ಶುಕ್ರವಾರ, ಫೆಬ್ರವರಿ 26, 2021
30 °C
ಚಾಮರಾಜನಗರ: ನಗರಸಭೆಯಿಂದ ಉದ್ಯಾನಗಳ ನಿರ್ಲಕ್ಷ್ಯ, ಸ್ವಚ್ಛತೆ ಮಾಯ, ಮೂಲಸೌಕರ್ಯಗಳೂ ಇಲ್ಲ

ಉದ್ಯಾನ ನಿರ್ವಹಣೆ ಅಧ್ವಾನ

ರವಿ ಎನ್‌. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರದ ಸೌಂದರ್ಯ ಹೆಚ್ಚಿಸಬೇಕಾಗಿದ್ದ ಉದ್ಯಾನಗಳು ನಿರ್ವಹಣೆ ಇಲ್ಲದೆ ಸೊರಗಿವೆ.

ಇವುಗಳನ್ನು ಅಭಿವೃದ್ಧಿ ಪಡಿಸಿ ನಗರ ನಿವಾಸಿಗಳಿಗೆ ಅನುಕೂಲ ಕಲ್ಪಿಸಿ ಕೊಡಬೇಕಾದ ಜವಾಬ್ದಾರಿ ಹೊತ್ತಿರುವ ನಗರಸಭೆ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿದಂತೆ ಕಾಣುತ್ತಿಲ್ಲ. 

 ನಗರಸಭೆ ನೀಡುವ ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ 23 ಉದ್ಯಾನಗಳಿವೆ. ಗಾಳಿಪುರ ಬಡಾವಣೆಯಲ್ಲಿ ಒಂದು ಉದ್ಯಾನ ನಿರ್ಮಾಣ ಹಂತದಲ್ಲಿದೆ. ಆದರೆ, ಮೇಲ್ನೋಟಕ್ಕೆ ಮೂರು ನಾಲ್ಕು ಉದ್ಯಾನಗಳನ್ನು ಬಿಟ್ಟರೆ ಬೇರೆಲ್ಲೂ ಉದ್ಯಾನ ಕಾಣುತ್ತಿಲ್ಲ. 

ನಗರದ ಹೃದಯಭಾಗದಲ್ಲಿರುವ  ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಎದುರಿನ ಉದ್ಯಾನ, ಸಂತೇಮರಹಳ್ಳಿ ವೃತ್ತದ ಅಂಚೆ ಕಚೇರಿ ಬಳಿ ಇರುವ ಪುಟ್ಟಮ್ಮಣಿ ಉದ್ಯಾನ, ಹೌಸಿಂಗ್‌ ಬೋರ್ಡ್‌ನ ಡಾ.ಬಿ.ಆರ್. ಅಂಬೇಡ್ಕರ್‌ ಉದ್ಯಾನಗಳು ಮಾತ್ರ ಕಣ್ಣಿಗೆ ಕಾಣುವಂತಿವೆ.

ಉಳಿದವುಗಳನ್ನು ಎಲ್ಲಿದೆ ಎಂದು ಹುಡುಕಾಡಬೇಕು. ಕಣ್ಣಿಗೆ ಕಾಣುವಂತೆ ಇರುವ ಉದ್ಯಾನಗಳು ಕೂಡ ಸೂಕ್ತವಾದ ನಿರ್ವಹಣೆ ಇಲ್ಲದೆ ಸೊರಗಿವೆ.

ಹುಲ್ಲಿನ ನೆಲಹಾಸು ಇರಬೇಕಾದ ಜಾಗದಲ್ಲಿ ಮುಳ್ಳುಗಳ ಪೊದೆಗಳೇ ಇವೆ. ಬೆಂಚಿನ ವ್ಯವಸ್ಥೆ ಸರಿಯಾಗಿ ಇಲ್ಲ. ಮಕ್ಕಳ ಆಟವಾಡುವ ಉಪಕರಣಗಳು ಜೀರ್ಣಗೊಂಡಿವೆ.

ಬೆಳಕಿನ ವ್ಯವಸ್ಥೆಯೂ ಸರಿಯಾಗಿ ಇಲ್ಲದಿರುವುದರಿಂದ ವಾಯುವಿಹಾರಿಗಳ ಪಾಲಿಗೆ ಉದ್ಯಾನಗಳು ಇದ್ದೂ ಇಲ್ಲದಂತಾಗಿವೆ. 

ವಿವಿಧ ವಾರ್ಡ್‌ಗಳಲ್ಲಿ ಉದ್ಯಾನಗಳ ಅಭಿವೃದ್ಧಿಗಳಿಗಾಗಿ ಜಾಗವನ್ನು ಮೀಸ ಲಿಡಲಾಗಿದೆಯಾದರೂ ಅವು ಪಾಳು ಬಿದ್ದು ಕಸ ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ.

₹ 10 ಲಕ್ಷದಲ್ಲಿ ಅಭಿವೃದ್ಧಿ: 4ನೇ ವಾರ್ಡ್‌ನ ಗಾಳಿಪುರ ವ್ಯಾಪ್ತಿಯ ಬೀಡಿ ಕಾಲೊ ನಿಯಲ್ಲಿ ಉದ್ಯಾನ ಅಭಿವೃದ್ಧಿ ಕಾಮ ಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಚಾಮರಾಜೇಶ್ವರ ದೇವಸ್ಥಾನದ ಎಡ ಭಾಗ ದಲ್ಲಿರುವ ಜಾಗವನ್ನು ಉದ್ಯಾನವನ್ನಾಗಿ ಅಭಿವೃದ್ಧಿಪಡಿಸುವ ಕೆಲಸ ಚಾಲ್ತಿಯಲ್ಲಿದೆ. ಎರಡು ಕಾಮಗಾರಿಗಳಿಗೂ ತಲಾ ₹10 ಲಕ್ಷ ವೆಚ್ಚ ಮಾಡಲಾಗುತ್ತಿದೆ. 

ಜನರ ಆಗ್ರಹ: ಪ್ರತಿ ವಾರ್ಡ್‌ಗೊಂದರಂತೆ ಎಲ್ಲ 31 ವಾರ್ಡ್‌ಗಳಲ್ಲಿ ಸುಸಜ್ಜಿತ ಉದ್ಯಾನಗಳನ್ನು ನಿರ್ಮಿಸಲು ನಗರಸಭೆ ಕ್ರಮ ಕೈಗೊಳ್ಳಬೇಕು ಎಂಬುದು ನಗರ ನಿವಾಸಿಗಳ ಆಗ್ರಹ.

ಉದ್ಯಾನಗಳಲ್ಲಿ  ವಿದ್ಯುತ್‌ ದೀಪ ಗಳ ಅಳವಡಿಕೆ, ಚಿಣ್ಣರಿಗೆ ಆಟದ ಉಪ ಕರಣಗಳು, ನಡೆದಾಡಲು ಸುಸಜ್ಜಿತ ಪಥ, ಉದ್ಯಾನದ ಸುತ್ತಲೂ ಚರಂಡಿ ವ್ಯವಸ್ಥೆ, ಸಿಮೆಂಟ್‌ ಸ್ಪ್ಯಾಬ್‌ಗಳು, ಉಯ್ಯಾಲೆ, ಹುಲ್ಲು ನೆಲ ಹಾಸು, ಕುಳಿತುಕೊಳ್ಳಲು ಬೆಂಚುಗಳು, ಶೌಚಾಲಯ, ಕುಡಿಯುವ ನೀರು, ಮಳೆ ಗಾಲದಲ್ಲಿ ಮಳೆ ನೀರು ಸಂಗ್ರಹಿಸಲು ಅಗತ್ಯ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯಗಳು ಇರಬೇಕು ಎಂದು ಅವರ ಒತ್ತಾಯ

ನಗರಸಭೆಯು ಉದ್ಯಾನದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅವುಗಳು ನಿರ್ವಹಣೆಗೂ ವ್ಯವಸ್ಥೆ ಮಾಡಬೇಕು ನಾಗರಿಕರು ಆಗ್ರಹಿಸುತ್ತಾರೆ.

ಬಜೆಟ್‌ನಲ್ಲಿ ಹಣ

ಉದ್ಯಾನಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಗರಸಭೆ ಕಾರ್ಯಪಾಲಕ ಎಂಜಿನಿಯರ್‌ ಸತ್ಯಮೂರ್ತಿ ಅವರು, ‘14ನೇ ಹಣಕಾಸು ಯೋಜನೆಯಡಿ ನಗರಸಭೆಗೆ ಅನುದಾನ ಬರಲಿದೆ. ಒಂದು ಉದ್ಯಾನದ ನಿರ್ಮಾಣ ಹಾಗೂ ನಿರ್ವಹಣೆಗೆ ₹ 8ರಿಂದ ₹ 15 ಲಕ್ಷ ವೆಚ್ಚವಾಗುತ್ತದೆ’ ಎಂದು ತಿಳಿಸಿದರು.

‘ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿ, ಉದ್ಯಾನಗಳ ನಿರ್ವಹಣೆಗೆ ಮುಂದಾಗುತ್ತೇವೆ’ ಎಂದು ಹೇಳಿದರು.

‘ಹೌಸಿಂಗ್‌ ಬೋರ್ಡ್‌ ಕಾಲೊನಿಯಲ್ಲಿರುವ ಅಂಬೇಡ್ಕರ್‌ ಉದ್ಯಾನವನ್ನು ಸಂಪೂರ್ಣ ಹಸಿರೀಕರಣ ಮಾಡುವ ಚಿಂತನೆ ಇದ್ದು, ಇದಕ್ಕಾಗಿ ಅಂದಾಜು ₹ 10ರಿಂದ ₹ 15 ಲಕ್ಷ ವೆಚ್ಚವಾಗಬಹುದು’ ಎಂದು ಅವರು ಮಾಹಿತಿ ನೀಡಿದರು.

ಜನರು ಏನಂತಾರೆ?

ವಾಯುವಿಹಾರಿಗಳಿಗೆ ಭಯ

ಹೌಸಿಂಗ್‌ ಬೋರ್ಡ್‌ ಕಾಲೊನಿಯಲ್ಲಿರುವ ಉದ್ಯಾನ ಒಂದೂವರೆ ವರ್ಷದಿಂದ ನಿರ್ವಹಣೆ ಇಲ್ಲದೆ ಸೊರಗಿದೆ. ಮಕ್ಕಳು ಆಟವಾಡುವ ಸಾಮಗ್ರಿಗಳು ಹಾಳಾಗಿವೆ.  ವಾಯುವಿಹಾರದ ನಂತರ ವಿಶ್ರಾಂತಿ ಪಡೆಯಲು ಬೆಂಚಿನ ವ್ಯವಸ್ಥೆ ಸರಿಯಾಗಿ ಇಲ್ಲ. ಜನರಿಗಿಂತ ಇಲ್ಲಿ ನಾಯಿಗಳೇ ಹೆಚ್ಚಿವೆ. ವಾಯುವಿಹಾರಕ್ಕೆ ಬರುವವರು ಭಯಪಡುವಂತಹ ಪರಿಸ್ಥಿತಿ ಇದೆ. ಸ್ವಚ್ಛತೆಗೂ ಒತ್ತು ನೀಡಿಲ್ಲ. ಕಸದ ರಾಶಿ ಇದೆ. ವಿಲೇವಾರಿಗೆ ಕ್ರಮವಹಿಸಿಲ್ಲ. 

–ಐಶ್ವರ್ಯ, ಹೌಸಿಂಗ್‌ಬೋರ್ಡ್‌ ನಿವಾಸಿ  

***

ಪ್ರತ್ಯೇಕಿಸಿ

ದೇವಸ್ಥಾನದ ಎದುರಿನ ಎರಡು ಉದ್ಯಾನಗಳನ್ನು ಮಹಿಳೆಯರು ಮತ್ತು ಪುರುಷರಿಗೆ ಎಂದು ಪ್ರತ್ಯೇಕಿಸಬೇಕು. ಇದರಿಂದ ಮಹಿಳೆಯರು ಮುಜುಗರವಿಲ್ಲದೆ ವಾಯುವಿಹಾರ ನಡೆಸಬಹುದು. ಉದ್ಯಾನಕ್ಕೆ ಬರುವ ಜನರು ಮುಖ್ಯವಾಗಿ ಸ್ವಚ್ಛತೆ ಕಾಪಾಡಬೇಕು. ಪ್ರಾಣಿಗಳು ಬಾರದಂತೆ ಎಚ್ಚರವಹಿಸಬೇಕು. ನಗರಸಭೆ ಉದ್ಯಾನಗಳ ನಿರ್ವಹಣೆಗೆ ಮುಂದಾಗಬೇಕು

– ಲಲಿತಾ, ನಗರ ನಿವಾಸಿ

***

ಮೂಲಸೌಕರ್ಯ ಬೇಕು

ನಗರದ ಉದ್ಯಾನಗಳು ನಿರ್ವಹಣೆಯ ಕೊರತೆ ಎದುರಿಸುತ್ತಿವೆ. ನೀರಿನ ಸಮರ್ಪಕ ಪೂರೈಕೆಯಿಲ್ಲದೇ ಹುಲ್ಲುಹಾಸು, ಗಿಡಗಳು ಒಣಗುತ್ತಿವೆ. ವಿಶ್ರಾಂತಿಗಾಗಿ ಬರುವ ನಾಗರಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ನಗರಸಭೆಯವರು ಉದ್ಯಾನದ ಸಮರ್ಪಕ ನಿರ್ವಹಣೆಯೊಂದಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು

-ಯೋಗರಾಜ್, ಪಿಡಬ್ಲ್ಯೂಡಿ ಕಾಲೊನಿ ನಿವಾಸಿ

***

ಸ್ವಚ್ಛತೆ ಕಾಪಾಡಿ

ಉದ್ಯಾನಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ನಗರಸಭೆಯಿಂದ ಅನುಕೂಲತೆಗಳು ತೀರಾ ಕಡಿಮೆ. ವ್ಯಕ್ತಿಯೊಬ್ಬರನ್ನು ಕಾವಲಿಗೆ ಇರಿಸಬೇಕು. ಅನೈತಿಕ ಚಟುವಟಿಕೆ ನಡೆಯದಂತೆ ಎಚ್ಚರವಹಿಸಬೇಕು. ಹೂ ಗಿಡಗಳನ್ನು ನೆಟ್ಟು ಪೋಷಣೆಗೆ ಮುಂದಾದರೆ ಉದ್ಯಾನಗಳ ಸೌಂದರ್ಯ ಹೆಚ್ಚುತ್ತದೆ

–ಶ್ರೀನಿವಾಸ್, ನಗರ ನಿವಾಸಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.