ಶತಮಾನ ಕಂಡ ಶಾಲೆಗೆ ಬೆಳಕಾದ ಒಸ್ಸಾಟ್‌

7
₹15 ಲಕ್ಷ ವೆಚ್ಚದಲ್ಲಿ ನಾಗವಳ್ಳಿ ಸರ್ಕಾರಿ ಶಾಲೆ ಪುನರ್‌ನಿರ್ಮಾಣ, ಇಂದು ಉದ್ಘಾಟನೆ

ಶತಮಾನ ಕಂಡ ಶಾಲೆಗೆ ಬೆಳಕಾದ ಒಸ್ಸಾಟ್‌

Published:
Updated:
Deccan Herald

ಚಾಮರಾಜನಗರ: 120 ವರ್ಷಗಳಿಂದ ನಿರಂತರವಾಗಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಧಾರೆ ಎರೆದ ಶಾಲೆ ಅದು. ಆದರೆ, ಹಲವು ವರ್ಷಗಳಿಂದೀಚೆಗೆ ಶಿಥಿಲ ಸ್ಥಿತಿಗೆ ತಲುಪಿದ್ದ ಈ ಜ್ಞಾನ ದೇಗುಲ, ಮಕ್ಕಳು ಜ್ಞಾನಾರ್ಜನೆ ಮಾಡಲು ಸಾಧ್ಯವಾಗದಂತಹ ದಯನೀಯ ಸ್ಥಿತಿಗೆ ತಲುಪಿತ್ತು. ಅಂತಹ ದೇಗುಲಕ್ಕೆ ಆಸರೆಯಾಗಿ ನಿಂತಿದ್ದು ‘ಒಸ್ಸಾಟ್‌’ ಎಂಬ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ).

ಒಸ್ಸಾಟ್‌ ಎಜುಕೇಷನಲ್‌ ಚ್ಯಾರಿಟೇಬಲ್‌ ಟ್ರಸ್ಟ್‌ನ ಪರಿಶ್ರಮದಿಂದ ಸುಸಜ್ಜಿತವಾಗಿ ನವೀಕರಣಗೊಂಡಿರುವ ಶಾಲೆಯ ಹೆಸರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ ಶಾಲೆ) ನಾಗ‌ವಳ್ಳಿ. ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕಾಗಿ 2003ರಿಂದ ದುಡಿಯುತ್ತಿರುವ ಈ ಸಂಸ್ಥೆಯು, ನಾಗವಳ್ಳಿ ಶಾಲೆಯ ನವೀಕರಣಕ್ಕಾಗಿ ₹15 ಲಕ್ಷ ವ್ಯಯಿಸಿದೆ. ಇದು ಒಸ್ಸಾಟ್‌ ಪುನಶ್ಚೇತನಗೊಳಿಸಿರುವ 22ನೇ ಶಾಲೆ. ಇದುವರೆಗೆ ಸಂಸ್ಥೆಯು ಕರ್ನಾಟಕದ ವಿವಿಧ ಜಿಲ್ಲೆಗಳು, ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ 21 ಶಾಲೆಗಳನ್ನು ಅಭಿವೃದ್ಧಿ ಪಡಿಸಿದೆ. 

‘ಒನ್‌ ಸ್ಕೂಲ್‌ ಅಟ್‌ ಎ ಟೈಮ್‌’ (ಒಮ್ಮೆಗೆ ಒಂದೇ ಶಾಲೆ) ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ನಾಗವಳ್ಳಿ ಶಾಲೆಯ ಪುನರ್‌ ನಿರ್ಮಾಣ ಕಾಮಗಾರಿಗೆ ಈ ವರ್ಷದ ಮಾರ್ಚ್‌ 12ರಂದು ಚಾಲನೆ ನೀಡಿತ್ತು. ನಾಲ್ಕೂವರೆ ತಿಂಗಳಲ್ಲಿ ಎಲ್ಲ ಕೆಲಸಗಳೂ ಪೂರ್ಣಗೊಂಡಿದ್ದು, ಬುಧವಾರ ಸ್ವಾತಂತ್ರ್ಯ ದಿನಾಚರಣೆಯ ದಿನ ಉದ್ಘಾಟನೆಗೊಳ್ಳಲಿದೆ.

‘ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗದೇ ಹೋದರೆ, ಅವರಿಗೆ ಭವಿಷ್ಯದಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ, ದಾರಿ ತಪ್ಪುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹಾಗಾಗಿ ಶಾಲೆಗಳಲ್ಲಿ ಮೂಲಸೌಕರ್ಯ ಅತ್ಯಂತ ಮುಖ್ಯ. ದಯನೀಯ ಸ್ಥಿತಿಯಲ್ಲಿರುವ ಶಾಲೆಗಳನ್ನು ಪುನರ್‌ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಂಡು ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಸಂಸ್ಥೆಗೆ ಅಮೆರಿಕ, ಬೆಂಗಳೂರು ಸೇರಿದಂತೆ ಭಾರತದ ವಿವಿ ಕಡೆಗಳಲ್ಲಿ ಸ್ವಯಂ ಸೇವಕರಿದ್ದಾರೆ. ಪ್ರತಿ ವರ್ಷ ಅವರು ಈ ಉದ್ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ’ ಎಂದು ಒಸ್ಸಾಟ್‌ ಎಜುಕೇಷನಲ್‌ ಚ್ಯಾರಿಟೇಬಲ್‌ ಟ್ರಸ್ಟ್‌ ಸಂಸ್ಥಾಪಕ ಮತ್ತು ಟ್ರಸ್ಟಿ ವಾದಿರಾಜ್‌ ಭಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2017ರಲ್ಲಿ ಚಾಮರಾಜನಗರದ ರೋಟರಿ ಸಂಸ್ಥೆಯು ಈ ಶಾಲೆಯ ದುಃಸ್ಥಿತಿಯನ್ನು ನಮ್ಮ ಗಮನಕ್ಕೆ ತಂದಿತ್ತು. ಆ ಬಳಿಕ, ನಾಗವಳ್ಳಿಗೆ ಹೋಗಿ ಪರಿಶೀಲನೆ ನಡೆಸಿದೆವು. ಗ್ರಾಮೀಣ ಪ್ರದೇಶಗಳಲ್ಲಿರುವ, ತೀರಾ ಶಿಥಿಲವಾಗಿರುವ ಮತ್ತು ನವೀಕರಣ ಮಾಡಲು ಆಸಕ್ತಿ ತೋರುವ ಶಿಕ್ಷಕರು ಹೊಂದಿರುವ ಶಾಲೆಗಳನ್ನು ನಾವು ಆಯ್ಕೆ ಮಾಡಿಕೊಳ್ಳುತ್ತೇವೆ. ಈ ಶಾಲೆಯಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಶಾಲೆಯನ್ನೇ ಆಯ್ಕೆ ಮಾಡಿಕೊಂಡೆವು’ ಎಂದು ಅವರು ಹೇಳಿದರು.

‘ಮೈಸೂರಿನ ಎನ್‌ಐಇ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ವಿಭಾಗದ 1993ರ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳ ಸಂಘದವರು ಕಟ್ಟಡಗಳ ದುರಸ್ತಿಗೆ ಟ್ರಸ್ಟ್‌ ಮೂಲಕ ಹಣಕಾಸಿನ ನೆರವು ನೀಡಿದ್ದಾರೆ. ಶೌಚಾಲಯ ನಿರ್ಮಾಣ ಮತ್ತು ನೀರಿನ ವ್ಯವಸ್ಥೆಗೆ ಬೆಂಗಳೂರಿನ ಕಾರ್ಪೊರೇಟ್‌ ಸಂಸ್ಥೆ ನೆರವಾಗಿದೆ’ ಎಂದು ಅವರು ವಿವರಿಸಿದರು.

‘ಚಾಮರಾಜನಗರದ ರೋಟರಿ ಸಂಸ್ಥೆಯು ಶಾಲೆಗೆ ಬೆಂಚು, ಮೇಜು, ಬೋರ್ಡ್‌ಗಳನ್ನು ಕೊಡುಗೆಯಾಗಿ ನೀಡಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಶಾಂತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಏನೆಲ್ಲ ನವೀಕರಣ?

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಬೋಧಿಸಲಾಗುತ್ತಿದೆ. ಶಾಲೆಯ ಎಂಟು ಕೊಠಡಿಗಳ ಪೈಕಿ ಹೆಂಚಿನ ಚಾವಣಿಯ ಮೂರು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದವು. ಇವುಗಳಿಗೆ ಹಲವು ತಿಂಗಳಿಂದ ಬೀ‌ಗ ಜಡಿಯಲಾಗಿತ್ತು.

ಉಳಿದ ಐದು ಕೊಠಡಿಗಳು ಕಾಂಕ್ರೀಟ್‌ ಚಾವಣಿಯದ್ದು. ಅದರಲ್ಲೂ ನೀರು ಸೋರುತ್ತಿತ್ತು. ನೆಲದಲ್ಲಿ ಗುಂಡಿಗಳು ಬಿದ್ದು, ಮಕ್ಕಳಿಗೆ ಕುಳಿತುಕೊಳ್ಳಲು ಸಾಧ್ಯವಾಗದಿರುವ ಸ್ಥಿತಿ ಇತ್ತು. ಒಸ್ಸಾಟ್‌ ನೀಡಿರುವ ಧನಸಹಾಯದಲ್ಲಿ ಚಾವಣಿಗೆ ಕಾಂಕ್ರೀಟ್‌ ಹಾಕಿ ಸದೃಢಗೊಳಿಸಲಾಗಿದೆ. ನೆಲವನ್ನೂ ರಿಪೇರಿ ಮಾಡಲಾಗಿದೆ. ‌

ಉಳಿದ ಮೂರು ಕೊಠಡಿಗಳಿಗೆ ಹೊಸದಾಗಿ ಹೆಂಚು ಹಾಕಲಾಗಿದೆ. ಶೌಚಾಲಯವನ್ನು ದುರಸ್ತಿಗೊಳಿಸಲಾಗಿದೆ. ಹೆಣ್ಣುಮಕ್ಕಳಿಗೆ ಹೊಸ ಶೌಚಾಲಯ ನಿರ್ಮಿಸಲಾಗಿದೆ. ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !