ನಾಟಿ ಬಿತ್ತನೆ ಬೀಜಗಳ ಬ್ಯಾಂಕ್ ‘ವಲ್ಲಿಯಮ್ಮಾಳ್‌’

7
‘ಅನಿಷಾ’ ಎಂಬ ಸಾವಯವ ಕೃಷಿ ಸಂಸ್ಥೆ ಆರಂಭ; ಸಾವಯವ ಕೃಷಿ ಮಹತ್ವ ಸಾರುತ್ತಾರೆ

ನಾಟಿ ಬಿತ್ತನೆ ಬೀಜಗಳ ಬ್ಯಾಂಕ್ ‘ವಲ್ಲಿಯಮ್ಮಾಳ್‌’

Published:
Updated:
Prajavani

ಹನೂರು: ಸದಾ ಸಾವಯವ ಕೃಷಿ ಪದ್ಧತಿಯನ್ನು ಧ್ಯಾನಿಸುವ ಸಾಧಕಿಯೊಬ್ಬರು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿದ್ದು, ಸಾವಯವ ಕೃಷಿ ಬಗ್ಗೆ ತಾವು ಹೊಂದಿರುವ ಅನುಭವವನ್ನು ಇತರೆ ರೈತರಿಗೂ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ವಲ್ಲಿಯಾಮ್ಮಳ್‌.

ಮಾರ್ಟಳ್ಳಿ ಸಮೀಪದ ಕಡುಬೂರು ಗ್ರಾಮದ ವಲ್ಲಿಯಾಮ್ಮಳ್‌ ಅವರು 2006ರಲ್ಲಿ ‘ಅನಿಷಾ’ ಎಂಬ ಸಾವಯವ ಕೃಷಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ನಾಟಿ ಬಿತ್ತನೆ ಬೀಜಗಳ ಬ್ಯಾಂಕ್‌ ನಿರ್ವಹಿಸುತ್ತಿದ್ದಾರೆ.

ತಮ್ಮ 9 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುವುದರ ಜೊತೆಗೆ, ಮಾರ್ಟಳ್ಳಿ, ಕೌದಳ್ಳಿ, ರಾಮಾಪುರ, ಮಹದೇಶ್ವರ ಬೆಟ್ಟ, ಪೊನ್ನಾಚಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳ ರೈತರನ್ನು ಭೇಟಿ ಮಾಡಿ ಸಾವಯವ ಕೃಷಿ ಪದ್ಧತಿಯ ಮಹತ್ವ ತಿಳಿಸಿದ್ದಾರೆ. ಬಿತ್ತನೆ ಬೀಜಗಳನ್ನು ನೀಡಿ ಸಾವಯವ ಕೃಷಿಗೆ ಪ್ರೇರಣೆ ನೀಡುತ್ತಿದ್ದಾರೆ.

‘ಅನಿಷಾ’ ಸಂಸ್ಥೆಯ ಮೂಲಕ ನಾಟಿ ಬಿತ್ತನೆ ಬೀಜಗಳ ಸಂಗ್ರಹಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ರಾಜ್ಯದ ನಾನಾ ಕೃಷಿ ಕೇಂದ್ರಗಳು, ಗಿರಿಜನ ಹಾಡಿಗಳಿಗೆ ಭೇಟಿ ನೀಡಿ ಅವರಲ್ಲಿರುವ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ, ತಮ್ಮ ಜಮೀನಿನಲ್ಲಿ ಅವುಗಳನ್ನು ಬೆಳೆದು ಫಸಲನ್ನು ಬಿತ್ತನೆಗಾಗಿ ತೆಗೆದಿಡುತ್ತಾರೆ.

‘ಸದ್ಯ, ನಮ್ಮ ಕೇಂದ್ರದಲ್ಲಿ ರಾಗಿ, ಸಿರಿಧಾನ್ಯಗಳು, ಭತ್ತ, ಎಣ್ಣೆಕಾಳುಗಳು, ತೊಗರಿ, ಅವರೆ ಸೇರಿ 300ಕ್ಕೂ ಹೆಚ್ಚು ಬೆಳೆಗಳ ಬಿತ್ತನೆ ಬೀಜಗಳಿವೆ. ಮಳೆಗಾಲದಲ್ಲಿ ಇವುಗಳನ್ನು ಬಿತ್ತನೆ ಮಾಡಿ ಬೆಳೆಯುತ್ತೇವೆ. ಆಗ ಇಲ್ಲಿಗೆ ಬರುವ ರೈತರು ತಮಗೆ ಯಾವ ಬಿತ್ತನೆ ಬೀಜ ಬೇಕು ಎಂಬುದನ್ನು ತಿಳಿಸಿ ಹೋಗುತ್ತಾರೆ. ನಂತರ ಅವರಿಗೆ ಬಿತ್ತನೆ ಬೀಜವನ್ನು ಉಚಿತವಾಗಿ ವಿತರಿಸುತ್ತೇವೆ’ ಎಂದು ಹೇಳುತ್ತಾರೆ ವಲ್ಲಿಯಾಮ್ಮಳ್‌.

45 ವರ್ಷದ ಈ ಸಾಧಕಿಗೆ 2015ರಲ್ಲಿ ವುಮೆನ್ಸ್ ವರ್ಲ್ಡ್‌ ಸಮ್ಮಿಟ್ ಫೌಂಡೇಷನ್ನಿನ ‘ವುಮೆನ್ಸ್‌ ಕ್ರಿಯೇಟಿವಿಟಿ ಇನ್‌ ರೂರಲ್‌ ಲೈಫ್’ ಪ್ರಶಸ್ತಿ ಹಾಗೂ 2016ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ‘ಯುವ ರೈತ ಮಹಿಳೆ’ ಪ್ರಶಸ್ತಿಯೂ ಒಲಿದಿದೆ.

‘ಸದ್ಯ, ಮಹದೇಶ್ವರ ಬೆಟ್ಟ, ಮಾರ್ಟಳ್ಳಿ ಹಾಗೂ ಪೊನ್ನಾಚಿ ಗ್ರಾಮ ಪಂಚಾಯಿತಿಗಳ 29 ಶಾಲೆಗಳ 1,450 ಮಕ್ಕಳಿಗೆ ಬಿತ್ತನೆ ಬೀಜ ನೀಡಿ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. 2019ರಲ್ಲಿ ಇದನ್ನು ತಾಲ್ಲೂಕಿನ ಎಲ್ಲ ಶಾಲೆಗಳಿಗೂ ವಿಸ್ತರಿಸುವುದರ ಜೊತೆಗೆ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ಪೂರೈಸುತ್ತೇವೆ’ ಎಂದು ತಿಳಿಸಿದರು.

 ಜಮೀನಿನಲ್ಲಿರುವ ಎಲ್ಲ ಕಟ್ಟಡಗಳಿಂದ ಸೂರುಗಳ ನೀರಿನ ಸಂಗ್ರಹಣೆ, ಇಳಿಜಾರಿರುವ ಸ್ಥಳಗಳಿರುವಲ್ಲೆಲ್ಲ ಬದುಗಳ ನಿರ್ಮಾಣ (ಕಾಂಟೂರ್ ಬಂಡಿಂಗ್),   ಹಿಂಗು ಗುಂಡಿಗಳ ನಿರ್ಮಾಣ, ಬದುಗಳ ಮೇಲೆ ಗೊಬ್ಬರದ ಗಿಡ, ಹೆಬ್ಬೇವುಗಳಂಥ ಮರಗಳನ್ನು ಬೆಳೆದಿದ್ದಾರೆ.

ಸಾವಯವ ಕೃಷಿಗೆ ಸಂಬಂಧಿಸಿದಂತೆ ಜರ್ಮನಿ, ಇಂಡೋನೆಷಿಯಾ, ನ್ಯೂಜಿಲ್ಯಾಂಡ್, ಇಂಗ್ಲೆಂಡ್ ಹಾಗೂ ಮೆಕ್ಸಿಕೊ ದೇಶಗಳಿಗೆ ಭೇಟಿ ನೀಡಿ ಅಲ್ಲಿಯೂ ತರಬೇತಿ ಪಡೆದಿದ್ದಾರೆ.

ಮಳೆಯ ನೀರನ್ನೇ ಕಾಣದಿರುವ ಈ ನೆಲವನ್ನು ಹದ ಮಾಡಿ ಬೆಳೆ ತೆಗೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿತು. ಮೊದಲಿಗೆ ಸಾಧ್ಯವಾದಲ್ಲೆಲ್ಲ ಕಲ್ಲು ಕದಲಿಸಿ, ಬದುಗಳ ತೋಡಿ ಮಣ್ಣನ್ನು ಹದ ಮಾಡಿ ಸಾಧ್ಯವಾದ ಗಿಡಗಂಟಿಗಳನ್ನು ಬೇರೂರಿಸಿ ಅದನ್ನು ಅಲ್ಲೇ ಕೊಳೆಸಿದೆ. ಈ ಕಾರಣಕ್ಕಾಗಿಯೇ ಎರಡು ಜೊತೆ ನಾಟಿ ಹಸುಗಳ ಜೊತೆಗೆ ಒಂದು ಜೋಡಿ ಎಮ್ಮೆ ಹಾಗೂ ನಾಟಿ ಕೋಳಿ, ಟರ್ಕಿಕೋಳಿಗಳನ್ನು ಸಾಕಿ ಅವುಗಳ ಹಿಕ್ಕೆ ಹಾಗೂ ಸಗಣಿಯನ್ನು ಬಳಸಿ ಬೆಳೆ ತೆಗೆಯಲು ಆರಂಭಿಸಿದೆ.

ಮಣ್ಣಿನ ಸಂವರ್ಧನೆಗಾಗಿ ಎರೆಹುಳಗಳ ಸಾಕಣೆ ಮಾಡುತ್ತ ನೆಲದ ಸಂಪನ್ಮೂಲವನ್ನು ಹೆಚ್ಚಿಸಿಕೊಂಡು ಆಡು, ಕುರಿ ಕೋಳಿಗಳನ್ನು ಕಡಿಮೆ ಮಾಡಿ ನೀರಿನ ನಿರ್ವಹಣೆಗೆ ಒತ್ತು ಕೊಡಲಾಯಿತು. ಭೂಮಿಯಲ್ಲಿ ನೀರಿನಾಂಶ ಹೆಚ್ಚಿದಂತೆ ತೋಟದಲ್ಲಿನ ಬೆಳೆಯು ಹುಲುಸಾಗಿ ಬೆಳೆಯತೊಡಗಿತು ಎಂದು ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟರು ವಲ್ಲಿಯಾಮ್ಮಾಳ್‌.

*
ಸ್ಥಳೀಯ ರೈತರ ನಿರಂತರ ಸಂಪರ್ಕದಿಂದ ಸಾವಯವ ಕೃಷಿ ಮತ್ತಷ್ಟು ಗಟ್ಟಿಗೊಳಿಸಿದೆ. ಜತೆಗೆ, ಸ್ಥಳೀಯ ಮಾರುಕಟ್ಟೆಗಳಿಗೆ ಹಾಗೂ ನೇರವಾಗಿ ಗ್ರಾಹಕರಿಗೆ ಬಿತ್ತನೆ ಬೀಜ ವಿತರಣೆ ಮಾಡುತ್ತೇವೆ.
-ವಲ್ಲಿಯಾಮ್ಮಾಳ್‌, ಸಾವಯವ ಕೃಷಿಕರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !