‘ನಮ್ಮ ಮೆಟ್ರೊ’ಗೆ ಪ್ರತ್ಯೇಕ ಬೆಟಾಲಿಯನ್

ಭಾನುವಾರ, ಮೇ 26, 2019
31 °C
1,350 ಹುದ್ದೆಗಳ ನೇರ ನೇಮಕಾತಿಗೆ ಡಿಜಿಪಿ ಪ್ರಸ್ತಾವ

‘ನಮ್ಮ ಮೆಟ್ರೊ’ಗೆ ಪ್ರತ್ಯೇಕ ಬೆಟಾಲಿಯನ್

Published:
Updated:

ಬೆಂಗಳೂರು: ‘ನಮ್ಮ ಮೆಟ್ರೊ’ ನಿಲ್ದಾಣಗಳಿಗೆ ಭದ್ರತೆ ಒದಗಿಸುವುದಕ್ಕಾಗಿ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್) ಪ್ರತ್ಯೇಕ ಬೆಟಾಲಿಯನ್‌ ರಚಿಸಿ, ನೇರ ನೇಮಕಾತಿ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಡಿಜಿಪಿ ನೀಲಮಣಿ ರಾಜು ಅವರು ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ ಅವರಿಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ, ‘ಬೆಟಾಲಿಯನ್‌ಗೆ ಅಗತ್ಯವಿರುವ 1,350 ಹುದ್ದೆಗಳನ್ನು ನೇರವಾಗಿ ನೇಮಕಾತಿ ಮಾಡಿಕೊಳ್ಳಿ. ಅವರ ವೇತನ ಹಾಗೂ ಇತರೆ ಸೌಲಭ್ಯಗಳನ್ನು ‘ನಮ್ಮ ಮೆಟ್ರೊ’ ಸಂಸ್ಥೆಯಿಂದಲೇ ಭರಿಸಿ. ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಆಗುವುದಿಲ್ಲ’ ಎಂದು ತಿಳಿಸಿದ್ದಾರೆ.

ಸಿಬ್ಬಂದಿ ಕೊರತೆ: ‘ಪೊಲೀಸ್‌ ಇಲಾಖೆಯಲ್ಲಿರುವ ಸಿಬ್ಬಂದಿಯನ್ನೇ ಆಯ್ಕೆ ಮಾಡಿ ಹೊಸ ಬೆಟಾಲಿಯನ್ ಸೃಜಿಸಿ ‘ನಮ್ಮ ಮೆಟ್ರೊ’ ಭದ್ರತೆಗೆ ನಿಯೋಜಿಸುವಂತೆ 2018ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಸದ್ಯ ಸಿಬ್ಬಂದಿ ಕೊರತೆ ಸಾಕಷ್ಟಿದ್ದು, ಲಭ್ಯವಿರುವ ಸಿಬ್ಬಂದಿಯನ್ನೇ ಆಯ್ಕೆ ಮಾಡಿಕೊಂಡು ಹೊಸ ಬೆಟಾಲಿಯನ್ ರಚಿಸುವುದು ಕಷ್ಟಸಾಧ್ಯ’ ಎಂದು ಪ್ರಸ್ತಾವದಲ್ಲಿ ಡಿಜಿಪಿ ಹೇಳಿದ್ದಾರೆ.

‘ಈ ಹಿಂದೆ ಹೊರಡಿಸಿರುವ ಆದೇಶವನ್ನು ಮಾರ್ಪಡಿಸಿ, ನೇರ ನೇಮಕಾತಿ ಮೂಲಕವೇ ಪ್ರತ್ಯೇಕ ಬೆಟಾಲಿಯನ್ ರಚಿಸಲು ಹೊಸ ಆದೇಶ ಹೊರಡಿಸಬೇಕು’ ಎಂದು ಅವರು ಕೋರಿದ್ದಾರೆ.

‘ಪೊಲೀಸ್ ಅಕಾಡೆಮಿ, ಆಡಳಿತ ತರಬೇತಿ ಸಂಸ್ಥೆ, ಧಾರವಾಡ ಹೈಕೋರ್ಟ್, ಮೈಸೂರು ಅರಮನೆ ಸೇರಿದಂತೆ ಹಲವೆಡೆ ಭದ್ರತೆಗೆ ಕೆಎಸ್‌ಐಎಸ್‌ಎಫ್ ಸಿಬ್ಬಂದಿಯ ಅವಶ್ಯಕತೆ ಇದೆ. ಸದ್ಯ ಇರುವ 3 ಬೆಟಾಲಿಯನ್‌ನಲ್ಲಿ ಸುಮಾರು 1500 ಸಿಬ್ಬಂದಿ ಇದ್ದು, ಬೇಡಿಕೆ ಇರುವ ಎಲ್ಲ ಕಡೆಯೂ ಸಿಬ್ಬಂದಿಯನ್ನು ನಿಯೋಜಿಸಲು ಆಗುತ್ತಿಲ್ಲ. ಹೀಗಾಗಿ, 4, 5 ಹಾಗೂ 6ನೇ ಬೆಟಾಲಿಯನ್‌ಗಳನ್ನು ಹೊಸದಾಗಿ ರಚಿಸಲು ಅನುಮತಿ ಹಾಗೂ ಅನುದಾನ ನೀಡಬೇಕು’ ಎಂದು ವಿನಂತಿಸಿದ್ದಾರೆ. 

ಈ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ನೀಡಿದರೆ, ‘ನಮ್ಮ ಮೆಟ್ರೊ’ ನಿಲ್ದಾಣ ಸೇರಿದಂತೆ ಎಲ್ಲ ಕಡೆಯೂ ಕೆಎಸ್‌ಐಎಸ್‌ಎಫ್ ಸಿಬ್ಬಂದಿಯೇ ಭದ್ರತೆ ಒದಗಿಸಲಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !