ಭಾನುವಾರ, ಮೇ 31, 2020
27 °C
ಬಿ.ರಾಚಯ್ಯ ಜೋಡಿರಸ್ತೆ ಕಾಮಗಾರಿ: ರಾಮಸಮುದ್ರದ ಬಳಿ ಕಿರಿದಾದ ರಸ್ತೆ, ನಿರ್ಮಾಣವಾಗದ ಚರಂಡಿ

ಹೇಳಿದ್ದೊಂದು, ಮಾಡಿದ್ದು ಮತ್ತೊಂದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮೊದಲು ಹೇಳಿದ್ದೇ ಒಂದು, ಆಮೇಲೆ ಮಾಡಿದ್ದು ಮತ್ತೊಂದು ಎಂಬ ಮಾತು ನಗರದ ಬಿ.ರಾಚಯ್ಯ ಜೋಡಿರಸ್ತೆಯ ಅಭಿವೃದ್ಧಿ ಕಾಮಗಾರಿ ವಿಚಾರದಲ್ಲಿ ಅಕ್ಷರಶಃ ಸತ್ಯವಾಗಿದೆ.

3.1 ಕಿ.ಮೀ ಉದ್ದದ ಬಿ.ರಾಚಯ್ಯ ಜೋಡಿರಸ್ತೆಯನ್ನು 100 ಅಡಿ ಅಗಲದ ಕಾಂಕ್ರೀಟ್‌ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಜನಪ್ರತಿನಿಧಿಗಳು ಹೇಳುತ್ತಲೇ ಬಂದಿದ್ದರು. ಆದರೆ, ಇಡೀ ರಸ್ತೆಯನ್ನು ಅಷ್ಟು ಅಗಲವಾಗಿ ನಿರ್ಮಿಸಲಾಗಿಲ್ಲ. 

ಭುವನೇಶ್ವರಿ ವೃತ್ತದಿಂದ ರಾಮಸಮುದ್ರದವರೆಗೆ 2.2 ಕಿ.ಮೀ ಉದ್ದದ ರಸ್ತೆಯನ್ನು ಒಂದು ಪಾರ್ಶ್ವದಲ್ಲಿ 10.‌5 ಮೀಟರ್‌ ಅಗಲದಂತೆ (ಕಾಂಕ್ರೀಟ್‌ ಹಾಕುವ ಯಂತ್ರ ಒಮ್ಮೆಗೆ 3.5 ಮೀಟರ್‌ ಅಗಲದ ರಸ್ತೆ ನಿರ್ಮಿಸುವ ಸಾಮರ್ಥ್ಯ ಹೊಂದಿದೆ. ಒಂದು ಬದಿಯಲ್ಲಿ ಯಂತ್ರದ ಮೂಲಕ ಮೂರು ರಸ್ತೆಯನ್ನು ನಿರ್ಮಿಸಲಾಗಿದೆ) ಎರಡು ಕಡೆಯೂ ಕಾಂಕ್ರೀಟ್‌ ಹಾಕಲಾಗಿದೆ. ರಾಮಸಮುದ್ರದಿಂದ ಪಂಪ್‌ಹೌಸ್‌ವರೆಗೆ 0.9 ಕಿ.ಮೀನಷ್ಟು ದೂರಕ್ಕೆ ಎರಡೂ ಬದಿಯಲ್ಲಿ ತಲಾ 7 ಮೀಟರ್‌ ಅಗಲದಲ್ಲಿ ಮಾತ್ರ ಕಾಂಕ್ರೀಟ್‌ ಹಾಕಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. 

ಕಾಂಕ್ರೀಟ್‌ ಹಾಕುತ್ತಿದ್ದ ಯಂತ್ರವನ್ನು ಕೆಲವು ವಾರಗಳ ಹಿಂದೆಯೇ ತೆರವುಗೊಳಿಸಲಾಗಿದೆ. ಹಾಗಾಗಿ, ಇನ್ನು ಅಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಮುಂದುವರಿಯುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಹೇಳಿಕೆಗಳು ಕೂಡ ಇದಕ್ಕೆ ಪುಷ್ಟಿ ನೀಡುತ್ತವೆ. 0.9 ಕಿ.ಮೀ ಉದ್ದದ ಮಾರ್ಗದಲ್ಲಿ ಎರಡೂ ಕಡೆ ಏಳು ಮೀಟರ್‌ ಅಗಲದ ರಸ್ತೆ ನಿರ್ಮಿಸುವ ಪ್ರಸ್ತಾವವನ್ನು ಯೋಜನೆಯ ಆರಂಭದಲ್ಲೇ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.  

ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಯಾದ ಬಿ.ರಾಚಯ್ಯ ಜೋಡಿರಸ್ತೆಯನ್ನು ₹ 35 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ರ ಆಗಸ್ಟ್‌ ತಿಂಗಳ ಆರಂಭದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಕಟ್ಟಡಗಳ ತೆರವು ಸೇರಿದಂತೆ ಹಲವು ಕಾರಣಗಳಿಂದಾಗಿ ಆಮೆಗತಿಯಲ್ಲಿ ಸಾಗಿದ ರಸ್ತೆಯ ಕಾಮಗಾರಿ ಈಗ ಒಂದು ಹಂತಕ್ಕೆ ಬಂದು ನಿಂತಿದೆ. 

ರಾಮಸಮುದ್ರದಿಂದ ಪಂಪ್‌ಹೌಸ್‌ವರೆಗಿನ ಮಾರ್ಗದಲ್ಲಿ ಮನೆಗಳು ಸೇರಿದಂತೆ ಇನ್ನೂ ಹಲವು ಕಟ್ಟಡಗಳ ತೆರವು ಆಗಿಲ್ಲ. ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ನಗರಸಭೆಯಾಗಲಿ, ರಸ್ತೆ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಅದನ್ನು ತೆರವುಗೊಳಿಸಲು ಪ್ರಯತ್ನ ಮಾಡಿಲ್ಲ. 

ಸಿ.ಆರ್‌.ಬಾಲರಪಟ್ಟಣ ಶಿಕ್ಷಣ ಸಂಸ್ಥೆಯ ಮುಂಭಾಗ ಸೇರಿದಂತೆ ಇನ್ನು ಕೆಲವು ಕಡೆಗಳಲ್ಲಿ 10.5 ಮೀಟರ್‌ ಅಗಲದ ರಸ್ತೆ ನಿರ್ಮಿಸಲು ಅವಕಾಶ ಇದ್ದರೂ, ನಿರ್ಮಾಣ ಮಾಡಿಲ್ಲ. ಚರಂಡಿ ಕೆಲಸವೂ ಪೂರ್ಣಗೊಂಡಿಲ್ಲ. ರಸ್ತೆ ವಿಭಜಕದ ಕಾಮಗಾರಿ ನಡೆಯುತ್ತಿರುವುದು ಬಿಟ್ಟರೆ ಬೇರೆ ಯಾವ ಕೆಲಸವೂ ನಡೆಯುತ್ತಿಲ್ಲ.

‘ಅಲ್ಲಿ ಅಗಲವಾದ ರಸ್ತೆ ನಿರ್ಮಿಸಿದ್ದಾರೆ. ಇಲ್ಲಿಯೂ ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ಕಾಂಪೌಂಡ್‌  ತೆರವುಗೊಳಿಸಿದ್ದರು. ಆದರೆ, ಯಾಕೋ ಏನೋ ಮೂರನೇ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿಲ್ಲ. ಇಲ್ಲೂ ಅಷ್ಟೇ ಅಗಲದ ರಸ್ತೆ ಇದ್ದರೆ ಜನರಿಗೆ ಅನುಕೂಲವಾಗುತ್ತಿತ್ತು’ ಎಂದು ಸ್ಥಳೀಯರಾದ ಪುಟ್ಟನರಸಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಾಂತರಾಜು ಅವರು, ‘ನಗರ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೂ ಜಾಗ ಬೇಕು ಎಂಬ ಕಾರಣಕ್ಕೆ 2.2 ಕಿ.ಮೀ ಉದ್ದದ ರಸ್ತೆಯನ್ನು ಅಗಲವಾಗಿ ನಿರ್ಮಿಸಲಾಗಿದೆ. 0.9 ಕಿ.ಮೀ ಉದ್ದದ ಮಾರ್ಗದಲ್ಲಿ ವಾಹನ ನಿಲುಗಡೆಯ ಅಗತ್ಯ ಇಲ್ಲದಿರುವುದರಿಂದ ಸ್ವಲ್ಪ ಕಿರಿದಾಗಿ ನಿರ್ಮಿಸಲಾಗಿದೆ’ ಎಂದು ಹೇಳಿದರು.

ದೂಳುಮಯ: ಕಾಂಕ್ರೀಟ್‌ ರಸ್ತೆ ನಿರ್ಮಾಣ ಆಗಿದ್ದರೂ ಜನರು ಮತ್ತು ವಾಹನ ಸವಾರರು ದೂಳು ಸೇವಿಸುವುದು ತಪ್ಪಿಲ್ಲ. ರಸ್ತೆ ಹಾಗೂ ಚರಂಡಿ ಮಧ್ಯೆ ಇರುವ ಖಾಲಿ ಜಾಗದಲ್ಲಿ ಇಂಟರ್‌ಲಾಕ್‌ ಹಾಕುವ ಕೆಲಸ ಆಗಬೇಕಿದೆ. ಈಗ ಅಲ್ಲಿ ಮಣ್ಣು ಇರುವುದರಿಂದ ಅದು ದೂಳಾಗಿ ರಸ್ತೆಯ ಮೇಲೆ ಸಂಗ್ರಹವಾಗುತ್ತಿದೆ. ಅಗಲವಾದ ಕಾಂಕ್ರೀಟ್‌ ರಸ್ತೆ ಇದ್ದರೂ ರಸ್ತೆಯ ಒಂದು ಭಾಗ ದೂಳಿನಿಂದ ಆವೃತವಾಗಿರುವುದರಿಂದ ಅಲ್ಲಿ ವಾಹನಗಳೇ ಸಂಚರಿಸುವುದಿಲ್ಲ. 

ಚರಂಡಿಯಲ್ಲಿ ನಿಂತ ನೀರು

ಭುವನೇಶ್ವರಿ ವೃತ್ತದಿಂದ ರಾಮಸಮುದ್ರದವರೆಗೆ ಎರಡು-ಮೂರು ಕಡೆ ಬಿಟ್ಟು ಬೇರೆಲ್ಲ ಕಡೆ ರಸ್ತೆ ಬದಿಯಲ್ಲಿ ಕಾಂಕ್ರೀಟ್‌ ಚರಂಡಿ ನಿರ್ಮಿಸಲಾಗಿದೆ. ಕಟ್ಟಡಗಳನ್ನು ತೆರವುಗೊಳಿಸಲು ಮಾಲೀಕರು ಒಪ್ಪದಿರುವ ಕಾರಣಕ್ಕೆ ಕೆಲವು ಕಡೆಗಳಲ್ಲಿ ಚರಂಡಿ ನಿರ್ಮಾಣ ಆಗಿಲ್ಲ. ಇಲ್ಲೆಲ್ಲ ಕೊಳಚೆ ನೀರು ನಿಂತು ಸಮಸ್ಯೆಯಾಗುತ್ತಿದೆ.

ರಾಮಸಮುದ್ರದಿಂದ ಚಾಮರಾಜನಗರದತ್ತ ಬರುವ ರಸ್ತೆಯಲ್ಲಿ (ರಾಮಸಮುದ್ರ ಪ್ರವೇಶದ್ವಾರದಿಂದ ಸ್ವಲ್ಪ ಎದುರು) ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹಲವು ತಿಂಗಳುಗಳಿಂದ ಇಲ್ಲಿ ಕೊಳಚೆ ನೀರು ನಿಂತು ಸುತ್ತಮುತ್ತಲಿರುವ ನಿವಾಸಿಗಳು, ಅಂಗಡಿಯರಿಗೆ ತೊಂದರೆಯಾಗುತ್ತಿದೆ. ಕಟ್ಟಡ ತೆರವುಗೊಳಿಸದಿರುವುದರಿಂದ ರಸ್ತೆ, ಚರಂಡಿ ನಿರ್ಮಿಸಲು ಜಾಗ ಇಲ್ಲದಂತೆ ಆಗಿದೆ. ಮೇಲ್ಭಾಗದಿಂದ ಬರುವ ಚರಂಡಿ ನೀರೆಲ್ಲ ಅಲ್ಲೇ ಸಂಗ್ರಹವಾಗಿ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ. ಚರಂಡಿಯನ್ನು ಕಾಂಕ್ರೀಟ್‌ ಸ್ಲ್ಯಾಬ್‌ನಿಂದ ಮುಚ್ಚದೇ ಇರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

’ಏಳೆಂಟು ತಿಂಗಳಿಂದ ಗಲೀಜು ನೀರು ಇಲ್ಲಿ ನಿಂತಿದೆ. ಚರಂಡಿ ನಿರ್ಮಿಸಿ ಇಲ್ಲವೇ ನಿಂತಿರುವ ಕೊಳಚೆ ನೀರನ್ನು ತೆರವುಗೊಳಿಸಿ ಎಂದು ಹಲವು ಬಾರಿ ರಸ್ತೆ ಕೆಲಸ ಮಾಡುವವರಿಗೆ ಮನವಿ ಮಾಡಿದ್ದೇವೆ. ಮಾಡುತ್ತೇವೆ ಎಂದು ಹೇಳುತ್ತಾರೆಯೇ ವಿನಾ ಇದುವರೆಗೂ ಮಾಡಿಲ್ಲ’ ಎಂದು ಚರಂಡಿ ಸಮೀಪದ ವೆಲ್ಡಿಂಗ್‌ ಅಂಗಡಿ ಇಟ್ಟುಕೊಂಡಿರುವ ಬಾಬು ತಿಳಿಸಿದರು.

‘ಇಲ್ಲಿ ರಸ್ತೆಯೂ ಅಗಲವಾಗಿಲ್ಲ. ಚರಂಡಿಯ ನಿರ್ಮಾಣವೂ ಸರಿಯಾಗಿಲ್ಲ. ಆಗಿರುವ ಚರಂಡಿಯನ್ನು ಮುಚ್ಚಿಯೂ ಇಲ್ಲ. ಕೆಲಸ ಮಾಡುವುದಕ್ಕೆ ಇಲ್ಲಿ ಕಷ್ಟವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಪ್ರಸ್ತಾವ: ಸಂಸದ ಆರ್‌.ಧ್ರುವನಾರಾಯಣ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರಂಡಿ ಕಾಮಗಾರಿ ನನೆಗುದಿಗೆ ಬಿದ್ದಿರುವ ವಿಚಾರ ಚರ್ಚೆಗೆ ಬಂದಿತ್ತು. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ನಗರಸಭೆಯ ಆಯುಕ್ತ ಎಂ.ರಾಜಣ್ಣ ಹಾಗೂ ಕಾಂತರಾಜು ಅವರು ಹೇಳಿದ್ದರು.

ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಸದರು ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಇಬ್ಬರಿಗೂ ಸೂಚಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು