ಬುಧವಾರ, ಏಪ್ರಿಲ್ 8, 2020
19 °C
ಶಾಶ್ವತ ಕುಡಿಯುವ ನೀರಿನ ಯೋಜನೆಗೆತೀವ್ರ ವಿರೋಧ,ತಾತ್ಕಾಲಿಕ ಸ್ಥಗಿತ

ಕೊಳ್ಳೇಗಾಲ: ನೀರಿಗೆ ಶುಲ್ಕ; ಸಾರ್ವಜನಿಕರ ವಿರೋಧ

ಸೂರ್ಯನಾರಾಯಣ ವಿ./ಅವಿನ್‌ ಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ನಗರಸಭೆಯ 31 ವಾರ್ಡ್‌ಗಳ ಎಲ್ಲ ಮನೆಗಳಿಗೂ ದಿನದ 24 ಗಂಟೆಗಳ ಕಾಲ ವಾರದ ಏಳು ದಿನವೂ ಕುಡಿಯುವ ನೀರು ಪೂರೈಸುವ ಯೋಜನೆಯು ಸ್ಥಳೀಯರ ಹಾಗೂ ಸಂಘ ಸಂಸ್ಥೆಗಳು ಮಾಡುತ್ತಿರುವ ವಿರೋಧದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. 

₹ 64 ಕೋಟಿ ವೆಚ್ಚದ ಈ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದೆ. ಎಸ್‌.ಜಯಣ್ಣ ಅವರು ಕೊಳ್ಳೇಗಾಲದ ಕ್ಷೇತ್ರದ ಶಾಸಕರಾಗಿದ್ದರು. ಯೋಜನೆಯ ಪ್ರಸ್ತಾಪವಾದಾಗಿನಿಂದಲೂ ಇದರ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಹಾಲಿ ಶಾಸಕ ಎನ್‌.ಮಹೇಶ್‌ ಅವರೇ ಯೋಜನೆಯನ್ನು ಬಲವಾಗಿ ವಿರೋಧಿಸಿ ಚಳವಳಿಯನ್ನೂ ನಡೆಸಿದ್ದರು. 

ಈಗ ಸ್ವತಃ ಅವರೇ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ನೀರು ಪೂರೈಕೆಯನ್ನು ಯಾವುದೇ ಕಾರಣಕ್ಕೂ ವಾಣಿಜ್ಯೀಕರಣ ಮಾಡುವುದು ಬೇಡ ಎಂಬುದು ಸಾರ್ವಜನಿಕರ ಹಾಗೂ ಸಂಸ್ಥೆಗಳ ಆಗ್ರಹ. ನೀರಿನ ಸಂಪರ್ಕಕ್ಕೆ ಮೀಟರ್‌ ಅಳವಡಿಸಿ ದರ ನಿಗದಿ ಮಾಡುವುದನ್ನು ಅವರು ವಿರೋಧಿಸುತ್ತಿದ್ದಾರೆ. 

ಜೂನ್‌ 3ರಂದು ಯೋಜನೆಯ ಬಗ್ಗೆ ಚರ್ಚಿಸುವುದಕ್ಕಾಗಿಯೇ ಎನ್‌.ಮಹೇಶ್‌ ಅವರು ಸಂಘ ಸಂಸ್ಥೆಗಳ, ಪ್ರಗತಿಪರ ಸಂಘಟನೆಗಳ ಮುಖಂಡರ ತುರ್ತುಸಭೆಯನ್ನು ಕರೆದಿದ್ದರು. ಅಲ್ಲಿ ಯೋಜನೆ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಮುಖಂಡರ ಮನವೊಲಿಸುವ ಯತ್ನ ವಿಫಲವಾಗಿತ್ತು. 

ಇಕ್ಕಟ್ಟಿನಲ್ಲಿ ಮಹೇಶ್‌: ಯೋಜನೆಯಿಂದಾಗಿ ಶಾಸಕ ಎನ್‌.ಮಹೇಶ್‌ ಅವರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಹಿಂದೆ ಈ ಯೋಜನೆ ಯಾವುದೇ ಕಾರಣಕ್ಕೂ ಜಾರಿಗೆ ಬರಬಾರದು ಎಂದು ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಹೋರಾಟ ನಡೆಸಿದ್ದ ಅವರು, ಈಗ ಯೋಜನೆ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಪ್ರಗತಿ ಪರ ಸಂಘಟನೆಗಳ ಕೆಂಗಣ್ಣಿಗೆ ಅವರು ಗುರಿಯಾಗಿದ್ದಾರೆ.

ವಿರೋಧ ಏಕೆ?: ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡಿ ವಾಣಿಜ್ಯೀಕರಣ ಗೊಳಿಸಲಾಗುತ್ತಿದೆ ಎಂಬ ಕಾರಣ ನೀಡಿ ಸಾರ್ವಜನಿಕರು ಹಾಗೂ ಸಂಘಟನೆಗಳ ಮುಖಂಡರು ವಿರೋಧಿಸುತ್ತಿದ್ದಾರೆ. ದಿನ ಕಳೆದಂತೆ ಶುಲ್ಕ ಪಾವತಿಸುವುದು ನಗರದ ನಿವಾಸಿಗಳಿಗೆ ಹೊರೆಯಾಗಲಿದೆ ಎಂಬುದು ಅವರ ವಾದ. 

ನಗರದಲ್ಲಿ ಈಗ ನೀರಿಗೆ ಏನೂ ಸಮಸ್ಯೆ ಇಲ್ಲ. ಹತ್ತಿರದಲ್ಲಿ ಕಾವೇರಿ ನದಿ ಇದೆ. ಕೆರೆ ಕಟ್ಟೆಗಳೂ ಭರ್ತಿಯಾಗಿವೆ. ಕೊಳವೆಬಾವಿಗಳಲ್ಲೂ ಸಾಕಷ್ಟು ನೀರು ಲಭ್ಯವಿದೆ. ಹಾಗಾಗಿ 24 ಗಂಟೆಗಳ ಕಾಲವೂ ಮನೆಗಳಿಗೆ ನೀರು ಕೊಡುವ ಅಗತ್ಯವಿಲ್ಲ ಎಂಬುದು ಯೋಜನೆಯನ್ನು ವಿರೋಧಿಸುವವರ ಅಭಿಪ್ರಾಯ. 

ನಗರಸಭೆಯ ಕಾರ್ಯವೈಖರಿಯ ಬಗ್ಗೆಯೂ ಜನರಲ್ಲಿ ಅಸಮಾಧಾನವಿದೆ. ಆಡಳಿತವು ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೂ ವಿಳಂಬವಾಗಿ ಮಾಡುತ್ತದೆ. ಯೋಜನೆ ಪೂರ್ಣಗೊಂಡ ಮೇಲೆ ಸರಿಯಾಗಿ ಸಮರ್ಪಕವಾಗಿ ನಿರ್ವಹಿಸುವುದಿಲ್ಲ ಎಂಬ ಭಾವನೆಯೂ ಜನರಲ್ಲಿದೆ. 

ಸ್ಥಳ ವಿವಾ‌ದ: ಯೋಜನೆಗಾಗಿ ನಗರದ ಏಳು ಕಡೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಬೇಕಾಗಿದೆ. ಇದಕ್ಕೆ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಗುರುತಿಸಿರುವ ಬಹುತೇಕ ಸ್ಥಳಗಳ ಬಗ್ಗೆ ವಿವಾದ ಉಂಟಾಗಿದೆ. ಚಿಕ್ಕರಂಗನಾಥ ಕೆರೆ ಏರಿಯ ಬಳಿ ಟ್ಯಾಂಕ್ ನಿರ್ಮಾಣ ಮಾಡುವ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಭೀಮನಗರದದಲ್ಲಿ ಗುರುತಿಸಿರುವ ಸ್ಥಳದ ಬಗ್ಗೆಯೂ ಜನರಿಂದ ಆಕ್ಷೇಪ ಕೇಳಿ ಬಂದಿದೆ. 

ಕಾಮಗಾರಿಗೆ ಸಿದ್ಧತೆ: ಶಾಸಕ ಎನ್‌.ಮಹೇಶ್‌ ಅವರ ನೇತೃತ್ವದಲ್ಲಿ ತುರ್ತುಸಭೆ ನಡೆದ ಬಳಿಕ ಕಾಮಗಾರಿಯ ಜವಾಬ್ದಾರಿ ಹೊತ್ತುಕೊಂಡ ಬೆಂಗಳೂರಿನ ಮಾಲು ಕನ್‌ಸ್ಟ್ರಕ್ಷನ್‌ ಸಂಸ್ಥೆ, ಪೈಪ್‌ಗಳು ಹಾಗೂ ಅಗತ್ಯ ಸಾಮಗ್ರಿಗಳನ್ನು ಖಾಸಗಿ ಜಾಗದಲ್ಲಿ ಶೇಖರಣೆ ಮಾಡುವ ಕೆಲಸ ಆರಂಭಿಸಿತ್ತು. ಟ್ಯಾಂಕ್‌ ನಿರ್ಮಿಸುವ ಸ್ಥಳವನ್ನು ಗುರುತಿಸಲೂ ಮುಂದಾಗಿತ್ತು. ಇದನ್ನು ಕಂಡ ಸಂಘಟನೆಗಳ ಮುಖಂಡರು ಆಂದೋಲನ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದರು. ಹಾಗಾಗಿ, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಏನಿದು ಯೋಜನೆ?

ತಾಲ್ಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿಯಿಂದ ನಗರದ ಎಲ್ಲ ಮನೆಗಳಿಗೆ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಸುವ ಯೋಜನೆ. ಮುಂದಿನ 20 ವರ್ಷಗಳ ನೀರಿನ ಬಳಕೆಯನ್ನು ಲೆಕ್ಕಹಾಕಿ ಯೋಜನೆ ರೂಪಿಸಲಾಗಿದೆ. 

ನೀರು ಪೂರೈಕೆಗಾಗಿ ಕೊಳ್ಳೇಗಾಲದಲ್ಲಿ ಏಳು ಕಡೆ ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತದೆ. ಅಲ್ಲಿಂದ ಪೈಪ್‌ಗಳ ಮೂಲಕ ಮನೆ ಮನೆಗಳಿಗೆ  ನೀರು ಸರಬರಾಜು ಆಗಲಿದೆ. ಪ್ರತಿ ಮನೆಯ ನೀರಿನ ಸಂಪರ್ಕಕ್ಕೆ ಮೀಟರ್‌ ಅಳವಡಿಸಿ ದರ ನಿಗದಿಪಡಿಸಲಾಗುತ್ತದೆ. ಮೊದಲ ಐದು ವರ್ಷ ಯೋಜನೆ ಅನುಷ್ಠಾನ ಮಾಡಿದ ಕಂಪನಿಯೇ ಇದನ್ನು ನಿರ್ವಹಿಸಲಿದ್ದು, ನಂತರ ನಗರಸಭೆಗೆ ಹಸ್ತಾಂತರಿಸಲಿದೆ. 

ಖಾಸಗೀಕರಣ ಅಲ್ಲ:ಎನ್.ಮಹೇಶ್

'ಶಾಶ್ವತ ಕುಡಿಯುವ ನೀರಿನ ಯೋಜನೆ ಮಹತ್ವವಾದ ಯೋಜನೆ. ಇದನ್ನು‌ ನಗರದ‌ ಜನರು ವಿರೋಧಿಸುತ್ತಿದ್ದಾರೆ. ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಜನರು‌ ಭಾವಿಸಿದ್ದಾರೆ. ಆದರೆ, ಇದು ಖಾಸಗೀಕರಣವಲ್ಲ. 5 ವರ್ಷಗಳು ಮಾತ್ರ ಖಾಸಗಿ ಕಂಪನಿಯವರು ನೋಡಿಕೊಳ್ಳುತ್ತಾರೆ. ನಂತರ ನಗರಸಭೆಗೆ ವರ್ಗಾಯಿಸುತ್ತಾರೆ' ಎಂದು ಶಾಸಕ ಎನ್.ಮಹೇಶ್ 'ಪ್ರಜಾವಾಣಿ'ಗೆ ತಿಳಿಸಿದರು.

'ನಗರಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಧ್ಯಾಕ್ಷರು ಆದ ನಂತರ ಸಭೆಯಲ್ಲಿ ಈ ಯೋಜನೆಯ ಬಗ್ಗೆ ಚರ್ಚೆ ಮಾಡುತ್ತೇನೆ. ಸದ್ಯದ ಪರಿಸ್ಥತಿಗೆ ತಾತ್ಕಾಲಿಕವಾಗಿ ಕಾಮಗಾರಿಯನ್ನು ನಿಲ್ಲಿಸಲಾಗಿದೆ' ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು