ನಾಲರೋಡ್ ಸೇತುವೆ ಕಾಮಗಾರಿಗೆ ಮತ್ತೆ ಚಾಲನೆ?

7
ಅನುಮತಿ ಪಡೆಯದಿದ್ದುದಕ್ಕೆ ಅರಣ್ಯ ಇಲಾಖೆಯಿಂದ ಆಕ್ಷೇಪ: ವರ್ಷದಿಂದ ನನೆಗುದಿಗೆ ಬಿದ್ದಿದ್ದ ಯೋಜನೆ

ನಾಲರೋಡ್ ಸೇತುವೆ ಕಾಮಗಾರಿಗೆ ಮತ್ತೆ ಚಾಲನೆ?

Published:
Updated:
Deccan Herald

ಹನೂರು: ಅನುಮತಿ ಪಡೆಯದೇ ಅರಣ್ಯ ವಲಯದಲ್ಲಿ ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದ ನಾಲರೋಡ್ ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ದೊರೆಯುವ ಮುನ್ಸೂಚನೆ ಸಿಕ್ಕಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.

ನಲ್ಲೂರು, ಹಂಚಿಪಾಳ್ಯ, ಪೆದ್ದನಪಾಳ್ಯ, ಕೂಡ್ಲೂರು, ಹೂಗ್ಯಂ ಹಾಗೂ ಜಲ್ಲಿಪಾಳ್ಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಹಿಂದೆ ಇದ್ದ ಹಳೇ ಸೇತುವೆಯನ್ನು ಕೆಡವಿ ಲೋಕೋಪಯೋಗಿ ಇಲಾಖೆ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಿತ್ತು. 1980ರ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆಗಳ ಅನ್ವಯ, ವನ್ಯಧಾಮದೊಳಗೆ ಇರುವ ಕಚ್ಚಾರಸ್ತೆ ಹಾಗೂ ಹಳೆಯ ಸೇತುವೆ ದುರಸ್ತಿ ಕಾಮಗಾರಿಗಳನ್ನು ನಡೆಸಬೇಕಾದರೆ ಅರಣ್ಯ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಅನುಮತಿ ಪಡೆಯದೇ ಏಕಾಏಕಿ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಕ್ಕೆ ಅರಣ್ಯ ಇಲಾಖೆ ಹಾಗೂ ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಈ ನಡುವೆ, ವನ್ಯಧಾಮದೊಳಗೆ ಸೇತುವೆ ಹಾಗೂ ರಸ್ತೆಯನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ವಯಂ ಸೇವಾ ಸಂಸ್ಥೆಯೊಂದು ಅರಣ್ಯ ಇಲಾಖೆಗೆ ನೀಡಿದ್ದ ದೂರಿನ ಆಧಾರದ ಮೇರೆಗೆ ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿಪ್ರಿಯ ಅವರು ಸ್ಥಳ ಪರಿಶೀಲನೆ ನಡೆಸಿ, ‘ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ (ಎನ್‌ಬಿಡಬ್ಲ್ಯು) ಅನುಮತಿ ಪಡೆದ ಬಳಿಕವಷ್ಟೇ ಸೇತುವೆ ಕಾಮಗಾರಿ ನಡೆಸಬೇಕು’ ಎಂದು ಸೂಚಿಸಿದ್ದರು.

ಇರುವ ರಸ್ತೆ ಹಾಗೂ ಸೇತುವೆಯನ್ನೇ ದುರಸ್ತಿಗೊಳಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆಯಬೇಕಿತ್ತು. ಆದರೆ, ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ಏಕಾಏಕಿ ಕಾಮಗಾರಿ ನಡೆಸಲು ಹಾಗೂ ಅನುಮತಿ ಪಡೆಯದೇ ರಸ್ತೆ ವಿಸ್ತರಣೆ ಮಾಡಲು ಮುಂದಾಗಿದ್ದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ ಎಂಬುದು ಪರಿಸರವಾದಿಗಳ ಅಭಿಪ್ರಾಯ.

ಗ್ರಾಮಗಳಿಗೆ ತೆರಳಲು ಜನರ ಪರದಾಟ

ಸೇತುವೆ ಕೆಡವಿದ ಮೇಲೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಪರ್ಯಾಯವಾಗಿ ಸಮೀಪದಲ್ಲೇ ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ಆದರೆ, ಕಳೆದ ವರ್ಷ ಬಿದ್ದ ವ್ಯಾಪಕ ಮಳೆಗೆ ಕಚ್ಚಾ ರಸ್ತೆ ಕೊಚ್ಚಿ ಹೋಗಿತ್ತು. ಈ ಭಾಗದ ಜನರು ರಾಮಾಪುರ ದಿನ್ನಳ್ಳಿ, ಮಿಣ್ಯಂ ಮಾರ್ಗವಾಗಿ ಸ್ವಗ್ರಾಮಗಳಿಗೆ ತೆರಳಬೇಕಾಗಿತ್ತು. ಇಂದಿಗೂ ಜೋರು ಮಳೆಯಾದರೆ ಕಚ್ಚಾ ರಸ್ತೆಯ ಮೇಲೆ ನೀರು ಹರಿಯುತ್ತದೆ. ಇಂತಹ ಸಂದರ್ಭಗಳಲ್ಲಿ ಜನರ ಪಾಡು ಹೇಳತೀರದು.

ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಆರ್. ನರೇಂದ್ರ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಹಾಗೂ ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸೂಚಿಸಿದ್ದಾರೆ.

ಈ ಮಧ್ಯೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಕಾಮಗಾರಿ ಅಧಿಕೃತ ಅನುಮತಿಗಾಗಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಹಾಗಾಗಿ, ಸೇತುವೆ ಕಾಮಗಾರಿ ಮತ್ತೆ ಆರಂಭವಾಗಲಿದೆ ಎಂಬ ಆಶಾಭಾವ ಈ ಭಾಗದ ಜನರಲ್ಲಿ ಮೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !