5

ಸಮಾಜದ ಕನ್ನಡಿಯಲ್ಲಿ ಸುಟ್ಟ ಬಿಂಬಗಳು

ಆರ್‌. ಪೂರ್ಣಿಮಾ
Published:
Updated:
ಸಮಾಜದ ಕನ್ನಡಿಯಲ್ಲಿ ಸುಟ್ಟ ಬಿಂಬಗಳು

ಆ್ಯಸಿಡ್‌ ಸಂತ್ರಸ್ತರ ಬದುಕೇ ಒಂದು ಉರಿವ ಚಿತೆ. ಈ ಕ್ರೌರ್ಯ ಸಹನಶೀಲತೆಯ ಬೇರುಗಳನ್ನೂ ಸುಡುತ್ತಿದೆ.

ಸಮಾನತೆಯ ಸೂತ್ರಗಳ ತಳಹದಿಯ ಮೇಲೆ ಗಂಡು ಮತ್ತು ಹೆಣ್ಣುಮಕ್ಕಳಿಬ್ಬರನ್ನೂ ಬೆಳೆಸುವುದು ಆ್ಯಸಿಡ್‌  ದಾಳಿ ಸೇರಿ ನಮ್ಮ ಅನೇಕ ಸಾಮಾಜಿಕ ರೋಗಗಳಿಗೆ ಮದ್ದಾಗಬಲ್ಲದು ಎನ್ನುವುದನ್ನು ಎಷ್ಟು ವಿವರಿಸಿದರೂ ಸಾಲದು.

ಸಾಮಾಜಿಕ ಜೀವನದಲ್ಲಿ ಎಲ್ಲವೂ ಕಾಲಕ್ಕೆ ಅನುಗುಣವಾಗಿ ನವೀಕರಣಗೊಳ್ಳುವಂತೆ ದ್ವೇಷ, ಹಿಂಸೆ ಮತ್ತು ಕ್ರೌರ್ಯವೂ ಹೊಸಹೊಸ ರೂಪಗಳಲ್ಲಿ ಕಾಣಿಸುತ್ತವೆ. ಗಂಡನ ಚಿತೆಗೆ ಹೆಂಡತಿಯನ್ನು ದೂಡುತ್ತಿದ್ದ ಅಥವಾ ಅವಳೇ ಭ್ರಮಾಧೀನಳಾಗಿ ಚಿತೆಗೆ ಹಾರುವಂತೆ ಮಾಡುತ್ತಿದ್ದ ಸಂಗತಿ ಶತಮಾನಗಳಿಂದ ನಮಗೆ ಗೊತ್ತೇ ಇದೆ. ಹೆಚ್ಚು ವರದಕ್ಷಿಣೆಗಾಗಿ ಸೊಸೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ವಿಷಯ ನಮ್ಮ ಸ್ವಾತಂತ್ರ್ಯೋತ್ತರ ಸಾಮಾಜಿಕ ಚರಿತ್ರೆಯ ಹಳೆಯ ಅಧ್ಯಾಯವಾಗಿಬಿಟ್ಟಿದೆ. 

ಈಗ ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದ ‘ಆ್ಯಸಿಡ್‌ ದಾಳಿ’ ಎಂಬ ಕ್ರೌರ್ಯ, ಹೆಣ್ಣಿನ ದೇಹವನ್ನು ಅರ್ಧ ಮಾತ್ರ ಸುಟ್ಟು ಅವಳ ಉಳಿದಿಡೀ ಬದುಕನ್ನು ಉರಿವ ಚಿತೆಯ ಮೇಲಿಟ್ಟು ಬೇಯಿಸುತ್ತಿದೆ. ಅದರೊಂದಿಗೆ ಮನುಷ್ಯ ಸಂಬಂಧಗಳಲ್ಲಿ ಇರಲೇಬೇಕಾದ ಮುಖ್ಯ ಗುಣವಾದ ಸಹನಶೀಲತೆಯ ಬೇರುಗಳನ್ನೂ ಸುಡುತ್ತಿದೆ.ಈ ವಿನೂತನ ಕ್ರೌರ್ಯವನ್ನು ಹತ್ತಿಕ್ಕುವುದರಲ್ಲಿ ಸರ್ಕಾರಗಳು ಮತ್ತು ನ್ಯಾಯಾಲಯಗಳ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಎತ್ತಿ ಹೇಳಬೇಕಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಸಾವಿರಾರು ಪ್ರಕರಣಗಳಲ್ಲಿ, ಕೆಲವೊಂದು ಮಾತ್ರ ಅವಕ್ಕೆ ಸಿಕ್ಕ ನಿಸ್ಸೀಮ ನಿರ್ಲಕ್ಷ್ಯದ ಕಾರಣದಿಂದಲೇ ಗಮನ ಸೆಳೆಯುತ್ತವೆ. ಕಳೆದ ವಾರ ಆ್ಯಸಿಡ್‌ ದಾಳಿ ಸಂತ್ರಸ್ತರ ಪುನರ್ವಸತಿ ವಿಚಾರದಲ್ಲಿ ತಾವು ಕೈಗೊಂಡ ಕ್ರಮಗಳ ವಿವರಗಳನ್ನು ಸಲ್ಲಿಸದ ನಾಲ್ಕು ರಾಜ್ಯ ಸರ್ಕಾರಗಳ ಉದಾಸೀನ ಧೋರಣೆ ಸುಪ್ರೀಂ ಕೋರ್ಟ್ ಪೀಠದ ಅಸಮಾಧಾನಕ್ಕೆ ಗುರಿಯಾಗಿತ್ತು.

ನಮ್ಮ ಕರ್ನಾಟಕ, ಕೇರಳ, ಮಿಜೋರಾಮ್ ಮತ್ತು ಮಧ್ಯಪ್ರದೇಶ ರಾಜ್ಯಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಕೋರ್ಟ್‌ನಲ್ಲಿ ಖುದ್ದಾಗಿ ಹಾಜರಾಗಿ ಒಟ್ಟಿನಲ್ಲಿ ನ್ಯಾಯಾಂಗ ನಿಂದನೆಗೆ ಪಕ್ಕಾಗುವುದನ್ನು ತಪ್ಪಿಸಿಕೊಂಡರು. ಆದರೆ ಆ್ಯಸಿಡ್‌ ದಾಳಿಯ ಅನ್ಯಾಯಕ್ಕೊಳಗಾದ ಸಂತ್ರಸ್ತರಿಗೆ ಇನ್ನು ಅಳಿದುಳಿದ ನ್ಯಾಯ (?) ಒದಗಿಸುವ ಕೆಲಸದಲ್ಲಿ ಸರ್ಕಾರಗಳು ಇನ್ನಾದರೂ ಹೆಚ್ಚು ಗಮನ ಕೊಡಬೇಕಷ್ಟೆ.ಸ್ವಾಭಿಮಾನ ಹೊಂದಿದ, ಸ್ವಯಂ ನಿರ್ಧಾರ ಪ್ರಕಟಿಸುವ, ತನ್ನ ಮಾತು ಕೇಳದ, ತನ್ನಿಷ್ಟಕ್ಕೆ ಬಗ್ಗದ ಹೆಣ್ಣನ್ನು ಹೇಗಾದರೂ ‘ದಾರಿಗೆ ತರುವ’ ಬಹದ್ದೂರ್ ಗಂಡುಗಳು ಯಾವ ಕಾಲದಲ್ಲೂ ಶೂರರೆನ್ನಿಸುತ್ತಾರೆ. ಗಂಡಸರಿರಲಿ, ಹೆಂಗಸರೂ ಅವರನ್ನು ಮನಸಾರೆ ಮೆಚ್ಚುತ್ತಾರೆ. ತಮ್ಮ ಕೋರಿಕೆಯನ್ನು ತಿರಸ್ಕರಿಸುವ ದಿಟ್ಟತನ ತೋರುವ ‘ಗಂಡುಬೀರಿಗಳು, ಬಜಾರಿಯರು’ ಮತ್ತು ಇಷ್ಟಾನಿಷ್ಟಗಳನ್ನು ಗಟ್ಟಿಯಾಗಿ ಹೇಳಲು ಹೆದರುವ ಅಸಹಾಯಕ ಹೆದರುಪುಕ್ಕಿಯರು- ಇಂಥ ಇಬ್ಬರನ್ನೂ ಕೊಲ್ಲದೆಯೂ ಒಂದೇ ಏಟಿಗೆ ನಾಶ ಮಾಡುವ ಸುಲಭ ವಿಧಾನವೆಂದರೆ ಆ್ಯಸಿಡ್‌ ದಾಳಿ.ನಿನ್ನೆಯವರೆಗೆ ಪ್ರೇಮ ಪ್ರೀತಿ ಪ್ರಣಯದ ಅಥವಾ ಮದುವೆಯ ಬೆಚ್ಚನೆಯ ಮಾತು ಆಡುತ್ತಿದ್ದವನು ಇಂದು ಆ್ಯಸಿಡ್‌ ಎರಚಿ ಸುಡುವಂಥ ಕ್ರೌರ್ಯ ತೋರುತ್ತಾನೆ. ಹೇಗಾದರೂ ಹೆಣ್ಣಿನ ಸೊಕ್ಕು ಮುರಿಯುವುದು ಗಂಡಸಿನ ಶೌರ್ಯದ ಒಂದು ಮುಖ್ಯ ಅಂಶ; ಕ್ರೌರ್ಯವಿಲ್ಲದೆ ಶೌರ್ಯ ಇರುವುದು ಹೇಗೆ?ಒಬ್ಬ ಹೆಣ್ಣುಮಗಳ ಮೇಲಿರುವ ಕೋಪ, ಸೇಡು, ಅಸಹನೆಗಳನ್ನು ತೋರಿಸಲು ಅತ್ಯಾಚಾರವೇ ಒಂದು ಅಸ್ತ್ರವಾಗುವುದು ಇರಲಿ, ಅವಳ ಕುಟುಂಬದೊಳಗಿರುವ ಅವಳ ಅಪ್ಪ, ಗಂಡ, ಅಣ್ಣತಮ್ಮಂದಿರ ಮೇಲೆ ಇರುವ ಸೇಡು ತೀರಿಸಿಕೊಳ್ಳಲು ಅವಳ ಮೇಲೆ ಅತ್ಯಾಚಾರ ಮಾಡುವುದೂ ನಮ್ಮ ಸಮಾಜದಲ್ಲಿದೆ. ಈಗ ಗಂಡಸರ ಬತ್ತಳಿಕೆಗೆ ಅತ್ಯಾಚಾರದ ಜೊತೆಗೆ ಆ್ಯಸಿಡ್‌ ದಾಳಿ ಸೇರಿಕೊಂಡಿದೆ. ಶಾಲೆಯಲ್ಲಿ ತಮಗಿಂತ ಚೆನ್ನಾಗಿ ಪಾಠ ಮಾಡಿ ಮಕ್ಕಳ ವಿಶ್ವಾಸ ಗಳಿಸಿದ ಎರಡು ಮಕ್ಕಳ ತಾಯಿಯೂ ಆದ ಶಿಕ್ಷಕಿಯೊಬ್ಬಳ ಮೇಲೆ ದ್ವೇಷ ಕಾರುತ್ತಿದ್ದ ಪುರುಷ ಸಹೋದ್ಯೋಗಿಗಳು ಆ್ಯಸಿಡ್‌ ಎರಚಿ ಅವಳಿಗೆ ‘ಪಾಠ’ ಕಲಿಸಿದರು.ಸ್ವಂತ ಪ್ರೀತಿಪ್ರೇಮದ ನಿರಾಕರಣೆಯ ಹತಾಶೆಯ ಮಾತು ಬಿಡಿ, ದಾಯಾದಿಗಳ ನಡುವಿನ ಆಸ್ತಿ ವ್ಯಾಜ್ಯ, ಹಳ್ಳಿ ಚುನಾವಣೆಯ ಕ್ಷುಲ್ಲಕ ಕಾದಾಟಗಳ ಸೇಡೂ ಕೂಡ ಎದುರಾಳಿಗಳ ಮನೆಯ ಅಮಾಯಕ ಹೆಣ್ಣುಮಕ್ಕಳ ಮುಖಕ್ಕೆ ಆ್ಯಸಿಡ್‌ ಎರಚುವುದರಲ್ಲಿ ‘ಸೆಟಲ್’ ಆಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ, ದೊಡ್ಡಪ್ಪನ ಮೇಲಿನ ಕೋಪ, ದೇವಸ್ಥಾನಕ್ಕೆ ಬಂದ ದೊಡ್ಡಮ್ಮನ ಮೇಲೆ ಆ್ಯಸಿಡ್‌ ಎರಚಿದ ಘಟನೆಯೂ ನಮ್ಮ ಹಾಸನದಲ್ಲೇ ನಡೆಯಿತಲ್ಲ? ಸೇಡು ಯಾವುದಾದರೇನು, ಯಾರ ಮೇಲಾದರೇನು ಅವರ ಮನೆಯ ಹೆಂಗಸರನ್ನು ಕಾಡುವುದು, ಸುಡುವುದು ತುಂಬ ಸುಲಭದ ಕೆಲಸ.ಆದರೇನು, ಇಂಥ ಹೇಡಿ ಸೇಡನ್ನೂ ಖಂಡಿಸುವ ಸಂವೇದನೆ ನಮ್ಮ ಸಮಾಜದಲ್ಲಿ ಕಾಣುವುದಿಲ್ಲ. ಇದಕ್ಕೆ ಕೆಲವು ಉದಾಹರಣೆಗಳನ್ನು ಕೊಡಬಹುದು: ತನ್ನ ‘ಡವ್’ ಮುಂದೆ ತನ್ನ ಲವ್ ನಿವೇದಿಸುತ್ತಾ ಹುಡುಗನೊಬ್ಬ ‘ನಂಗೆ ನೀನು ಸಿಗಲೇಬೇಕು ಅಂತ ಹಾಡ್ತೀನಿ... ನಂಗೆ ನೀನು ಸಿಗದೇ ಹೋದ್ರೆ ಆ್ಯಸಿಡ್‌  ಹಾಕ್ತೀನಿ...’ ಎಂದು ಕುಣಿಯುವ ಒಂದು ಹಳೆಯ ಕೀಳು ಕ್ಯಾಸೆಟ್ ಹಾಡು ಮುಂಬರುವ ರಾಜ್ಯೋತ್ಸವದ ಚಪ್ಪರಗಳಲ್ಲಿ ಮತ್ತೆ ಕೇಳಿಸಬಹುದು. ಹಿಂದಿನ ಒಂದು ಟಿವಿ ಧಾರಾವಾಹಿಯಲ್ಲಿ ಹುಡುಗಿಯ ಮುಖಕ್ಕೆ ಆ್ಯಸಿಡ್‌  ಹಾಕುವ ಬೆದರಿಕೆ ನೋಡಿದವರನ್ನು ಬೆಚ್ಚಿ ಬೀಳಿಸಲಿಲ್ಲ.ಕೆಲವು ವರ್ಷಗಳ ಹಿಂದೆ ಹೆಂಡತಿಯ ಮುಖಕ್ಕೆ ಆ್ಯಸಿಡ್‌  ಎರಚಿದ ಗಂಡನೊಬ್ಬ ತಾನು ಈ ಕೆಲಸ ಮಾಡಲು ಒಂದು ಕನ್ನಡ ಚಲನಚಿತ್ರವನ್ನು ತುಂಬಾ ಸಲ ನೋಡಿ ಪ್ರೇರಣೆ ಪಡೆದೆ ಎಂದು ಪೊಲೀಸರ ಮುಂದೆ ಹೆಮ್ಮೆಯಿಂದ ಹೇಳಿದ್ದು ಅಷ್ಟೇನೂ ಆತಂಕದ ಸುದ್ದಿ ಆಗಲಿಲ್ಲ. ಇನ್ನು ನಮ್ಮ ದೇಶದ ಇತರ ಎಲ್ಲಾ ಭಾಷೆಗಳ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಇರುವ ಆ್ಯಸಿಡ್‌  ಎರಚುವ ಬೆದರಿಕೆ ಉದಾಹರಣೆಗಳ ಬಗ್ಗೆ ಸಂಶೋಧನೆ ನಡೆಯಬೇಕಷ್ಟೆ. ಹಾಗಾಗಿ, ‘ಹೊಡಿ ಬಡಿ ಕಡಿ’ ಎಂಬ ನಮ್ಮ ಸಾಂಸ್ಕೃತಿಕ ಸೂತ್ರ ‘ಹೊಡಿ ಬಡಿ ಕಡಿ ಸುಡಿ’ ಎಂದು ಬಡ್ತಿ ಪಡೆಯುವುದು ಬಹಳ ಸುಲಭ. ಹೆಂಗಸರ ದ್ವೇಷಾಸೂಯೆಗಳೇ ಬಹುಪಾಲು ಧಾರಾವಾಹಿಗಳ ಪರಮಪ್ರೀತಿಯ ವಸ್ತುಗಳಾಗಿವೆ ಎನ್ನುವ ಸತ್ಯ ಅವುಗಳ ವೀಕ್ಷಕರಿಗೆ ಗೊತ್ತೇ ಇದೆ; ಪಶ್ಚಿಮ ಬಂಗಾಳದಲ್ಲಿ ಕಸ ಬಿಸಾಡುವ ಜಗಳದ ಸೇಡು ತೀರಿಸಿಕೊಳ್ಳಲು ಪಕ್ಕದ್ಮನೆ ಆಂಟಿಯೊಬ್ಬಳು ಕಿಟಕಿಯಿಂದ ಪುಟ್ಟ ಹುಡುಗನ ಮುಖಕ್ಕೆ ಆ್ಯಸಿಡ್‌ ಎರಚಿದ, ಆಂಧ್ರ ಪ್ರದೇಶದ ಹುಡುಗಿಯೊಬ್ಬಳು ತನ್ನನ್ನು ಪ್ರೀತಿಸಿ ಕೈಕೊಟ್ಟ ಹುಡುಗನ ಮುಖಕ್ಕೆ ಆ್ಯಸಿಡ್‌ ಸುರಿದ ಹೊಚ್ಚಹೊಸ ಬೆಳವಣಿಗೆಗಳನ್ನು ಧಾರಾವಾಹಿಗಳು ಬಾಚಿಕೊಂಡರೆ ಆಶ್ಚರ್ಯವಿಲ್ಲ.

ಏಕೆಂದರೆ ಕಾರಣ ಏನಾದರೂ ಆಗಿರಲಿ, ಆ್ಯಸಿಡ್‌  ದಾಳಿಯಂಥ ಅಪರಾಧವನ್ನು ಖಂಡಿಸುವುದು ನಮ್ಮ ಕರ್ತವ್ಯ ಮತ್ತು ಅದೇ ನಮಗೆ ‘ಆ್ಯಸಿಡ್‌  ಟೆಸ್ಟ್’ ಎಂದು ಸಾಂಸ್ಕೃತಿಕ ವಲಯ ಭಾವಿಸುವುದೇ ಇಲ್ಲ! ಆ್ಯಸಿಡ್‌  ದಾಳಿ ದೇಶದ ಗಮನ ಸೆಳೆಯುವಂತೆ ಹೆಚ್ಚಿದ್ದು 1990ರ ನಂತರ ಎಂದು ಗುರುತಿಸಲಾಗಿದೆ. ಈಗ ದೇಶದಲ್ಲಿ ವಾರಕ್ಕೆ ಮೂರು ಆ್ಯಸಿಡ್‌  ದಾಳಿ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಅದು ಶೇ 300ರಷ್ಟು ವಿಪರೀತವಾಗಿ ಹೆಚ್ಚಾಗಿದೆ. ನೆರೆಹೊರೆಯ ಬಾಂಗ್ಲಾದೇಶ, ಪಾಕಿಸ್ತಾನ ಸೇರಿ ದಕ್ಷಿಣ ಏಷ್ಯಾ ವಲಯದಲ್ಲಿ ಅದು ಗಾಬರಿ ಹುಟ್ಟಿಸುವಷ್ಟು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ.ಉಗಾಂಡ, ಕಾಂಬೋಡಿಯ ಮುಂತಾದ ಕಡೆಗಳಲ್ಲಿ ಕೂಡ ಇರುವ ಆ್ಯಸಿಡ್‌  ದಾಳಿ ಕ್ರೌರ್ಯ ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿ ಅಪರೂಪವೇನಲ್ಲ. ಎಲ್ಲ ದೇಶಗಳ ಅಪರಾಧ ಸಂಹಿತೆಗಳಲ್ಲಿ ಆ್ಯಸಿಡ್‌  ದಾಳಿಯ ತಡೆ ಮತ್ತು ಶಿಕ್ಷೆಗೆ, ಸಂತ್ರಸ್ತರ ಪುನರ್ವಸತಿಗೆ ಹೊಸ ಕ್ರಮಗಳನ್ನು, ವಿಧಿಗಳನ್ನು ಸೇರಿಸುವುದು ಅನಿವಾರ್ಯವಾಗುತ್ತಿದೆ. ಆ್ಯಸಿಡ್‌  ದಾಳಿ ಕುರಿತು ನ್ಯಾಯಾಲಯ ಪ್ರಕರಣಗಳು ಮತ್ತು ಅದರಿಂದ ಹೊಮ್ಮುವ ಕಳಕಳಿಗಳನ್ನು ಗಮನಿಸದಿರಲು ಸಾಧ್ಯವೇ ಇಲ್ಲ. ಸಂತ್ರಸ್ತರ ಕಣ್ಣೀರು ಒರೆಸಿ ಅವರ ಉಳಿದ ಬದುಕಿಗೆ ನೆರವಾಗಲೆಂದೇ ಜಗತ್ತಿನಾದ್ಯಂತ ನೂರಾರು ಹೊಸ ಸರ್ಕಾರೇತರ ಸಂಸ್ಥೆಗಳು ಹುಟ್ಟುತ್ತಿವೆ.ಆ್ಯಸಿಡ್‌  ದಾಳಿಗೆ ತುತ್ತಾದ ನಂತರದ ಹೆಣ್ಣಿನ ಜೀವನವೇ ಒಂದು ಉರಿವ ಚಿತೆ ಎಂಬುದನ್ನು ವರ್ಣಿಸಲು ಯಾವ ಭಾಷೆಯ ಪದಗಳಿಗೂ ಸಾಧ್ಯವಿಲ್ಲ. ತಡೆಯಲು ಅಸಾಧ್ಯವಾದ ದೈಹಿಕ ಉರಿ- ನೋವು, ಆಕಾರ ವಿರೂಪಗೊಂಡ ಆಘಾತ, ಕೌಟುಂಬಿಕ ಸಾಮಾಜಿಕ ಭರ್ತ್ಸನೆಗಳು, ತೀವ್ರ ಆರ್ಥಿಕ ಸಂಕಷ್ಟ, ಕಠಿಣ ಕಾನೂನು ಹೋರಾಟ ಇವೆಲ್ಲವೂ ಸೇರಿ ಅವಳು ಪ್ರತಿದಿನ ಸಾಯುತ್ತಾಳೆ. ಅಂಥದರಲ್ಲಿ ಬದುಕುವ ಹಕ್ಕು ಮತ್ತು ಹಟ ಉಳಿಸಿಕೊಳ್ಳುವುದೇ ಒಂದು ಪವಾಡ.

ನೂರೆಂಟು ನೋವುಗಳಲ್ಲಿ ನರಳುವ ಅವಳಿಗೆ ಸರ್ಕಾರ ಕೊಡುವ ಮೂರು ಲಕ್ಷ ರೂಪಾಯಿ ಪರಿಹಾರವೇ ಒಂದು ಪರಿಹಾಸ್ಯದಂತೆ ತೋರುತ್ತದೆ. ಆ್ಯಸಿಡ್‌  ಮಾಡಿರುವ ಹಾನಿಯ ಪ್ರಮಾಣದ ಆಧಾರದ ಮೇಲೆ ವೈದ್ಯಕೀಯ ಚಿಕಿತ್ಸೆ ನಡೆಯುವುದರಿಂದ ಅದಕ್ಕೆ ನಲವತ್ತು ಐವತ್ತು ಲಕ್ಷ ರೂಪಾಯಿಗಳಷ್ಟು ಅಗತ್ಯವಾದರೂ ಆಶ್ಚರ್ಯವಿಲ್ಲ. ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಪ್ರಥಮ ಚಿಕಿತ್ಸೆಯಿಂದ ಸುರೂಪ ಚಿಕಿತ್ಸೆವರೆಗೆ ಎಲ್ಲ ವೈದ್ಯಕೀಯ ನೆರವನ್ನೂ ಉಚಿತವಾಗಿ ನೀಡಬೇಕೆಂದು ಖಾಸಗಿ ಆಸ್ಪತ್ರೆಗಳಿಗೂ ಕಡ್ಡಾಯ ಮಾಡಿ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ. ಆದರೆ ಆ್ಯಸಿಡ್‌  ದಾಳಿ ಸಂತ್ರಸ್ತರ ಆಸ್ಪತ್ರೆ ಅಲೆದಾಟದ ಗೋಳುಗಳನ್ನು ಕೇಳಿದರೆ, ನಮ್ಮ ಆರೋಗ್ಯ-ಆಸ್ಪತ್ರೆ ವ್ಯವಸ್ಥೆಯೇ ಎಷ್ಟು ರೋಗಗ್ರಸ್ತ ಎನ್ನುವುದು ಮೇಲ್ನೋಟಕ್ಕೇ ಖಚಿತವಾಗುತ್ತದೆ.    ಅವೆಲ್ಲ ಅಪರಾಧ ನಡೆದ ನಂತರದ ವ್ಯಥೆಯ ಕಥೆ. ಆ್ಯಸಿಡ್‌ ದಾಳಿ ನಡೆಯದಂತೆ ತಡೆಯುವ ಕ್ರಮಗಳೇ ಬಹಳ ಮುಖ್ಯ. ವ್ಯಕ್ತಿಗಳು ಯಾವುದೇ ಆ್ಯಸಿಡ್‌ ಕೊಳ್ಳಲು ವಿಳಾಸ, ಭಾವಚಿತ್ರ ಇರುವ ಗುರುತಿನ ಚೀಟಿ ಅಗತ್ಯ ಎಂದೆಲ್ಲ ಕಾನೂನು ಬಿಗಿ ಮಾಡಿದ್ದರೂ ನಮ್ಮ ದೇಶದಲ್ಲಿ ಕಾಸು ಕೊಟ್ಟರೆ ಕೋಕಾಕೋಲಾದಷ್ಟು ಸುಲಭವಾಗಿ ಭೀಕರ ಆ್ಯಸಿಡ್‌ಗಳನ್ನು ಕೊಳ್ಳಬಹುದು. ಆದರೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿ ಅವನ್ನು ಜತನವಾಗಿ ಕಾಯುವುದು ಕಷ್ಟವಾದರೂ ಆಗಲೇಬೇಕಾದ ಕೆಲಸ.ಆ್ಯಸಿಡ್‌ ಗಳನ್ನು ಅಗತ್ಯವಾಗಿ ಬಳಸುವ ಹತ್ತಾರು ಉದ್ಯಮಗಳು ತೀರಾ ಸಾಧಾರಣ ಷೆಡ್‌ಗಳು, ಅಂಗಡಿಗಳು, ಗ್ಯಾರೇಜ್‌ಗಳಲ್ಲಿ ಹರಡಿಕೊಂಡಿವೆ. ಅಲ್ಲಿ ಕೆಲಸ ಮಾಡುವ ಬಹುಪಾಲು ಅರೆಶಿಕ್ಷಿತ ಕೆಲಸಗಾರರಿಗೆ ಕಾಸಿನಾಸೆಗೆ ಕದ್ದು ಸಾವಿನ ದ್ರವವನ್ನು ಮಾರುತ್ತಿದ್ದೇವೆಂಬ ಕಲ್ಪನೆಯೂ ಇರುವುದಿಲ್ಲ. ಆ್ಯಸಿಡ್‌ನ ಭೀಕರ ಪರಿಣಾಮಗಳು ಮತ್ತು ಅವುಗಳ ವಿಕೃತ ಬಳಕೆಯ ಸಾಧ್ಯತೆಗಳ ಬಗ್ಗೆ ಅರಿವು ಮೂಡಿಸುವುದು ಅಸಂಘಟಿತ ವಲಯದಲ್ಲಿ ಕಡುಕಷ್ಟದ ಕೆಲಸ.ಸಮಾನತೆಯ ಸೂತ್ರಗಳ ತಳಹದಿಯ ಮೇಲೆ ಗಂಡು ಮತ್ತು ಹೆಣ್ಣುಮಕ್ಕಳಿಬ್ಬರನ್ನೂ ಬೆಳೆಸುವುದು ಆ್ಯಸಿಡ್‌  ದಾಳಿ ಸೇರಿ ನಮ್ಮ ಅನೇಕ ಸಾಮಾಜಿಕ ರೋಗಗಳಿಗೆ ಮದ್ದಾಗಬಲ್ಲದು ಎನ್ನುವುದನ್ನು ಎಷ್ಟು ವಿವರಿಸಿದರೂ ಸಾಲದು. ಪ್ರೇಮದ ನೆಪದಲ್ಲಿ ಹುಡುಗನೊಬ್ಬ ಹೆಣ್ಣನ್ನು ‘ಗೆಲ್ಲುವುದೇ’ ಯಶಸ್ಸು ಎಂದು ರೂಪಿಸುವ ಕಥಾನಕಗಳಲ್ಲಿ ಬೆಳೆಯುವ ಬಾಲ್ಯಕ್ಕೆ ಎಲ್ಲರೂ ಸಮಾನರು, ಎಲ್ಲರ ಭಾವನೆಗಳನ್ನೂ ಗೌರವಿಸಬೇಕು ಎಂಬುದನ್ನು ಕಲಿಸುವುದು ಒಂದು ಸವಾಲು.ಸ್ಪರ್ಧೆಯೇ ನಮ್ಮ ಶಿಕ್ಷಣದ ಸೂತ್ರವಾಗಿರುವಾಗ, ಸೋಲುಗೆಲುವುಗಳನ್ನು ಸಮಸ್ಥಿತಿಯಿಂದ ಸ್ವೀಕರಿಸುವ ಮತ್ತು ನಿರಾಕರಣೆಯೂ ಎಲ್ಲರ ಹಕ್ಕು ಮುಂತಾದುವನ್ನು ಅರ್ಥ ಮಾಡಿಕೊಳ್ಳುವ ಮನಃಸ್ಥಿತಿ ರೂಪಿಸುವುದು ಇನ್ನೂ ದೊಡ್ಡ ಸವಾಲು. ಆದರೆ ಈ ಸವಾಲುಗಳನ್ನು ಸ್ವೀಕರಿಸದಿದ್ದರೆ, ಆ್ಯಸಿಡ್‌ ಸಂತ್ರಸ್ತೆಯ ಮುಖದ ವಿರೂಪ ನಮ್ಮ ಸಂಸ್ಕೃತಿಯ ವಿರೂಪವೂ ಆಗುತ್ತದೆಂಬ ಸಂಕಟ ಉಳಿಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry