ಕೈಮಗ್ಗ ಸೀರೆಗಳ ‘ಸುರಗಿ’

7

ಕೈಮಗ್ಗ ಸೀರೆಗಳ ‘ಸುರಗಿ’

Published:
Updated:
Deccan Herald

‘ಸುರಗಿ’ ಎನ್ನುವುದು ಹೂವಿನ ಹೆಸರು. ಇದು ಮಲೆನಾಡು ಮತ್ತು ಕರಾವಳಿಯಲ್ಲಿ ಕಂಡು ಬರುವ ಹೂವು. ಅದರ ಪರಿಮಳಕ್ಕೆ ಮಿತಿಯಿಲ್ಲ. ಅದರ ಹೆಸರಿಟ್ಟು ‘ಸುರಗಿ’ ಸೀರೆಯ ಮಳಿಗೆಯೊಂದು ತಿಂಗಳ ಹಿಂದೆಯಷ್ಟೇ ಮಲ್ಲೇಶ್ವರದಲ್ಲಿ ಕಣ್ಣು ಬಿಟ್ಟಿದೆ.

ಕವಯತ್ರಿಯೂ ಆಗಿರುವ ದೀಪಾ ಗಿರೀಶ್‌ ಇದರ ರೂವಾರಿ. ಸಾಹಿತ್ಯ, ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅವರು ‘ದೀಪದ ಮಲ್ಲಿ’ ಎಂಬ ಕಾವ್ಯನಾಮದಿಂದ ಕೆಲ ಕಾವ್ಯಗಳನ್ನೂ ಬರೆದಿದ್ದಾರೆ. ಅವರ ಮೊದಲ ಕವನ ಸಂಕಲನ ‘ಅಸ್ಮಿತಾ’ 2015ರಲ್ಲಿ ಪ್ರಕಟವಾಗಿದೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಅವರು, ನಟನೆ, ನಿರ್ದೇಶನದ ಮೂಲಕ ರಂಗಭೂಮಿಯ ಒಡನಾಟವನ್ನು ಇಟ್ಟುಕೊಂಡವರು.

ಅವರು ಬರೆದ ಕಥೆ, ನಾಟಕಗಳು ರಂಗದ ಮೇಲೆ, ರೇಡಿಯೊ, ಟಿವಿಗಳಲ್ಲಿ ಮತ್ತು ಕಿರುಚಿತ್ರಗಳಾಗಿಯೂ ಮೂಡಿ ಬಂದಿವೆ. ಬದುಕು– ಬರಹದ ಜತೆಗೆ ದಶಕದ ಕಾಲ ಅವರು ಗಾರ್ಮೆಂಟ್‌ ಕಾರ್ಮಿಕರ ಹೋರಾಟದಲ್ಲಿ, ವಿವಿಧ ಮಹಿಳಾ ಸಂಘಟನೆಗಳು, ಯುವ ಸಮುದಾಯ, ಮಾನವ ಹಕ್ಕುಗಳ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಸಾಹಿತ್ಯದ ಪಯಣದಲ್ಲಿ ಸಾಮಾಜಿಕ ಜವಾಬ್ದಾರಿ ಹೊತ್ತು ಇದೀಗ ಸೀರೆ ವ್ಯಾಪಾರ ಮಳಿಗೆಯನ್ನು ಆರಂಭಿಸಿದ್ದಾರೆ.

ಸ್ವ ಉದ್ಯೋಗ: ‘ನನಗೀಗ ನಾಲ್ಕು ವರ್ಷದ ಮಗು ಇದೆ. ಅದು ‘ಸ್ಪೆಷಲ್‌ ಚೈಲ್ಡ್‌’. ಮಗುವಿನ ಆರೈಕೆಗೆ ಹೆಚ್ಚು ಒತ್ತು ಮತ್ತು ಸಮಯ ನೀಡಬೇಕಾಗುತ್ತದೆ. ಹಾಗಾಗಿ ಸ್ವ ಉದ್ಯೋಗ ಕೈಗೊಂಡಿದ್ದೇನೆ. ಆ ಮೂಲಕ ನನ್ನದೇ ಆದ ಅಸ್ಮಿತೆಯನ್ನು ಕಂಡುಕೊಳ್ಳಲು ಮುಂದಾಗಿದ್ದೇನೆ. ನಾನು ಯಾವುದೇ ವೃತ್ತಿ, ಉದ್ಯೋಗ, ಉದ್ಯಮ ಕೈಗೊಂಡರೂ ಅದರಿಂದ ಸಮಾಜದ ಒಳಿತಿಗೆ ಹೇಗಾದರೂ ಕೊಡುಗೆ ನೀಡಬೇಕು ಎಂಬ ತುಡಿತ ಮೊದಲಿನಿಂದಲೂ ಇತ್ತು. ಹಾಗಾಗಿ ವಸ್ತ್ರಾಲಂಕಾರ ಕ್ಷೇತ್ರಕ್ಕೆ ಕಾಲಿಟ್ಟೆ ಎಂದು ಅವರು ಮಸ್ತ್ರಮಳಿಗೆ ತೆರೆಯುವುದರ ಹಿಂದಿನ ಉದ್ದೇಶ ನೆನೆದರು.

‘ಈ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಲು ಮುಂದಾಗಿದ್ದೇನೆ. ಸೀರೆ ನನ್ನ ಫ್ಯಾಷನ್‌. ನಾನು ಸೀರೆ ಉಡುವುದನ್ನು ಆರಂಭಿಸಿದಾಗಿನಿಂದಲೂ ಉಡುತ್ತಿರುವುದು ಕೈಮಗ್ಗದ ಸೀರೆಗಳನ್ನೇ. ಅಲ್ಲದೆ ಪ್ಯಾಂಟು, ಶರ್ಟ್‌, ಕುರ್ತಾ ಇತರ ಬಟ್ಟೆಗಳನ್ನು ತೊಟ್ಟರೂ ಅವು ಕೈಮಗ್ಗದ ಉತ್ಪನ್ನವಾಗಿರಬೇಕು ಎಂದೇ ಬಯಸುತ್ತೇನೆ’ ಎನ್ನುತ್ತಾರೆ ಅವರು.

ನೇಕಾರರ ಬದುಕು ಹಸನುಗೊಳಿಸಲು ಪ್ರಯತ್ನ: ಮಧ್ಯವರ್ತಿಗಳ ಪಾತ್ರವಿಲ್ಲದೆ ನೇಕಾರರಿಗೆ ಮತ್ತು ಗ್ರಾಹಕರಿಗೆ ನೇರ ಮಾರುಕಟ್ಟೆ ಒದಗಿಸುವುದು ‘ಸುರಗಿ’ಯ ಉದ್ದೇಶ. ಕೈಮಗ್ಗದ ಬಟ್ಟೆಗಳನ್ನು ತಯಾರಿಸುವ ನೇಕಾರರ ಬದುಕು ಕಷ್ಟ ಕಾರ್ಪಣ್ಯಗಳಿಂದ ತುಂಬಿದೆ. ಒಂದು ಸೀರೆ ನೇಯಲು 3 ದಿನ, 5 ದಿನ, ವಾರಗಳೇ ಆಗುತ್ತವೆ. ಅಲ್ಲದೆ ಕಸೂತಿ, ಕುಸುರಿ ಕೆಲಸಗಳಿರುವ ಸೀರೆಗಳನ್ನು ತಯಾರಿಸಲು ಒಂದೂವರೆ ತಿಂಗಳೇ ಬೇಕಾಗುತ್ತದೆ. ನೇಕಾರರ ಇಡೀ ಕುಟುಂಬದವರು ಪಾಳಿ ವ್ಯವಸ್ಥೆಯಲ್ಲಿ ಮಗ್ಗದಲ್ಲಿ ನೇಯುತ್ತಾರೆ. ಅಷ್ಟು ಪರಿಶ್ರಮದಿಂದ ಬರುವ ಸೀರೆ ನೇಯುವವರ ಬದುಕನ್ನು ಸ್ವಲ್ಪವಾದರೂ ಹಸನುಗೊಳಿಸಬೇಕು ಎಂಬುದು ‘ಸುರುಗಿ’ಯ ಧ್ಯೇಯಗಳಲ್ಲಿ ಒಂದು.

‘ಸೀರೆ ವಹಿವಾಟು ನಡೆಸುವ ಮಧ್ಯವರ್ತಿಗಳು, ಡೀಲರ್‌ಗಳು, ಸಗಟು ವ್ಯಾಪಾರಿಗಳನ್ನು ಬದಿಗಿಟ್ಟು, ನೇರವಾಗಿ ನೇಕಾರರಿಂದಲೇ ಸೀರೆಗಳನ್ನು ಖರೀದಿಸಿ ಈ ಪುಟ್ಟ ಸೀರೆ ಮಳಿಗೆ ನಡೆಸುತ್ತಿದ್ದೇನೆ. ಅಕ್ಟೋಬರ್‌ 14ರಂದು ನಟಿ ಪ್ರಿಯಾಂಕ ಉಪೇಂದ್ರ ಅವರು ಮಳಿಗೆಯನ್ನು ಉದ್ಘಾಟಿಸಿದ್ದರು. ಈ ಒಂದು ತಿಂಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರವೇ ಅಲ್ಲದೆ ಹುಬ್ಬಳ್ಳಿ–ಧಾರವಾಡದಿಂದಲೂ ಜನರು ಬಂದು ಸೀರೆ ಖರೀದಿಸುತ್ತಿದ್ದಾರೆ’ ಎಂದು ಹೇಳುತ್ತಾರೆ ಅವರು.

ವಿವಿಧ ರಾಜ್ಯದ ಕೈಮಗ್ಗಗಳ ಸೀರೆಗಳು: ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ಬಿಹಾರ (ಬಾಗಲಪುರ), ತಮಿಳುನಾಡು (ಕಂಚಿ), ಉತ್ತರ ಪ್ರದೇಶ (ಬನಾರಸ್‌), ಕರ್ನಾಟಕದ ಇಳಕಲ್‌, ಬೆಂಗಳೂರು ಸುತ್ತಮುತ್ತಲಿನ ಆನೇಕಲ್‌, ದೊಡ್ಡಬಳ್ಳಾಪುರ ಮೊದಲಾದ ಕಡೆಯ ಸುಮಾರು 25 ನೇಕಾರ ಕುಟುಂಬದವರ ಜತೆಗೆ ನೇರ ಸಂಪರ್ಕ ಹೊಂದಿದ್ದೇನೆ. ‘ಸುರಗಿ’ಗೆ ಸೀರೆ ನೀಡುವ ಈ ನೇಕಾರರಿಗೆ ಮೊದಲಿಗಿಂತ ದುಪ್ಪಟ್ಟು ಅಥವಾ ಮೂರುಪಟ್ಟು ಆದಾಯ ದೊರೆಯುತ್ತಿದೆ. ಇದರಿಂದ ಅವರ ಮೊಗದಲ್ಲಿ ಸಂತಸವೂ ಮೂಡಿದೆ ಎನ್ನುವ ಅವರು, ‘ನನ್ನ ಮಳಿಗೆಯ ಬಾಡಿಗೆ ಮತ್ತು ನನ್ನ ದುಡಿಮೆಗೆ ತಕ್ಕ ಪ್ರತಿಫಲವನ್ನಷ್ಟೇ ನಾನು ಬಯಸುತ್ತೇನೆ’ ಎನ್ನುತ್ತಾರೆ.

ಕಾಟನ್‌, ಸಿಲ್ಕ್‌ ಕಾಟನ್‌, ಲೆನಿನ್‌ ಕಾಟನ್‌ ಸೇರಿದಂತೆ ವಿವಿಧ ಬಗೆಯ ಕಾಟನ್‌ ಸೀರೆಗಳು ಇಲ್ಲಿ ದೊರೆಯುತ್ತವೆ. ಸುಮಾರು 15 ರಾಜ್ಯಗಳ ಕೈಮಗ್ಗದ ನೇಕಾರರ ಉತ್ಪನ್ನಗಳು ಲಭ್ಯವಿವೆ. ಆಯಾ ರಾಜ್ಯಗಳ ಸಾಂಪ್ರದಾಯಿಕ ಶೈಲಿ, ಸಂಸ್ಕೃತಿ ಮತ್ತು ಮಣ್ಣಿನ ಸೊಗಡು ಆ ಸೀರೆಗಳಲ್ಲಿ ಬಿಂಬಿತವಾಗಿರುತ್ತವೆ. ಇತ್ತೀಚೆಗೆ ಕೈಮಗ್ಗದ ಸೀರೆಗಳನ್ನು ತೊಡುವುದು ಕೆಲವರಿಗೆ ಫ್ಯಾಷನ್‌ ಆಗಿದೆ. ಈ ಟ್ರೆಂಡ್‌ ಯುವತಿಯರಲ್ಲಿ ಹೆಚ್ಚಾಗುತ್ತಿದೆ. ಅವರೆಲ್ಲರಿಗೂ ಉತ್ತಮ ಆಯ್ಕೆಗಳು ‘ಸುರಗಿ’ ಮಳಿಗೆಯಲ್ಲಿವೆ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !