7

ಇಮಾಂಸಾಬಿಗೂ ರಾಮನಿಗೂ ಉಂಟು ಸಂಬಂಧ!

ಆರ್‌. ಪೂರ್ಣಿಮಾ
Published:
Updated:
ಇಮಾಂಸಾಬಿಗೂ ರಾಮನಿಗೂ ಉಂಟು ಸಂಬಂಧ!

ಜಗತ್ತಿನಾದ್ಯಂತ ನಡೆಯುವ ಸುಪ್ರಸಿದ್ಧ ಸಂಗೀತೋತ್ಸವಗಳಲ್ಲಿ ಮೊದಲ ಕಛೇರಿಯ ಅವಕಾಶ ಪಡೆಯುವುದೇ ಒಂದು ಗೌರವ. ನಮ್ಮ ದೇಶದಲ್ಲಂತೂ ಇದಕ್ಕೆ ಒಂದಿಷ್ಟು ಹೆಚ್ಚು ಮೆರುಗು. ಮಾರ್ಚ್ ತಿಂಗಳು ಬೆಂಗಳೂರಿನಲ್ಲಿ ಆರಂಭವಾದ ಒಂದು ಪ್ರತಿಷ್ಠಿತ ಸಂಗೀತೋತ್ಸವದ ‘ನಾಂದಿ ಕಛೇರಿ’, ನಮ್ಮ ಸಾಮಾಜಿಕ ಪರಂಪರೆಯ ಸಂಗೀತ ಸೌಹಾರ್ದಕ್ಕೆ ಒಂದು ಸುಂದರ ರೂಪಕದಂತೆ ಕಂಗೊಳಿಸಿತು. ಅದು ಶ್ರೀರಾಮ ಸೇವಾ ಮಂಡಲಿಯ ರಾಷ್ಟ್ರೀಯ ಸಂಗೀತೋತ್ಸವ.ಸಂಗೀತ ಕಛೇರಿ ನಡೆಯುವ ವಿಶಾಲ ವೇದಿಕೆಯ ಹಿಂದೆ ಅಲಂಕೃತರಾದ ಶ್ರೀರಾಮ ಮತ್ತು ಅವನ ಪರಿವಾರ ದೇವತೆಗಳು. ಇಗೋ ಈ ವರ್ಷದ ಉತ್ಸವ ಆರಂಭವಾಯಿತು ಎಂದು ಸಾರಿದ್ದು ತಮಿಳುನಾಡಿನ ತಿರುಚ್ಚಿಯ ಶೇಖ್ ಮೆಹಬೂಬ್ ಸುಭಾನಿ ಮತ್ತು ಅವರ ಪತ್ನಿ ಖಲೀಜಾಬಿ ಮೆಹಬೂಬ್ ಜೋಡಿಯಾಗಿ ಮೊಳಗಿಸಿದ ನಾದಸ್ವರದ ಮಂಗಳ ಮಾಧುರ್ಯ. ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಸಂಬಂಧ ಇದೆಯೋ ಇಲ್ಲವೋ, ಇಮಾಂ ಸಾಬಿಗೂ ರಾಮನವಮಿಗೂ ಎಂಥಾ ಸುಮಧುರ ಸಂಬಂಧ!ಜನ ಎಲ್ಲಾದರೂ ಇರಲಿ ಎಂತಾದರೂ ಇರಲಿ, ಜನಪದ ಸಂಗೀತ ಅವರೊಳಗಿರುತ್ತದೆ. ಹಾಗೆಯೇ ಶಿಷ್ಟ ಅಥವಾ ಶಾಸ್ತ್ರೀಯ ಸಂಗೀತದ ಆಸ್ವಾದಕ್ಕೂ ಪಂಚಾಂಗ ಮುಟ್ಟಿದೆಡೆ ಮುಹೂರ್ತ ಸಿಗುತ್ತದೆ. ದಕ್ಷಿಣ ಭಾರತದಲ್ಲಿ ಸಂಕ್ರಾಂತಿ, ಯುಗಾದಿ, ರಾಮನವಮಿ, ಹನುಮ ಜಯಂತಿ, ಗಣೇಶ ಚೌತಿ, ನವರಾತ್ರಿ, ದೀಪಾವಳಿ ಹಬ್ಬಗಳು, ದೇವಾಲಯಗಳ ಜಾತ್ರೆಗಳು, ರಥೋತ್ಸವಗಳು, ತ್ಯಾಗರಾಜ, ಪುರಂದರ, ಕನಕ ಮುಂತಾದ ದಾಸರ, ಯೋಗಿಗಳ ಆರಾಧನೆಗಳು, ಮಠಗಳ ಉತ್ಸವಗಳು, ಕಾರ್ತೀಕ ಮಾಸ, ಮಾರ್ಗಳಿ ಮಾಸ, ವಸಂತ ಮಾಸದ ಉತ್ಸವಗಳು, ಕಲೋತ್ಸವಗಳು, ವಿವಾಹ ಮಹೋತ್ಸವಗಳು – ಹೀಗೆ ಸಂದರ್ಭ ಏನಾದರೂ ಆಗಿರಲಿ ಅದರ ಸಂಭ್ರಮ ಹೆಚ್ಚಿಸಲು ಸಂಗೀತ ಜೊತೆಗಿರುತ್ತದೆ.ಉತ್ತರ ಭಾರತದಲ್ಲಿ ಕೂಡ ಇಂಥವೇ ನೂರೆಂಟು ನೆಪ ನಿಮಿತ್ತಗಳಲ್ಲಿ ‘ಸಂಗೀತಾಮೃತ ಪಾನ’ ನಡೆಯುತ್ತದೆ. ಗುರುಮನೆ, ಅರಮನೆಗಳೆಂಬ ಅಣೆಕಟ್ಟುಗಳಲ್ಲಿ ಮಡುಗಟ್ಟಿದ್ದ ಶಾಸ್ತ್ರೀಯ ಸಂಗೀತ, ಜನ ಸಾಗರವನ್ನು ಸೇರಿದ್ದು ಈ ಹೊಳೆಗಳ ರೂಪದಲ್ಲೇ ಅಲ್ಲವೇ? ಈ ಸಂಭ್ರಮಗಳಲ್ಲಿ ಯಾವ ಧರ್ಮದವರು ಬೇಕಾದರೂ ಉಚಿತವಾಗಿ ಅಥವಾ ಹೆಚ್ಚು ಖರ್ಚಿಲ್ಲದೆ ಪಾಲ್ಗೊಂಡು ಅಸಾಮಾನ್ಯ ಗಾಯಕರ, ವಾದಕರ ಸಂಗೀತ ಕೇಳಿ ಧನ್ಯರಾಗುವ ಅವಕಾಶ ಸಿಗುತ್ತದೆ. ‘ರಾಜರು ಕೊಡುವ ಕಂಕಣ ಯಾರಿಗೆ ಬೇಕು, ರಸಿಕರು ಕೊಡುವ ಕಣ್‌ಕಣ (ಆನಂದಬಾಷ್ಪ) ವೇ ಸಾಕು ಕಣಾ’ ಎಂದೊಬ್ಬ ಕವಿಯ ಹೇಳಿಕೆ ಸಂಗೀತ ಕಲಾವಿದರ ಮನದಾಳದ ಮಾತೂ ಆಗಿರುತ್ತದೆ.ಸಂಗೀತ ಇರುವುದೇ ದೇವರ ಆರಾಧನೆಗೆ ಎಂದು ನಂಬಿಕೆಯೂ ಇದೆ, ಸಂಗೀತ ಕಲಿತರೆ ದೇವರಿಗೆ ದ್ರೋಹ ಬಗೆದಂತೆ ಎಂಬ ನಂಬಿಕೆಯೂ ಇದೆ. ಅವೇನಾದರೂ ಇರಲಿ, ಯಾವುದರಲ್ಲೂ ನಂಬಿಕೆ ಇಲ್ಲದವರೂ ಸಂಗೀತವನ್ನು ಮಾತ್ರ ನಂಬಿ ಬಂದು ಅನುಭೂತಿಯನ್ನು ಪಡೆಯುವುದೇ ಅದರ ವಿಶೇಷ. ಜಾತಿ, ಮತ, ಶ್ರದ್ಧೆಗಳನ್ನು ಮೀರಿ ಕಲಾವಿದರು ಸಂಗೀತವೊಂದೇ ನಮ್ಮ ಧರ್ಮ ಎಂದು ಸಂಗೀತೋತ್ಸವಗಳಲ್ಲಿ ಪಾಲ್ಗೊಳ್ಳುವುದು ಅನಾದಿ ಕಾಲದ ಸಂಪ್ರದಾಯ. ‘ಸಂಗೀತವೇ ನಮ್ಮ ತಾಯಿತಂದೆ, ಸಂಗೀತವೇ ನಮ್ಮ ಬಂಧುಬಳಗ, ಸಂಗೀತ ಧರ್ಮಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂದು ಕಲಾವಿದರು ಹಾಡುತ್ತ ರಾಮ ರಹೀಮ ಇಬ್ಬರನ್ನೂ ಓಲೈಸುತ್ತಾರೆ.ಬಾಬರಿ ಮಸೀದಿಯನ್ನು ಅಂದು ಯಾವ ರಾಮಭಕ್ತರು ಬೇಕಾದರೂ ಉರುಳಿಸಿರಲಿ, ರಾಮನವಮಿ ಸಂಗೀತೋತ್ಸವದಲ್ಲಿ ಮುಸ್ಲಿಮ್ ಕಲಾವಿದರು ಇಂದೂ ರಾಮನ ಹೊಗಳುವ ಬಂದಿಶ್ ಹಾಡುತ್ತಾರೆ. ನಮ್ಮ ದೇಶದಲ್ಲಿರುವ ಹಲವರು ಎಲ್ಲೆಲ್ಲಿಂದಲೋ ಬಂದವರು ಎನ್ನುವುದು ನಿಜವಿರಬಹುದು, ಆದರೆ ಹಳಬರೂ ಹೊಸಬರೂ ಸೌಹಾರ್ದ ಸ್ಥಾಪಿಸಿಕೊಳ್ಳಲು ಸಂಗೀತವೂ ಒಂದು ಸಾಧನವಾದದ್ದು ಮಾತ್ರ ಸುಳ್ಳಲ್ಲ. ಸಮಾಜದಲ್ಲಿ ವಿವಿಧ ರೀತಿಯ ರಾಜಕೀಯ, ಸಾಮಾಜಿಕ ಸಂಘರ್ಷಗಳ ಅಪಸ್ವರಗಳನ್ನು ಸುಮ್ಮನಿರಿಸಲು, ಹಳೆಯ ಮತ್ತು ಹೊಸ ಸಂಗೀತದ ಸ್ವರಗಳು ನೆರವಾದವು.ಯಾವುದೋ ಪೀಠದ ಮೇಲೆ ಯಾವುದೋ ದೇವರು ಕೂತ ಮೇಲೆ, ಯಾವುದೋ ಭಾಷೆಗೆ ಇನ್ನಾವುದೋ ಪದ ನುಸುಳಿದ ಮೇಲೆ, ಯಾವುದೋ ಅಡುಗೆ ಮನೆಯಲ್ಲಿ ಇನ್ನಾವುದೋ ತಿಂಡಿ ಬೆಂದ ಮೇಲೆ,  ಸಂಗೀತ ಮಾತ್ರ ಮಡಿಮಡಿಯಾಗಿ ದೂರವುಳಿಯಲು ಸಾಧ್ಯವಿಲ್ಲವಲ್ಲ. ಬೆರಕೆಯ ಬೇರೆ ಅನೇಕ ಸಂಗತಿಗಳು ಸಂಘರ್ಷಕ್ಕೆ ಕಾಲ್ಕೆರೆದರೆ, ಸಂಗೀತ ಮಾತ್ರ ಸೌಹಾರ್ದಕ್ಕೆ ಕೈಜೋಡಿಸಿತು. ಶತಮಾನಗಳು ಉರುಳಿದಂತೆ, ಯಾರು ಯಾರಿಂದ ಪ್ರಭಾವಿತರಾದರೋ ಯಾರು ಯಾರಿಗೆ ಕೊಟ್ಟು ಪಡೆದರೋ ಒಟ್ಟಿನಲ್ಲಿ ಇಡೀ ಭಾರತ ಉಪಖಂಡದಲ್ಲಿ ಈ ಸ್ವರಸಾಮ್ರಾಜ್ಯ ವಿಸ್ತಾರಗೊಂಡಿತು.ಅದು ಎಷ್ಟು ಗಟ್ಟಿಗೊಂಡಿತ್ತೆಂದರೆ, ಬ್ರಿಟಿಷರ ಸುಮಾರು ಇನ್ನೂರು ವರ್ಷಗಳ ಆಡಳಿತದ ‘ಒಡೆದು ಆಳುವ ನೀತಿ’ ಗೂ ಅದನ್ನು ಒಡೆಯಲಾಗಲಿಲ್ಲ. ‘ಭಾರತೀಯ ಸಂಗೀತ’ ಅಂದರೆ ನಿಜಕ್ಕೂ ಯಾವುದು ಮತ್ತು ಯಾರದು? ಪ್ರಾದೇಶಿಕತೆ ಮುಖ್ಯವಾಗಿ, ಸ್ಪಷ್ಟ ವಿಭಿನ್ನ ಲಕ್ಷಣಗಳ ಕಾರಣ ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ ಪದ್ಧತಿಗಳಾಗಿ ಅದು ಬೆಳೆದದ್ದೂ ಕಾಲ ಹಾಡಿದ ಹಾಡೇ ಅನ್ನಿಸುತ್ತದೆ. ರಾಗಗಳನ್ನು ಜನಕ ರಾಗ, ಜನ್ಯ ರಾಗ ಎಂದು ಗುರುತಿಸುವುದುಂಟು. ಉತ್ತರಾದಿ ಸಂಗೀತ ಎನ್ನುವುದಕ್ಕೇ ಅಮೀರ್ ಖುಸ್ರು, ತಾನ್‌ಸೇನ್‌, ‘ಸದಾರಂಗ್‌’, ಭಕ್ತಿ ಚಳವಳಿಯ ಸೂರ್‌ದಾಸ್‌, ಕಬೀರ್‌ದಾಸ್‌ ಮುಂತಾದ ಎಷ್ಟೊಂದು ಜನ ಪಿತಾಮಹರು ಪೂಜ್ಯರಾಗಿದ್ದಾರೆ.ನಮ್ಮ ಕನ್ನಡ ನಾಡಿನ ವಚನಕಾರ ಅಲ್ಲಮನೂ ಸೇರಿ ಎಷ್ಟೊಂದು ಭಾಷೆ–ಸ್ಥಳಗಳ ಧಾರ್ಮಿಕ ಚಳವಳಿಗಳ ಮೇಲೆ ಸೂಫಿಗಳ ಸಿದ್ಧಾಂತ ಮತ್ತು ಸಂಗೀತ ಎರಡೂ ಪ್ರಭಾವ ಬೀರಿವೆಯೋ ಸಂಶೋಧನೆಗಳೇ ವಿಶದೀಕರಿಸಬೇಕು. ಸುಲ್ತಾನರು, ಬಾದ್‌ಷಾಗಳ ಆಸ್ಥಾನಗಳಲ್ಲಿ ಪಂಡಿತ ಕಲಾವಿದರ ಶಾಸ್ತ್ರೀಯ ಸಂಗೀತಗಳ ಜುಗಲ್‌ಬಂದಿ ನಡೆಯುವುದಿರಲಿ, ಒಂದು ಧರ್ಮದಿಂದ ಇನ್ನೊಂದಕ್ಕೆ ಹೋದ ಜನಸಾಮಾನ್ಯರು ತಮ್ಮ ತವರುಮನೆಯ ಹಾಡುಗಳನ್ನೂ ಅದರ ಕಥೆಗಳನ್ನೂ ಜೊತೆಗೊಯ್ದಿದ್ದಾರೆ. ಅವರು ಹೊಸಮನೆಯಲ್ಲೂ ಹಳೆಯದನ್ನೇ ಕುರಿತು ಹಾಡಿದರು.ಹಾಗಾಗಿ ಶತಮಾನಗಳು ಉರುಳಿದರೂ ಸಂಗೀತವನ್ನು ಯಾವ ಹೆಸರಿನಿಂದ ಕರೆದರೂ ಅದು ಸಂಗೀತವಾಗಿಯೇ ಉಳಿಯಿತು ಮಾತ್ರವಲ್ಲ, ಆಸ್ಥಾನಗಳಿಂದ ಮನೆಗಳಿಗೆ, ಗುಡಿಸಲುಗಳಿಗೆ, ಹೊಲಗದ್ದೆಗಳಿಗೆ ಹರಿಯಿತು. ರಾಜಸ್ತಾನದ ಮೂಲೆಯ ಹಳ್ಳಿಯೊಂದರಲ್ಲಿ ಮುಸ್ಲಿಮ್ ಜೋಗಿಗಳು ಮಹಾಭಾರತ, ರಾಮಾಯಣದ ಕಥೆಗಳ ಜಾನಪದವನ್ನು ಅಂದಿನಿಂದ ಇಂದಿನವರೆಗೆ ಲಾವಣಿಗಳು, ಜನಪದ ಖಂಡಕಾವ್ಯಗಳ ರೂಪದಲ್ಲಿ ಹಾಡುತ್ತಿದ್ದಾರೆ. ಅವರು ಹಾಡುವ ಶಿವನ ಮದುವೆ ಕಥೆಯನ್ನು ಕೇಳುವುದೇ ಚೆಂದವಂತೆ. ಬಂಗಾಳ, ಒಡಿಶಾ, ಜಾರ್ಖಂಡ ಮುಂತಾದೆಡೆ ಕೆಲವು ಜನಸಮೂಹಗಳು ಹೇಳುವ ಹಾಡು ಅವರ ಧರ್ಮದ ಜಾಡು ತಿಳಿಸುವುದಿಲ್ಲ.ಗೋವಿಂದ ಭಟ್ಟರಿಂದ ದೀಕ್ಷೆ ಪಡೆದ ಶಿಶುನಾಳ ಶರೀಫರಂಥ ತತ್ವಪದಕಾರರು ಯಾವ ಭಾಷೆಯಲ್ಲಿ ಇಲ್ಲ ಎಂದು ಹುಡುಕಬೇಕು. ‘ಇವರ ಪದವನ್ನು ಅವರು, ಅವರ ಪದವನ್ನು ಇವರು’ – ಯಾವಾಗ ಹೇಳಿಲ್ಲ ಎಂದು ಶೋಧಿಸುವುದು ಇನ್ನೂ ಕಷ್ಟ. ಹಲವು ಕಡೆಗಳಲ್ಲಿ ಮೊಹರಂ ಹಬ್ಬಗಳು, ಉರುಸ್‌ಗಳು ಎಲ್ಲರ ಹಬ್ಬ ಆಗಿರುವುದು, ಅನೇಕ ಸ್ಥಳಗಳಲ್ಲಿ ಒಂದೇ ಕಟ್ಟಡದಲ್ಲಿ ಮಸೀದಿ ದೇಗುಲ ಎರಡೂ ಇರುವುದು ‘ಏಕ ಅನೇಕ’ ತತ್ವವನ್ನೇ ಹೇಳುತ್ತಿರಬಹುದು. ಮನೆಯಲ್ಲಿ ಮಗುವಿಗೆ ಜ್ವರ ಬಂದರೆ ಮಸ್ತಾನ್ ಸಾಬರ ದರ್ಗಾಕ್ಕೆ ಸಕ್ಕರೆ ಓದಿಸುವ ಹರಕೆ ಹೊರುವ ಈ ಅಪ್ಪಂದಿರು, ಜಡೆಮುನಿಗೆ  ಐದು ಕಾಯಿ ಒಡೆಸುತ್ತೇನೆ ಎಂದು ಹೇಳಿಕೊಳ್ಳುವ ಆ ಅಮ್ಮಂದಿರು, ಯಾರು ಬೆದರಿಕೆ ಹಾಕಿದರೂ ಸುಮ್ಮನಿರುವುದಿಲ್ಲ.   ರಾಜರನ್ನು ಮೆಚ್ಚಿಸಲು ಅವರಿಗೆ ಬೇಕಾದ ಪದ್ಧತಿಯ ಸಂಗೀತವನ್ನು ಕಲಿಯುತ್ತಿದ್ದ ವಿಭಿನ್ನ ಪದ್ಧತಿಗಳ ವಿದ್ವಾಂಸರ ಕಥೆಗಳೂ ಹೇರಳವಾಗಿವೆ. ಮೊಘಲರ ಕಾಲದ ಅಪಾರ ಸ್ವರಮತಾಂತರಗಳಿರಲಿ, ಒಂದೆರಡು ಶತಮಾನಗಳ ಹಿಂದೆಯೂ ಅಂಥ ಪ್ರಸಂಗಗಳು ಸಾಕಷ್ಟು ನಡೆದಿವೆ. ಉತ್ತರ ಭಾರತದಿಂದ ಅನೇಕ ಮುಸ್ಲಿಮ್ ಸಂಗೀತಗಾರರು ಬೆಂಗಳೂರಿಗೆ ಬಂದು ಆಚಾರ್ಯ ಗೋವಿಂದ ವಿಠಲ ಭಾವೆ ಅವರ ಮನೆಯಲ್ಲಿ ಸ್ವಲ್ಪ ದಿನ ತಂಗುತ್ತಿದ್ದರು. ರಾಮ, ಕೃಷ್ಣ, ಹನುಮ, ಲಕ್ಷ್ಮಿ, ಸರಸ್ವತಿ, ಪಾರ್ವತಿ, ದುರ್ಗಾ ಅವರನ್ನು ಸ್ತುತಿಸುವ ಬಂದಿಶ್‌ಗಳನ್ನು, ಕೃತಿಗಳನ್ನು ಭಾವೆ ದಂಪತಿಯಿಂದ ಕಲಿಯುತ್ತಿದ್ದರು. ತಿಳಿಸಾರಿನ ರುಚಿ ಸವಿಯುತ್ತಿದ್ದರು.ಆಮೇಲೆ, ಮೈಸೂರಿನ ಆಸ್ಥಾನಕ್ಕೆ ಪಯಣ ಬೆಳೆಸುತ್ತಿದ್ದರು ಎಂಬುದೆಲ್ಲ ವಿದುಷಿ ಶ್ಯಾಮಲಾ ಭಾವೆ ಅವರ ಭಾವಕೋಶದಲ್ಲಿ ಉಳಿದಿವೆ. ಹೊಸತನ್ನು ಪ್ರೋತ್ಸಾಹಿಸುವ ಅರಸರ ಗುಣವೇ ನತ್ಥನ್‌ ಖಾನ್ ಅವರಿಗೆ ಮೈಸೂರಿನ ಆಸ್ಥಾನ ವಿದ್ವಾಂಸ ಪದವಿ ದಯಪಾಲಿಸುತ್ತದೆ. ಉತ್ತರದ ಇನ್ನೂ ಅನೇಕ ಮುಸ್ಲಿಮ್ ಕಲಾವಿದರು ದಕ್ಷಿಣಕ್ಕೆ ಬರಲು ಸಂಗೀತೋತ್ಸವಗಳ ಆಕರ್ಷಣೆ ಪ್ರಬಲವಾಗಿತ್ತು. ಕನ್ನಡನಾಡಿನ ಹಲವು ನಗರಗಳ ರಾಮನವಮಿ ಸಂಗೀತೋತ್ಸವಗಳು ಶೇಖ್ ಚಿನ್ನ ಮೌಲಾನ ಸಾಹೇಬರು ಬದುಕಿರುವವರೆಗೆ ಅವರ ನಾದಸ್ವರ ಕಛೇರಿಯಿಂದಲೇ ಆರಂಭವಾಗುತ್ತಿದ್ದದ್ದು ವಿಶೇಷ.ಅವರು ನುಡಿಸುವ ‘ಜಗದಾನಂದ ಕಾರಕ’, ‘ಮಾಮವ ಪಟ್ಟಾಭಿರಾಮ’, ‘ಬಂಟುರೀತಿಕೋಲು ವಿನವಯ್ಯ ರಾಮ’ ಮುಂತಾದ ನಿತ್ಯನೂತನ ರಾಮಕೀರ್ತನೆಗಳನ್ನು ಕೇಳಿ ಧನ್ಯರಾಗಲೆಂದೇ ಜನ ಕಿಕ್ಕಿರಿದು ಸೇರುತ್ತಿದ್ದರು. ಒಮ್ಮೆ ರಾಮನವಮಿ ಸಂಗೀತೋತ್ಸವದಲ್ಲಿ ಭಾರೀ ಮಳೆ ಬಂದು ಚಪ್ಪರಕ್ಕೆ ನೀರು ನುಗ್ಗಿ ಕಛೇರಿ ಮಾಡಲಾಗಲಿಲ್ಲ ಎಂದು ನೊಂದ ಬಡೇ ಗುಲಾಂ ಅಲಿ ಖಾನ್ ಸಾಹೇಬರು ಒಂದು ವಾರ ಬೆಂಗಳೂರಿನಲ್ಲೇ ಉಳಿದು ಕೊನೆಯ ದಿನ ನಾಲ್ಕು ಗಂಟೆ ಕಛೇರಿ ಮಾಡಿದರಂತೆ. ಮುಸ್ಲಿಮ್ ಗುರುವಿನ ಮಗಳು ಅನ್ನಪೂರ್ಣಾದೇವಿಯನ್ನು ಮದುವೆಯಾದ ರವಿಶಂಕರ್, ಅಮ್ಜದ್ ಅಲಿ ಖಾನ್, ಪರ್ವೀನ್ ಸುಲ್ತಾನಾ, ರಷೀದ್ ಖಾನ್‌, ಕ್ರೈಸ್ತರಾದ ಯೇಸುದಾಸ್ ಮೊದಲಾದವರಂತೂ ರಾಮನವಮಿ ಸಂಗೀತೋತ್ಸವಗಳ ಸ್ಟಾರ್ ಕಲಾವಿದರು.ಸಂಗೀತದಲ್ಲಿ ಅಂತರ್ ಧರ್ಮೀಯ ಮದುವೆಗಳ, ಸುರೇಶ್ ಬಾಬು ಮಾನೆ ಎಂಬ ಹೆಸರುಗಳ ಹಿಂದಿನ ಕಥೆಯಂತೂ ಬಹಳ ದೊಡ್ಡದು.ದಕ್ಷಿಣದ ಸಂಗೀತೋತ್ಸವಗಳ ಸಂಘಟಕರನ್ನು ಮಾತನಾಡಿಸಿದರೆ ಸಾಕು, ಉತ್ತರಾದಿ ಸಂಗೀತದಲ್ಲಿ ಒಂದು ಶ್ರೀರಾಮಸೇನೆಯೇ ಇರುವಂತೆ ಭಾಸವಾಗುತ್ತದೆ. ಅವರೆಲ್ಲ ಕಛೇರಿ ದಿನ ಸಸ್ಯಾಹಾರ ಸೇವಿಸುತ್ತಿದ್ದ, ಮಂಗಳಾರತಿಯನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದ ಕಥೆಗಳು ಕಿವಿಗೆ ಬೀಳುತ್ತವೆ. ಮುಸ್ಲಿಮ್ ಕಲಾವಿದರು ಉಣಬಡಿಸಿದ ಕೃಷ್ಣನಾಮ ಸಕ್ಕರೆ, ವಿಠಲನಾಮ ತುಪ್ಪ ಎರಡೂ ಬೆರೆಸಿದ ರಾಮನಾಮ ಪಾಯಸವನ್ನು ದಕ್ಷಿಣ ಭಾರತದ ಸಂಗೀತ ರಸಿಕರೆಲ್ಲ ಕಟ್ಟಕ್ಕರೆಯಿಂದ ಸವಿದಿದ್ದಾರೆ!ಬಿಸ್ಮಿಲ್ಲಾ ಖಾನ್ ಸಾಹೇಬರು ಶೆಹನಾಯಿ ಹಿಡಿದು ವಾರಾಣಸಿಯಿಂದ ಬೆಂಗಳೂರಿಗೆ ಮೊದಲ ಬಾರಿಗೆ ಬಂದದ್ದೇ ಕೆ.ಎಸ್.ನಾರಾಯಣಸ್ವಾಮಿರಾವ್ ಅವರು ಆಹ್ವಾನಿಸಿದ ಸಂಗೀತೋತ್ಸವದಲ್ಲಿ ನುಡಿಸುವುದಕ್ಕಂತೆ. ನಂತರ ಅವರು ಕಛೇರಿ ಮಾಡಲು ಬಹಳ ಬಾರಿ ಅಮೆರಿಕಕ್ಕೆ ಹೋಗುವಂತಾಯಿತು. ‘ಭಾರತದಿಂದ ಇಲ್ಲಿಗೆ ಪದೇ ಪದೇ ಏಕೆ ಓಡಾಡುತ್ತೀರ ಖಾನ್ ಸಾಹೇಬರೇ, ಅಮೆರಿಕದಲ್ಲೇ ನೆಲೆಸಿಬಿಡಿ. ನಿಮಗೆ ಸಕಲ ಸೌಲಭ್ಯಗಳನ್ನೂ ಒದಗಿಸುತ್ತೇವೆ’ ಎಂದು ಅವರ ಅಭಿಮಾನಿಗಳು ಆಗ್ರಹಿಸಿದರಂತೆ. ಅದಕ್ಕೆ ಅವರು ಉತ್ತರಿಸಿದ್ದು ಹೀಗೆ: ‘ಆ ಕಾಶಿ ವಿಶ್ವನಾಥನನ್ನೂ ಇಲ್ಲಿಗೇ ಕರೆದು ತನ್ನಿ, ಆಮೇಲೆ ನಾನೂ ಇಲ್ಲೇ ನೆಲೆಸುತ್ತೇನೆ’. ಏಕೆಂದರೆ ಕಾಶಿಯಲ್ಲಿ ವಾಸವಾಗಿದ್ದ ಬಿಸ್ಮಿಲ್ಲಾ ಖಾನರು ಉದಯಕಾಲದೊಳೆದ್ದು ವಿಶ್ವನಾಥನ ಗುಡಿಯಲ್ಲಿ ಶೆಹನಾಯಿ ವಾದನದ ಸೇವೆ ಸಲ್ಲಿಸುತ್ತಿದ್ದುದನ್ನು ಬಿಡುತ್ತಾರೆ ಹೇಗೆ! ಇತಿಹಾಸವನ್ನು ಅನೇಕರು ಸೇರಿ ಕಟ್ಟಿರುತ್ತಾರೆ; ಆದರೆ ಅದನ್ನು ಉರುಳಿಸಿ, ತಾವೇ ಸುಟ್ಟ ಇಟ್ಟಿಗೆಗಳನ್ನು ಬಳಸಿ ಮರಳಿ ಕಟ್ಟುವುದರಲ್ಲಿ ಕೆಲವರಿಗೆ ಬಹಳ ಉತ್ಸಾಹ. ಇಡೀ ಸಾಂಸ್ಕೃತಿಕ ಪರಂಪರೆಯ, ಸಂಗೀತಲೋಕದ ಬಹುತ್ವವನ್ನು ಇವರು ಮರೆಮಾಚಲು ಬಯಸುತ್ತಾರೆ. ಅತ್ತ ಬ್ರಿಟನ್ನಿನ ಶಾಲೆಗಳಲ್ಲಿ ‘ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಸಂಗೀತ ಕಲಿಸಕೂಡದು, ಅದು ಇಸ್ಲಾಂ ಧರ್ಮಕ್ಕೆ ವಿರೋಧ’ ಎಂದು ಅವರ ಅಪ್ಪಅಮ್ಮಂದಿರು ಒತ್ತಾಯಿಸುತ್ತಾರೆ. ಮೂಲಭೂತವಾದ ಯಾವ ಧರ್ಮದಲ್ಲಿ ಇದ್ದರೂ ಅದು ಸಾಮಾಜಿಕ ಸಾಮರಸ್ಯ ಎಂಬ ಸಂಗೀತದ ಶ್ರುತಿ ಕೆಡಿಸುವುದು ಖಂಡಿತ.   

editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry