ಖಾಲಿ ನಿವೇಶನ ಪ್ರಾಣಿ ತ್ಯಾಜ್ಯ ಎಸೆಯುವ ತಾಣ

ಶುಕ್ರವಾರ, ಏಪ್ರಿಲ್ 26, 2019
35 °C
ಪ್ರಾಣಿಗಳ ತ್ಯಾಜ್ಯದಿಂದ ದುರ್ವಾಸನೆ, ಪಾದಚಾರಿ, ನಿವಾಸಿಗಳಿಗೆ ಸಂಕಷ್ಟ, ಸ್ಪಂದಿಸದ ನಗರಸಭೆ–ಆರೋಪ

ಖಾಲಿ ನಿವೇಶನ ಪ್ರಾಣಿ ತ್ಯಾಜ್ಯ ಎಸೆಯುವ ತಾಣ

Published:
Updated:
Prajavani

ಚಾಮರಾಜನಗರ: ನಗರದ ಸತ್ತಿ ರಸ್ತೆಯಲ್ಲಿರುವ ಶ್ರೀ ಶಿವಕುಮಾರಸ್ವಾಮಿ ಭವನದ ಸಮೀಪ ವಾರ್ಡ್‌ ಸಂಖ್ಯೆ 2ರ ಖಾಲಿ ನಿವೇಶನಗಳು ತ್ಯಾಜ್ಯ ಎಸೆಯುವ ಸ್ಥಳವಾಗಿ ಮಾರ್ಪಟಾಗಿವೆ. ಪ್ರಾಣಿಗಳ ತ್ಯಾಜ್ಯಗಳನ್ನು ಇಲ್ಲಿ ಎಸೆಯಲಾಗುತ್ತಿದೆ. 

ನಿವೇಶನದ ಸುತ್ತ ಮನೆಗಳು, ಖಾಸಗಿ ಶಾಲೆ, ಕಲ್ಯಾಣ ಮಂಟಪಗಳಿವೆ. ವಾಹನಗಳನ್ನು ತೊಳೆಯುವ ಸರ್ವೀಸ್‌ ಕೇಂದ್ರ ಕೂಡ ಇದೆ. ಇದೇ ಮಾರ್ಗವಾಗಿ ಗಾಳೀಪುರ ಬಡಾವಣೆಗೂ ಜನರು ತೆರಳುತ್ತಾರೆ. ಜನರು ನಡೆದಾಡುವ ಪ್ರದೇಶದ ಬಳಿ ಪ್ರಾಣಿ ತ್ಯಾಜ್ಯ ಎಸೆಯುತ್ತಿರುವುದರಿಂದ ಸಂಕಷ್ಟ ಎದುರಾಗಿದೆ. ದಿನನಿತ್ಯ ನಡೆದು ಹೋಗುವಾಗ ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಪಾದಚಾರಿಗಳು, ನಿವಾಸಿಗಳು.

‘ಕಳೆದ ಐದಾರು ವರ್ಷಗಳಿಂದ ಪ್ರಾಣಿ ತ್ಯಾಜ್ಯ ಎಸೆಯುತ್ತಿದ್ದಾರೆ. ಈ ಮೊದಲು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮೀಪವಿರುವ ತಮಿಳು ಶಾಲೆಯ ಹಿಂಭಾಗ ಸುರಿಯಲಾಗುತ್ತಿತ್ತು. ದೂರು ನೀಡಿದ ಬಳಿಕ ತ್ಯಾಜ್ಯಗಳನ್ನು ಈ ನಿವೇಶನಗಳಲ್ಲಿ ಸುರಿಯುತ್ತಿದ್ದಾರೆ. ಅನೇಕ ಬಾರಿ ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು ಎಲ್ಲರಿಗೂ ದೂರು ನೀಡಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ. ಒಮ್ಮೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿಕೊಂಡು ಹೋದರೂ ಮುಂದೆ ಯಾವುದೇ ಬದಲಾವಣೆ ಕಾಣಲಿಲ್ಲ. ನೇರ ಪೋನ್‌ ಇನ್‌ ಕಾರ್ಯಕ್ರಮದಲ್ಲೂ ಇಲ್ಲಿನ ಪರಿಸ್ಥಿತಿ ಮನದಟ್ಟು ಮಾಡಲಾಗಿದೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನಿವಾಸಿ ರಾಜಮಾಣಿಕ್ಯಂ ‘ಪ್ರಜಾವಾಣಿ’ಯೊಂದಿಗೆ ಸಮಸ್ಯೆ ತೋಡಿಕೊಂಡರು.

‘ಕೋಳಿ ಪುಕ್ಕಗಳನ್ನು ಸುರಿದು ಒಂದೆರಡು ದಿನದ ಬಳಿಕ ಅವುಗಳಿಗೆ ಬೆಂಕಿ ಹಚ್ಚುತ್ತಾರೆ. ಗಾಳಿ ಬೀಸಿದಾಗ ದುರ್ವಾಸನೆ ಹರಡುತ್ತದೆ. ಸುಟ್ಟ ಪುಕ್ಕಗಳಲ್ಲಿ ಮಾಂಸದ ಚೂರು ಸೇರಿದ್ದರೆ ಅದು ಬೆಂಕಿಗೆ ಸುಟ್ಟು ಕರಕಲಾಗಿರುತ್ತದೆ. ಇದರ ವಾಸನೆಗೆ ನಾಯಿಗಳು ಬರುತ್ತವೆ. ಈ ವಾಸನೆ ವಾತಾವರಣಕ್ಕೆ ಬೆರೆತು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ’ ಎಂದು ಅವರು ಹೇಳಿದರು.

ಶಾಲಾ ಮಕ್ಕಳು, ಪಾದಚಾರಿಗಳಿಗೆ ತೊಂದರೆ: ಇದೇ ಮಾರ್ಗವಾಗಿ ಎಂಸಿಎಸ್‌ ಶಾಲೆಯ ಮಕ್ಕಳು, ಗಾಳೀಪುರ ನಿವಾಸಿಗಳು ಹಾಗೂ ಪಾದಚಾರಿಗಳು ನಿತ್ಯವೂ ನಡೆದಾಡುತ್ತಾರೆ. ಪ್ರಾಣಿ ತ್ಯಾಜ್ಯ ಎಸೆದಿರುವುದರಿಂದ ಗಬ್ಬು ವಾಸನೆ ಬರುತ್ತದೆ. ದುರ್ವಾಸನೆಗೆ ಮೂಗು ಮುಚ್ಚಿಕೊಂಡರೂ ಉಸಿರುಗಟ್ಟುವಂತಹ ಸ್ಥಿತಿ ಎದುರಾಗುತ್ತದೆ. ಈ ಸ್ಥಳದಿಂದ ನಡೆದು ಸಾಗುವುದೇ ದೊಡ್ಡ ಸಾಹಸದ ಕೆಲಸ ಎಂದು ನಿವಾಸಿಯೊಬ್ಬರು ಹೇಳಿದರು.

ಮುಂದಿನ ವಾರದಿಂದ ಕ್ರಮ: ‘ಮಾಂಸ ಮಾರಾಟಗಾರರಿಗೆ ಪ್ರಾಣಿ ತ್ಯಾಜ್ಯ ಒಂದೆಡೆ ಸಂಗ್ರಹಿಸಿ ದಿನನಿತ್ಯ ಬರುವ ನಮ್ಮ ವಾಹನದಲ್ಲಿ ಹಾಕುವಂತೆ ಸೂಚಿಸಲಾಗಿದೆ. ಯಾರೊಬ್ಬರೂ ಖಾಲಿ ಜಾಗದಲ್ಲಿ ಎಸೆಯದಂತೆ ಎಚ್ಚರಿಸಲಾಗಿದೆ. ಮುಂದಿನ ವಾರದಿಂದ ತ್ಯಾಜ್ಯ ಸಂಗ್ರಹಕ್ಕೆ ನಗರಸಭೆ ವಾಹನ ತೆರಳಲಿದೆ’ ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಧ್ಯರಾತ್ರಿ ಪ್ರಾಣಿ ತ್ಯಾಜ್ಯ ಎಸೆದು ಹೋಗುತ್ತಾರೆ’

‘ಈ ಬೀದಿಯಲ್ಲಿ ಬೀದಿದೀಪದ ವ್ಯವಸ್ಥೆ ಇಲ್ಲ. ಇದರಿಂದ ಬೆಳಿಗ್ಗೆ ಸಮಯದಲ್ಲಿ ಬಂದರೆ ಎಲ್ಲರಿಗೂ ತಿಳಿಯುತ್ತದೆ ಎಂದು ಮಧ್ಯರಾತ್ರಿ ಆಟೊನಲ್ಲಿ ಬಂದು ‘ಪ್ರಾಣಿ ತ್ಯಾಜ್ಯ’ದ ಚೀಲವನ್ನು ಎಸೆದು ಹೋಗುತ್ತಾರೆ. ನಾಯಿಗಳು ಪ್ರಾಣಿತ್ಯಾಜ್ಯಕ್ಕಾಗಿ ಅರಚುತ್ತಾ ಕಿತ್ತಾಡುತ್ತವೆ. ಅವುಗಳ ಗಲಾಟೆಯಿಂದ ನಿದ್ರೆಯೂ ಬರುವುದಿಲ್ಲ’ ಎಂದು ಇಲ್ಲಿನ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.

ಬೀದಿದೀಪದ ವ್ಯವಸ್ಥೆ ಬೇಕು: ಈ ಖಾಲಿ ನಿವೇಶನಗಳಲ್ಲಿ ಬೀದಿದೀಪದ ವ್ಯವಸ್ಥೆ ಕಲ್ಪಿಸಿಲ್ಲ. ರಾತ್ರಿವೇಳೆ ಮಹಿಳೆಯರು, ವೃದ್ಧರು, ನಿವಾಸಿಗಳು ನಡೆದಾಡಲು ತೊಂದರೆ ಎದುರಾಗಿದೆ. ನಾಯಿಗಳ ಕಾಟವೂ ಇದೆ. ಕೂಡಲೇ ನಗರಸಭೆ ಆಡಳಿತ ಬೀದಿದೀಪದ ವ್ಯವಸ್ಥೆ ಕಲ್ಪಿಸಿಕೊಡಬೇಕು. ಖಾಲಿ ನಿವೇಶನಗಳಿಗೆ ತ್ಯಾಜ್ಯ ಎಸೆಯದಂತೆ ಕಟ್ಟುನಿಟ್ಟಿನ ಕ್ರವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !