ದೇವಿಗೆ ಬಂತು ಹೊಸ ರೂಪ

ಗುರುವಾರ , ಏಪ್ರಿಲ್ 25, 2019
21 °C
ವೈವಿಧ್ಯ

ದೇವಿಗೆ ಬಂತು ಹೊಸ ರೂಪ

Published:
Updated:
Prajavani

ಶಿರಸಿ ಹಾಗೂ ಸುತ್ತಮುತ್ತಲಿನ ಆಸ್ತಿಕರು ಯುಗಾದಿಯ ಆಗಮನವನ್ನು ಕಾತರರಾಗಿ ಕಾಯುತ್ತಿರುತ್ತಾರೆ. ಇದಕ್ಕೆ ಕಾರಣವೇನೆಂದರೆ ಎಲ್ಲರ ತಾಯಿ, ಅಮ್ಮ ಅಂದರೆ ಆರಾಧ್ಯದೇವತೆಯಾದ ಮಾರಿಕಾಂಬೆಯ ಹೊಸ ಸ್ವರೂಪದ ದರ್ಶನ ಪಡೆಯಲೆಂದು. ಹೌದು ಇಲ್ಲಿ ಇದೊಂದು ವಿಶಿಷ್ಟ ಸಂಪ್ರದಾಯವಿದೆ.

ಇಡೀ ಕರ್ನಾಟಕದಲ್ಲಿಯೇ ಖ್ಯಾತಿ ಪಡೆದಿರುವ ಮಾರಿಕಾಂಬಾ ಜಾತ್ರೆ ಫಾಲ್ಗುಣ ಮಾಸದಲ್ಲಿ ನಡೆಯುತ್ತದೆ. ಈ ಜಾತ್ರೆಯು ಮಾರಿಕಾಂಬೆಯ ವಿವಾಹಮಹೋತ್ಸವವನ್ನು ಪ್ರತಿನಿಧಿಸುತ್ತದೆ. ಜಾತ್ರೆಯ ಸಂದರ್ಭದಲ್ಲಿ ದೇವಿಯನ್ನು ಬಿಡಕಿ ಬೈಲಿನಲ್ಲಿ ನಿರ್ಮಿಸಿದ ವೈಭವದ ಚಪ್ಪರದಲ್ಲಿ ತಂದು ಕೂರಿಸಿ ಪೂಜಿಸಲಾಗುತ್ತದೆ. ಜಾತ್ರೆಯ ಹತ್ತನೆಯ ದಿನ ದೇವಿ ವಿಧವೆಯಾಗುತ್ತಾಳೆ. ಆ ವಿಧಿವಿಧಾನಗಳನ್ನು ಸಾಂಕೇತಿಕವಾಗಿ ನೆರವೇರಿಸಲಾಗುತ್ತದೆ. ಆ ವಿಧಿಗಳಲ್ಲಿ ಪ್ರಧಾನವಾಗಿ ನಡೆಯುವ ಕಾರ್ಯವೆಂದರೆ ದೇವಿಯ ಮೂರ್ತಿಯನ್ನು ವಿಸರ್ಜಿಸುವುದು.

ಮಾರಿಕಾಂಬೆಯದು ಕಾಷ್ಟ ಶಿಲ್ಪ. ಪ್ರತಿಯೊಂದು ಭಾಗವೂ ಬಿಡಿಬಿಡಿಯಾಗಿ ಬೇರ್ಪಡಿಸಬಲ್ಲ ರೀತಿಯಲ್ಲಿರುತ್ತದೆ. ಮೂರುನೂರು ವರ್ಷಗಳ ಹಿಂದೆ ಊರ ಕೆರೆಯಲ್ಲಿ ಒಂದು ಪೆಟ್ಟಿಗೆಯಲ್ಲಿ ಬಿಡಿ ಭಾಗಗಳ ರೂಪದಲ್ಲಿ ದೇವಿ ದೊರೆತಳು ಎಂಬ ನಂಬಿಕೆಯಿದೆ. ಜಾತ್ರೆಯ ಮುಕ್ತಾಯದ ಭಾಗವಾಗಿ ದೇವಿಯ ವಿಗ್ರಹವನ್ನು ಬೇರ್ಪಡಿಸಿ ಬಿಳಿ ಬಟ್ಟೆಯಲ್ಲಿ ಸುತ್ತಿ ದೇವಸ್ಥಾನದ ಹಿಂಬಾಗಿಲಿನಿಂದ ಒಳ ತಂದು ಚಂದ್ರಶಾಲೆಯಲ್ಲಿ ಇರಿಸಲಾಗುತ್ತದೆ. ಆನಂತರ ದೇಗುಲದ ಬಾಗಿಲನ್ನು ತೆರೆಯುವುದಿಲ್ಲ. ಸರಿ ಸುಮಾರು ಹತ್ತು ದಿನಗಳ ಕಾಲ ದೇವಿಯ ದರ್ಶನ ಲಭ್ಯವಿರುವುದಿಲ್ಲ.

ಈ ಅವಧಿಯಲ್ಲಿ ದೇವಿಯ ಬಿಡಿ ಭಾಗಗಳಿಗೆ ಬಣ್ಣ ಹಚ್ಚುವ ಕೆಲಸ ಜರುಗುತ್ತದೆ. ಇದಕ್ಕಾಗಿಯೇ ವಿಶೇಷ ಪರಿಣತಿಯನ್ನು ಹೊಂದಿರುವ ಶಿರಸಿಯ ಗುಡಿಗಾರ ಮನೆತನದವರು ವಿಗ್ರಹದ ಬಣ್ಣ ಮತ್ತು ಜೋಡಣೆಯ ಕೆಲಸಗಳನ್ನು ಕೈಗೊಳ್ಳುತ್ತಾರೆ. ಆಭರಣಗಳನ್ನು ತೊಳೆಯುವ, ಸರಿಪಡಿಸುವ ಕೆಲಸಗಳೆಲ್ಲ ನಡೆಯುತ್ತವೆ. ಈ ಎಲ್ಲ ಕೆಲಸಗಳೂ ಮುಗಿದು ದೇವಿ ಸಜ್ಜಾಗುತ್ತಾಳೆ. ಯುಗಾದಿಯ ದಿನ ನಸುಕಿನಲ್ಲಿ ದೇವಾಲಯದ ಮುಂಬಾಗಿಲನ್ನು ತೆರೆಯಲಾಗುತ್ತದೆ. ಗೋಕರ್ಣದ ಹಿರೇಭಟ್ಟರಾದಿಯಾಗಿ ಪುರೋಹಿತರು ಆಗಮಿಸಿ ಶುದ್ಧೀಕರಣದ ಪ್ರಕ್ರಿಯೆ ಜರುಗಿಸುತ್ತಾರೆ. ಆದಿನ ದೇವಿಯ ಹೊಸ ರೂಪದ ದರ್ಶನವನ್ನು ಪಡೆಯಲು ಭಕ್ತಾದಿಗಳು ತುದಿಗಾಲಲ್ಲಿ ನಿಂತಿರುತ್ತಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !