ನವರಾತ್ರಿ: ಶಕ್ತಿ ಶಾರದೆಯ ಮೇಳ

7

ನವರಾತ್ರಿ: ಶಕ್ತಿ ಶಾರದೆಯ ಮೇಳ

Published:
Updated:
Deccan Herald

ನವರಾತ್ರಿ ದೊಡ್ಡ ಹಬ್ಬ. ಹತ್ತು ದಿನಗಳ ಸಂಭ್ರಮದ ಈ ಹಬ್ಬ ರಾಷ್ಟ್ರದಲ್ಲಿ ಎಲ್ಲೆಡೆಯೂ ಬೇರೆ ಬೇರೆ ಆಚರಣೆಗಳ ಮೂಲಕ ಆಚರಿಸಲ್ಪಡುತ್ತದೆ. ದಕ್ಷಿಣದಲ್ಲಿ ದೀಪಾರಾಧನೆಯ ಮೂಲಕ ದೇವಿಯನ್ನು ಆರಾಧಿಸಿದರೆ, ಪಶ್ಚಿಮ ಬಂಗಾಳದಲ್ಲಿ ದೇವಿಯ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಶಕ್ತಿಯ ಆರಾಧನೆಯು ಭಾರತೀಯ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. 

 ತನ್ನ ಮಡಿಲ ಮಕ್ಕಳ ರಕ್ಷಣೆಗಾಗಿ ನಿಂತ ಶಕ್ತಿಯನ್ನು ನವರೂಪಗಳಲ್ಲಿ ನವರಾತ್ರಿಯಲ್ಲಿ ಆರಾಧಿಸುತ್ತೇವೆ. ನಮ್ಮ ಒಳಗಿನ ಹಾಗೂ ಹೊರಗಿನ ಆಸುರಿಶಕ್ತಿಯನ್ನು ನಾಶ ಮಾಡಲು ನಾವು ಕಂಡುಕೊಂಡ ಬಗೆಯೂ ಇದಾಗಿರಬಹುದು. ಮಾತೃಸಂಸ್ಕೃತಿ, ಮಾತೃ ಆರಾಧನೆ ಭಾರತೀಯ ಸಂಸ್ಕೃತಿಯ ಒಂದು ವಿಶೇಷ ಅಂಗವಾಗಿದೆ. ಶ್ರಾವಣ–ಆಷಾಢದ ಮಳೆಯಿಂದ ತೊಯ್ದು ಮತ್ತೆ ಚಿಗುರಿ ಹಸನಾದ, ನಳನಳಸಿ ಹೊಸಬಟ್ಟೆವುಟ್ಟಂತೆ ಕಾಣುವ ಪ್ರಕೃತಿಯ ಈ ಹೊತ್ತೇ ಅವಳ ಕೌಮಾರ್ಯದ ಹೊತ್ತೆಂದು ಪರಿಗಣಿಸಿ ಅವಳನ್ನು ಆರಾಧಿಸುವಂತೆ ಕಾಣುವ ಶಕ್ತಿ ಆರಾಧನೆಗೆ ಮೀಸಲಾದ ನಾಲ್ಕು ನವರಾತ್ರಿಗಳಿವೆ; ವಸಂತನವರಾತ್ರಿ, ಆಷಾಢ ನವರಾತ್ರಿ, ನಾವು ದೇಶಾದ್ಯಂತ ಆಚರಿಸುವ ಶರನ್ನವರಾತ್ರಿ, ಅಪರೂಪವಾದರೂ ಕರ್ನಾಟಕ ಮಹಾರಾಷ್ಟ್ರದ ಕೆಲವೆಡೆ ಆಚರಿಸುವ ಮಾಘನವರಾತ್ರಿ. 

ಒಂಬತ್ತು ದಿನಗಳಲ್ಲಿ ದುರ್ಗೆ, ಲಕ್ಷ್ಮೀ ಮತ್ತು ಸರಸ್ವತಿಯರು ಪೂಜೆಗೊಳ್ಳುತ್ತಾರೆ. ವಿದ್ಯೆ, ಸಂಪತ್ತು ಮತ್ತು ಅವುಗಳನ್ನು ಪಡೆಯಲು, ಉಳಿಸಿಕೊಳ್ಳಲು ಬೆಳೆಸಿಕೊಳ್ಳಲು ಅಗತ್ಯವಾದುದು ಶಕ್ತಿಯ ಪೂಜೆ. ಹಬ್ಬಗಳನ್ನು ಆಚರಿಸುವುದು ಕೇವಲ ಸಂತಸ, ಊಟ, ಉಡುಗೆ, ವೈಭವದ ಕಾರಣಕ್ಕಷ್ಟೇ ಅಲ್ಲ. ಒಂದರ್ಥದಲ್ಲಿ ಹಬ್ಬಗಳು ನಿತ್ಯದ ಅನಿವಾರ್ಯ ಬದುಕಿನ ನಡುವೆಯೇ, ಕಾಣದ ದಡದೆಡೆಗೆ ನಡೆಯುವ ಹೆಜ್ಜೆಗಳು. ಹೆಜ್ಜೆಗಳು ಸೋಲದಂತೇ, ಭಾರವಾಗದಂತೆ ಸಂತಸ ತುಂಬುತ್ತಾ ದೂರದ ಅಲೌಕಿಕವನ್ನು ಇಲ್ಲೇ ಲೌಕಿಕದಲ್ಲಿ ತೋರುವುದೇ ಈ ಆಚರಣೆಗಳ ಕೆಲಸ. ಭಾರತೀಯ ಆಚರಣೆಗಳು ಹೆಚ್ಚು ಮಾನಸಿಕ ಯಾತ್ರೆಯವು. ಬಾಹ್ಯ ಆಚರಣೆಗಳೇನಿದ್ದರೂ ವಾಸ್ತವದ ಬದುಕನ್ನು ತಿರಸ್ಕರಿಸದಿರುವುದಕ್ಕೆ ನಡೆಸಿಕೊಂಡು ಹೋಗುವ ವಿಧಿಗಳಷ್ಟೇ. ನವರಾತ್ರಿಯಲ್ಲಿಯೇ ಕನ್ನಿಕಾಪೂಜೆ, ಆಯುಧಪೂಜೆ, ಲಕ್ಷ್ಮೀಪೂಜೆ, ಸರಸ್ವತೀಪೂಜೆಗಳು ನಡೆಯುವುದು. ಜ್ಞಾನದ ದಾರಿಯಲ್ಲಿ ನಡೆಯಬೇಕಾದ ಪುಟ್ಟಮಕ್ಕಳಿಗೆ ಮೊದಲ ಅಕ್ಷರ ಬರೆಸುವ ಶುಭ ಗಳಿಗೆಯೂ ಈ ನವರಾತ್ರಿಯಲ್ಲಿಯೇ ಬರುವುದು. ಪುಸ್ತಕಗಳನ್ನು ಪೂಜಿಸುವ ಸರಸ್ವತೀಪೂಜೆಯು ಜ್ಞಾನವನ್ನು ಗೌರವಿಸುವ ಆರಾಧಿಸುವ ಪರಂಪರೆಗೆ ಸಂಕೇತವಾಗಿದೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಈ ನಂದಾದೀಪವನ್ನು ಬೆಳಗಿಸುವ ಸಂಪ್ರದಾಯವಿದೆ. ನವರಾತ್ರಿಯಲ್ಲಿ ಆರಾಧನೆಗೊಳಗಾಗುವ ಶಕ್ತಿಸ್ವರೂಪಿಣಿಯರಲ್ಲಿ  ಕಾಳರಾತ್ರಿಯೂ ಒಬ್ಬಳು. ಕಾಲ ಬದಲಾವಣೆಯಾಗುತ್ತಲೇ ಇರುತ್ತದೆ. ಕಾಲಕ್ಕೂ ಶಕ್ತಿಯೇ ಸಾಕ್ಷಿ. ಹರಿದು ಹೋಗುವ ಕಾಲದ ಒಂದೊಂದೇ ಹನಿಯ ಲೆಕ್ಕವನ್ನೂ ಬೆಳಕು ನೀಡುತ್ತಾ ಇರುತ್ತದೆ. ಈ ಬೆಳಕಿನ ಮೂಲವೇ ದೀಪ. ಅಂಥ ದೀಪದಲ್ಲಿ ಕಾಲರಾತ್ರಿ ಮಾಹಾಮಾಯೆಯನ್ನು ಆಹ್ವಾನಿಸಿ ಆರಾಧಿಸುವುದು ನವರಾತ್ರಿಯ ವಿಶೇಷ. ಒಂಬತ್ತು ರಂಧ್ರಗಳುಳ್ಳ ಗುಜರಾತಿನ ಮಣ್ಣಿನ ಮಡಿಕೆಯ ನಂದಾದೀಪದಿಂದ ಹಿಡಿದು ಕೇರಳದ ಆಳೆತ್ತರದ ಕಂಚು–ಹಿತ್ತಾಳೆಯ ದೀಪಗಳಲ್ಲೂ ನಡೆಯುವುದು ಅದೇ ಶಕ್ತಿಯ ಆರಾಧನೆ. ಸೃಷ್ಟಿಯ ಜವಾಬ್ದಾರಿ ಹೊತ್ತ ಹೆಣ್ಣಿಗೆ ಈ ಹೊತ್ತಿನಲ್ಲಿ ಪೂಜೆ. ಹುಟ್ಟಿಗೆ ಕಾರಣಳಾದ ಅವಳನ್ನು ಗೌರವಿಸು, ಆರಾಧಿಸು ಎನ್ನುವ ತಿಳಿವಳಿಕೆಯನ್ನು ನೀಡುತ್ತದೆ ಈ ನವರಾತ್ರಿ. ವಿಜಯದಶಮಿ ಕೊನೆಯ ದಿನ; ಪ್ರತಿಯೊಬ್ಬನಿಗೂ ಅಗತ್ಯವಾದ ವಿಜಯದ ಕಡೆಗೆ ನಮ್ಮನ್ನು ಒಯ್ಯುತ್ತದೆ. ಶಮಿಯನ್ನು ಪೂಜಿಸಿದರೆ ವಿಜಯಪ್ರಾಪ್ತಿಯಾಗುತ್ತದೆಂಬ ನಂಬಿಕೆ ಹಿಂದಿನಿಂದಲೂ ಇದೆ. ಹೀಗೆ ಅಖಂಡ ದೀಪಪ್ರಜ್ವಲನ, ಶ್ರೀದೇವೀಮಾಹಾತ್ಮೆಯ ಪಠಣ, ಸಪ್ತಶತಿಪಾರಾಯಣ, ಲಲಿತಾಪೂಜೆಗಳು ಅವರವರ ಭಾವ–ಆಚರಣೆಗಳಿಗನುಸಾರವಾಗಿ ಪೂಜಿಸಿ ಕೃತಾರ್ಥರಾಗುವ ಸಂಭ್ರಮವನ್ನು ನವರಾತ್ರಿಯ ಉದ್ದಕ್ಕೂ ಕಾಣಬಹುದು.

ಕರ್ನಾಟಕದ ಜಗದ್ವಿಖ್ಯಾತ ದಸರೆ ಆರಂಭವಾಗಿದ್ದು ವಿಜಯನಗರದ ಅರಸರ ಕಾಲದಲ್ಲಿ. ಸಾಮ್ರಾಜ್ಯದ ರಕ್ಷಣೆಗಾಗಿ ಶಕ್ತಿಯನ್ನು ಉಪಾಸನೆ ಮಾಡುತ್ತಾ ಬಂದರೆಂದು ಇತಿಹಾಸ ಹೇಳುತ್ತದೆ. ಅದೇ ಉಪಾಸನೆಯ ದಾರಿಯಲ್ಲಿ ನಡೆದು ಮೈಸೂರು ಅರಸರು ದಸರೆಯನ್ನು ಆರಂಭಿಸಿ, ಈಗ ದಸರೆ ಎಂದರೆ ಮೈಸೂರು ಎಂದಾಗಿದೆ.

ಲಲಿತಕಲೆ, ಜೀವನಕಲೆಯ ರಂಗಮಂಟಪ

ನವರಾತ್ರಿ ಕಲೆಯ ಹಬ್ಬ ಕೂಡ. ಕಲಾತ್ಮಕ ವೈಭವದ ಹಬ್ಬವಿದು. ದೇಶದ ಒಂದೊಂದು ಭಾಗವೂ ಒಂದೊಂದು ರಂಗನ್ನು ಬಳಿದುಕೊಂಡು ಸಂಭ್ರಮಿಸುತ್ತದೆ. ಉತ್ತರದ ರಾಮಲೀಲಾ ಉತ್ಸವ, ಗುಜರಾತಿನ ವರ್ಷವಿಡೀ ಕಾಯುವ ಗರ್ಭಾ ದಾಂಡಿಯಾಗಳು, ಕಲ್ಕತ್ತಾದ ದೊಡ್ಡಕಣ್ಣಿನ ಅಷ್ಟಭುಜಗಳ ಕಾಳೀಮಾತೆಯ ಪೂಜೆ..

ಕರ್ನಾಟಕ ಮತ್ತು ತಮಿಳುನಾಡಲ್ಲೂ ಇರುವ ಬೊಂಬೆ ಕೂರಿಸುವ ಸಂಪ್ರದಾಯ, ಕರಾವಳಿಯ ಹೂವಿನ ಕೋಲು, ವೈಭವದ ಶಾರದಾಪೂಜೆಗಳು, ಉತ್ತರ ಕರ್ನಾಟಕದ ಶಮೀಪೂಜೆ, ನಂದಾದೀಪಗಳು – ಅದೆಷ್ಟು ಕಲಾತ್ಮವಾಗಿರುತ್ತವೆ ಅಲ್ಲವೆ?

‘ಹೂವಿನ ಕೋಲು’ ಯಕ್ಷಗಾನದ ಒಂದು ಪ್ರಕಾರ. ನವರಾತ್ರಿಯಲ್ಲಿ ಒಬ್ಬ ಭಾಗವತ, ಮದ್ದಳೆಗಾರ, ಶ್ರುತಿವಾದಕ ಮತ್ತು ಇಬ್ಬರು ಬಾಲಕರ ತಂಡವೊಂದು ಮನೆ ಮನೆಗೆ ತಿರುಗುತ್ತಾ ಕೆಲವು ಪದ್ಯಗಳನ್ನು ಹಾಡಿ ಚಿಕ್ಕ ತಾಳಮದ್ದಳೆಯನ್ನು ಪ್ರದರ್ಶಿಸುತ್ತಾರೆ. ಈ ಹುಡುಗರ ಕೈಯಲ್ಲಿ ಚೆಂಡು ಹೂಗಳಿಂದ ಸುತ್ತಿದ ಕೋಲು ಇರುತ್ತದೆ. ‘ಹೂವಿನ ಕೋಲು’ ಎಂದು ಹೆಸರಾಗಿದ್ದು ಹೀಗೆ. ಕೊನೆಗೆ ಮನೆಯವರು ಭಾಗವತರಿಗೂ ಹುಡುಗರಿಗೂ ಉಡುಗೊರೆಗಳನ್ನು ನೀಡಿ ಗೌರವಿಸುತ್ತಾರೆ. ನಶಿಸಿ ಹೋಗುವ ಅಂಚಿನಲ್ಲಿರುವ ಪ್ರಕಾರಗಳಿಗೆ ಹೂವಿನ ಕೋಲು ಸದ್ಯದಲ್ಲಿ ಸೇರ್ಪಡೆಯಾದೀತು. ಮರೆಯಾಗುತ್ತಿರುವ ಮಾರ್ನವಮಿ(ಮಹಾನವಮಿ)ಯ ಚೌಪದಿಯೊಂದು ನೆನಪಾಗುತ್ತಿದೆ.

ಆಶ್ವೀಜ ಶುದ್ಧ ಮಾರ್ನವಮಿ ಬರಲೆಂದಶಾಶ್ವತದಿ ಹರಸಿದೆವು ಬಾಲಕರು ಬಂದು |

ಈಶ ನಿಮಗತ್ಯಧಿಕ ಸುಖವ ಕೊಡಲೆಂದು 
ಲೇಸಾಗಿ ಹರಸಿದೆವು ಬಾಲಕರು ಬಂದು ||

ಇದು ಹಾರೈಕೆಗಳ, ಹರಕೆಗಳ ಹಬ್ಬವೂ ಹೌದು. ಇದೇ ಹೊತ್ತಿನಲ್ಲಿ ಕರಾವಳಿಯ ಹಲವು ಕಡೆಗಳಲ್ಲಿ ಹೊಸ್ತು, ಹೊಸ್ತೂಟ, ತುಳುನಾಡಿನ ಕುರಲ್ ಪರ್ಬ(ತೆನೆಹಬ್ಬ)ದ ಸಂಭ್ರಮವೂ ಇದೇ ನವರಾತ್ರಿಯಲ್ಲಿ ನಡೆಯುತ್ತದೆ. ಕಟಾವಿಗೆ ತಯಾರಾದ ಭತ್ತದ ಪೈರನ್ನು ಮನೆ ತುಂಬಿಸಿ ಅದರಕ್ಕಿಯಿಂದ ಸಕ್ಕರೆ, ತೆಂಗಿನ ಹಾಲು ಹಾಗೂ ಅರಿಸಿನದ ಎಲೆ ಹಾಕಿ ಮಾಡಿದ ‘ನವಾನ್ನ’, ಪಾಯಸದ ಅರ್ಪಣೆ ಮತ್ತು ಸೇವನೆಯೂ ನವರಾತ್ರಿಯಲ್ಲಿ ನಡೆಯುತ್ತದೆ.

ರಂಗೋಲಿ, ಹಾಡು, ಪಾರಾಯಣ, ಅಡುಗೆ  – ಹೀಗೆ ಎಲ್ಲ ಕಲಾತ್ಮಕ ಪ್ರಕಾರಗಳಿಗೆ ನವರಾತ್ರಿ ಹಬ್ಬ ವೇದಿಕೆಯಾಗುತ್ತದೆ. ದೇವಿಯನ್ನು ಅಲಂಕರಿಸುವುದೂ ಒಂದು ವಿಶೇಷ ಕೌಶಲವೇ ತಾನೇ! ಕರಾವಳಿ ತೀರದ ದೇವಿಯ ದೇವಸ್ಥಾನಗಳು ನವರಾತ್ರಿಯಲ್ಲಿ ಪಡೆದುಕೊಳ್ಳುವ ಮೆರುಗೇ ಅದ್ಭುತ. ಶೃಂಗೇರಿಯ ಶಾರದೆಯ ವೈಭವ ನೋಡಲು ಎರಡು ಕಣ್ಣು ಸಾಲದು. ಏನೆಲ್ಲ ಭೇದಗಳಿದ್ದರೂ ದೇವಿಯ, ಅಮ್ಮನ ಸಾನ್ನಿಧ್ಯದಲ್ಲಿ ಅವೆಲ್ಲವೂ ಮರೆಯಾಗಿ ಬಿಡುತ್ತವೆ. ಮನುಷ್ಯ ಬಯಕೆಗಳಿಂದ ಪೀಡಿತನಾದವನು. ತಾಯಿಯೋ  ಸದಾ ಅಭಯಹಸ್ತೆ; ಮಗುವಿನ ಆಸೆ, ಆಕಾಂಕ್ಷೆಗಳನ್ನು ಪೂರೈಸುವವಳು. ಶರಣಾಗತಿ ಹೊಂದಿದಷ್ಟು ಹೆಚ್ಚು ವಾತ್ಸಲ್ಯವನ್ನು ಹರಿಸುವವಳು. ಹೀಗೆ ನವರಾತ್ರಿ, ಆರಾಧಿಸುವ, ಪ್ರಾರ್ಥಿಸುವ, ಪಡೆದುಕೊಳ್ಳುವ, ಮತ್ತೆ ಮತ್ತೆ ಪ್ರಾರ್ಥಿಸುತ್ತಲೇ ಇರುವ ಸಂತಸದ ಹಬ್ಬವಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !