ಇವಿಎಂ ವಿಶ್ವಾಸ ಮೂಡಿಸಿ: ವಾಲಾ

7

ಇವಿಎಂ ವಿಶ್ವಾಸ ಮೂಡಿಸಿ: ವಾಲಾ

Published:
Updated:

ಬೆಂಗಳೂರು: ‘ಹೊಸ ಮತದಾದರ ಪಟ್ಟಿಯಲ್ಲಿ ಕೆಲವರ ಹೆಸರು ಬಿಟ್ಟು ಹೋಗುತ್ತಿರುವುದರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಹೀಗಾಗಿ, ಎರಡೆರಡು ಬಾರಿ ಪಟ್ಟಿ ಪರಿಶೀಲನೆಯಾಗಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದರು.

ಕೇಂದ್ರ ಚುನಾವಣಾ ಆಯೋಗ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಅವರು‌ ಮಾತನಾಡಿದರು. 

‘ಕೆಲವು ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮತ ಯಂತ್ರ (ಇವಿಎಂ)ದಲ್ಲಿ ದೋಷವಿದೆ ಎಂದು ಆರೋಪಿಸುತ್ತಾರೆ. ದೋಷವೆಲ್ಲಿದೆ ತೋರಿಸಿ ಎಂದು ಆಯೋಗದ ಅಧಿಕಾರಿಗಳು ಪ್ರಶ್ನಿಸುತ್ತಾರೆ. ಯಂತ್ರ ದೋಷ ಮುಕ್ತವಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ಮತದಾರರಲ್ಲಿ ವಿಶ್ವಾಸ ಮೂಡಿಸುವ ಅಗತ್ಯವಿದೆ’ ಎಂದರು. 

‘ರಾಜ್ಯದಲ್ಲಿ 5 ಕೋಟಿ ಮತದಾರರಿದ್ದಾರೆ. ಜನವರಿ 1ಕ್ಕೆ 12 ಲಕ್ಷ ಹೊಸ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋದವರನ್ನು ಹುಡಿಕಿ, ಕೂಲಂಕುಷವಾಗಿ ಪರಿಶೀಲಿಸಿ, ಹೆಸರು ಸೇರ್ಪಡೆಯಾಗುವಂತೆ ಮತ್ತು ಎಚ್ಚರಿಕೆಯಿಂದ ಪಟ್ಟಿ ತಯಾರಾಗಲು ಕ್ರಮಕೈಗೊಳ್ಳುವುದು ಆಯೋಗದ ಜವಾಬ್ದಾರಿ’ ಎಂದು ಹೇಳಿದರು.

‘ಯಾರಿಗೆ ಮತ ಹಾಕುತ್ತಿದ್ದೇವೆ ಎಂಬುದರ ಬಗ್ಗೆ ಎಚ್ಚರವಹಿಸಿ. ಮತ ಪಡೆಯಲು ಯಾರೂ ಸೂಕ್ತ ವ್ಯಕ್ತಿಗಳಲ್ಲ ಅನ್ನಿಸಿದಾಗ ‘ನೋಟಾ’ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ರಾಷ್ಟ್ರದ ಬಲಿಷ್ಠತೆಗಾಗಿ ಎಲ್ಲರೂ ಮತದಾನ ಸೇವೆ ಮಾಡಬೇಕು’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಚುನಾವಣೆ ಕುರಿತ ರಾಜ್ಯ ಮಟ್ಟದ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘1950ಕ್ಕೆ ಕರೆ ಮಾಡಿ’

‘ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಮತ್ತು ವಿವರ ಸರಿಯಾಗಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು 1950 ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ತಿಳಿದುಕೊಳ್ಳಬಹುದು. ಅಲ್ಲದೇ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್‍ಗೂ ಭೇಟಿ ನೀಡಬಹುದು’ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಅಜಯ್ ನಾಗಭೂಷಣ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !