ಮಳೆ ಎದುರಿಸಲು ಸಿದ್ಧವಾಗಿದೆಯೇ ನಗರಸಭೆ?

ಶುಕ್ರವಾರ, ಜೂನ್ 21, 2019
22 °C
ಅರ್ಧಗಂಟೆ ಮಳೆ ಬಂದರೆ ಕಟ್ಟಿಕೊಳ್ಳುತ್ತದೆ ಚರಂಡಿ, ರಸ್ತೆಯಲ್ಲಿ ಹರಿಯುತ್ತದೆ ನೀರು, ಚರಂಡಿ ತುಂಬ ಕಸ, ಹೂಳು

ಮಳೆ ಎದುರಿಸಲು ಸಿದ್ಧವಾಗಿದೆಯೇ ನಗರಸಭೆ?

Published:
Updated:
Prajavani

ಚಾಮರಾಜನಗರ: ನಗರದಲ್ಲಿ ಈಗ ಪ್ರತಿ ದಿನ ಮಳೆಯಾಗುತ್ತಿದೆ. ಆದರೆ, ಅದು ಸೃಷ್ಟಿಸುವ ಅವಾಂತರಗಳನ್ನು ಎದುರಿಸಲು ನಗರಸಭೆ ಸಿದ್ಧತೆ ನಡೆಸಿದಂತೆ ಕಾಣುತ್ತಿಲ್ಲ. 

ಅರ್ಧಗಂಟೆ ಬಿರುಸು ಮಳೆ ಬಿದ್ದರೆ, ನಗರದ ಪ್ರಮುಖ ರಸ್ತೆಗಳ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲಿ ನೀರು ನಿಲ್ಲುವ, ಹರಿಯು‌ವ ಪರಿಸ್ಥಿತಿ ಉಂಟಾಗಿದೆ. ಬಡಾವಣೆಗಳಲ್ಲೂ ಕೂಡ ತೆರೆದ ಚರಂಡಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್‌, ಕಸ, ಹೂಳನ್ನು ತೆರವುಗೊಳಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿಲ್ಲ. 

ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಗರದ ಹೃದಯ ಭಾಗದಲ್ಲಿರುವ ಭುವನೇಶ್ವರ ವೃತ್ತದ ಬಳಿ ಚಾಮರಾಜೇಶ್ವರ ದೇವಸ್ಥಾನದತ್ತ ಹೋಗುವ ರಸ್ತೆಯಲ್ಲೇ ನೀರು ನಿಲ್ಲುತ್ತಿದ್ದೆ. ರಸ್ತೆಯ ಎರಡು ಬದಿಗಳಲ್ಲೂ ಚರಂಡಿ ನಿರ್ಮಿಸಿದ್ದರೂ ನೀರು ಅಲ್ಲಿ ಹರಿಯುತ್ತಿಲ್ಲ. ರಸ್ತೆಯಲ್ಲಿ ಮೊಣಕಾಲುವರೆಗೆ ನೀರು ಹರಿಯುತ್ತಿದೆ. ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಅಭಿವೃದ್ಧಿ ಪಡಿಸಲಾದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲೂ ಕೆಲವು ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗದಿರುವುದರಿಂದ ಮಳೆ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಹೊಸ ಕಾಂಕ್ರೀಟ್‌ ರಸ್ತೆಯಲ್ಲಿ ಹರಿಯುತ್ತದೆ. ಪಾದಚಾರಿ ಮಾರ್ಗವೂ ಇಲ್ಲದಿರುವುದರಿಂದ ಜನರಿಗೆ ನಡೆದಾಡಲೂ ತೊಂದರೆಯಾಗಿದೆ. 

ಡೀವಿಯೇಷನ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಶಂಕರಪುರ ಬಡಾವಣೆಯ ಇಂಡಿಯನ್‌ ಬ್ಯಾಂಕ್‌ ಎದುರು, ನಂಜನಗೂಡು ರಸ್ತೆ, ಸತ್ತಿ ರಸ್ತೆ ಸೇರಿದಂತೆ ಇತರೆ ಕಡೆಗಳಲ್ಲೂ ಮಳೆಯ ಸಂದರ್ಭದಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. 

ಬಿ.ರಾಚಯ್ಯ ಜೋಡಿರಸ್ತೆಯ ಎಡಬದಿಯಲ್ಲಿ ಕೆಇಬಿ ಕಚೇರಿಯಿಂದ ಜಿಲ್ಲಾಡಳಿತ ಭವನದ ಗೇಟ್ ವರೆಗೆ ಸಿಸಿ ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಮತ್ತೊಂದು ಬದಿಯಲ್ಲಿ ಕಟ್ಟಡಗಳನ್ನು ತೆರವುಗೊಳಿಸಲು ಮಾಲೀಕರು ಒಪ್ಪದೇ ಇರುವುದರಿಂದ ಹಲವು ಕಡೆಗಳಲ್ಲಿ ಹೊಸ ಚರಂಡಿ ನಿರ್ಮಿಸಿಯೇ ಇಲ್ಲ. ಸತ್ತಿ ರಸ್ತೆಯ ಚರಂಡಿ ಕಾಮಗಾರಿಯೂ ಅಂತಿಮ ಹಂತ ತಲುಪಿಲ್ಲ. ಮಳೆ ನೀರು ಹೊರ ಹೋಗದೆ ರಸ್ತೆಯಲ್ಲಿಯೇ ಹರಿಯುತ್ತದೆ.

‘ನಗರದ ಬಡಾವಣೆ ಹಾಗೂ ಪ್ರಮುಖ ರಸ್ತೆಗಳ ಬದಿಯಲ್ಲಿ ವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ನಗರಸಭೆ ಆಡಳಿತ ಅಗತ್ಯ ಕ್ರಮವಹಿಸಬೇಕು. ಈಗಿರುವ ಚರಂಡಿಯಲ್ಲಿ ತುಂಬಿರುವ ಕಸ ಅಥವಾ ಹೂಳನ್ನು ತೆಗೆಯಲು ಕ್ರಮ ವಹಿಸಬೇಕು’  ಎಂದು ನಗರದ ನಿವಾಸಿಗಳು ಒತ್ತಾಯಿಸುತ್ತಾರೆ.

‘ಮಳೆಯನ್ನು ಎದುರಿಸಲು ನಗರಸಭೆ ಸಿದ್ಧತೆ ನಡೆಸಬೇಕು. ಮಳೆಗಾಲ ಆರಂಭಕ್ಕೂ ಮೊದಲು ನಗರ ವ್ಯಾಪ್ತಿಯಲ್ಲಿ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಬೇಕು. ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕಲುಷಿನ ನೀರಿನಿಂದಾಗಿ ಸಾಂಕ್ರಾಮಿಕ ರೋಗಗಳು ಬರುವ ಅಪಾಯವೂ ಇರುತ್ತದೆ’ ಎಂದು ನಗರ ನಿವಾಸಿ ಎಸ್.ನಿರಂಜನ್ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

 ‘ಸಿದ್ಧತೆ ನಡೆಸಿದ್ದೇವೆ’
‘ಮಳೆಗಾಲವನ್ನು ಎದುರಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಭುವನೇಶ್ವರಿ ವೃತ್ತದಲ್ಲಿ ವಿದ್ಯುತ್‌ ಕೇಬಲ್‌ ಅಳವಡಿಸುವ ಸಂದರ್ಭದಲ್ಲಿ ನೆಲ ಅಗೆದಿದ್ದರಿಂದ ಮಣ್ಣು ಚರಂಡಿಗೆ ನೀರು ಹೋಗುವ ಸ್ಥಳದಲ್ಲಿ ಕಟ್ಟಿಕೊಂಡಿದ್ದರಿಂದ ನೀರಿನ ಹರಿವಿಗೆ ತೊಂದರೆಯಾಗಿತ್ತು. ಅದನ್ನು ದುರಸ್ತಿ ಮಾಡಲಾಗಿದೆ’ ಎಂದು ನಗರ ಸಭೆ ಆಯುಕ್ತ ಎಂ.ರಾಜಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಮಾಲೀಕರು ಕಟ್ಟಡಗಳನ್ನು ತೆರವುಗೊಳಿಸಲು ಬಿಡದಿರುವುದರಿಂದ ಸಮಸ್ಯೆಯಾಗಿದೆ. ಬಡಾವಣೆಗಳಲ್ಲೂ ಚರಂಡಿ ಸ್ವಚ್ಛಗೊಳಿಸಲು ಒತ್ತು ನೀಡಲಾಗಿದೆ. ಜನರಿಗೆ ತೊಂದರೆಯಾಗದಂತೆ ಎಲ್ಲ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !