ಅಲಂಕಾರವೂ ಪರಿಸರ ಸ್ನೇಹಿಯಾಗಿರಲಿ...

7

ಅಲಂಕಾರವೂ ಪರಿಸರ ಸ್ನೇಹಿಯಾಗಿರಲಿ...

Published:
Updated:
Deccan Herald

ಗಣೇಶ ಚತುರ್ಥಿ ಆಚರಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಮನೆಗಳಲ್ಲಿ–ಓಣಿಗಳಲ್ಲಿ ಪಿಓಪಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ. ಪ್ಲಾಸ್ಟಿಕ್‌ ಆಲಂಕಾರಿಕ ವಸ್ತುಗಳು ಬೆನಕನ ಹೊಳಪನ್ನು ಹೆಚ್ಚಿಸಲಿವೆ. ಆದರೆ, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಾದ ಇಂತಹ ಮೂರ್ತಿಗಳು, ಪ್ಲಾಸ್ಟಿಕ್‌ ಆಲಂಕಾರಿಕ ವಸ್ತುಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಈ ನಿಟ್ಟಿನಲ್ಲಿ, ಶಾಲಾ–ಕಾಲೇಜು ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ‘ಪರಿಸರ ಸ್ನೇಹಿ ಆಚರಣೆ’ ಕುರಿತು ಜಾಗೃತಿ ಮೂಡಿಸುತ್ತಿದೆ ಪ್ರಯಾಸ್‌ ಟ್ರಸ್ಟ್‌. 

ವೈದ್ಯರು, ವಕೀಲರು, ಎಂಜಿನಿಯರುಗಳು ಸೇರಿದಂತೆ ಸಮಾನ ಮನಸ್ಕ ಸದಸ್ಯರು ಸೇರಿ ರಚಿಸಿಕೊಂಡಿರುವ ಈ ಟ್ರಸ್ಟ್‌, ಶಾಲಾ–ಕಾಲೇಜುಗಳಿಗೆ ತೆರಳಿ ಪ್ರಾತ್ಯಕ್ಷಿಕೆ ನೀಡುತ್ತಿದೆ. ವಿನಯ್ ಎಸ್. ಜಕಾತಿ ಸಾರಥ್ಯದಲ್ಲಿ ನಿತೀನ್ ರಾಜ್ ನಾಯಕ್, ರಾವುತ್ ಉಮದಿ, ಸುನೀಲ್ ಪೂಜಾರಿ, ನಾರಾಯಣ ಜಹಾಗೀರದಾರ್ ಮತ್ತು ಡಾ.ಭಾಗ್ಯಲಕ್ಷ್ಮೀ ಜಕಾತಿ ಮತ್ತಿತರ ತಂಡ ಮೂರು ವರ್ಷಗಳಿಂದ ಈ ಕಾರ್ಯ ಮಾಡುತ್ತಿದೆ. 

‘ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸಿದರೆ, ಅವರು ಪೋಷಕರ ಮನವೊಲಿಸುತ್ತಾರೆ. ಮಣ್ಣಿನ ಮೂರ್ತಿಗಳನ್ನು ತರಲು ಒತ್ತಾಯಿಸುತ್ತಾರೆ. ಈ ನಿಟ್ಟಿನಲ್ಲಿ ಮೊದಲು, ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬಕೆಟಿನಲ್ಲಿ ನೀರು ತೆಗೆದುಕೊಂಡು ಹೋಗುತ್ತೇವೆ. ಅದರಲ್ಲಿ ಮಣ್ಣು ಹಾಕುತ್ತೇವೆ. ನಂತರ, ಬಣ್ಣಗಳನ್ನು ಹಾಕುತ್ತೇವೆ. ಇಂತಹ ನೀರನ್ನು ಕುಡಿಯಲು ಸಾಧ್ಯವೇ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸುತ್ತೇವೆ. ಕೊನೆಗೆ, ಇದನ್ನೇ ಗಣೇಶಮೂರ್ತಿಗೆ ಅನ್ವಯಿಸುತ್ತೇವೆ’ ಎಂದು ವಿನಯ ಜಕಾತಿ ಹೇಳುತ್ತಾರೆ. 

ಪ್ಲಾಸ್ಟಿಕ್‌ ವಿರುದ್ಧ ಜಾಗೃತಿ

ಕೆಲವರು ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರೂ, ಅದನ್ನು ಪ್ಲಾಸ್ಟಿಕ್‌ ವಸ್ತುಗಳಿಂದ ಅಲಂಕರಿಸಿರುತ್ತಾರೆ. ಹಾರ, ಹೂವು, ಎಲೆಗಳು, ಚಕ್ರ ಮಾತ್ರವಲ್ಲದೆ ಊದಿನಕಡ್ಡಿ ಸ್ಟ್ಯಾಂಡ್‌ ಕೂಡ ಪ್ಲಾಸ್ಟಿಕ್‌ನದ್ದಾಗಿರುತ್ತದೆ. ಇದರ ಬದಲಾಗಿ, ಕಟ್ಟಿಗೆಯನ್ನು, ಮಾವಿನ ಎಲೆಗಳು, ಹೂವುಗಳನ್ನೇ ಬಳಸುವಂತೆ ಈ ತಂಡ ಅರಿವು ಮೂಡಿಸುತ್ತಿದೆ. 

‘ಆಲಂಕಾರಿಕ ವಸ್ತುಗಳೂ ಪರಿಸರ ಸ್ನೇಹಿಯಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದೇವೆ. ಅಲ್ಲದೆ, ಮನೆಯ ಸುತ್ತ–ಮುತ್ತ ಈ ಕುರಿತು ಕರಪತ್ರಗಳನ್ನು ವಿತರಿಸಿದ್ದೇವೆ’ ಎಂದು ಜಕಾತಿ ಹೇಳಿದರು. 

ಹೀಗೆ, ಪ್ರಾತ್ಯಕ್ಷಿಕೆ ನೀಡುತ್ತೇವೆ ಎಂದು ಕೇಳಿಕೊಂಡಾಗ ಕೆಲವರು ಅನುಮತಿ ನೀಡಿದರೆ, ಕೆಲವು ಶಾಲೆಗಳು ನಿರಾಕರಿಸುತ್ತವೆ. ನಾವೇ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳುತ್ತಾರೆ. ಯಾರು ಅವಕಾಶ ನೀಡುತ್ತಾರೋ, ಅಲ್ಲಿ ಪ್ರಾತ್ಯಕ್ಷಿಕೆ ನೀಡಿ ಬರುತ್ತೇವೆ ಎಂದು ಅವರು ಹೇಳಿದರು. 

ಪರಿಸರ ಉತ್ತಮವಾಗಿದ್ದರೆ ರೋಗಗಳು ಹರಡುವುದಿಲ್ಲ. ಈ ಬಗ್ಗೆ ಅರಿವು ಮೂಡಬೇಕೆಂದರೆ ಶಿಕ್ಷಣ ಅವಶ್ಯ. ಈ ನಿಟ್ಟಿನಲ್ಲಿ ಪರಿಸರ, ಆರೋಗ್ಯ ಮತ್ತು ಶಿಕ್ಷಣವನ್ನು ಕೇಂದ್ರವಾಗಿಟ್ಟುಕೊಂಡು ಪ್ರಯಾಸ್‌ ಟ್ರಸ್ಟ್‌ ಕೆಲಸ ಮಾಡುತ್ತಿದೆ. ರಾಜಾಜಿನಗರದಲ್ಲಿರುವ ಈ ಟ್ರಸ್ಟ್‌, ಮಣ್ಣಿನ ಮೂರ್ತಿಗಳನ್ನು ತಯಾರಿಸಿ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. 

ಆಸಕ್ತರು, ಪ್ರಯಾಸ್ ಟ್ರಸ್ಟ್  ಫೇಸ್‌ಬುಕ್ ವಿಳಾಸ: www.facebook.com/prayaastrust ಅಥವಾ ವಿನಯ್‌ ಜಕಾತಿ ಮೊಬೈಲ್ ಸಂಖ್ಯೆ 9986043792ಗೆ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !