ನಗರದಲ್ಲಿ ಧ್ವನಿಸಿದ ‘ಯುವ’ ವಿವೇಕವಾಣಿ

7
ಸ್ವಾಮಿ ವಿವೇಕಾನಂದ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ಯುವ ದಿನ ಆಚರಣೆ

ನಗರದಲ್ಲಿ ಧ್ವನಿಸಿದ ‘ಯುವ’ ವಿವೇಕವಾಣಿ

Published:
Updated:
Prajavani

ಬೆಂಗಳೂರು: ನಗರದಲ್ಲಿ ಶನಿವಾರ ಹಲವೆಡೆ ವಿವೇಕರ ವಾಣಿಗಳು ಪ್ರತಿಧ್ವನಿಸಿದವು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವೇಷಭೂಷಣಗಳನ್ನು ತೊಟ್ಟು ಜಾಥಾಗಳಲ್ಲಿ ಭಾಗವಹಿಸಿದ್ದರು. ಬಾಲ ನರೇಂದ್ರನು, ಅಧ್ಯಾತ್ಮ ಜೀವಿಯಾಗಿ ವೈಚಾರಿಕತೆಯನ್ನು ಜಗಕೆ ಸಾರಿದ ಇತಿಹಾಸವನ್ನು ನೆನಪಿಸಿಕೊಂಡರು.

ಈ ಎಲ್ಲಕ್ಕೂ ಸ್ವಾಮಿ ವಿವೇಕಾನಂದ ಅವರ 156ನೇ ಜನ್ಮವರ್ಷದ ಪ್ರಯುಕ್ತ ನಗರದ ಹಲವೆಡೆ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ದಿನ’ ಕಾರಣವಾಗಿತ್ತು.

ಹಲಸೂರಿನಲ್ಲಿನ ರಾಮಕೃಷ್ಣ ಮಠವು ಹಲಸೂರು ಕೆರೆಯಿಂದ ಮಠದ ಆವರಣದ ವರೆಗೆ ಜಾಥಾ ಆಯೋಜಿಸಿತ್ತು. ವಿವೇಕಾನಂದರ ಬೃಹತ್‌ ಪಟದೊಂದಿಗೆ ನೂರಾರು ಮಕ್ಕಳು ಕಾಲ್ನಡಿಗೆಯ ಜಾಥಾದಲ್ಲಿ ಭಾಗವಹಿಸಿದ್ದರು. ಆಗ ಧ್ವನಿವರ್ಧಕದಲ್ಲಿ ವಿವೇಕರ ಸಂದೇಶಗಳು ಮೊಳಗಿದವು. 

ಮಠದ ಆವರಣದಲ್ಲಿನ ವಿವೇಕಾನಂದರ ಬೃಹತ್‌ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಯಿತು. ಮಕ್ಕಳು ವೇದ ಪಠಣ, ವಿಶೇಷ ಪ್ರಾರ್ಥನೆ, ಭಾಷಣಗಳನ್ನು ಪ್ರಸ್ತುತಪಡಿಸಿದರು. ಅತಿಥಿಗಳು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. 

ವಿದ್ಯಾಪೀಠದ ವಿವೇಕಾನಂದ ಕಲಾ ಕೇಂದ್ರವು ಬಸವನಗುಡಿಯ ಬಂಡೆ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯಕಲಾವಿದೆ ಶ್ವೇತಾ ಹರ್ಷ ನರೇಂದ್ರರ ಬಾಲ್ಯ ಮತ್ತು ಬದುಕಿನ ಸಾಧನೆಗಳನ್ನು ಪ್ರಸ್ತುತಪಡಿಸಿದರು. ಮಾಸ್ಟರ್‌ ದೈವಿಕ್‌ ವಿವೇಕಾನಂದರ ವಾಣಿಗಳನ್ನು ವಾಚಿಸಿದರು. 

ಪದ್ಮನಾಭನಗರದ ಅಕ್ಷಯ ಸೇವಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಶೋಭಾ ಆಂಜನಪ್ಪ ವಿವೇಕಾನಂದರ ಜೀವನ ಕುರಿತ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದರು. ಇದೇ ವೇಳೆ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. 

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಉನ್ನತಿ ಹೀಲಿಂಗ್‌ ಫೌಂಡೇಷನ್‌ ವತಿಯಿಂದ ಕೆ.ಆರ್‌.ರಸ್ತೆಯ ವೈದ್ಯಕೀಯ ಕಾಲೇಜಿನಲ್ಲಿಯೂ ವಿವೇಕಾನಂದ ಜಯಂತಿ ಆಚರಿಸಲಾಯಿತು. ನಗರದಲ್ಲಿನ ಹಲವಾರು ಯುವಜನ ಸಂಘಗಳು  ವಿವೇಕಾನಂದ ಅವರ ಭಾವಚಿತ್ರಕ್ಕೆ ಪುಷ್ಪಾಲಂಕಾರ ಮಾಡಿ, ಅವರ ವಿಚಾರಗಳನ್ನು ವಿನಿಮಯ ಮಾಡಿಕೊಂಡರು.

ನಗರದ ಶಾಲಾ–ಕಾಲೇಜುಗಳಲ್ಲಿಯೂ ಯುವ ದಿನ ಆಚರಿಸಲಾಯಿತು. ಈ ಪ್ರಯುಕ್ತ ಪ್ರಬಂಧ ರಚನೆ, ಭಾಷಣ, ರೂಪಕ ಪ್ರದರ್ಶನ, ಚರ್ಚಾಗೋಷ್ಠಿ, ಪಾತ್ರಾಭಿನಯ ಸ್ಪರ್ಧೆಗಳನ್ನು ಹಲವಾರು ವಿದ್ಯಾಸಂಸ್ಥೆಗಳಲ್ಲಿ ಆಯೋಜಿಸಲಾಗಿತ್ತು. ವಿಶೇಷ ಉಪನ್ಯಾಸಗಳು, ಯೋಗಾಸನ ಪ್ರದರ್ಶನ ಮತ್ತು ಯುವಜನೋತ್ಸವಗಳು ಸಹ ಕೆಲವು ಕಡೆ ನಡೆದವು. ಈ ವಿಶೇಷ ದಿನದ ಪ್ರಯುಕ್ತ ವಿವೇಕಾನಂದರ ಸಂದೇಶಗಳನ್ನು ಸಾವಿರಾರು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.

ನಮ್ಮ ಮಲ್ಲೇಶ್ವರ ಸಮೂಹ, ಡಿಸ್ಕವರಿ ವಿಲೇಜ್‌ ಮತ್ತು ಅಶ್ವಥ್‌ನಾರಾಯಣ ಪ್ರತಿಷ್ಠಾನದ ವತಿಯಿಂದ ಚೌಡಯ್ಯ ಸ್ಮಾರಕ ಭವನದಲ್ಲಿ ಯುವ ದಿನದ ಪ್ರಯುಕ್ತ ‘ಯೂತ್‌ ಎಡ್ಜ್‌ 2019’ ಉಪನ್ಯಾಸಗಳು ನಡೆದವು. ವ್ಯಕ್ತಿತ್ವ ವಿಕಸನದ ಕುರಿತು ಪ್ಯಾರಾ ಅಥ್ಲೀಟ್‌ ಕೆ.ಮಾಲತಿ ಹೊಳ್ಳ, ಇಯಾನ್‌ ಫಾರಿಯಾ, ಬಿ.ಎಸ್‌.ಶಾಂತರಾಜು ಅವರು ಯುವ ಸಮೂಹಕ್ಕೆ ಮಾರ್ಗದರ್ಶನ ಮಾಡಿದರು.

1,000 ವಿದ್ಯಾರ್ಥಿಗಳಿಂದ ಜಾಥಾ
ಬಸವನಗುಡಿಯ ರಾಮಕೃಷ್ಣ ಮಠವು ಬೆಳಿಗ್ಗೆ 8 ಗಂಟೆಗೆ ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ಸುಮಾರು 1,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಗುರುರಾಜ ಕರಜಗಿ ಅವರು ವಿವೇಕಾನಂದರ ನೈತಿಕ ಮತ್ತು ಅಧ್ಯಾತ್ಮಿಕ ಆಲೋಚನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮಠದ ವಸತಿ ನಿಲಯದ ವಿದ್ಯಾರ್ಥಿಗಳು ಕರಾಟೆ ಪ್ರದರ್ಶನ ಮಾಡಿದರೆ, ಗೋಕುಲ ಸಂಗೀತ ಅಕಾಡೆಮಿಯ ಕಲಿಕಾರ್ಥಿಗಳು ಸಂಗೀತ ಸುಧೆ ಉಣಬಡಿಸಿದರು.


ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಯೋಗದಲ್ಲಿ ಪಾಲ್ಗೊಂಡ ಜನ

ನಮೋಥಾನ್ ಮೂಲಕ ವಿವೇಕ ಜಯಂತಿ
ಬೆಂಗಳೂರು:
ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶನಿವಾರ 'ನಮೋಥಾನ್-ರನ್ ಫಾರ್ ನರೇಂದ್ರ ಮ್ಯಾರಥಾನ್‌' ಆಯೋಜಿಸಲಾಗಿತ್ತು.

‘ನಮೋ ಭಾರತ’ದ ವತಿಯಿಂದ ಆಯೋಜಿಸಿದ್ದ ಸೈಕ್ಲಾಥಾನ್‌, ಮ್ಯಾರಥಾನ್‌, ವಾಕಥಾನ್‌ಗೆ ಅದಮ್ಯ ಚೇತನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ತೇಜಸ್ವಿನಿ ಅನಂತಕುಮಾರ ಅವರು ಚಾಲನೆ ನೀಡಿದರು.

‘ತ್ರಿನೇತ್ರ ಯೋಗ ಸಂಸ್ಥೆ’ ಹಾಗೂ ‘ಏಷ್ಯಾ ಫೆಸಿಪಿಕ್‌ ಸಂಸ್ಥೆ’ಯ ನೇತೃತ್ವದಲ್ಲಿ ಮ್ಯಾರಥಾನ್‌ಗೂ ಮುನ್ನ ಗ್ರ್ಯಾಂಡ್ ಮಾಸ್ಟರ್‌ನ ಸಂಸ್ಥಾ‍ಪಕ ಪಿಯೂಷ್ ಗೋಯೆಲ್‌ ಅವರಿಂದ ಪವರ್ ಯೋಗ 15 ನಿಮಿಷಗಳ ಕಾಲ ನಡೆಯಿತು.

ನ್ಯಾಷನಲ್‌ ಕಾಲೇಜು ಮೈದಾನದಿಂದ ಬೆಳಿಗ್ಗೆ 6.30ಕ್ಕೆ ಆರಂಭವಾಗಿ ಠಾಕೂರ್‌ ರಸ್ತೆ, ಬುಲ್‌ ಟೆಂ‍ಪಲ್‌ ರಸ್ತೆ, ವಿವೇಕಾನಂದ ಆಶ್ರಮ, ಶಂಕರ ಮಠ, ಉಮಾ ಚಿತ್ರಮಂದಿರ, ಕುವೆಂಪು ರಸ್ತೆಯ ಮೂಲಕ ಸಾಗಿದ ಮ್ಯಾರಥಾನ್‌, ಸೈಕ್ಲಾಥಾನ್‌, ವಾಕಥಾನ್‌ ಒಂದು ಗಂಟೆಯ ಬಳಿಕ ಮತ್ತೆ ಕ್ರೀಡಾಂಗಣಕ್ಕೆ ಬಂದು ತಲುಪಿತು.

'ದೇಶಕ್ಕಾಗಿ ಮೋದಿ ಹಾಗೂ ‘ಮೋದಿಗಾಗಿ ನಾವು' ಎಂಬ ಘೋಷವಾಕ್ಯಗಳನ್ನು ಕೂಗಲಾಯಿತು. ಮುಂಜಾನೆಯ ಚಳಿಯಲ್ಲೂ ನೂರಾರು ಮಂದಿ ಭಾಗವಹಿಸಿದ್ದರು. ಓಟದಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ನಾಗರಿಕರೂ ಉತ್ಸಾಹದಿಂದ ಭಾಗವಹಿಸಿದರು. ಮ್ಯಾರಥಾನ್‌ ಸ್ಪರ್ಧಿಗಳಿಗೆ 5 ಕಿ.ಮೀ ಓಡುವ ಗುರಿ ನಿಗದಿಪಡಿಸಲಾಗಿತ್ತು. ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಟಿ.ಶರ್ಟ್, ಹೆಡ್ ಬ್ಯಾಂಡ್ ನೀಡಲಾಯಿತು. ವಿಜೇತರಿಗೆ ಫಿನಿಷರ್ ಮೆಡಲ್, ಪ್ರಶಸ್ತಿ ಪತ್ರ ವಿತರಿಸಲಾಯಿತು.

ನ್ಯೂ ಹೊರೈಜಾನ್ ವಿದ್ಯಾ ಸಂಸ್ಥೆಗಳ ಮುಖ್ಯಸ್ಥ ಮೋಹನ್ ಮಂಗ್ನಾನಿ, ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಅಜನಿಶ್ ಲೋಕನಾಥ್, ನಮೋ ಭಾರತ ಅಧ್ಯಕ್ಷ ಜೇತನ್‌ ಅಜಾದ್‌ ‌‌ಇದ್ದರು.


ಆರ್‌.ವಿ.ಟೀಚರ್ಸ್‌ ಕಾಲೇಜು ಮತ್ತು ಸಮರ್ಥ ಭಾರತ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ 'ರಾಷ್ಟ್ರೀಯ ಯುವ ದಿನಾಚರಣೆ'ಯಲ್ಲಿ ಚಿತ್ರನಟಿ ತಾರಾ ಅನುರಾಧಾ ಅವರು ವಿದ್ಯಾರ್ಥಿನಿಯರಿಗೆ ‘ವಿವೇಕ್‌ ಬ್ಯಾಂಡ್’ ತೊಡಿಸಿದರು. ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ.ಜಯಪ್ರಕಾಶ್(ಎಡದಿಂದ) ಮತ್ತು ಕಾಲೇಜಿನ ಪ್ರಾಧ್ಯಾಪಕ ಎಂ.ವಿನೋದ್ ಕುಮಾರ್ ಇದ್ದರು. –ಪ್ರಜಾವಾಣಿ ಚಿತ್ರ

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !