5

ಶಾಲೆ ಬಳಿಯ ಜಾಗಕ್ಕೆ ಚಿನ್ನದ ಬೆಲೆ

Published:
Updated:
ಶಾಲೆ ಬಳಿಯ ಜಾಗಕ್ಕೆ ಚಿನ್ನದ ಬೆಲೆ

ಪ್ರತಿಷ್ಠಿತ ಶಾಲೆಗಳ ಬಳಿಯ ಜಾಗಗಳ ಬೆಲೆ ನಗರದಲ್ಲಿ ಏರುಮುಖಿಯಾಗುತ್ತಲೇ ಇದೆ. ಮಕ್ಕಳ ಶಿಕ್ಷಣ ಆದ್ಯತೆಯ ‘ಪೋಷಕ ಪ್ರಜ್ಞೆ’ಗೂ ರಿಯಲ್‌ ಎಸ್ಟೇಟ್‌ ವಹಿವಾಟಿಗೂ ಆಸಕ್ತಿಕರ ಸಂಬಂಧವೊಂದು ಬೆಳೆದಿದೆ.ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಚದರ ಅಡಿ ಜಾಗಕ್ಕೆ ₨ 5 ಸಾವಿರ ಬೆಲೆ ಇದೆ. ಅಲ್ಲೇ ಹತ್ತಿರದಲ್ಲಿರುವ  ಪಶ್ಚಿಮ ಕಾರ್ಡ್‌ ರಸ್ತೆಯ ಅಂಡರ್‌ಪಾಸ್‌ನಿಂದ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ವೃತ್ತದವರೆಗೆ ಪ್ರತಿ ಚದರ ಅಡಿಗೆ ₨9 ಸಾವಿರ ಬೆಲೆ ಇದೆ.

ಶ್ರೀನಗರದಲ್ಲಿ ಚದರ ಅಡಿಗೆ ₨ 4 ಸಾವಿರ ಇದ್ದರೆ, ಬಸವನಗುಡಿಯಲ್ಲಿ ₨7,500 ಬೆಲೆ ಇದೆ.ಈ ‍ಪ್ರದೇಶಗಳಲ್ಲಿ ಭೂಮಿಗೆ ಹೆಚ್ಚಿನ ಬೆಲೆ ತಂದು ಕೊಟ್ಟಿರುವುದು ಶಿಕ್ಷಣ ಸಂಸ್ಥೆಗಳೆಂದರೆ ಅತಿಶಯೋಕ್ತಿಯಲ್ಲ. ಇಂತಹ ಟ್ರೆಂಡ್‌ ನಗರದಾದ್ಯಂತ ಇದೆ.  ಶಾಲಾ ಸಮೀಪದ ಜಾಗಕ್ಕೆ ಯಾವಾಗಲೂ ಬೇಡಿಕೆ ಜಾಸ್ತಿ. ಈ ಹಿಂದೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ನಗರದ ಹೃದಯ ಭಾಗದಲ್ಲಿ ತಳವೂರಿದ್ದವು. ಇಲ್ಲಿ ಜಾಗದ ಬೆಲೆ ತುಟ್ಟಿ ಆಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಸಂಚಾರ ದಟ್ಟಣೆ ಮತ್ತಿತರ ಕಾರಣಗಳಿಂದಾಗಿ ಅಂತರರಾಷ್ಟ್ರೀಯ ಶಾಲೆಗಳು, ‍ಪ್ರತಿಷ್ಠಿತ ಶಾಲೆಗಳು ನಗರದ ಹೊರವಲಯದಲ್ಲೂ ತಲೆಎತ್ತಿವೆ. ಹೀಗಾಗಿ ಇಲ್ಲೂ ಜಾಗದ ಬೆಲೆ ಗಗನಕ್ಕೆ ಏರಿದೆ.ಭೂಮಿ ಖರೀದಿ ಮಾಡುವವರು ಮೊದಲು ನೋಡುವುದು ಉತ್ತಮ ಮೂಲಸೌಕರ್ಯ, ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿರುವ ಪ್ರದೇಶವನ್ನೇ. ಹತ್ತಿರದಲ್ಲೇ ಶಾಲಾ ಕಾಲೇಜು ಇದ್ದರೆ ನಾಲ್ಕು ಕಾಸು ಹೆಚ್ಚಾದರೂ ಖರೀದಿದಾರರು ತಲೆಬಿಸಿ ಮಾಡಿಕೊಳ್ಳುವುದಿಲ್ಲ ಎಂದು ರಿಯಲ್‌ ಎಸ್ಟೇಟ್‌ ತಜ್ಞರು ಅಭಿಪ್ರಾಯಪಡುತ್ತಾರೆ.ಒಂದೆರಡು ವರ್ಷಗಳಿಂದ ಈಚೆಗೆ ಮಕ್ಕಳ ಸುರಕ್ಷತೆಯ ‍ಪ್ರಶ್ನೆಯೂ ಪ್ರಮುಖವಾಗಿದೆ. ಶಾಲೆಗಳಲ್ಲಿ, ಶಾಲಾ ವಾಹನಗಳಲ್ಲಿ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಪೋಷಕರನ್ನು ಕಂಗೆಡಿಸಿವೆ.  ಈ ಕಾರಣದಿಂದ ಮಕ್ಕಳನ್ನು ಬೇರೆಯವರ ಜತೆಗೆ ಕಳುಹಿಸಿಕೊಡಲು ಪೋಷಕರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಮಕ್ಕಳನ್ನು ನಿರಾತಂಕವಾಗಿ ಶಾಲೆಗೆ ಕಳುಹಿಸುವ ಸಲುವಾಗಿ ಪೋಷಕರು  ಶಾಲೆಯಿಂದ ಒಂದೆರಡು ಕಿ.ಮೀ. ವ್ಯಾಪ್ತಿಯ ಒಳಗೆ ಮನೆ ಮಾಡಲು ಬಯಸುತ್ತಿದ್ದಾರೆ.‘ಪೋಷಕರು ಸಾಮಾನ್ಯವಾಗಿ ಮನೆಗೆ ಹತ್ತಿರದಲ್ಲೇ ಇರುವ ಶಾಲೆಗೆ ಮಕ್ಕಳನ್ನು ಸೇರಿಸಲು ಬಯಸುತ್ತಾರೆ. ಒಂದೋ ಶಾಲೆಯ ಸಮೀಪದಲ್ಲಿ ಬಾಡಿಗೆ ಮನೆ ಮಾಡುತ್ತಾರೆ. ಇಲ್ಲವೇ ಜಾಗ ಖರೀದಿಸುತ್ತಾರೆ. ಹೀಗಾಗಿ ಬೇರೆ ಕಡೆಗೆ ಹೋಲಿಸಿದರೆ ಶಿಕ್ಷಣ ಸಂಸ್ಥೆಗಳಿರುವ ಕಡೆ ಭೂಮಿಗೆ ಬೆಲೆ ಜಾಸ್ತಿ’ ಎನ್ನುತ್ತಾರೆ ಕ್ರೆಡಾಯ್‌ ಬೆಂಗಳೂರು ಕಾರ್ಯದರ್ಶಿ ಸುರೇಶ್‌ ಹರಿ.‘ಮನೆ ಶಾಲೆಯಿಂದ ದೂರ ಇದ್ದರೆ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ತಿಂಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ.    ಮಕ್ಕಳು ಮನೆಗೆ ವಾಪಸ್‌ ಬರುವವರೆಗೆ ಆತಂಕದಿಂದಲೇ ಕಾಯಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ.ಹೀಗಾಗಿ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಾರೆ. ಈ ಕಾರಣದಿಂದ  ಮನೆ ಬಾಡಿಗೆ ಜಾಸ್ತಿ ಇದ್ದರೂ ಶಾಲೆಯ ಸಮೀಪದಲ್ಲೇ ಮನೆ ಮಾಡಲು ಒಲವು ತೋರುತ್ತಾರೆ’ ಎಂದು ಅವರು ಅಭಿಪ್ರಾಯಪಡುತ್ತಾರೆ. ‘ಶಾಲಾ ಕಾಲೇಜುಗಳು ವರ್ಷದಲ್ಲಿ ಕಾರ್ಯನಿರ್ವಹಿಸುವುದು 8–9 ತಿಂಗಳು ಮಾತ್ರ. ಅಲ್ಲಿನ ಪರಿಸರವೂ ಪ್ರಶಾಂತವಾಗಿರುತ್ತದೆ. ಇದೂ ಒಂದು ಕಾರಣ’ ಎನ್ನುತ್ತಾರೆ ಅವರು.

 

ಸಂಚಾರ ದಟ್ಟಣೆಯೂ ಕಾರಣ

ಕಾರ್ನರ್‌ ಸ್ಟೋರ್‌ ಪ್ರಾಪರ್ಟಿಸ್‌ನ ನಿರ್ದೇಶಕ (ಲ್ಯಾಂಡ್‌ ಬ್ಯಾಂಕಿಂಗ್‌) ಕಿರಣ್‌ ಪೂಣಚ್ಚ ಅವರು ಇದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ‘ಇತ್ತೀಚಿನ ವರ್ಷಗಳಲ್ಲಿ ಹೃದಯ ಭಾಗದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. 5–6 ಕಿ.ಮೀ. ದೂರ ಸಂಚಾರ ಮಾಡುವಾಗಲೇ ಜನ ಸುಸ್ತಾಗಿ ಬಿಡುತ್ತಾರೆ.ನಗರದೊಳಗಿನ ಗದ್ದಲದಿಂದ ಅನೇಕ ಅಂತರರಾಷ್ಟ್ರೀಯ ಶಾಲೆಗಳು ಹೊರವಲಯಕ್ಕೆ ಸ್ಥಳಾಂತರಗೊಂಡಿವೆ. ಶಾಲೆಗಳ ಬೆನ್ನ ಹಿಂದೆಯೇ ಬಿಲ್ಡರ್‌ಗಳು ಸಹ ತೆರಳಿದ್ದಾರೆ. ಶಾಲೆಯ ಆಜುಬಾಜಿನಲ್ಲೇ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ವರ್ತೂರು, ವೈಟ್‌ಫೀಲ್ಡ್, ಮಾರತಹಳ್ಳಿ ಮತ್ತಿತರ ಕಡೆಗಳಲ್ಲಿ ಭೂಮಿ ಬೆಲೆ ದಿಢೀರ್‌ ಏರಿಕೆ ಆಗಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.‘ಗಂಡ ಹೆಂಡತಿ ಇಬ್ಬರೂ ದುಡಿಯುವ ಸಂಸ್ಕೃತಿ ಈಗ ಸಾಮಾನ್ಯವಾಗಿದೆ. ಅವರು ದೂರದ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಇಷ್ಟಪಡುವುದಿಲ್ಲ.ಇಂದಿರಾನಗರದ ಮಗು ಮಾರತಹಳ್ಳಿಯ ಶಾಲೆಗೆ ಹೋಗಿ ಬರಲು ಕನಿಷ್ಠ 3 ಗಂಟೆ ಬೇಕು. ಶಾಲೆಗೆ ಹೋಗಿ ಬರುವಾಗಲೇ ಮಗು ಸುಸ್ತಾಗಿ ಬಿಡುತ್ತದೆ. ಇದನ್ನು ತಪ್ಪಿಸಲು ಪೋಷಕರು ಶಾಲೆಯ ಸಮೀಪದಲ್ಲೇ ಮನೆ ಮಾಡುತ್ತಾರೆ’ ಎಂದು ಅವರು ಹೇಳುತ್ತಾರೆ.ಬ್ರಿಗೇಡ್‌ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಓಂ ಅಹುಜಾ ಅವರ ಪ್ರಕಾರ, ಪ್ರದೇಶ, ಸಾರಿಗೆ ವ್ಯವಸ್ಥೆ ಹಾಗೂ ಸಾಮಾಜಿಕ– ಆರ್ಥಿಕ ವಿಷಯಗಳ ಆಧಾರದಲ್ಲಿ ಭೂಮಿಯ ಬೆಲೆ ನಿಗದಿಯಾಗುತ್ತದೆ. ಅತ್ಯುತ್ತಮ ಮೂಲಸೌಕರ್ಯ, ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಒಂದೇ ಕಡೆ ಇರುವ ಜಾಗಕ್ಕೆ ಚಿನ್ನದ ಬೆಲೆ ಇದೆ. ಬೇರೆ ಕಡೆಗೆ ಹೋಲಿಸಿದರೆ ಶಿಕ್ಷಣ ಸಂಸ್ಥೆಗಳ ಆಸುಪಾಸಿನ 2–3 ಕಿ.ಮೀ. ‍ವ್ಯಾಪ್ತಿಯಲ್ಲಿ ಜಾಗದ ಬೆಲೆ ಶೇ 20ರಿಂದ 25ರಷ್ಟು ಜಾಸ್ತಿ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry