ಭಾನುವಾರ, ಡಿಸೆಂಬರ್ 15, 2019
24 °C
ಚಾಮರಾಜನಗರ ನಗರಸಭೆಯ ಏಳನೇ ವಾರ್ಡ್‌ ಸದಸ್ಯೆ ಸಿ.ಎಂ. ಆಶಾ ಮಾತು

ಸ್ವಚ್ಛತೆ, ಮೂಲಸೌಕರ್ಯ ಒದಗಿಸುವುದಕ್ಕೆ ಆದ್ಯತೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಇಲ್ಲಿನ ನಗರಸಭೆಯಲ್ಲಿ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾದ 7ನೇ ವಾರ್ಡ್‌ನಿಂದ ಗೆದ್ದಿರುವ ಬಿಜೆಪಿಯ ಸಿ.ಎಂ. ಆಶಾ ಅವರು ತಮ್ಮ ವಾರ್ಡ್‌ನಲ್ಲಿರುವ ಸಮಸ್ಯೆಗಳು, ಆಗಬೇಕಿರುವ ಕೆಲಸಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. 

* 605 ಮತಗಳ ಅಂತರದಿಂದ ಗೆದ್ದಿದ್ದೀರಿ. ಹೇಗೆ ಸಾಧ್ಯವಾಯಿತು?
ಉ:
ನನ್ನ ಮನೆ ಇರುವುದು 21‌ನೇ ವಾರ್ಡ್‌ನಲ್ಲಿ. ಆದರೆ, 7ನೇ ವಾರ್ಡ್‌ನಲ್ಲಿ ನಾನು ಅಭ್ಯರ್ಥಿಯಾಗಬೇಕು ಎಂಬುದು ಪಕ್ಷದ ನಿರ್ಧಾರವಾಗಿತ್ತು. ನನ್ನ ಪತಿ ನಟರಾಜು ಅವರು 25 ವರ್ಷಗಳಿಂದ ಬಿಜೆಪಿಯಲ್ಲಿ ಇದ್ದಾರೆ. ಜನರ ಒಡನಾಟವೂ ಚೆನ್ನಾಗಿದೆ. ನಮ್ಮ ಪಕ್ಷದವರೇ ಆದ ರಾಜಶೇಖರ್‌ ಅವರು ಹಿಂದೆ ಈ ವಾರ್ಡ್‌ನ ಸದಸ್ಯರಾಗಿದ್ದರು. ಅವರೂ ಸಹಕಾರ ನೀಡಿದರು. ಹಾಗಾಗಿ, ಗೆಲುವು ಸುಲಭವಾಯಿತು.

* ವಾರ್ಡ್‌ನಲ್ಲಿರುವ ಯಾವೆಲ್ಲ ಸಮಸ್ಯೆಗಳು ಗಮನಕ್ಕೆ ಬಂದಿವೆ?
ಉ:
ನೀರಿನ ಸಮಸ್ಯೆ ಇದೆ. ಚರಂಡಿ ವ್ಯವಸ್ಥೆ ಸರಿ ಇಲ್ಲ. ಒಳ ಚರಂಡಿ ಕೆಲಸ ಸ್ವಲ್ಪ ಆಗಿದೆ. ಕಸ ವಿಲೇವಾರಿ ಸಮಸ್ಯೆ ಇದೆ. ಇ–ಸ್ವತ್ತು ಸರಿಯಾಗಿ ಆಗುತ್ತಿಲ್ಲ. ರಸ್ತೆಗಳೆಲ್ಲವೂ ಹದಗೆಟ್ಟಿದೆ.

* ವಾರ್ಡ್‌ನಲ್ಲಿ ಬಯಲು ಬಹಿರ್ದೆಸೆಯ ಸಮಸ್ಯೆ ಇದೆಯೇ?
ಉ:
ಕೆಲವು ಕಡೆಗಳಲ್ಲಿ ಇದೆ. ವಾರ್ಡ್‌ನಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ನಾರಾಯಣ ಸ್ವಾಮಿ ದೇವಸ್ಥಾನ ಭಾಗದಲ್ಲಿ ಶೌಚಾಲಯಗಳಿಲ್ಲದೇ ಜನರು ಬಯಲನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ.

* ವಾರ್ಡ್‌ ಅಭಿವೃದ್ಧಿಗೆ ಹಾಕಿಕೊಂಡಿರುವ ಯೋಜನೆಗಳು ಯಾವುವು?
ಉ:
ನಮ್ಮಲ್ಲಿ ಕೊಳವೆ ಬಾವಿಗಳು ಇದ್ದರೂ, ಕೆಲವು ಬೀದಿಗಳಲ್ಲಿ ತೊಂಬೆಗಳಿಗೆ ಸರಿಯಾಗಿ ನೀರು ಬರುತ್ತಿರಲಿಲ್ಲ. ಹೆಣ್ಣು ಮಕ್ಕಳು ನೀರಿಗಾಗಿ ತುಂಬಾ ದೂರ ನಡೆದುಕೊಂಡು ಹೋಗಬೇಕಿತ್ತು. ಈಗ ಪೈಪ್‌ ಲೈನ್‌ ಹಾಕಿ ಒಂದೊಂದು ಬೀದಿಗೂ ಐದೈದು ನಲ್ಲಿಗಳನ್ನು ಹಾಕಲಾಗಿದೆ. ನೀರಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಲಾಗಿದೆ. ಪ್ರತಿ ಮನೆಗೂ ನೀರಿನ ಸಂಪರ್ಕದ ವ್ಯವಸ್ಥೆ ಮಾಡಬೇಕು ಎಂಬ ಆಸೆ ಇದೆ. ಆಯ್ಕೆಯಾದ ಮೂರು ತಿಂಗಳಲ್ಲಿ ಚರಂಡಿ ಸ್ವಚ್ಛಗೊಳಿಸುವುದು, ಬೀದಿ ದೀಪಗಳ ವ್ಯವಸ್ಥೆ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲಾಗಿದೆ.

ರಸ್ತೆಗಳ ವಿಸ್ತರಣೆಯ ಜೊತೆಗೆ ದುರಸ್ತಿಯೂ ಆಗಬೇಕು. ವಾರ್ಡ್‌ನ ಶೇ 90ರಷ್ಟು ಭಾಗದಲ್ಲಿ ನಿವೇಶನಗಳನ್ನು ಈಗಲೂ ಅಂಕಣದಲ್ಲೇ ಅಳೆಯಲಾಗುತ್ತದೆ. ಅದನ್ನು ಚದರ ಅಡಿಗೆ ಪರಿವರ್ತಿಸಬೇಕಿದೆ. ಇ–ಸ್ವತ್ತು ಮಾಡಿಸಬೇಕು. ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಶೌಚಾಲಯಗಳನ್ನೂ ನಿರ್ಮಿಸುವ ಗುರಿ ಹಾಕಿಕೊಂಡಿದ್ದೇನೆ. ಶುದ್ಧ ಕುಡಿಯುವ ನೀರಿನ ಘಟಕವೊಂದನ್ನು ಆರಂಭಿಸುವ ಯೋಚನೆ ಇದೆ.

ಸ್ವಚ್ಛತೆ ಮತ್ತು ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ಕೊಡುತ್ತೇನೆ. ನಗರಸಭೆಯ 31 ವಾರ್ಡ್‌ಗಳ ಪೈಕಿ 7ನೇ ವಾರ್ಡ್‌ ಅನ್ನು ಮಾದರಿ ವಾರ್ಡ್‌ ಮಾಡಬೇಕು ಎಂಬ ಸಂಕಲ್ಪ ಮಾಡಿದ್ದೇನೆ.

ರಾಜಕೀಯ ಹೊಸದು
ಪಕ್ಷದ ಸೂಚನೆ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಶಾ ಅವರಿಗೆ ರಾಜಕೀಯವೇ ಹೊಸದು. 25 ವರ್ಷಗಳಿಂದ ರಾಜಕೀಯದಲ್ಲಿರುವ ಪತಿ ನಟರಾಜು ಅವರು ಪತ್ನಿಗೆ ಬೆಂಬಲವಾಗಿ ನಿಂತಿದ್ದಾರೆ. ‘ ಮತದಾರರು ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ. ಅವರು ಸದಾ ನೆನಪು ಇಟ್ಟುಕೊಳ್ಳುವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದು ನನ್ನ ಗುರಿ’ ಎಂದು ಹೇಳುತ್ತಾರೆ ಆಶಾ. ಅವರ ಸಂಪರ್ಕ ಸಂಖ್ಯೆ: 9901216619

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು