ಗುರುವಾರ , ಡಿಸೆಂಬರ್ 12, 2019
26 °C
ಬುದ್ಧನ ತತ್ವ, ಸಂದೇಶ, ಸಮಾನತೆ, ಮಾನವತಾವಾದವನ್ನು ಜಗತ್ತಿಗೆ ಸಾರಲಿ– ಗಣ್ಯರ ಸಂದೇಶ

ನಳಂದ ಬೌದ್ಧ ವಿ.ವಿಗೆ ಶಂಕುಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಇಂಟರ್‌ನ್ಯಾಷನಲ್‌ ಬುದ್ಧಿಸ್ಟ್‌ ಮಾಂಕ್ಸ್‌ ಚಾರಿಟಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಸ್ಥಾಪನೆಗೊಳ್ಳಲಿರುವ ಬಹು ನಿರೀಕ್ಷಿತ ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರ ಹಾಗೂ ನಳಂದ ಬೌದ್ಧ ವಿಶ್ವವಿದ್ಯಾಲಯಕ್ಕೆ ಶನಿವಾರ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಭೂಮಿಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಚಾಮರಾಜನಗರದ ಸಮೀಪದ ಉತ್ತುವಳ್ಳಿಯ ಯಡಬೆಟ್ಟದಲ್ಲಿ ವೈದ್ಯಕೀಯ ಕಾಲೇಜಿನ ಹಿಂಭಾಗದಲ್ಲಿ ನಳಂದ ಬೌದ್ಧ ವಿವಿ ಹಾಗೂ ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರ ತಲೆ ಎತ್ತಲಿದೆ. ಸರ್ಕಾರ ಈಗಾಗಲೇ 25 ಎಕರೆ ಜಮೀನು ಮತ್ತು ₹ 10 ಕೋಟಿ ಹಣ ಬಿಡುಗಡೆ ಮಾಡಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪರಮೇಶ್ವರ ಅವರು, ‘ಭಾರತದಲ್ಲಿ ಇರುವಷ್ಟು ಜಾತಿ ವ್ಯವಸ್ಥೆ ಎಲ್ಲೂ ಇಲ್ಲ. ಕೆಳ ಸಮುದಾಯದ ಜನರು ಎಚ್ಚೆತ್ತುಕೊಳ್ಳದೆ ಹೋದರೆ, ಸಮಾನತೆ ಇನ್ನೂ ದೂರ ಹೋಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ಇವತ್ತು ನಮಗೆ ಬೇಕಾಗಿರುವುದು ಸಮಾನತೆ, ಗೌರವ ಮತ್ತು ಸ್ವಾಭಿಮಾನ. ಅದಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಬೌದ್ಧ ಧರ್ಮ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಅದರಲ್ಲಿ ಜಾತಿಭೇದ, ಮೇಲುಕೀಳು ಇಲ್ಲ’ ಎಂದರು.

‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಬುದ್ಧ ಧರ್ಮಕ್ಕೆ ದೇಶದಲ್ಲಿ ಪುನರ್ಜನ್ಮ ನೀಡಿದರು. ಅವರು ಎಲ್ಲ ಧರ್ಮಗಳನ್ನು ಅಧ್ಯಯನ ನಡೆಸಿದ್ದರು. ಎಲ್ಲ ಸಮಸ್ಯೆಗಳಿಗೆ  ಅವರಿಗೆ ಅಂತಿಮವಾಗಿ ಬೌದ್ಧ ಧರ್ಮದಲ್ಲಿ ಅವರಿಗೆ ಉತ್ತರ ಸಿಕ್ಕಿತ್ತು’ ಎಂದು ಹೇಳಿದರು.

‘ಜ್ಞಾನವನ್ನು ಸಂಪಾದನೆ ಮಾಡುವುದು ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಅರ್ಥವಾಗಬೇಕಿದೆ. ಬೌದ್ಧ ವಿವಿಯು ಜ್ಞಾನ ನೀಡುವುದರ ಜೊತೆಗೆ ಬುದ್ಧನ ಸಿದ್ಧಾಂತಗಳನ್ನು, ಸಮಾನತೆ, ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರುವ ಕೇಂದ್ರವಾಗಲಿ’ ಎಂದು ಆಶಿಸಿದರು.

ಸಿದ್ದರಾಮಯ್ಯ ಮಾತನಾಡಿ, ‘ನಮ್ಮಲ್ಲಿರುವ ದಾಸ್ಯ ಮನೋಭಾವದಿಂದ ಹೊರಗಡೆ ಬರಬೇಕು. ಇದುವೇ ನಾವು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್‌ ಅವರಿಗೆ ಕೊಡುವ ಗೌರವ’ ಎಂದು ಹೇಳಿದರು.

‘ಬುದ್ಧ ಈ ದೇಶದಲ್ಲಿ ಮೊದಲ ಬಾರಿಗೆ ಮಾನವತಾವಾದ ಮತ್ತು ಸಮತಾವಾದವನ್ನು ಪ್ರತಿಪಾದನೆ ಮಾಡಿದರು. ಮನುಷ್ಯ, ಮನುಷ್ಯನನ್ನು ಮನುಷ್ಯನಾಗಿ ಕಾಣುವುದೇ ಮಾನವ ಧರ್ಮ. ಪರಸ್ಪರ ಪ್ರೀತಿ, ವಿಶ್ವಾಸ ಇರುವಂತಹ ಬದುಕು ನಮಗೆ ಬೇಕೇ ವಿನಾ ಮನುಷ್ಯ–ಮನುಷ್ಯರ ನಡುವೆ ಕಂದಕ ಇರುವ ಬದುಕಲ್ಲ’ ಎಂದು ಹೇಳಿದರು.

‘ಹಿಂದೆ ನಮ್ಮ ಸಮಾಜದಲ್ಲಿ ಮನುಷ್ಯರು ಮನುಷ್ಯರಾಗಿ ಬದುಕುತ್ತಿರಲಿಲ್ಲ. ಅಸಮಾನತೆ, ಶೋಷಣೆ, ಅಮಾನವೀಯ ಪದ್ಧತಿಗಳು ಜಾರಿಯಲ್ಲಿದ್ದವು. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಹೊಸ ಧರ್ಮಗಳು ಸ್ಥಾಪನೆಗೊಂಡವು’ ಎಂದು ಅವರು ಪ್ರತಿಪಾದಿಸಿದರು. 

‘ನಮ್ಮ ದೇಶದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಅಂಬೇಡ್ಕರ್‌ ಅವರು ಅರ್ಥಮಾಡಿಕೊಂಡಷ್ಟು ಬೇರೆ ಯಾರೂ ಮಾಡಿಕೊಂಡಿರಲಿಲ್ಲ. ಅವರು ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಿಸಿದರು. ಅದು ಆಗುವುದಿಲ್ಲ ಎಂದು ಗೊತ್ತಾದ ನಂತರ ಬೌದ್ಧ ಧರ್ಮ ಸೇರಿದರು’ ಎಂದು ಅಭಿಪ್ರಾಯಪಟ್ಟರು. 

‘ಸ್ಥಾ‌ಪನೆಯಾಗಲಿರುವ ವಿವಿಯಲ್ಲಿ ಜ್ಞಾನ, ಅಧ್ಯಯನದ ಜೊತೆಗೆ ಮನುಷ್ಯರಾಗಿ ಬೆಳೆಯಬೇಕಾದ ಅರಿವನ್ನು ಜನರಲ್ಲಿ ಮೂಡಿಸಲಿ. ಪ್ರಮಾಣಪತ್ರಗಳ ಪದವಿಗಳಿಗೆ ಜೋತು ಬೀಳದೆ ಬದುಕಿನ ವಿದ್ಯೆ, ಪದವಿ ಇಲ್ಲಿ ಸಿಗುವಂತಾಗಲಿ’ ಎಂದು ಹಾರೈಸಿದರು.

ಸಂಸದ ಆರ್‌.ಧ್ರುವನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಹನೂರು ಶಾಸಕ ಆರ್‌.ನರೇಂದ್ರ ಮಾತನಾಡಿದರು.

ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಭಂತೆ ಆನಂದ ಮಹಾಥೇರ ಆಶೀರ್ವಚನ ನೀಡಿದರು.

ಇಂಟರ್‌ನ್ಯಾಷನಲ್‌ ಬುದ್ಧಿಸ್ಟ್‌ ಮಾಂಕ್ಸ್‌ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಭಂತೆ ಧಮ್ಮಾನಂದ ಥೇರ, ಟ್ರಸ್ಟ್‌ ಉಪಾಧ್ಯಕ್ಷ ಭಂತೆ ಮನೋರಕ್ಖಿತ ಥೇರ, ಶಾಸಕರಾದ ಯತೀಂದ್ರ, ಅನಿಲ್‌ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಕಾಂಗ್ರೆಸ್‌ ಮುಖಂಡರಾದ ಎ.ಆರ್‌.ಕೃಷ್ಣಮೂರ್ತಿ, ಬಾಲರಾಜ್‌, ಸಿದ್ದರಾಜು, ಜಯಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್‌, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌, ಬೌದ್ಧ ಭಿಕ್ಕುಗಳು  ಇದ್ದರು.

ಗ್ರಂಥಾಲಯಕ್ಕೆ ₹ 50 ಲಕ್ಷ
ನಳಂದ ಬೌದ್ಧ ವಿಶ್ವವಿದ್ಯಾಲಯ, ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರದಲ್ಲಿ ಗ್ರಂಥಾಲಯದ ನಿರ್ಮಾಣಕ್ಕಾಗಿ ತಮ್ಮ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ (ತುಮಕೂರು) ವತಿಯಿಂದ ₹ 50 ಲಕ್ಷ ನೀಡುವುದಾಗಿ ಜಿ.ಪರಮೇಶ್ವರ ಅವರು ಘೋಷಿಸಿದರು.

ಜೊತೆಗೆ ಈಗ ಬಿಡುಗಡೆಯಾಗಿರುವ ₹ 10 ಕೋಟಿ ಹಣ ಮುಗಿದ ಬಳಿಕ ಸರ್ಕಾರದಿಂದ ಮತ್ತಷ್ಟು ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

ಧ್ರುವನಾರಾಯಣ ಶ್ರಮಕ್ಕೆ ಮೆಚ್ಚುಗೆ
ಚಾಮರಾಜನಗರದಲ್ಲಿ ಬೌದ್ಧ ವಿ.ವಿ ಸ್ಥಾಪನೆಗೆ ಸಂಸದ ಆರ್‌.ಧ್ರುವನಾರಾಯಣ ಅವರು ಮಾಡಿರುವ ಪ್ರಯತ್ನವನ್ನು ವೇದಿಕೆಯಲ್ಲಿದ್ದ ಗಣ್ಯರು ಶ್ಲಾಘಿಸಿದರು.

ಚಾಮರಾಜನಗರದ ಇಂಟರ್‌ನ್ಯಾಷನಲ್‌ ಬುದ್ಧಿಸ್ಟ್‌ ಮಾಂಕ್ಸ್‌ ಚಾರಿಟಬಲ್‌ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಬೋಧಿದತ್ತ ಭಂತೇಜಿ ಅವರು ಧ್ರುವನಾರಾಯಣ ಅವರ ಹೆಸರನ್ನು ಪದೇ ಪದೇ ಹೇಳಿದರು. 

‘ವಿ.ವಿ ಸ್ಥಾಪನೆ ವಿಚಾರದಲ್ಲಿ ನಮಗೆ ಬೆನ್ನೆಲುಬು ಆಗಿರುವವರು ಸಂಸದರು’ ಎಂದರು.

ಶಾಸಕರಾದ ಎನ್‌. ಮಹೇಶ್‌, ಆರ್‌.ನರೇಂದ್ರ, ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರೂ ಸಂಸದ‌ರ ಶ್ರಮವನ್ನು ನೆನೆದರು.

ಸಿದ್ದರಾಮಯ್ಯ ಅವರು ಕೂಡ ಧ್ರುವನಾರಾಯಣ ಅವರ ಹೆಸರು ಹೇಳಲು ಮರೆಯಲಿಲ್ಲ. ‘ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡಿಸುವುದು ಸುಲಭವಲ್ಲ. ಧ್ರುವನಾರಾಯಣ ಅವರು ಅಧಿಕಾರಿಗಳ ಮೇಜಿನಿಂದ ಮೇಜಿಗೆ ತೆರಳಿ ಅವರ ಬೆನ್ನು ಬಿಡದೆ ಕೆಲಸ ಮಾಡಿಸಿದ್ದಾರೆ’ ಎಂದರು.

ಸಿದ್ದರಾಮಯ್ಯಗೆ ಕೃತಜ್ಞತೆ: ವಿ.ವಿ ಸ್ಥಾಪನೆಗೆ 25 ಎಕರೆ ಭೂಮಿ ಮಂಜೂರು ಹಾಗೂ ₹ 10 ಕೋಟಿ ನೆರವು ನೀಡಿದ ಸಿದ್ದರಾಮಯ್ಯ ಅವರಿಗೆ ಬೋಧಿದತ್ತ ಭಂತೇಜಿ ಹಾಗೂ ಧ್ರುವನಾರಾಯಣ ಅವರು ಕೃ‌ತಜ್ಞತೆ ಸಲ್ಲಿಸಿದರು.

‘ನಾವು ₹ 3 ಕೋಟಿಗಾಗಿ ಮನವಿ ಮಾಡಿದ್ದೆವು. ಆದರೆ, ಸಿದ್ದರಾಮಯ್ಯ ಅವರು ₹ 10 ಕೋಟಿ ಬಿಡುಗಡೆ ಮಾಡಿದರು’ ಎಂದು ಭಂತೇಜಿ ಶ್ಲಾಘಿಸಿದರು.

 *
ಇದು ಚರಿತ್ರಾರ್ಹ ಕಾರ್ಯಕ್ರಮ. ಇತಿಹಾಸವನ್ನು ಪುನರಾವರ್ತನೆ ಮಾಡುತ್ತಿದ್ದೇವೆ. ಗತಿಸಿಹೋದ ನಳಂದ ವಿಶ್ವವಿದ್ಯಾಲಯಕ್ಕೆ ಪುನರ್ಜನ್ಮ ನೀಡುತ್ತಿದ್ದೇವೆ.
–ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

*
ಬುದ್ಧನ ಕಾಲದಲ್ಲಿ ಯಾವ ಧರ್ಮಗಳೂ ಇರಲಿಲ್ಲ. ನನ್ನ ಪ್ರಕಾರ, ಎಲ್ಲ ಧರ್ಮಗಳ ಉದಯಕ್ಕೆ ಬುದ್ಧ ಧರ್ಮವೇ ಕಾರಣ
–ಎನ್‌.ಮಹೇಶ್‌, ಕೊಳ್ಳೇಗಾಲ ಶಾಸಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು