ಗುರುವಾರ , ನವೆಂಬರ್ 14, 2019
22 °C

‘ವಿರಾಟಪರ್ವಂ’ನಲ್ಲಿ ನಂದಿತಾ ನಟನೆ

Published:
Updated:
Prajavani

‘ವಿರಾಟಪರ್ವಂ 1992' ಚಿತ್ರದಲ್ಲಿ ಬಾಲಿವುಡ್‌ ನಟಿ ತಬು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ತಬು ಸ್ಥಾನಕ್ಕೆ ನಟಿ ನಂದಿತಾ ದಾಸ್‌ ಆಯ್ಕೆಯಾಗಿದ್ದಾರೆ. ಸಾಯಿ ಪಲ್ಲವಿ ಹಾಗೂ ರಾಣಾ ದಗ್ಗುಬಾಟಿ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಂದಿತಾ ದಾಸ್‌ ಕಾಣಿಸಿಕೊಳ್ಳಲಿದ್ದಾರೆ. 

ಈ ಚಿತ್ರವನ್ನು ವೇಣು ಉಡುಗುಳ ನಿರ್ದೇಶಿಸಲಿದ್ದಾರೆ. ದಶಕಗಳ ಬಳಿಕ  ಈ ಸಿನಿಮಾದ ಮೂಲಕ ನಂದಿತಾ ದಾಸ್ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. 2006ರಲ್ಲಿ ‘ಕಮ್ಲಿ’ ಚಿತ್ರವು ಅವರು ಇಲ್ಲಿ ಅಭಿನಯಿಸಿದ ಕೊನೆಯ ಚಿತ್ರ.

‘ಈ ಚಿತ್ರದಲ್ಲಿ ನನ್ನದು ಸಣ್ಣ ಪಾತ್ರ. ಆದರೆ ಪ್ರಾಮುಖ್ಯತೆ ಇದೆ. ದಶಕಗಳ ಬಳಿಕ ನಾನು ತೆಲುಗು ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನನಗೆ ತೆಲುಗು ಮಾತನಾಡಲು ಬರುವುದಿಲ್ಲ. ಆದರೆ ಚಿತ್ರತಂಡ ಹಾಗೂ ನಿರ್ದೇಶಕರು ವೃತ್ತಿ ಬದ್ಧತೆ ಹೊಂದಿದ್ದು, ಸೆಟ್‌ನಲ್ಲಿ ಸ್ನೇಹಮಯ ವಾತಾವರಣ ಇದೆ. ಈ ಪಾತ್ರ ನನಗೆ ತುಂಬಾ ಹತ್ತಿರವಾಗಿದೆ. ಸಾಯಿಪಲ್ಲವಿ ಜೊತೆ ಚಿತ್ರೀಕರಣ ನಡೆಯುತ್ತಿದೆ. ಎರಡನೇ ಹಂತದಲ್ಲಿ ರಾನಾ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದು ನಂದಿತಾ ಮಾತನಾಡಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಹೈದಾರಾಬಾದ್‌ನಲ್ಲಿ ನಡೆಯುತ್ತಿದೆ. 

ಈ ಚಿತ್ರವು 1990ರ ನಕ್ಸಲ್‌ ಚಟುವಟಿಕೆಯ ಕತೆಯನ್ನು ಹೊಂದಿದೆ. ನಂದಿತಾ ದಾಸ್‌ ಇಲ್ಲಿಯವರೆಗೂ 10ಕ್ಕೂ ಹೆಚ್ಚು ಭಾಷೆಯಲ್ಲಿ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ದೀಪಾ ಮೆಹ್ತಾ ನಿರ್ದೇಶನದ ‘ಫೈರ್’ ಮತ್ತು ‘ಅರ್ಥ್’ ಚಿತ್ರಗಳಲ್ಲಿ ಅತ್ಯಂತ ಬೋಲ್ಡಾಗಿ ನಟಿಸಿ ಗಮನ ಸೆಳೆದಿದ್ದರು. ಕಪ್ಪು ಸುಂದರಿ ಎಂದು ಹೆಸರಾಗಿರುವ ಅವರು ಕನ್ನಡದಲ್ಲಿ ‘ದೇವೀರಿ’  ಚಿತ್ರದಲ್ಲೂ ನಟಿಸಿದ್ದಾರೆ. 

ಇವರು 2008ರಲ್ಲಿ ‘ಫಿರಾಕ್‌’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ ಹಾಗೂ 20ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

 

ಪ್ರತಿಕ್ರಿಯಿಸಿ (+)