ಹೈ–ಕ ಅಭಿವೃದ್ಧಿಗೆ ಹೊಸ ಯೋಜನೆ ಶೀಘ್ರ: ಬಂಡೆಪ್ಪ ಕಾಶೆಂಪೂರ ಭರವಸೆ

7
ವಿಮೋಚನಾ ದಿನಾಚರಣೆ ಕಾರ್ಯಕ್ರಮ

ಹೈ–ಕ ಅಭಿವೃದ್ಧಿಗೆ ಹೊಸ ಯೋಜನೆ ಶೀಘ್ರ: ಬಂಡೆಪ್ಪ ಕಾಶೆಂಪೂರ ಭರವಸೆ

Published:
Updated:
Deccan Herald

ಬೆಂಗಳೂರು: ‘ಹೈದರಾಬಾದ್‌ ಕರ್ನಾಟಕ (ಹೈ–ಕ) ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶೀಘ್ರ ಸಭೆ ಕರೆಯಲಿದ್ದು, ಈ ಪ್ರದೇಶದ ಅಭಿವೃದ್ಧಿ ಕುರಿತು ಹೊಸ ಯೋಜನೆಗಳನ್ನು ರೂಪಿಸಲಾಗುತ್ತದೆ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಭರವಸೆ ನೀಡಿದರು.

ಹೈದರಾಬಾದ್‌ ಕರ್ನಾಟಕ ನಿವಾಸಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹೈದರಾಬಾದ್‌ ಕರ್ನಾಟಕ ಉತ್ಸವದ ಅಂಗವಾಗಿ ವಿಮೋಚನಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‌‘ಸಂವಿಧಾನದ 371 ಜೆ ಕಲಂ ಅಡಿ ವಿಶೇಷ ಸ್ಥಾನಮಾನ ನೀಡಿದ ಬಳಿಕವೂ ಈ ಪ್ರದೇಶದಲ್ಲಿ ಕೃಷಿ, ಶೈಕ್ಷಣಿಕ ಅಸಮಾನತೆ, ನಿರುದ್ಯೋಗ, ನೀರಾವರಿ ಯೋಜನೆ, ಕೈಗಾರಿಕೆ, ಪ್ರವಾಸೋದ್ಯಮ, ಮೀಸಲಾತಿ ಸಮಸ್ಯೆಗಳು ಇನ್ನೂ ಜೀವಂತವಾಗಿವೆ’ ಎಂದು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ‘ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ₹ 1500 ಕೋಟಿ ಘೋಷಿಸಲಾಗಿದೆ. ಶಿಕ್ಷಣಕ್ಕೆ ಹೊಸ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತದೆ. ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡಾಗ ಕೊಟ್ಟ ಭರವಸೆಯಂತೆ ಹೈ–ಕ ಭಾಗದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲಿದ್ದಾರೆ’ ಎಂದು ಹೇಳಿದರು.

ಹೈದರಾಬಾದ್‌–ಕರ್ನಾಟಕ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷ ಸಂಗಮೇಶ ಬಾದವಾಡಗಿ ಅವರು ರಚಿಸಿದ ‘ಜರತಾರಿ ಸೀರೆಗೆ ರೇಶಿಮೆ ಸೆರಗ...’ ಕೃತಿಯನ್ನು ಕವಿ ಡಾ.ಸಿದ್ದಲಿಂಗಯ್ಯ ಬಿಡುಗಡೆ ಮಾಡಿದರು. ಕೊಡಗು ಪ್ರವಾಹ ಸಂತ್ರಸ್ತರಿಗೆ ಸಂಘದ ವತಿಯಿಂದ ನೀಡಿದ ₹ 1 ಲಕ್ಷ ದೇಣಿಗೆಯ ಚೆಕ್‌ ಅನ್ನು ಪದಾಧಿಕಾರಿಗಳು ಸಚಿವರಿಗೆ ಹಸ್ತಾಂತರಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಸ್‌.ಕೆ.ಅರುಣಿ (ಐ.ಸಿ.ಎಚ್‌.ಆರ್‌ನ ಪ್ರಾದೇಶಿಕ ನಿರ್ದೇಶಕ), ಬಸವರಾಜ ನೂಲಿ (ಶಿಕ್ಷಣ ತಜ್ಞ), ಆರ್‌.ಬಿ.ಪಾಟೀಲ ಚಳಗೇರಿ (ಉದ್ಯೋಗ ಕ್ಷೇತ್ರ), ಜಿ.ರಮಾದೇವಿ (ನಿವೃತ್ತ ಶಿಕ್ಷಕಿ), ಭೀಮರೆಡ್ಡಿ (ತಾಂತ್ರಿಕ ಕ್ಷೇತ್ರ), ಡಾ.ಸಿದ್ದಣ್ಣ ಸುಲ್ತಾನಪುರ (ವೈದ್ಯಕೀಯ ಕ್ಷೇತ್ರ), ಓಂಕಾರ್ ಎಸ್‌.ಜೊಂಡಿ (ಸಮಾಜ ಸೇವೆ), ಗುಂಡಪ್ಪ ಕಮ್ಮಾರ (ಸರ್ಕಾರಿ ಸೇವೆ) ಅವರನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 30 ವಿದ್ಯಾರ್ಥಿಗಳಿಗೆ ಜೆಡಿಎಸ್‌ ಮುಖಂಡ ಪಿ.ಜಿ.ಆರ್‌.ಸಿಂಧ್ಯಾ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !