ಭಾನುವಾರ, ಏಪ್ರಿಲ್ 11, 2021
27 °C
ಎನ್‌ಜಿಒಗೆ ಜವಾಬ್ದಾರಿ ಬೇಡ: ಪ್ರೊ.ಸುಭಾಸ್‌ಚಂದ್ರ ನಾಟಿಕರ್

‘ಬುಡಕಟ್ಟು ಜನರ ಬಳಿಗೆ ಸರ್ಕಾರವೇ ತೆರಳಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬುಡಕಟ್ಟು ಜನರ ಬಳಿಗೆ, ಅವರ ನೆಲೆಗೆ ಸರ್ಕಾರವೇ ತೆರಳಿದಾಗ ಮಾತ್ರ, ಮೂಲ ನಿವಾಸಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ’ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರೊ.ಸುಭಾಸ್‌ಚಂದ್ರ ನಾಟಿಕರ್ ಹೇಳಿದರು.

ನಗರದ ಆಡಳಿತ ತರಬೇತಿ ಸಂಸ್ಥೆಯಲ್ಲಿ ಬುಧವಾರ ಆರಂಭಗೊಂಡ ‘ಭಾರತದಲ್ಲಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ; ಸಮಸ್ಯೆಗಳು ಮತ್ತು ಸವಾಲುಗಳ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಬುಡಕಟ್ಟು ಜನರ ಅಭಿವೃದ್ಧಿಯ ಜವಾಬ್ದಾರಿಯನ್ನು ಯಾವುದೇ ಎನ್‌ಜಿಒಗೆ ವಹಿಸಿ ಕೊಡಬಾರದು’ ಎಂದು ಪ್ರತಿಪಾದಿಸಿದರು.

‘100ರಲ್ಲಿ 80 ಎನ್‌ಜಿಒಗಳು ಬುಡಕಟ್ಟು ಜನರ ಹೆಸರಿನಲ್ಲಿ ಅನುದಾನ ಪಡೆದು, ತಮ್ಮ ಹೊಟ್ಟೆ ತುಂಬಿಸಿಕೊಳ್ಳಲಿಕ್ಕೇ ಸೀಮಿತವಾಗಿವೆ. ಇವುಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅನುದಾನ ದುರುಪಯೋಗ ಮಾಡಿಕೊಳ್ಳುತ್ತಿವೆ. ಸರ್ಕಾರ ಹಾಗೂ ಬುಡಕಟ್ಟು ಜನರನ್ನು ವಂಚಿಸುತ್ತಿರುವ ಇಂತಹ ಎನ್‌ಜಿಒಗಳನ್ನು ಆದಷ್ಟು ದೂರವಿಡಬೇಕು’ ಎಂದು ಹೇಳಿದರು.

‘ಬುಡಕಟ್ಟು ಜನರು ವಾಸಿಸುತ್ತಿರುವ ನೆಲೆ, ಬಳಸುತ್ತಿರುವ ಭೂಮಿ, ಬದುಕಿನ ಸ್ವಚ್ಛಂದತೆಗೆ ಯಾರೂ ಧಕ್ಕೆ ತರಬಾರದು. ಕಾಡಿನಿಂದ ಅವರನ್ನು ಹೊರ ಹಾಕಬಾರದು. ಬುಡಕಟ್ಟು ನಿವಾಸಿಗಳು ಕಾಡು ನಾಶ ಮಾಡುವವರಲ್ಲ. ಅವರೇ ಕಾಡು ರಕ್ಷಕರು. ಕಾಡೇ ಅವರ ಜೀವನ. ಅವಿಭಾಜ್ಯ ಅಂಗ. ಕಾಡಿಲ್ಲದ ಜೀವನ ಅವರದಲ್ಲ. ಇವರು ವಾಸಿಸುತ್ತಿರುವ ಹಾಡಿಗಳನ್ನೇ ಕಂದಾಯ ಗ್ರಾಮಗಳೆಂದು ಘೋಷಿಸಿ, ಸಕಲ ಸೌಲಭ್ಯ ಒದಗಿಸಿಕೊಡಲು ಸರ್ಕಾರ ಮುಂದಾಗಬೇಕು’ ಎಂದು ನಾಟಿಕರ್ ತಿಳಿಸಿದರು.

‘ಬುಡಕಟ್ಟು ಜನರ ಅಭಿವೃದ್ಧಿಗೆ ಸಹಸ್ರ, ಸಹಸ್ರ ಕೋಟಿ ಅನುದಾನ ಬಿಡುಗಡೆಯಾಗಿದೆ. ಮೀಸಲಾತಿ ಜಾರಿಗೊಂಡಿದೆ. ಆದರೆ ಇವ್ಯಾವು ಬುಡಕಟ್ಟು ಜನಾಂಗಗಳನ್ನೇ ತಲುಪಿಲ್ಲ. ಕಟ್ಟಕಡೆಯ ಬುಡ್ಡಕಟ್ಟು ನಿವಾಸಿಗೂ ಮೀಸಲಾತಿ, ಸೌಲಭ್ಯ ದೊರಕಬೇಕು ಎಂದರೇ ಇಂತಹ ವಿಚಾರ ಸಂಕಿರಣ ಹೆಚ್ಚೆಚ್ಚು ನಡೆಯಬೇಕು. ಇಲ್ಲಿ ನಡೆಯುವ ಚಿಂತನ–ಮಂಥನದ ಒಟ್ಟಾರೆ ಸಾರ, ಆಗ್ರಹ ಸರ್ಕಾರಕ್ಕೆ ತಲುಪಿ, ಅನುಷ್ಠಾನಗೊಳ್ಳಬೇಕು’ ಎಂದು ಹೇಳಿದರು.

‘ಹವಾ ನಿಯಂತ್ರಿತ ಕೊಠಡಿಗಳಲ್ಲಿ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಯೋಜನೆ ರೂಪಿಸಿದರೆ ಪ್ರಯೋಜನವಿಲ್ಲ. ಹಾಡಿಗಳಲ್ಲೇ ಅಧಿಕಾರಿಗಳು ವಾಸ್ತವ್ಯವಿದ್ದು, ನೈಜ ಸಮಸ್ಯೆ ಅರಿತುಕೊಂಡು ಸಮರ್ಪಕ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೇ ಬುಡಕಟ್ಟು ಕುಲಕ್ಕೆ ಯೋಜನೆಗಳು ಕಂಟಕವಾಗಲಿವೆ’ ಎಂದರು.

‘ಕೈಗಾರಿಕರಣ, ನಗರಿಕರಣ, ಪಾಶ್ಚ್ಯಾತಿಕರಣ ಜಗತ್ತನ್ನು ನಾಶ ಮಾಡುತ್ತಿವೆ. ಕೈಗಾರಿಕರಣದಿಂದ ಬುಡಕಟ್ಟು ಮೂಲಕ್ಕೆ ಅಪಾಯ ಎದುರಾಗಿದೆ. ವಿಕಾಸದ ಹೆಸರಿನಲ್ಲಿ ಮನುಷ್ಯ ಅಭಿವೃದ್ಧಿಯ ಬದಲು ತನ್ನ ಅವನತಿಯ ಮುನ್ನುಡಿಯನ್ನು ತಾನೇ ಬರೆದುಕೊಳ್ಳುತ್ತಿದ್ದಾನೆ. ಭೂಮಿ ಬುಡಕಟ್ಟು ಜನಾಂಗದ ಹಕ್ಕು. ನಂಬಿಕೆಯ ಸರಳ ಬದುಕು ಅಲ್ಲಿದೆ. ಅವರನ್ನು ಅವರಷ್ಟಕ್ಕೆ ಬಿಡೋಣ. ಸ್ವರ್ಗದಿಂದ ನರಕಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ಕರೆತರೋದೇ ಬೇಡ’ ಎಂದು ಹೇಳಿದರು.

ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಬಿ.ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಪ್ರೊ.ಎಂ.ಆರ್.ಗಂಗಾಧರ್, ನಿವೃತ್ತ ನ್ಯಾಯಾಧೀಶ ಕೆ.ಎಚ್.ಮಲ್ಲೇಶಪ್ಪ, ಸಂಸ್ಥೆಯ ಜಂಟಿ ನಿರ್ದೇಶಕಿ ಪ್ರತಿಭಾ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು