ನಾರಿಯರಿಗೆ ತವರು ನೆನಪಿಸುವ ನಾಗರ ಪಂಚಮಿ..!

7
ಒಂದೆಡೆ ಸ್ವಾತಂತ್ರ್ಯೋತ್ಸವದ ಸಡಗರ; ಇನ್ನೊಂದೆಡೆ ಪಂಚಮಿಯ ಸಂಭ್ರಮವಿಂದು

ನಾರಿಯರಿಗೆ ತವರು ನೆನಪಿಸುವ ನಾಗರ ಪಂಚಮಿ..!

Published:
Updated:
Deccan Herald

ವಿಜಯಪುರ:  ಶ್ರಾವಣ ಆರಂಭಕ್ಕೂ ಮುನ್ನವೇ ನಾರಿಯರ ಮನದಲ್ಲಿ ತವರಿನ ನೆನಪು. ಬಾಲ್ಯದಲ್ಲಿ ನೆರೆಹೊರೆಯ, ಶಾಲೆಯ ಸಹಪಾಠಿ ಗೆಳತಿಯರೊಡನೆ ನಾಗ ಚೌತಿ, ನಾಗ ಪಂಚಮಿ ಸಂಭ್ರಮದಲ್ಲಿ ಮಿಂದೆದ್ದ ರಸಗಳಿಗೆ ನೆನಪಿನ ಬುತ್ತಿಯಿಂದ ತೆರೆದುಕೊಳ್ಳುವುದು ಸಹಜ.

ಇನ್ನೂ ಹೆಣ್ಣುಮಕ್ಕಳ ಸಂಭ್ರಮಕ್ಕಂತೂ ಪಾರವೇ ಇಲ್ಲ. ಪಂಚಮಿ ಬಂತೆಂದರೆ ಮನದಾಳದ ಆಸೆಗಳು ಗರಿ ಬಿಚ್ಚಲಿವೆ. ಊರ ಹೊರ ಭಾಗದಲ್ಲಿ ಹಬ್ಬದ ಸಂಭ್ರಮಕ್ಕಾಗಿಯೇ ಬೃಹತ್‌ ಮರಗಳಿಗೆ ಕಟ್ಟುವ ಜೋಕಾಲಿಯಲ್ಲಿ ಕುಳಿತು–ನಿಂತು ಜೀಕುವ ಕ್ಷಣಗಳಿಗಾಗಿ ಕಾತರದಿಂದ ಕಾಯುವುದು ಇಂದಿಗೂ ಜೀವಂತವಿದೆ.

ನಗರ–ಪಟ್ಟಣಗಳಲ್ಲೂ ಈ ಸಂಸ್ಕೃತಿ ಹೆಚ್ಚಿನ ಪ್ರಮಾಣದಲ್ಲಿ ಗೋಚರಿಸದಿದ್ದರೂ ಜೀವಂತವಿದೆ. ನಾಗ ಚೌತಿ, ನಾಗ ಪಂಚಮಿ ಎರಡೂ ದಿನ ಉತ್ತರ ಕರ್ನಾಟಕದ ಬಹುತೇಕ ಭಾಗದಲ್ಲಿ ಶ್ರದ್ಧಾ ಭಕ್ತಿಯ ಪೂಜೆ–ಪುನಸ್ಕಾರ ನಡೆಯುತ್ತವೆ.

ಅಬಾಲವೃದ್ಧರಾದಿಯಾಗಿ ಮನೆ ಮಂದಿಗೆಲ್ಲ ಪಂಚಮಿ ಸಂಭ್ರಮ–ಸಡಗರದ ಹಬ್ಬ. ಚಿಕ್ಕ ಮಕ್ಕಳು ಸೇರಿದಂತೆ ಎಲ್ಲರೂ ಬಗೆಬಗೆಯ ಉಂಡೆಗಳನ್ನು ಸವಿಯುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಪಂಚಮಿ ಹಬ್ಬದಲ್ಲಿ ಉಂಡೆಗಳದ್ದೇ ಸಾಮ್ರಾಜ್ಯ.

ಚಕ್ಕುಲಿ, ಕರ್ಜಿಕಾಯಿ, ಶಂಕರಪೋಳಿ, ಬೇಸನ್‌ ಉಂಡೆ, ಹೆಸರು ಉಂಡೆ, ಶೇಂಗಾ ಉಂಡೆ, ಹಳ್ಳಿನ ಉಂಡೆ, ಕೊಬ್ಬರಿ ಉಂಡೆ ಸೇರಿದಂತೆ ನಾನಾ ಬಗೆಯ ಉಂಡೆಗಳನ್ನು ಆಸ್ವಾದಿಸಲು ಕಾತರದಿಂದ ಕಾಯುವವರೇ ಹೆಚ್ಚು.

ಪಂಚಮಿ ಇಂದು:  ಬುಧವಾರ ನಾಗರ ಪಂಚಮಿ. ಆದರೆ ಹಬ್ಬದ ಆಚರಣೆ ಮಾತ್ರ ಮಂಗಳವಾರ ಮುಸ್ಸಂಜೆಯೇ ಆರಂಭಗೊಂಡಿತು. ಪ್ರತಿ ಮನೆಯ ದೇವರ ಜಗುಲಿ ಕಟ್ಟೆಯಲ್ಲಿ ನಾಗರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿದರು.

ಮನೆ ಮಂದಿಯೆಲ್ಲ ಕಲೆತು ನಾಗರ ಮೂರ್ತಿಗೆ ದೇವರ ಪಾಲು... ದಿಂಡರ ಪಾಲು... ಹಿರಿಯರ ಪಾಲು... ಕಿರಿಯರ ಪಾಲು... ಅಣ್ಣನ ಪಾಲು... ತಮ್ಮನ ಪಾಲು... ಅಕ್ಕ–ತಂಗಿಯರ ಪಾಲು ಎಂದು ಪ್ರಾರ್ಥಿಸುತ್ತಾ ಹಾಲು ಎರೆದು ಪೂಜಿಸುವ ಮೂಲಕ ಪಂಚಮಿ ಆಚರಣೆಗೆ ಚಾಲನೆ ನೀಡಿದರು.

ಇದೇ ಸಂದರ್ಭ ಕರ್ಜಿಕಾಯಿ, ಬೇಸನ್‌, ರವೆ, ಕಡ್ಲೆ, ಹೆಸರು, ಶೇಂಗಾ, ಬೂಂದಿ ಉಂಡೆಗಳ ನೈವೇದ್ಯವೂ ನಡೆಯುತ್ತದೆ. ಕೆಲವೊಂದು ಹಳ್ಳಿಗಳಲ್ಲಿ ಜೋಳದ ಗಾರ್ಗಿಯ ನೇವೇದ್ಯವೂ ನಾಗಪ್ಪನಿಗೆ ಅರ್ಪಣೆಯಾಯಿತು.

ಪೂಜೆ ಮುಗಿದ ಬಳಿಕ ಬಹುತೇಕರು ನಾಗಪ್ಪನ ನೈವೇದ್ಯ ಸೇರಿದಂತೆ ಉಂಡೆಗಳನ್ನು ತೆಗೆದುಕೊಂಡು ಸ್ವಾಮಿಗಳ ಮನೆಗಳಿಗೆ ತೆರಳಿ ಕೊಟ್ಟು, ಅವರ ಆಶೀರ್ವಾದ ಪಡೆದರು. ನಂತರ ಮನೆ–ಮಂದಿ, ಸ್ನೇಹಿತರು, ಅಣ್ಣ–ತಮ್ಮಂದಿರು ರಾತ್ರಿ ಒಂದೆಡೆ ಕಲೆತು ಉಂಡೆಗಳನ್ನು ಸವಿದರು. ಇದು ಜಿಲ್ಲೆಯ ವಿವಿಧೆಡೆ ಮಂಗಳವಾರ ನಡೆದ ನಾಗಚೌತಿ ಆಚರಣೆ.

ಬುಧವಾರ ಪಂಚಮಿ. ಮುಂಜಾನೆಯೇ ಊರ ಹೊರಗಿನ ನಾಗರ ಗುಡಿಗಳು, ಹುತ್ತಗಳ ಬಳಿ ತೆರಳುವ ಮನೆ ಮಂದಿ ಪೂಜೆ ಸಲ್ಲಿಸಿ, ಹೋಳಿಗೆ, ಹೂರಣದ ಕಡುಬಿನ ನೈವೇದ್ಯ ಅರ್ಪಿಸಿ ಒಟ್ಟಾಗಿ ಊಟ ಸವಿಯುತ್ತಾರೆ ಎಂದು ನಾಗರ ಪಂಚಮಿ ಆಚರಣೆ ಕುರಿತು ಗೃಹಿಣಿ ಕಮಲಾ ಹೆಳವರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಭರ್ಜರಿ ತಯಾರಿ : ‘ಶ್ರಾವಣ ಆರಂಭಗೊಂಡ ಬೆನ್ನಿಗೆ ಪಂಚಮಿಯ ತಯಾರಿಯೂ ನಡೆಯುತ್ತದೆ. ನಾಲ್ಕೈದು ದಿನಗಳಿಂದ ಹಬ್ಬದ ಸಿದ್ಧತೆಯಲ್ಲಿ ಮನೆಯ ಹೆಣ್ಣು ಮಕ್ಕಳು ತಲ್ಲೀನರಾಗುತ್ತಾರೆ. ಬಗೆ ಬಗೆಯ ಉಂಡೆ ತಯಾರಿಸುತ್ತಾರೆ. ನಾಗ ಚೌತಿಯಂದು ಮುಂಜಾನೆಯಿಂದ ಉಪವಾಸವಿದ್ದು, ರಾತ್ರಿ ನಾಗದೇವನ ಆರಾಧನೆ ನಡೆಸುತ್ತಾರೆ’ ಎನ್ನುತ್ತಾರೆ ಗೃಹಿಣಿಯರಾದ ಶಕುಂತಲಾ. ತಾರಾ, ರೋಹಿಣಿ, ರೇಣುಕಾ.

ಶಾಲೆಗಳಲ್ಲಿ ಶಾರದಾ ಪೂಜೆ : ನಾಗಚೌತಿಯ ದಿನವಾದ ಮಂಗಳವಾರ ಬಸವನಬಾಗೇವಾಡಿ, ದೇವರಹಿಪ್ಪರಗಿ, ತಾಳಿಕೋಟೆ, ಮುದ್ದೇಬಿಹಾಳ ಸೇರಿದಂತೆ ಇನ್ನಿತರೆಡೆ ಸಂಪ್ರದಾಯದಂತೆ ಎಲ್ಲಾ ಶಾಲೆಗಳಲ್ಲಿ ಶಾರದಾ ಪೂಜೆ ಆಚರಿಸಿದ್ದು ವಿಶೇಷ.

‘ಶಾಲೆ ಆರಂಭಕ್ಕೂ ಮುನ್ನವೇ ಶಾರದೆಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದೆವು. ಎಲ್ಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಎಳ್ಳು, ವಿವಿಧ ಬಗೆಯ ಉಂಡೆಗಳು, ಕರ್ಜಿಕಾಯಿ ನೈವೇದ್ಯ ಸಲ್ಲಿಸಿದ ಬಳಿಕ ಶಾರದೆಯ ಶ್ಲೋಕ ಪಠಿಸಿ, ಪ್ರಾರ್ಥಿಸಿದೆವು’ ಎಂದು ಬಸವನಬಾಗೇವಾಡಿಯ ಬಸವತತ್ವ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಬಸವರಾಜ ಚಿಂಚೋಳಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !