ಗುರುವಾರ , ನವೆಂಬರ್ 21, 2019
26 °C

ಶೋಷಣೆ ವಿರುದ್ಧ ಶ್ರಮಿಸಿದ ನಾರಾಯಣ ಗುರು

Published:
Updated:
Prajavani

ಚಿಕ್ಕಬಳ್ಳಾಪುರ: ‘ಕೇರಳದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಶೋಷಿತ ಹಾಗೂ ತಳ ಸಮುದಾಯಗಳು ಅನುಭವಿಸುತ್ತಿದ್ದ ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ರಕ್ತ ರಹಿತ ಕ್ರಾಂತಿ ನಡೆಸಿ, ಶೋಷಿತ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿದ ಕೀರ್ತಿ ಬ್ರಹ್ಮಶ್ರೀ ನಾರಾಯಣ ಗುರು ಅವರಿಗೆ ಸಲ್ಲುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟಾಚಲಪತಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಜ್ಞಾನ, ಅಂಧಕಾರ, ಮೂರ್ತಿ ಪೂಜೆ, ಜಾತಿ ಪದ್ಧತಿ, ಹಿಂದುಳಿದ ವರ್ಗದವರ ಶೋಚನೀಯ ಸ್ಥಿತಿಯನ್ನು ಕಂಡು ಶೋಷಿತರಲ್ಲಿ ವೈಚಾರಿಕತೆ ಮೂಡಿಸುವ ದೃಷ್ಟಿಯಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದ ನಾರಾಯಣಗುರು ಅವರು ಆ ನಿಟ್ಟಿಲ್ಲಿ ಅಪಾರ ಶ್ರಮವಹಿಸಿದ್ದರು’ ಎಂದು ಹೇಳಿದರು.

‘ಕೇರಳದಲ್ಲಿನ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟ ನಾರಾಯಣ ಗುರುಗಳು ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿ ಇಂದಿಗೂ ಪ್ರಸುತ್ತವಾಗಿವೆ. ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಗ್ರೇಡ್-2 ತಹಶೀಲ್ದಾರ್ ತುಳಸಿ, ಈಡಿಗ ಸಮುದಾಯದ ಮುಖಂಡರಾದ ಚಿನ್ನಪ್ಪ ಸೇರಿದಂತೆ ತಾಲ್ಲೂಕು ಕಚೇರಿಯ ಅಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)