ಹರಳಕೋಟೆ: ಆಂಜನೇಯನ ಸನ್ನಿಧಿಯಲ್ಲಿ ಮೂಲಸೌಕರ್ಯ ಕೊರತೆ

ಬುಧವಾರ, ಜೂನ್ 19, 2019
23 °C
ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಾರ್ವಜನಿಕರ, ಭಕ್ತರ ಒತ್ತಾಯ

ಹರಳಕೋಟೆ: ಆಂಜನೇಯನ ಸನ್ನಿಧಿಯಲ್ಲಿ ಮೂಲಸೌಕರ್ಯ ಕೊರತೆ

Published:
Updated:
Prajavani

ಚಾಮರಾಜನಗರ: ನಗರಕ್ಕೆ ಸಮೀಪದಲ್ಲಿರುವ ಐತಿಹಾಸಿಕ ಹರಳಕೋಟೆ ಅಭ‌ಯ ಪ್ರದಾಯಕ ಆಂಜನೇಯ ಸ್ವಾಮಿ ದೇವಸ್ಥಾನ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ. 

ನಗರಸಭೆಯ ವ್ಯಾಪ್ತಿಗೆ ಬರುವ ಈ ದೇವಾಲಯ 27ನೇ ವಾರ್ಡ್‌ನಲ್ಲಿದೆ. ಇದು ಹಾಗೂ ಅಲ್ಲಿಂದ ಕೂಗಳತೆ ದೂರದಲ್ಲಿರುವ ಜನಾರ್ದನ ಸ್ವಾಮಿ ದೇವಾಲಯಗಳು ಮುಜರಾಯಿ ಇಲಾಖೆಗೆ ಒಳಪಟ್ಟಿವೆ.

ಜನಾರ್ದನಸ್ವಾಮಿ ದೇವಸ್ಥಾನವು ದಾನಿಗಳ ಸಹಾಯದಿಂದ ಜೀರ್ಣೋದ್ಧಾರ ಆಗಿದೆ. ನೀರು ಸೇರಿದಂತೆ ಇತರ ಮೂಲಸೌಕರ್ಯಗಳು ಅಲ್ಲಿವೆ. ಆದರೆ, ಆಂಜನೇಯಸ್ವಾಮಿ ದೇವಸ್ಥಾನ ಸೌಕರ್ಯಗಳನ್ನು ಹೊಂದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಐತಿಹಾಸಿಕ ಸ್ಥಳ: ‘ಹರಳಕೋಟೆಗೆ ಐತಿಹಾಸಿಕ ಮಹತ್ವ ಇದೆ. ಒಂದು ಕಾಲದಲ್ಲಿ ಇದು ಸಮೃದ್ಧವಾದ ಮತ್ತು ವೈಭವದ ಪಟ್ಟಣವಾಗಿತ್ತು. ಇಲ್ಲಿ ಶಿಲಾಯುಗದ ನಾಗರಿಕತೆ ಇತ್ತು ಎಂಬುದರ ಕುರುಹುಗಳಾಗಿ ಮಣ್ಣಿನ ಮಡಕೆ ಚೂರುಗಳ ಅವಶೇಷಗಳು ಪತ್ತೆಯಾಗಿವೆ. ವೀರಗಲ್ಲುಗಳೂ ಕಂಡು ಬಂದಿವೆ. ಮುಜರಾಯಿ ಇಲಾಖೆ ನಿರ್ಲಕ್ಷ್ಯವಹಿಸದೆ ಜೀರ್ಣೋದ್ಧಾರಕ್ಕೆ ಮುಂದಾಗಬೇಕು’ ಎಂದು ಅರ್ಚಕರಾದ ಶ್ರೀನಿವಾಸ್‌ ಹೇಳಿದರು.

ಒತ್ತುವರಿ: ‘ದೇವಸ್ಥಾನವು 6 ಎಕರೆ ಜಮೀನು ಹೊಂದಿದೆ. ಆದರೆ, ಈ ಜಮೀನಿನಲ್ಲಿ ಬಹುಪಾಲು ಈಗ ಒತ್ತುವರಿಯಾಗಿದೆ. ಮುಜರಾಯಿ ಇಲಾಖೆ ಅದನ್ನು ತೆರವುಗೊಳಿಸಲು ಕ್ರಮ ವಹಿಸಬೇಕು. ದೇವಾಲಯದ ಸುತ್ತಲೂ ಕಾಂಪೌಂಡ್‌ ನಿರ್ಮಿಸಬೇಕು. ಕಲ್ಯಾಣಿಯನ್ನು ಸ್ವಚ್ಛಗೊಳಿಸಬೇಕು. ಎರಡೂ ಮಂಟಪಗಳನ್ನು ದುರಸ್ತಿಗೊಳಿಸಬೇಕು. ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕಾಗಿದೆ’ ಎಂದು ಅವರು ಹೇಳಿದರು.

ಶನಿವಾರ ಪೂಜೆ: ಪ್ರತಿ ಶನಿವಾರ ದೇವಾಲಯದಲ್ಲಿ ವಿಶೇಷ ಪೂಜೆ ಇರುತ್ತದೆ. ಸ್ಥಳೀಯರು ಹಾಗೂ ದೂರದ ಊರುಗಳಿಂದ ನೂರಾರು ಭಕ್ತರು ಬರುತ್ತಾರೆ. ಆದರೆ, ನೀರು ಸೇರಿದಂತೆ ಇತರ ಮೂಲ ಸೌಕರ್ಯಗಳು ಇಲ್ಲಿಲ್ಲ.

‘ಪ್ರತಿ ಶನಿವಾರ ಹಾಗೂ ಶ್ರಾವಣ ಶನಿವಾರ ನಾನು ದೇವಸ್ಥಾನಕ್ಕೆ ಬರುತ್ತೇನೆ. ಇಲ್ಲಿ ತೊಂಬೆ, ನ‌ಲ್ಲಿಯಲ್ಲಿ ನೀರು ಬರುತ್ತಿಲ್ಲ. ಸುತ್ತಲೂ ಸ್ವಚ್ಛತೆ ಕಾಪಾಡಿಲ್ಲ. ನಗರಸಭೆ ಆಡಳಿತ ಇಲ್ಲೊಂದು ಕಸದ ತೊಟ್ಟಿ ನಿರ್ಮಿಸಿ, ಕಸಗಳನ್ನು ಅದಕ್ಕೆ ಹಾಕುವಂತೆ ಭಕ್ತರಿಗೆ ಅರಿವು ಮೂಡಿಸಬೇಕಿದೆ’ ಎಂದು ದೊಡ್ಡಮೋಳೆ ಗ್ರಾಮದ ನಾರಾಯಣ ಹೇಳುತ್ತಾರೆ.

‘ಪ್ರಥಮವಾಗಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಮತ್ತಿತರ ಅಗತ್ಯ ಮೂಲಸೌಲಭ್ಯ ಒದಗಿಸಲು ಜಿಲ್ಲಾಡಳಿತ, ಮುಜರಾಯಿ ಇಲಾಖೆ ಪ್ರಯತ್ನಿಸಬೇಕು. ಸುಸುಜ್ಜಿತ ರಸ್ತೆ ನಿರ್ಮಾಣ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಮಾಡಬೇಕು. ಬರುವ ಭಕ್ತರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಕರಿನಜನಪುರ ಮಂಜುನಾಥ್‌ ಆಗ್ರಹಿಸಿದರು.

ಭಕ್ತರಿಗೆ ಕೈ, ಕಾಲು ತೊಳೆಯಲು ಬಕೆಟ್‌ ನೀರು

ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೈ ಕಾಲು ತೊಳೆಯಲು ಬಕೆಟ್‌ಗಳಲ್ಲಿ ನೀರು ಇಡಲಾ‌ಗುತ್ತಿದೆ.

‘ದೇವಸ್ಥಾನದಲ್ಲಿ ನಾಲ್ಕು ಕೊಳವೆಬಾವಿ ಕೊರೆಸಲಾಗಿದೆ. ಈಗ ಒಂದು ಕೊಳವೆಬಾವಿಯಲ್ಲಿ ಮಾತ್ರವೇ ಸ್ವಲ್ಪ ನೀರು ಲಭ್ಯವಿದೆ. ಇದನ್ನು ದೇವರ ಮೂರ್ತಿಯನ್ನು ಶುಚಿಗೊಳಿಸಲು ಬಳಸುತ್ತೇವೆ. 250ರಿಂದ 350 ಅಡಿ ಆಳದವರೆಗೂ ಕೊಳವೆಬಾವಿ ಕೊರೆಸಿದರೂ ನೀರು ಬರುತ್ತಿಲ್ಲ. ನಗರದಿಂದ ವಾರಕ್ಕೊಮ್ಮೆ ಹಣ ನೀಡಿ ನೀರು ತರಿಸಲಾಗುತ್ತಿದೆ’ ಎಂದು ಅರ್ಚಕ ಶ್ರೀನಿವಾಸ್ ತಿಳಿಸಿದರು.

‘ಪ್ರತಿ ಶನಿವಾರ ಹಾಗೂ ಶ್ರಾವಣ ಮಾಸದ ಪೂಜೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಭಕ್ತರು ಸೇರುತ್ತಾರೆ. ನಗರಸಭೆ ಆಡಳಿತ, ಮುಜರಾಯಿ ಇಲಾಖೆ ಶಾಶ್ವತ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಅವರು.

‘ಎರಡು ವರ್ಷಗಳಿಂದ ನೀರಿನ ಸಮಸ್ಯೆ ಎದುರಾಗಿದೆ. ಭಕ್ತರು ಕಾಲು, ಕೈ ತೊಳೆದುಕೊಳ್ಳಲು ಇಲ್ಲಿ ವ್ಯಾಪಾರ ಮಾಡುವ ನಾವುಗಳೇ ಬಕೆಟ್‌ನಲ್ಲಿ ನೀರು ತರುತ್ತೇವೆ. ದೇವಸ್ಥಾನದಲ್ಲಿ 5ಕ್ಕೂ ಹೆಚ್ಚು ಮಂದಿ ವ್ಯಾಪಾರಸ್ಥರು ಇದ್ದಾರೆ. ಎಲ್ಲರೂ ತಮಗೆ ಅನುಕೂಲವಾಗುವಂತೆ ನೀರನ್ನು ತರುತ್ತಾರೆ. ಶಾಶ್ವತ ಕುಡಿಯುವ ನೀರು ಅತ್ಯಗತ್ಯವಾಗಿ ಬೇಕಿದೆ’ ಎಂದು ರಾಮಸಮುದ್ರ ರಾಜಮ್ಮ ಒತ್ತಾಯಿಸಿದರು. 

ಚಾವಣಿ ನಿರ್ಮಾಣಕ್ಕೆ ಆಗ್ರಹ: ‘ದೇವಸ್ಥಾನದ ಜೀರ್ಣೋದ್ಧಾರ ಮಾಡುವುದರ ಜೊತೆಗೆ ವ್ಯಾಪಾರಸ್ಥರ ಅನುಕೂಲಕ್ಕಾಗಿ ಚಾವಣಿ ನಿರ್ಮಿಸಲೂ ಸಂಬಂಧಪಟ್ಟ ಆಡಳಿತ ಕ್ರಮ ಕೈಗೊಳ್ಳಬೇಕು’ ಎಂದು ವ್ಯಾಪಾರಿ ಸುಬ್ರಮಣ್ಯ ಒತ್ತಾಯಿಸಿದರು.

‘ನೀರು ‍ಪೂರೈಕೆಗೆ ಕ್ರಮ’

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ತಹಶೀಲ್ದಾರ್‌ ಯೋಗಾನಂದ್‌ ಅವರು, ‘ಮೊದಲು ದೇವಸ್ಥಾನಕ್ಕೆ ಸೇರಿದ ಜಮೀನಿನ ಅಳತೆ ಮಾಡಿಸುತ್ತೇವೆ. ದೇವಸ್ಥಾನದ ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಒತ್ತುವರಿ ಹಾಗೂ ನೀರಿನ ಸಮಸ್ಯೆ ಬಗ್ಗೆ ನಮಗೆ ಮನವಿ ಬಂದಿಲ್ಲ. ನಗರಸಭೆ ಆಯುಕ್ತರೊಂದಿಗೆ ಮಾತನಾಡಿ ನೀರು ಪೂರೈಕೆಗೆ ಕ್ರಮವಹಿಸಲಾಗುವುದು’ ಎಂದು ಹೇಳಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !