಿನಗಳು ದೂರವಿಲ್ಲ’ ಎಂದು ಸಂಗಮೇಶ ಹೇಳಿದರು.

‘ನಿಮ್ಮ ನೀರಾವರಿ ಸವಾಲನ್ನು ಸ್ವೀಕರಿಸಲು ನಾವು ಸಿದ್ಧವಿದ್ದೇವೆ. ದಾಖಲೆ ಸಮೇತ ಬರುತ್ತೇವೆ. ಯಾವ ಕೆರೆ ಅಂಗಳಕ್ಕೆ ನೀವು ಬರುತ್ತೀರಿ. ಇಲ್ಲಾ ಆರಂಭದ ದಿನಗಳಲ್ಲಿ ಗಾರ್ಮೆಂಟ್ ಫ್ಯಾಕ್ಟರಿ ಆರಂಭಿಸುತ್ತೇವೆ ಎಂಬ ಭರವಸೆ ನೀಡಿದ್ರಲ್ಲಾ. ಆ ಫ್ಯಾಕ್ಟರಿ ಅಂಗಳಕ್ಕೆ ಬರಲು ನಾವು ಸಿದ್ಧ.

ನೀವು ಭಯಂಕರ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ನಿಮ್ಮ ರಮೇಶ ಜಿಗಜಿಣಗಿ ಅವರನ್ನು ಕರೆ ತನ್ನಿ. ನಿಮ್ಮೆಲ್ಲ ಪ್ರಶ್ನೆಗಳಿಗೆ ನಾವೇ ಉತ್ತರಿಸುತ್ತೇವೆ. ಎಷ್ಟು ಕಿಲೋ ಮೀಟರ್ ಕಾಲುವೆ ನಿರ್ಮಾಣಗೊಂಡಿದೆ. ಎಷ್ಟು ಟಿಎಂಸಿ ನೀರು ನಮಗೆ ಸಿಕ್ಕಿದೆ ಎಂಬ ಸಣ್ಣ ಪರಿಜ್ಞಾನ ನಿಮಗಿದೆಯಾ. ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ಎದುರಿಸಿ’ ಎಂದು ಸವಾಲು ಹಾಕಿದರು.

‘ನಡಹಳ್ಳಿ ಪ್ರಶ್ನಿಸಿರುವುದು ಎಷ್ಟು ಎಕರೆ ಭೂಮಿಗೆ ನೀರು ಹರಿಸಿದ್ದೀರಿ ?’ ಎಂದು ಪತ್ರಕರ್ತರು ಕೇಳಿದ್ದಕ್ಕೆ, ‘₹ 12,750 ಕೋಟಿ ಮೊತ್ತದ ಕಾಮಗಾರಿ ಮುಗಿದಿವೆ. ₹ 1500 ಕೋಟಿ ಮೊತ್ತದ ಕಾಮಗಾರಿ ನಡೆದಿವೆ. ಕೆಲವೇ ದಿನಗಳಲ್ಲಿ ವಿಜಯಪುರ ದೇಶದ 10ನೇ ಶ್ರೀಮಂತ ಜಿಲ್ಲೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆರೆ–ಬಾವಡಿ ತುಂಬಿದ್ದು ಸಾಧನೆಯಲ್ಲವೆ. ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಾಗಿರುವುದು ನೀರಾವರಿಯ ಫಲವಲ್ಲವೇ’ ಎಂದು ಸಂಗಮೇಶ ಬಬಲೇಶ್ವರ ಉತ್ತರಿಸಿದರು.

ಕಾಂಗ್ರೆಸ್‌ ಮುಖಂಡರಾದ ವೈಜನಾಥ ಕರ್ಪೂರಮಠ, ಚಾಂದ್‌ಸಾಬ್‌ ಗಡಗಲಾವ, ಸೋಮನಾಥ ಕಳ್ಳಿಮನಿ, ಡಾ.ಪ್ರಭುಗೌಡ ಪಾಟೀಲ, ಡಾ.ಗಂಗಾಧರ ಸಂಬಣ್ಣಿ, ವಸಂತ ಹೊನಮೊಡೆ, ಶರಣಪ್ಪ ಯಕ್ಕುಂಡಿ, ಸಾಹೇಬಗೌಡ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿದ್ದರು.

‘ಉಂಡ ತಾಟಿಗೆ ಒದ್ದ ನಡಹಳ್ಳಿ’

‘ಲಿಂಗಾಯತ ಮಠದಲ್ಲಿ ವಾರನ್ನ ಉಂಡು ಬೆಳೆದಿರುವ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಲಿಂಗಾಯತ ಧರ್ಮದ ವಿರುದ್ಧ ಹೇಳಿಕೆ ನೀಡುವ ಮೂಲಕ ಉಂಡ ತಾಟಿಗೆ ಒದೆಯುವ ಪ್ರಯತ್ನ ಮಾಡಿದ್ದಾರೆ’ ಎಂದು ರಾಷ್ಟ್ರೀಯ ಬಸವ ಸೇನೆಯ ವಿಜಯಪುರ ಜಿಲ್ಲಾ ಘಟಕ ಟೀಕಿಸಿದೆ.

‘ಎ.ಎಸ್.ಪಾಟೀಲ ನಡಹಳ್ಳಿ ತಂದೆ-ತಾಯಿ ಲಿಂಗಾಯತರು, ಶಾಲೆ-ಕಾಲೇಜು ಶಿಕ್ಷಣಕ್ಕೆ ಆಶ್ರಯ ಪಡೆದಿದ್ದು ಲಿಂಗಾಯತ ಮಠದಲ್ಲಿ. ದೊಡ್ಡವರಾಗಿ ಅಧಿಕಾರ ಸಿಕ್ಕ ನಂತರ ಲಿಂಗಾಯತ ಧರ್ಮ ಇವರಿಗೆ ತುಚ್ಚವಾಗಿ ಕಾಣುತ್ತಿದೆ. ಈ ರೀತಿಯ ಧರ್ಮ ವಿರೋಧಿ ಹೇಳಿಕೆ ನಿಲ್ಲಿಸಲಿ. ಇಲ್ಲದಿದ್ದರೆ ಇವರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !