₹3,800ಕೋಟಿ ಸಾಲಕ್ಕೆ ಒಪ್ಪಿಗೆ

7
ನಮ್ಮ ಮೆಟ್ರೊ ಎರಡನೇ ಹಂತ:

₹3,800ಕೋಟಿ ಸಾಲಕ್ಕೆ ಒಪ್ಪಿಗೆ

Published:
Updated:
Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದ ಗೊಟ್ಟಿಗೆರೆ– ನಾಗವಾರ (ರೀಚ್‌ 6) ಮಾರ್ಗದ ಕಾಮಗಾರಿಗೆ ₹ 3,800 ಕೋಟಿ ಸಾಲ ಒದಗಿಸಲು ಯುರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ (ಇಐಬಿ) ಒಪ್ಪಿದೆ.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮೊದಲ ಕಂತಿನಲ್ಲಿ ₹1,700 ಕೋಟಿ (200 ಮಿಲಿಯನ್‌ ಯುರೊ) ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬ್ಯಾಂಕಿನ ಪರವಾಗಿ ಜಾಗತಿಕ ಪಾಲುದಾರರು ವಿಭಾಗದ ನಿರ್ದೇಶಕಿ ಬರ್ರಗಾಮ್‌ ಸಹಿ ಹಾಕಿದರು.

ಬ್ಯಾಂಕ್‌ ಎರಡನೇ ಕಂತಿನಲ್ಲಿ ₹2,100 ಕೋಟಿ (300 ಮಿಲಿಯನ್‌ ಯುರೊ) ಸಾಲ ನೀಡಲಿದೆ. ಏಷ್ಯನ್‌ ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ (ಎಐಐಬಿ) ಸಹ ₹2,100 ಕೋಟಿ (300 ಮಿಲಿಯನ್‌ ಯುರೊ) ಸಾಲ ನೀಡಲಿದೆ. ರೀಚ್‌–6 ಯೋಜನೆಗೆ ಪಡೆಯುವ ಸಾಲದ ಒಟ್ಟು ಮೊತ್ತ ₹5,900 ಕೋಟಿ.

ಈ ಸಾಲವು ಕಡಿಮೆ ಬಡ್ಡಿಯ ಸಾಲವಾಗಿದ್ದು, ಈ ಮೂಲ ಸಾಲವನ್ನು ಮರುಪಾವತಿಸಲು 20 ವರ್ಷಗಳ ಅವಧಿ ನಿಗದಿಪಡಿಸಲಾಗಿದೆ. ಶೇ 100ರಷ್ಟು ವಿದ್ಯುತ್‌ಚಾಲಿತ ಮೆಟ್ರೊ ರೈಲು ಸೇವೆಯನ್ನು ಒದಗಿಸಲಿರುವ ಈ ಯೋಜನೆಗೆ ಹಣಕಾಸಿನ ನೆರವು ಒದಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಬ್ಯಾಂಕ್‌ ನಿರ್ದೇಶಕರು ಹೇಳಿದರು.

‘ಭಾರತದ ಮೂರನೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ಸೌಕರ್ಯ ಕಲ್ಪಿಸಲು ಈ ಯೋಜನೆ ನೆರವಾಗಲಿದೆ. ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡಲಿದೆ. ಹಾಗಾಗಿ ಈ ಯೋಜನೆಯಲ್ಲಿ ನಾವು ಹೂಡಿಕೆ ಮಾಡಲಿದ್ದೇವೆ. ಇಂಧನ ಉಳಿತಾಯಕ್ಕೆ ಈ ಯೋಜನೆ ಪೂರಕವಾಗಿದೆ. ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯವನ್ನು ತಗ್ಗಿಸಲಿದೆ. ಬೆಂಗಳೂರನ್ನು ಜನಜೀವನಕ್ಕೆ ಇನ್ನಷ್ಟು ಯೋಗ್ಯ ನಗರವನ್ನಾಗಿ ಪರಿವರ್ತಿಸಲಿದೆ’ ಎಂದರು.

ಎಚ್‌.ಡಿ.ಕುಮಾರಸ್ವಾಮಿ, ‘‌ನಗರದಲ್ಲಿ 1.1 ಕೋಟಿ ಜನರಿದ್ದಾರೆ. ವಾಹನ ದಟ್ಟಣೆ ಕಡಿಮೆ ಮಾಡುವ ಹಾಗೂ ಜನಸಾಮಾನ್ಯರ ಜೀವನ ಮಟ್ಟ ಉತ್ತಮಪಡಿಸಲು ಮೆಟ್ರೊ ಯೋಜನೆ ಸಹಕಾರಿಯಾಗಿದೆ’ ಎಂದರು.

ಮೆಟ್ರೊ ಎರಡನೇ ಹಂತಕ್ಕೆ ₹12,141 ಕೋಟಿ ಸಾಲದ ಅಗತ್ಯವಿದೆ’ ಎಂದರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ‘ಮೈತ್ರಿ ಸರ್ಕಾರದ ಬಗ್ಗೆ ಕೆಲವರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಆರ್ಥಿಕವಾಗಿ ಸುಭದ್ರವಾಗಿರುವುದರಿಂದ ಬ್ಯಾಂಕ್‌ಗಳು ಸಾಲ ನೀಡಲು ಆಸಕ್ತಿ ತೋರುತ್ತಿವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !