ನೀಲಿ ನರಿ

ಬುಧವಾರ, ಏಪ್ರಿಲ್ 24, 2019
31 °C

ನೀಲಿ ನರಿ

Published:
Updated:
Prajavani

ನರಿಯು ಒಂದು ಬೇಟೆಯರಸಿ
ಕಾಡಲಲೆಯಿತು
ಬೇಟೆ ಸಿಗದೆ ಒಂದು ಊರ
ದಾರಿ ಹಿಡಿಯಿತು

ಬೀದಿ ನಾಯಿ ಇದನು ಕಂಡು
ತಾನು ಬೊಗಳಿತು
ತನ್ನ ಬಳಗವೆಲ್ಲ ಕರೆದು
ದಾಳಿ ಮಾಡಿತು

ಸಂದಿಗೊಂದಿ ಓಡಿ ನರಿಯು
ದಣಿದು ಬಿಟ್ಟಿತು
ನಾಯಿ ಬಳಗ ಬೆನ್ನ ಹಿಂದೆ
ಬಂದು ಬಿಟ್ಟಿತು

ಅಂದು ಹೋಳಿ ಬಣ್ಣದಾಟ
ಜಗಕೆ ಸಡಗರ
ನರಿಗೆ ಬಿಡದ ಪೀಕಲಾಟ
ಎಲ್ಲ ಮುಜುಗರ 

ಕೊಳಗ ತುಂಬ ಬಣ್ಣ ತುಂಬಿ
ಎಲ್ಲ ಇಟ್ಟರು
ಕಾಮದಹನದೆಡೆಗೆ ತಮ್ಮ
ದೃಷ್ಟಿ ನೆಟ್ಟರು

ಜಾಗ ಸಿಗದೆ ನರಿಯು ಓಡಿ
ಬಂದು ಬಿಟ್ಟಿತು
ನೀಲಿ ಕೊಳಗದೊಳಗೆ ಬಂದು
ಜಿಗಿದು ಬಿಟ್ಟಿತು

ನಾಯಿ ಬಳಗ ಹಿಂದೆ ಬಂದು
ಮುಂದೆ ಓಡಿತು
ನರಿಯು ತನ್ನ ಜೀವ ಉಳಿಯಿ
ತೆಂದು ಬೀಗಿತು

ಜೀವ ಉಳಿದ ಖುಷಿಗೆ ನರಿಯು
ಕಾಡು ಸೇರಿತು
ತಾನೆ ರಾಜನೆಂದು ಹೇಳಿ
ವನದಿ ನಲಿಯಿತು

ನೀಲಿ ಪ್ರಾಣಿ ನೋಡಿ ಸಿಂಹ
ಬೆಚ್ಚಿ ಬಿದ್ದಿತು
ಅದನೆ ರಾಜನೆಂದು ತಾನು
ಒಪ್ಪಿಕೊಂಡಿತು

ಸಿಕ್ಕ ಬೇಟೆ ತಿಂದು ನರಿಯು
ಕೊಬ್ಬಿ ಬಿಟ್ಟಿತು
ತಾನೆ ರಾಜನೆಂಬ ಖುಷಿಗೆ
ಉಬ್ಬಿ ಬಿಟ್ಟಿತು

ಒಂದು ದಿನವು ಮಳೆಯು ಬರಲು
ಬಣ್ಣ ಕರಗಿತು
ಎಲ್ಲ ಪ್ರಾಣಿ ನೋಡಿ ನಗಲು
ನರಿಯು ನಡುಗಿತು

ಬಣ್ಣ ಕಳೆದ ಠಕ್ಕ ನರಿಯ
ಮೋಸ ತಿಳಿಯಿತು
ಒಂದೆ ಬಾರಿ ಜಿಗಿದು ಸಿಂಹ
ಪ್ರಾಣ ತೆಗೆಯಿತು

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !