ಹಳ್ಳದ ಗುಂಟ ನೀರ ನಡಿಗೆ

ಗುರುವಾರ , ಜೂಲೈ 18, 2019
29 °C

ಹಳ್ಳದ ಗುಂಟ ನೀರ ನಡಿಗೆ

Published:
Updated:
Prajavani

ದಕ್ಷಿಣ ಕನ್ನಡ ಜಿಲ್ಲೆಯ ಪಾಣಾಜೆ ಹಾಗೂ ಕಾಸರಗೋಡು ಜಿಲ್ಲೆಯ ಪೆರ್ಲ ಸನಿಹದ ಗ್ರಾಮ ಪಡ್ರೆ. ಮೂರೂವರೆ ಸಾವಿರ ಮಿಲಿಮೀಟರ್ ಮಳೆ ಬೀಳುವ ಜಿಲ್ಲೆಗಳಿವು. ಇಲ್ಲಿನ ‘ಸ್ವರ್ಗ’ ಒಂದು ಕಾಲಘಟ್ಟದಲ್ಲಿ ಜಲಸಮೃದ್ಧಿಯ ಊರು. ಕಾರಣ, ಸದಾ ಹರಿಯುತ್ತಿತ್ತು ‘ಸ್ವರ್ಗ ತೋಡು’ (ತೋಡು ಅಂದರೆ ಹಳ್ಳ). ಊರಿನ ಮಧ್ಯೆ ಏಳೆಂಟು ಕಿಲೋಮೀಟರ್ ಉದ್ದಕ್ಕೂ ಹರಿಯುವ ಈ ಹಳ್ಳ ಗ್ರಾಮದ ಜಲದಾಯಿನಿ. ಬೇಸಿಗೆಯಲ್ಲಿ ಒಂದು ಮಳೆ ಬಂದರೆ ಸಾಕು, ತಕ್ಷಣ ರೀಚಾರ್ಜ್ ಆಗಿ ಹರಿಯುತ್ತಿತ್ತು. ಈಗ ತೋಡು ಮೊದಲ ಬಾರಿಗೆ ಹರಿವು ನಿಲ್ಲಿಸಿದೆ. ನೀರ ನೆಮ್ಮದಿಯ ಖುಷಿಗಳು ಮೌನವಾಗಿವೆ.

‘ಸ್ವರ್ಗ ಗ್ರಾಮ ನೀರಿನ ತೊಟ್ಟಿಲು. ಅಂತಹ ನೀರಿನ ಸ್ವರ್ಗದ ಸುತ್ತ ಎಂಬತ್ತಕ್ಕೂ ಹೆಚ್ಚು ಕೊಳವೆಬಾವಿಗಳಾಗಿವೆ. ನೀರಿನ ಊರಲ್ಲಿ ನೀರಿನ ಸಂಕಟ’ – ತಮ್ಮೂರಿನ ನೀರಿನ ಕತೆಗೆ ಹೀಗೆ ದನಿಯಾಗುತ್ತಾರೆ ನಿವೃತ್ತ ಮುಖ್ಯಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್. ಅಷ್ಟೇ ಅಲ್ಲ, ‘ಈಗ ಜಾಗೃತರಾಗದಿದ್ದರೆ ಭವಿಷ್ಯ ಇನ್ನಷ್ಟು ಕರಾಳವಾಗುತ್ತದೆ. ಹಾಗೆಂದು ಕೊರಗುತ್ತಾ ಕುಳಿತರೆ ಪ್ರಯೋಜನವಿಲ್ಲ. ಎಚ್ಚೆತ್ತುಕೊಳ್ಳಲು ಇದು ಸಕಾಲ’ ಎಂದು ಅವರು ಎಚ್ಚರಿಸುತ್ತಿದ್ದಾರೆ. ಸುತ್ತಲಿನ ಜನರ ಮನದಲ್ಲಿ ‘ಏನಾದರೂ ಮಾಡಬೇಕು’ ಎಂಬ ಸಂಕಲ್ಪವನ್ನೂ ಮೂಡಿಸುತ್ತಿದ್ದಾರೆ. ‘ಈಗಲೇ ಕೆಲಸ ಶುರು ಮಾಡಿದರೆ, ಇನ್ನು ಮೂರೇ ವರ್ಷದಲ್ಲಿ ಸ್ವರ್ಗದ ತೋಡು ಸದಾ ಹರಿಯು ವಂತಾಗುತ್ತದೆ’ ಎಂಬ ಅವರ ವಿಶ್ವಾಸದ ನುಡಿಗಳು ಈಗ ಪಡ್ರೆ ಗ್ರಾಮದಲ್ಲಿ ಸಣ್ಣ ಸಂಚಲನವೊಂದನ್ನು ಸೃಷ್ಟಿಸಿದೆ.

ಅವರು ಆಡಿದ ಈ ಮಾತು ನೀರಿನ ಬವಣೆ ಎದುರಿಸುತ್ತಿದ್ದ ಜನರ ನಡುವೆ ‘ಜಲ ಮಾತುಕತೆ’ಗೆ ಕಾರಣವಾಯಿತು. ಗ್ರಾಮಸ್ಥರು ಸಭೆ ಸೇರುವ ಬದಲು, ಪರಸ್ಪರ ಭೇಟಿ ಮಾಡಲು ಶುರು ಮಾಡಿದರು. ನೀರಿನ ಸ್ಥಿತಿಗತಿಗಳನ್ನು ಅರಿಯುವುದು, ಜಲ ಮರುಪೂರಣದ ಜ್ಞಾನವನ್ನು ಹಬ್ಬಿಸುವುದು, ಜಲಮೂಲದ ಸಂರಕ್ಷಣೆ ಬಗ್ಗೆ ತಿಳಿಸುವ ಪ್ರಕ್ರಿಯೆ ಶುರುವಾಯಿತು. ‘ನಮ್ಮ ನಡಿಗೆ ತೋಡಿನೆಡೆಗೆ’ ಎಂಬ ಅಭಿಯಾನದ ರೂಪ ಪಡೆಯಿತು.

ಅಪ್ಪಯ್ಯ ಮೂಲೆಯಿಂದ ಶುರು

ಸ್ವರ್ಗದಲ್ಲಿ ಹರಿಯುವ ಹಳ್ಳದ ಉಗಮಸ್ಥಾನ ಪಡ್ರೆ ಗ್ರಾಮದ ‘ಅಪ್ಪಯ್ಯಮೂಲೆ’. ಅಲ್ಲಿಂದಲೇ ‘ನಡಿಗೆ’ ಆರಂಭವಾಯಿತು. ಜಲ ಮಾತುಕತೆಗೆ ಜತೆಯಾದವರು ತೋಡಿನ ನಡಿಗೆಯೊಂದಿಗೆ ಹೆಜ್ಜೆ ಹಾಕಿದರು. ಮೊದಲ ನಡಿಗೆಗೆ ಸುಮಾರು ಎಂಟರಿಂದ ಹತ್ತು ಮಂದಿ ಜತೆಯಾದರು. ಹಳ್ಳದುದ್ದಕ್ಕೂ ನಡೆಯುತ್ತಾ, ಹಳ್ಳದ ಸರಹದ್ದಿನಲ್ಲಿ ನೀರಿನ ಮೂಲಗಳ ಸಮೀಕ್ಷೆ ನಡೆಸಿದರು. ಜನರೊಂದಿಗೆ ಮಾತುಕತೆ. ಕೆಲವೆಡೆ ‘ಕಟ್ಟ’ಗಳ ಅವಶೇಷಗಳ ಕುರುಹುಗಳ ಪತ್ತೆ (ಕಟ್ಟ ಎಂದರೆ ಹರಿಯುವ ನೀರಿಗೆ ಅಡ್ಡವಾಗಿ ನಿರ್ಮಿಸುವ ತಾತ್ಕಾಲಿಕ ತಡೆಗೋಡೆ). ಅದಕ್ಕೆ ಮರುಜೀವ ಕೊಡುವ ಚಿಂತನೆಯೂ ನಡೆಯಿತು.

ಹಳ್ಳಕ್ಕೆ ಅಲ್ಲಲ್ಲಿ ಹಾಕುತ್ತಿದ್ದ ಕಟ್ಟಗಳು ನೀರಿನ ತೇವಾಂಶ ಕಾಪಾಡುತ್ತಿದ್ದವು. ಈ ಕುರಿತು ಜನರನ್ನು ಮಾತನಾಡಿಸಿದಾಗ ಕಟ್ಟಗಳು ಮೂಡಿಸಿದ್ದ ನೀರ ನಿಶ್ಚಿಂತೆಯ ಕತೆಗಳು ಬಿಚ್ಚಿಕೊಂಡವು. ಅಷ್ಟೇ ಅಲ್ಲ, ಕಥೆಗಳಿಗೆ ದಾಖಲೆಗಳೂ ಸಿಕ್ಕವು. ಮೂರು ದಿನಗಳು ನಡೆದ ಈ ನಡಿಗೆಗೆ ಬೇರೆ ಬೇರೆ ಗ್ರಾಮಗಳ ನೂರಕ್ಕೂ ಹೆಚ್ಚು ಮಂದಿ ಜತೆಯಾದರು. ನಡಿಗೆಯಲ್ಲಿದ್ದವರಿಗೆ ‘ಕಟ್ಟಗಳನ್ನು ಕಟ್ಟದೆ ನೀರು ಇಂಗಿಸದೇ ನಿರ್ಲಕ್ಷ್ಯ ಮಾಡಿದ್ದೇ ಇವತ್ತಿನ ನೀರಿನ ಸಮಸ್ಯೆಗೆ ಒಂದು ಪ್ರಮುಖ ಕಾರಣ’ ಎನ್ನುವುದು ಮನದಟ್ಟಾಯಿತು. ಪರಿಣಾಮವಾಗಿ ‘ನಾವೂ ಏನಾದ್ರೂ ಮಾಡಲೇಬೇಕು’ ಎನ್ನುವ ಮನಸ್ಥಿತಿ ರೂಪಗೊಂಡಿತು. 

ಜಲಸಂರಕ್ಷಣೆಗೆ ಆ್ಯಕ್ಷನ್ ಪ್ಲಾನ್

ಅಭಿಯಾನದಲ್ಲಿ ನೀರಿನ ಬಗ್ಗೆ ತಿಳಿದ ಹಿರಿಯರು ಕಟ್ಟಗಳ ಮಹತ್ವವನ್ನು ಜನರ ಮುಂದಿಟ್ಟರು. ಮುಂದಿನ ವರ್ಷ ಅಗತ್ಯವಿರುವಲ್ಲೆಲ್ಲ ಕಟ್ಟಗಳನ್ನು ಕಟ್ಟುವ ಭರವಸೆ ನೀಡಿದರು ಗ್ರಾಮಸ್ಥರು. ‘ಈಗ ಸಿಕ್ಕಿರುವ ಭರವಸೆಯಂತೆ ಆದರೆ, ಈ ವರ್ಷದ ಕೊನೆಗೆ ಕನಿಷ್ಠ ಮೂವತ್ತಕ್ಕೂ ಹೆಚ್ಚು ಕಟ್ಟಗಳು ರಚನೆಯಾಗುತ್ತವೆ’ ಎಂದು ಸುಬ್ರಹ್ಮಣ್ಯ ಭಟ್ ವಿಶ್ವಾಸ ವ್ಯಕ್ತಪಡಿಸಿದರು. ಸ್ವರ್ಗದ ಪೊಯ್ಯೆ ಎನ್ನುವಲ್ಲಿ ಮೊದಲು ಮಳೆಗಾಲಕ್ಕೆ ಮುನ್ನ ಹತ್ತಕ್ಕೂ ಹೆಚ್ಚು ಕಟ್ಟಗಳನ್ನು ಕಟ್ಟುತ್ತಿದ್ದರು. ಈಗ ಯುವಕರು ಆ ಕಟ್ಟಗಳ ಪುನರ್ ನಿರ್ಮಾಣಕ್ಕೆ ಉತ್ಸಾಹ ತೋರಿದ್ದಾರೆ. ‘ತೋಡಿನ ನಡಿಗೆ ಅಭಿಯಾನ’ ಅಷ್ಟರಮಟ್ಟಿಗೆ ಯುವಕರಲ್ಲಿ ‘ಜಲಜಾಗೃತಿ’ ಮೂಡಿಸಿದೆ.

ಈ ‘ನಡಿಗೆ’ಯ ನಂತರ ಮೂರು ವರ್ಷದ ಯೋಜನೆ (ಆಕ್ಷನ್‌ ಪ್ಲಾನ್‌)ಸಿದ್ಧವಾಗಿದೆ. ಅವುಗಳಲ್ಲಿ ಸ್ವರ್ಗದ ಹಳ್ಳ ಮತ್ತು ಇದರ ಉಪನದಿಗಳು ಹರಿಯುವ ಪಡ್ಪು-ಪೊಯ್ಯೆ ಎನ್ನುವ ಹಳ್ಳಗಳಲ್ಲಿ ಕಟ್ಟಗಳ ಪುನರುಜ್ಜೀವನ, ತೆರೆದ ಬಾವಿಗಳಲ್ಲಿ ನೀರು ಹೆಚ್ಚಿಸಲು ಬೇಕಾದ ಕೆಲಸಗಳಿಗೆ ಮಾರ್ಗದರ್ಶನ ನೀಡುವುದು. ತಂತಮ್ಮ ಜಮೀನುಗಳಿಂದ ಹೊರ ಹೋಗುವ ನೀರನ್ನು ತಡೆದು ಇಂಗಿಸುವುದು. ಹಳ್ಳದ ಇಕ್ಕೆಲಗಳ ಗುಡ್ಡಗಳಿಂದ ಕೆಳಗಿಳಿಯುವ ಮಳೆ ನೀರನ್ನು ಗುಡ್ಡಗಳ ಮೇಲ್ಭಾಗದಲ್ಲೇ ಇಂಗಿಸುವುದು. ನೀರಾವರಿ ಮತ್ತು ಮನೆ ಕೆಲಸಗಳಲ್ಲಿ ನೀರು ವ್ಯರ್ಥವಾಗದಂತೆ ಎಚ್ಚರ ವಹಿಸುವುದು. ಕೊಳವೆಬಾವಿಗಳಿಗೆ ಜಲಮರುಪೂರಣ ವಿಧಾನ ಅಳವಡಿಸುವುದು. ಗ್ರಾಮದ ಜಲಮೂಲಗಳ ಅಧ್ಯಯನ, ಶಾಲೆಗಳಲ್ಲಿ ಜಲಸಂರಕ್ಷಣೆಯ ಅರಿವು ಮೂಡಿಸುವಂತಹವು ಪ್ಲಾನ್‌ನಲ್ಲಿ ಪ್ರಮುಖವಾಗಿರುವ ಅಂಶಗಳು.

ಸ್ವರ್ಗದ ಹಳ್ಳವನ್ನು ಮತ್ತೆ ಹರಿಸುವ ಗುರಿಯೊಂದಿಗೆ, ಜನರ ಮನದಲ್ಲಿ ನೀರಿನ ಅರಿವನ್ನು ಇಳಿಸಲು ಒಂದು ತಂಡವೇ ಸಿದ್ಧವಾಗುತ್ತಿದೆ. ಈ ಜಲಾಂದೋಲನಕ್ಕೆ ಶ್ರೀಕಾರ ಹಾಕಿದ ಜಲಪತ್ರಕರ್ತ ಶ್ರೀಪಡ್ರೆಯವರು ತಂಡದವರಿಗೆ ಜಲ ಮರುಪೂರಣದ ಕಿವಿಮಾತುಗಳ ಜತೆಗೆ, ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ. ಇದಕ್ಕಾಗಿ ‘ವಾಟ್ಸ್‌ ಆ್ಯಪ್’ ಗುಂಪುಗಳು ಸಕ್ರಿಯವಾಗಿವೆ. ಅದರಲ್ಲಿ ತಂತಮ್ಮ ನೀರಿನ ಸಮಸ್ಯೆ, ತಾವು ಕಂಡುಕೊಂಡ ಪರಿಹಾರ, ಚಿಕ್ಕ ಚಿಕ್ಕ ಮಾದರಿಗಳ ರಚನೆಗಳ ವಿಧಾನಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಅದು ಇತರರಿಗೆ ಪ್ರೇರಣೆಯಾಗುತ್ತಿದೆ. 

ಜಲಪ್ರಿಯರಿಗೆ ತರಬೇತಿ

ಜಲಮರುಪೂರಣ ಮತ್ತು ಮುಂದಿನ ಕಾರ್ಯಯೋಜನೆಗಳ ಅನುಷ್ಠಾನಕ್ಕಾಗಿ ಎರಡು ಪ್ರತ್ಯೇಕ ದಿನಗಳಲ್ಲಿ ತರಬೇತಿಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಈಗಾಗಲೇ ನೀರಿನ ಬಗ್ಗೆ ಪ್ರೀತಿಯುಳ್ಳ ಇಪ್ಪತ್ತೈದಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿದ್ದಾರೆ. ಗ್ರಾಮಮಟ್ಟದಲ್ಲಿ ಇಷ್ಟು ಮಂದಿ ಒಟ್ಟಾಗುತ್ತಿರುವುದು ಸಣ್ಣ ಸಂಗತಿಯಲ್ಲ. ಸರ್ಕಾರಗಳು ಮಳೆ ಬೀಳುವಾಗಲೇ ಕೆರೆ ಹೂಳೆತ್ತಲು ಆದೇಶಿಸುವುದು, ದೂರದ ಜಲಾಶಯಗಳಿಂದ ನೀರು ಹರಿಸುವಂತಹ ಯೋಜನೆ ರೂಪಿಸಲು ಸೂಚಿಸುತ್ತಿರುವ ಈ ಹೊತ್ತಿನಲ್ಲಿ ಸ್ವರ್ಗ–ಪಡ್ರೆ ಗ್ರಾಮಗಳ ಜನರು ಸಂಘಟಿತರಾಗಿ ನೀರಿನ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಲು ಹೊರಟಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

‘ಊರು ಕೈಜೋಡಿಸಿದರೆ ಸತತ ಮೂವರು ವರ್ಷಗಳ ಪ್ರಯತ್ನದಿಂದ ಸ್ವರ್ಗದ ತೋಡು ಬತ್ತದ ಹಾಗೆ ಮಾಡಬಹುದು. ಆ ಪ್ರಯತ್ನ ಶುರುವಾಗಿದೆ. ಈಗ ಪಡ್ರೆಯಲ್ಲಿ ನೀರು ಬತ್ತಿರ ಬಹುದು. ಆದರೆ ಜನರ ಉತ್ಸಾಹ ಬತ್ತಿಲ್ಲ. ಇದು ಆರಂಭ. ಮುಂದೆ ಈ ತಂಡವೇ ನೆಲ–ಜಲ ಸಂರಕ್ಷಣೆಯ ಕೆಲಸವನ್ನು ಇಡೀ ಗ್ರಾಮಕ್ಕೆ ಹಬ್ಬಿಸುತ್ತಾರೆ’ ಎಂಬ ವಿಶ್ವಾಸ ಶ್ರೀ ಪಡ್ರೆಯವರದ್ದು.

ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಭಾನುವಾರ ಸ್ವಯಂ ಪ್ರೇರಿತರಾಗಿ ಮುಂದೆ ಬಂದ 25 ಮಂದಿ ಊರ ಜಲಕಾರ್ಯಕರ್ತರ ತರಬೇತಿ ನಡೆದಿದೆ. ನಂತರದಲ್ಲಿ ಒಂದು ಯುವಕರ ತಂಡ ಕ್ರೀಡಾಮೈದಾನವೊಂದರಲ್ಲಿ ಸುರಿಯುವ ಮಳೆ ನೀರನ್ನು ಬಾವಿಗೆ ತಿರುಗಿಸುವ ಕೆಲಸ ಮಾಡಿದ್ದಾರೆ. ಇನ್ನೊಂದು ತಂಡ ಪಾಳು ಕೆರೆ ಮರುಪೂರಣಕ್ಕೆ ಬೇಕಾದ ಪ್ರಾಥಮಿಕ ಕೆಲಸ ಮಾಡಿದೆ. ಮುಂದಿನ ವಾರ ಇವರು ಕ್ಷೇತ್ರ ಭೇಟಿ ಮಾಡಿ ಬಾವಿಗಳಲ್ಲಿ ನೀರ ಹೆಚ್ಚಳ ಹೇಗೆ ಎಂಬ ಕ್ಷೇತ್ರ ಮಾರ್ಗದರ್ಶನ ಪಡೆಯಲಿದ್ದಾರೆ.

ಜನಸಹಭಾಗಿತ್ವದಿಂದ ರಾಜಸ್ಥಾನದ  ನಾಂಡುವಾಲಿ ನದಿ ಹರಿದಿದೆ, ರೂಪಾರೆಲ್ ನದಿ ಮತ್ತೆ ಬತ್ತಲಿಲ್ಲ. ಕೇರಳದ ವರಟ್ಟಾರ್ ನದಿ ಮರು ಜೀವಗೊಂಡಿದೆ. ಇಂಥ ಉದಾಹರಣೆಗಳಿರುವಾಗ ಜನರು ಮನಸ್ಸು ಮಾಡಿದರೆ, ಕಾಯಾ ವಾಚಾ ಮನಸಾ ಸ್ಪಂದಿಸಿದರೆ ಸ್ವರ್ಗದ ಹಳ್ಳ ಮತ್ತೆ ಮರುಜೀವ ಯಾಕೆ ಪಡೆಯಬಾರದು?

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !