ಶಿಕ್ಷಣ ಬದುಕಿನ ಜ್ಞಾನಕ್ಕೆ ಪೂರಕವಾಗಬೇಕು: ಲಿಂಗರಾಜು

ಮಂಗಳವಾರ, ಮಾರ್ಚ್ 19, 2019
21 °C
ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ವಿಚಾರ ಸಂಕಿರಣ

ಶಿಕ್ಷಣ ಬದುಕಿನ ಜ್ಞಾನಕ್ಕೆ ಪೂರಕವಾಗಬೇಕು: ಲಿಂಗರಾಜು

Published:
Updated:
Prajavani

ಚಾಮರಾಜನಗರ: ‘ಶಿಕ್ಷಣ ಬದುಕಿಗೆ ಅಗತ್ಯವಿರುವ ಜ್ಞಾನವನ್ನು ತುಂಬಬೇಕು. ಆದರೆ, ಇಂದಿನ ವಿದ್ಯಾರ್ಥಿಗಳಲ್ಲಿ ಬದುಕಿಗೆ ಅಗತ್ಯವಿರುವ ಜ್ಞಾನ ಶೂನ್ಯವಾಗಿದೆ’ ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜು ಗಾಂಧಿ ಅವರು ಅಭಿಪ್ರಯಪಟ್ಟರು.

ನಗರದ ಸಮೀಪವಿರುವ ಬೇಡರಪುರ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಶಿಕ್ಷಣಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರವೇ ಅಧ್ಯಯನ ಮಾಡುತ್ತಾರೆ. ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನ ಹೊಂದಿರುವುದಿಲ್ಲ. ಶೈಕ್ಷಣಿಕವಾಗಿ ಪ್ರಬುದ್ಧರಾದರೂ ಬುದ್ಧಿವಂತಿಕೆ ಮಾತ್ರ ಇರುವುದಿಲ್ಲ. ಒಂದು ರಾಷ್ಟ್ರ ಅಭಿವೃದ್ಧಿಯ ಮುಂಚೂಣಿಯಲ್ಲಿರಬೇಕಾದರೆ ಉತ್ತಮ ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳಿರಬೇಕು’ ಎಂದರು.

‘ಕಾಯ್ದೆ, ಕಾನೂನುಗಳನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎನ್ನುವುದು ಪ್ರಜ್ಞಾವಂತರ ಮೇಲೆ ಅವಲಂಬಿತವಾಗಿರುತ್ತದೆ. ಮನುಷ್ಯ ಆಸ್ತಿ, ಹಣಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿರುವುದರಿಂದ ಮಾನವೀಯ ಮೌಲ್ಯ ಕುಸಿಯುತ್ತಿದೆ’ ಎಂದು ವಿಷಾದಿಸಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರು ಮಾತನಾಡಿ, ‘ಗ್ರಾಹಕ ಹಿತಾಸಕ್ತಿಯ ರಕ್ಷಣೆಗಾಗಿ ಗ್ರಾಹಕರ ರಕ್ಷಣಾ ಕಾಯ್ದೆ–1986 ಅನ್ನು ಜಾರಿಗೊಳಿಸಲಾಗಿದೆ. ಇದು ದೋಷಯುಕ್ತ ಸರಕುಗಳು, ಅತೃಪ್ತಿಕರ ಸೇವೆಗಳು, ಅನ್ಯಾಯದ ವ್ಯಾಪಾರ, ಆಚರಣೆಗಳು ಮತ್ತು ಇತರ ಬಗೆಯ ಶೋಷಣೆಯ ವಿರುದ್ಧ ಗ್ರಾಹಕರಿಗೆ ಪರಿಣಾಮಕಾರಿ ರಕ್ಷಣೆ ಒದಗಿಸುತ್ತದೆ’ ಎಂದರು.

‘ಸಾರಿಗೆ, ಶಿಕ್ಷಣ, ಆರೋಗ್ಯ, ಬ್ಯಾಂಕ್‌, ರೈಲ್ವೆ, ಆರೋಗ್ಯ ಇಲಾಖೆಗಳಲ್ಲಿ ಮೋಸ ಹೋಗುವ ಗ್ರಾಹಕರು, ಗ್ರಾಹಕರ ಹಕ್ಕು ಕಾಯ್ದೆ, ಲೋಕ ಅದಾಲತ್‌ ಕಾಯ್ದೆ ಅಥವಾ ವ್ಯಾಜ್ಯಪೂರ್ವ ನಡವಳಿಕೆ ಕಾಯ್ದೆ ಅಡಿಯಲ್ಲಿ ದೂರು ಸಲ್ಲಿಸಬಹುದು. ಕಾನೂನು ಸೇವಾ ಪ್ರಾಧಿಕಾರದ ಅಡಿ ಒಂದು ಲಕ್ಷಕ್ಕಿಂತ ಕಡಿಮೆ ಆದಾಯ ಹೊದಿರುವ ಗ್ರಾಹಕರ ದೂರುಗಳಿಗೆ ಉಚಿತ ಕಾನೂನು ನೆರವಿನ ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಮೋಸ ಹೋಗಬೇಡಿ: ‘ಗ್ರಾಹಕರ ದೂರುಗಳನ್ನು ಸ್ವೀಕರಿಸಲು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಕುಂದುಕೊರತೆಗಳ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ಆರ್‌ಬಿಐ ಅನುಮತಿ ಇಲ್ಲದ ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿ ಮೋಸ ಹೋಗಿರುವ ಪ್ರಕರಣಗಳು ಹೆಚ್ಚುತ್ತಿವೆ. ಜನರು ಇಂತಹ ಹಣಕಾಸು ಸಂಸ್ಥೆಗಳ ಬಗ್ಗೆ ಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.

ಮೈಸೂರು ಮಾನಸಗಂಗೋತ್ರಿಯ ವಾಣಿಜ್ಯ ವಿಭಾಗದ ನಿರ್ದೇಶಕ ಡಾ.ಎನ್‌.ನಾಗರಾಜ, ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ, ಪ್ರೊ.ಬಿ.ಎಚ್‌.ಸುರೇಶ್, ಪ್ರಾಧ್ಯಾಪಕ ಎಂ.ಬಿ.ಮಹೇಶ್ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !