ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಲೋಚನಾ ಸಭೆ: ವಾಗ್ವಾದ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಕಮಲಾಪುರ: ಸಮೀಪದ ಅವರಾದ (ಬಿ) ಗ್ರಾಮದಲ್ಲಿ ಮಂಗಳವಾರ ನಡೆದ ರೈತರಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸುವ ಕುರಿತ ಸಮಾಲೋಚನಾ ಸಭೆಯಲ್ಲಿ ತಹಶೀಲ್ದಾರ್‌, ಶಾಸಕರು ಹಾಗೂ ರೈತರ ಮಧ್ಯ ವಾಗ್ವಾದ ನಡೆಯಿತು.

ಸುಮ್ಮನೆ ಬಂದು ಭಾಷಣ ಮಾಡಿ, ನಾಟಕ ತೋರಿಸಿದರೆ ಏನು ಮಾಡಿದಂತಾಗುತ್ತದೆ ಎಂದು ಪ್ರಶ್ನಿಸಿದ ರೈತರು ಜಿಲ್ಲಾಧಿಕಾರಿ ಬಂದು ಕೂಡಲೇ ಬರಗಾಲ ಘೋಷಣೆಗೆ ವರದಿ ಸಲ್ಲಿಸಬೇಕು ಎಂದು ಪಟ್ಟು ಹಿಡಿದರು.

ರೈತರ ಆತ್ಮಹತ್ಯೆ ಹೆಸರಿನಲ್ಲಿ ಗ್ರಾಮಗಳಿಗೆ ತೆರಳುತ್ತಿರುವ ರಾಜಕಾರಣಿಗಳು, ಅಧಿಕಾರಿಗಳು ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಸಮಸ್ಯೆಯ ಮೂಲ ಹುಡುಕಿ ಪರಿಹರಿಸುವ ನಿಟ್ಟಿನಲ್ಲಿ ಯಾರೋಬ್ಬರೂ ಪ್ರಯತ್ನಿಸುತ್ತಿಲ್ಲ. ಪ್ರತಿಯೊಂದಕ್ಕೂ ನಿಯಮಗಳನ್ನೆ ಅಡ್ಡಿತರುತ್ತಿದ್ದಾರೆ
ಎಂದು ದೂರಿದರು.

ಇವರು ತಿರುಗುವ ಖರ್ಚಿನಲ್ಲಿ ಗ್ರಾಮಗಳಿಗೆ ಕುಡಿಯುವ ನೀರು, ದನಕರುಗಳಿಗೆ ಮೇವು ಒದಗಿಸಬಹುದು. ಸಮಸ್ಯೆಗಳೇನಿದ್ದರೂ ನಮ್ಮಲ್ಲಿ ಹೇಳಿ ಎನ್ನುವ ನೀವು, ರೈತರು ಬಂದರೆ ಅವರಿಗೆ ಪತ್ರ ಬರೆಯಬೇಕು ಇವರಿಗೆ ಪತ್ರ ಬರೆಯಬೇಕೆಂದು ದಿನ ದೂಡುತ್ತಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಬೇಕಾಗಿರುವುದು ನಾಟಕವಲ್ಲ, ದನಕರುಗಳಿಗೆ ಮೇವು, ಕುಡಿಯಲು ನೀರು, ಮೇವಿಲ್ಲದೇ ಕಸಾಯಿಖಾನೆ  ಸೇರುತ್ತಿರುವ ಜಾನುವಾರಗಳನ್ನು ರಕ್ಷಿಸಲು ಗೋಶಾಲೆ, ಬಿತ್ತಿದ ಬೆಳೆ ಹಾನಿಯಾಗಿರುವ ರೈತರಿಗೆ ಬೆಳೆ ವಿಮೆ ಎಂದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ಕೊಡುತ್ತಿಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಿಂದೆ ಆಲಿಕಲ್ಲು ಮಳೆ ಬಂದು ಈ ಪ್ರದೇಶದಲ್ಲಿ ಬೆಳೆನಾಶವಾಗಿತ್ತು. ಅಧಿಕಾರಿಗಳು ಪರಿಶೀಲನೆ ಮಾಡಿಕೊಂಡು ಹೋಗಿದ್ದರು. ಆದರೆ ಪರಿಹಾರ ಮಾತ್ರ ಇಂದಿಗೂ ಬಂದಿಲ್ಲ ಎಂದು ಹೇಳಿದರು.

ಜೇವರ್ಗಿ, ಆಳಂದ ತಾಲ್ಲೂಕುಗಳಲ್ಲಿ ಪರಿಹಾರ ನೀಡಿರುವುದಾಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ  ತಿಳಿಸಿದರು. ಇದರಿಂದ ರೊಚ್ಚಿಗೆದ್ದ ರೈತರು ಎಲ್ಲ ಸೌಲಭ್ಯ ಕೇವಲ ಜೇವರ್ಗಿ, ಆಳಂದ ತಾಲ್ಲೂಕುಗಳಿಗೆ ಮಾತ್ರ. ನಮ್ಮ ಬೆಳೆ ನಾಶವಾಗಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಶಿೀಲ್ದಾರ್‌ ಬಸವಲಿಂಗಪ್ಪ ನಾಯ್ಕೊಡಿ ಮಾತನಾಡಿ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಾಗಿಯೇ ನಾವು ಬಂದಿದ್ದೇವೆ. ನಿಮ್ಮ ಬೇಡಿಕೆಗಳೆಲ್ಲವುಗಳನ್ನು ಇಂದೆ ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಜಿ. ರಾಮಕೃಷ್ಣ ಮಾತನಾಡಿ, ಕೂಡಲೇ ಮುಖ್ಯಮಂತ್ರಿಗಳ ಬಳಿಗೆ ತೆರಳಿ ಗ್ರಾಮೀಣ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಪಟ್ಟು ಹಿಡಿಯುತ್ತೇನೆ. ಮನವಿ ಸಲ್ಲಿಸಿ ಎಂದರು. ಜಂಬಗಾ, ಅಷ್ಟಗಾ, ಕಲ್ಲಹಂಗರಗಾ, ಆಲಗೂಡ, ಗಣಜಲಖೇಡ, ಯಳವಂತಗಿ ಗ್ರಾಮಸ್ಥರು ತಮ್ಮ ಜಾನುವಾರುಗಳೊಂದಿಗೆ ಬಂದು ಮನವಿ ಸಲ್ಲಿಸಿದರು.

ಗುಂಡೇರಾವ ಹಾಗರಗಿ, ಮೀರಜ ಪಾಟೇಲ, ಅವರಾದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಬಾಬುರಾವ, ಉಪಾಧ್ಯಕ್ಷೆ ಕಾಶಿಬಾಯಿ ಶಿವಶರಣಪ್ಪ, ಸದಸ್ಯ ಸತೀಷ ಕಟ್ಟಿಮನಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT