7

ಹುಸಿ ಧಾರ್ಮಿಕತೆಯ ನಿಜ ಅವಾಂತರಗಳು

ಆರ್‌. ಪೂರ್ಣಿಮಾ
Published:
Updated:
ಹುಸಿ ಧಾರ್ಮಿಕತೆಯ ನಿಜ ಅವಾಂತರಗಳು

ವಿಧಾನಸಭೆ ಚುನಾವಣೆ ಕಾರಣದಿಂದ ಬಿಹಾರ ಬಹಳ ಸುದ್ದಿಯಲ್ಲಿ ಇರುವುದು ಸಹಜ; ಆದರೆ ಕೆಲವು ದಿನಗಳ ಮೊದಲು ಮಹಾರಾಷ್ಟ್ರ, ನಂತರ ಉತ್ತರಪ್ರದೇಶ ಹೀಗೆ ಎರಡು ರಾಜ್ಯಗಳು ಇನ್ನೊಂದು ಅಸಹಜ ಕಾರಣದಿಂದ ಬಹಳ ಸುದ್ದಿಯಲ್ಲಿದ್ದವು. ಇಲ್ಲಿ ಸುದ್ದಿಗೆ ಸುಮ್ಮನೆ ಗುದ್ದು ಕೊಡುವುದು ಇರಲಿ, ಮುಂದೆ ಬಂದು ಹಾಯ್ದದ್ದು, ಹಿಂದೆ ಬಂದು ಒದ್ದದ್ದು ಗೋಮಾಂಸಕ್ಕೆ ಸಂಬಂಧಿಸಿದ ಕೆಟ್ಟ ರಾಜಕಾರಣ-ಇದರಲ್ಲಿ ತಬ್ಬಲಿ ಕರುವಿನಂತೆ ಬಸವಳಿದದ್ದು ನಮ್ಮ ಸಂಸ್ಕೃತಿಯ ಜೀವಾಳವಾದ ಧಾರ್ಮಿಕ ಸಹಿಷ್ಣುತೆ. ಸಹನೆಗೆ ಇನ್ನೊಂದು ಹೆಸರಾದ ಮತ್ತು ಬಹಳ ಪವಿತ್ರವೆಂದು ಹೇಳಲಾಗುವ ಗೋವು, ಈಗ ಧಾರ್ಮಿಕ ಅಸಹನೆಯಿಂದಲೇ ರೂಪಿಸುವ ಅಪವಿತ್ರ ಕೆಲಸಗಳಿಗೆ ‘ಖಂಡವಿದೆಕೋ ಮಾಂಸವಿದೆಕೋ’ ಎಂಬಂತೆ ಬಳಕೆಯಾಗುತ್ತಿದೆ. ಇಂಥ ಆಟಗಳ ಫಲ ಉಂಡು ಸಂತಸಗೊಳ್ಳುವ ಚಂಡವ್ಯಾಘ್ರರು ಎಲ್ಲ ಧಾರ್ಮಿಕ ಸಮೂಹಗಳಲ್ಲಿ ಇದ್ದೇ ಇರುತ್ತಾರೆ. ಮಹಾರಾಷ್ಟ್ರದಲ್ಲಿ ಗೋಮಾಂಸ ಮಾರಾಟ ನಿಷೇಧದ ಪ್ರಸ್ತಾಪ, ವ್ಯಾಪಾರ-ಉದ್ಯಮದ ಕಾರಣದಿಂದ ತೆರೆಮರೆಯಲ್ಲಿ ಸುಮ್ಮನಿದ್ದ ವಿಷಯವನ್ನು ಮುನ್ನೆಲೆಗೆ ತಂದಿತು. ಇನ್ನು ಮುಂದಿನ ವರ್ಷಗಳಲ್ಲಿ ಜೈನ ಧರ್ಮೀಯರ ‘ಪರ್ಯೂಷಣ’ ಪರ್ವ ಹಿಂದಿನಂತೆ ಶಾಂತಿಯಿಂದ ಕೂಡಿರಲಾರದು. ಇತರ ಧರ್ಮಗಳ ನಂಬಿಕೆ, ಆಚರಣೆಗಳ ನೆಪದಲ್ಲಿ ತಮ್ಮ ವಿಚಾರಗಳನ್ನು ನಿರ್ದಯವಾಗಿ ಮುಂದಿಡುವ ಮಹಾರಾಷ್ಟ್ರ ಮಾದರಿಯನ್ನು ಇನ್ನು ಮುಂದೆ ಇನ್ನಷ್ಟು ರಾಜ್ಯಗಳು ಸಲೀಸಾಗಿ ಅನುಸರಿಸಬಹುದು. ಉತ್ತರಪ್ರದೇಶದ ದಾದ್ರಿಯಲ್ಲಿ ಗೋಮಾಂಸದ ನೆಪದಲ್ಲಿ ನಡೆದ ಘೋರ ಘಟನೆಯಂತೂ ದೇಶದ ಸಮಕಾಲೀನ ರಾಜಕಾರಣಕ್ಕೆ ಒಂದು ದಿಕ್ಸೂಚಿಯಂತೆ ಉರಿಯುತ್ತ ದಿಗಿಲು ಹುಟ್ಟಿಸುತ್ತಿದೆ. ದೇಶ ವಿಭಜನೆಯ ಸಮಯದಲ್ಲಿ ಕಂಡ ರೀತಿಯಲ್ಲೇ ಇಲ್ಲಿ ಕೋಮು ಹಿಂಸಾಚಾರ ನಡೆದು, ರಹಸ್ಯ ಕಾರ್ಯಸೂಚಿಯ ಅಸಹ್ಯ ಪ್ರದರ್ಶನ ಆಗಿದೆ. ಈ ಘಟನೆಯನ್ನು ಯಾರ್‍ಯಾರು ಯಾವ್ಯಾವ ವಿಧಾನದಲ್ಲಿ ದುಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನೂ ದೇಶದ ಜನತೆ ದಿಕ್ಕೆಟ್ಟು ನೋಡುತ್ತಿದೆ.ಒಟ್ಟಿನಲ್ಲಿ ಒಂದು ನಿರೀಕ್ಷೆಯಂತೂ ನಿಜವಾಗಿರುವುದು ನಿಚ್ಚಳ: ಭಾರತೀಯ ಜನತಾ ಪಕ್ಷವು ಚುನಾವಣೆಯಲ್ಲಿ ಮತ್ತೊಮ್ಮೆ ಗಳಿಸಿಕೊಂಡ ರಾಜಕೀಯ ಅಧಿಕಾರವನ್ನು, ಅದರ ಪರಿವಾರ ಸಂಘಟನೆಗಳು ತಮಗೆ ಮತ್ತೊಮ್ಮೆ ಸಿಕ್ಕ ಧಾರ್ಮಿಕ ಪರಮಾಧಿಕಾರವೆಂದೇ ಪರಿಗಣಿಸಿವೆ. ರಾಜಕಾರಣವು ಧರ್ಮಕಾರಣಕ್ಕೆ ಮತ್ತಷ್ಟು ಉಗ್ರ ಶಕ್ತಿ ತುಂಬಿದೆ. ಬಿಜೆಪಿಗೆ ಅದು ಗೊತ್ತಿಲ್ಲದ ಸಂಗತಿಯಲ್ಲ- ಏಕೆಂದರೆ ಅಂತಿಮವಾಗಿ ಅದರ ಗೊತ್ತುಗುರಿಯೂ ಅದೇ. ಮೂಲ ಉದ್ದೇಶವನ್ನು ಮರೆತರೆ ತನಗೆ ಉಳಿಗಾಲವಿಲ್ಲ ಎನ್ನುವುದು ಬೇರೆಯವರಿಗಿಂತ ಅದಕ್ಕೇ ಚೆನ್ನಾಗಿ ತಿಳಿದಿದೆ. ಆದರೆ ಈಗ ನಿಜವಾಗಿ ಅದರ ಮುಂದೆ ಬೆಟ್ಟದಂಥ ಸವಾಲುಗಳಿವೆ. ಸರ್ಕಾರದಲ್ಲಿ ಆಡಳಿತ ನಡೆಸಬೇಕೋ ಅಥವಾ ಇವುಗಳ ನಿರ್ವಹಣೆ ಮಾಡಬೇಕೋ- ಬಿಜೆಪಿಯ ಪರಿಸ್ಥಿತಿ ದೇಶಕ್ಕೆ ಅರ್ಥವಾಗುತ್ತದೆ! ಜಗತ್ತಿನ ಮುಂದೆ ಮಿರಮಿರ ಮಿಂಚುತ್ತಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಮುಂದಿಟ್ಟಿರುವ ‘ಎಲ್ಲರ ಜೊತೆ, ಎಲ್ಲರ ವಿಕಾಸ’ ಎಂಬ ಗೋಲ್ಡನ್ ಅಜೆಂಡಾ ಮತ್ತು ದೇಶದಲ್ಲಿ ಎಲ್ಲೆಂದರಲ್ಲಿ ಸ್ಫೋಟಗೊಳ್ಳುತ್ತಿರುವ ‘ಯಾರೂ ಇರಕೂಡದು, ನಾವು ಮಾತ್ರ ಇರಬೇಕು’ ಎಂಬ ಹಿಂದುತ್ವದ ಹಿಡನ್ ಅಜೆಂಡಾ- ಇವೆರಡರ ನಡುವೆ ಸಮತೋಲನ ಸಾಧಿಸುವುದು ಹೇಗೆ? ದೇಶದ ಅಭಿವೃದ್ಧಿಯ ಮಂತ್ರದ ಪಾಠ ಮಾಡುತ್ತಲೇ ಧರ್ಮವೇ ಜಯವೆಂಬ ದಿವ್ಯಮಂತ್ರ ಪಠಿಸುವುದು ಹೇಗೆ? ಅಮೆರಿಕದ ಸಿಲಿಕಾನ್ ವ್ಯಾಲಿ ಮುಂತಾದ ಕಡೆ ಗಳಿಸಿಕೊಂಡ ಅಪಾರ ಕೀರ್ತಿ, ಎಲ್ಲರ ಕಣ್ಣಮುಂದೆಯೇ ದಾದ್ರಿ ಗಟಾರದಲ್ಲಿ ಕೊಚ್ಚಿಹೋಗುವುದನ್ನು ತಡೆಯುವುದು ಹೇಗೆ? ಹುಸಿ ಧರ್ಮನಿರಪೇಕ್ಷತೆ, ಹುಸಿ ಜಾತ್ಯತೀತತೆ, ಹುಸಿ ವಿಚಾರವಾದ ಎಂದು ಬೇರೆಯವರನ್ನು ಹೀನಾಮಾನ ಹೀಗಳೆಯುತ್ತಲೇ ತನ್ನ ಹುಸಿ ಧಾರ್ಮಿಕತೆಯ ಸಾಕ್ಷಾತ್ಕಾರ ಮಾಡುವುದು ಹೇಗೆ? ರಾಜಕೀಯವಾಗಿ ಒದಗಿರುವ ಅಚ್ಛೇ ದಿನ್‌ಗಳನ್ನು ಧಾರ್ಮಿಕ ತತ್ವ ಪ್ರಚಾರದ ಅತ್ಯುಚ್ಚ ದಿನಗಳಾಗಿ ಪರಿವರ್ತಿಸಿಕೊಳ್ಳುವುದು ಹೇಗೆ? ಎಲ್ಲರ ಹೊಟ್ಟೆಗೆ ಅನ್ನ ಸಿಗುವಂತೆ ಮಾಡೋಣ ಎಂಬ ಮಾತು ಆಡುತ್ತಲೇ ಯಾರ ತಟ್ಟೆಯಲ್ಲಿ ಏನಿರಬೇಕು ಎನ್ನುವುದನ್ನು ನಿರ್ಧರಿಸಿ ನಿಯಂತ್ರಿಸುವುದು ಹೇಗೆ? ಛೇ, ಸವಾಲುಗಳು, ಸಮಸ್ಯೆಗಳು ಒಂದೆರಡಲ್ಲ. ಸಂಘ ಪರಿವಾರದ ಇಷ್ಟವೇ ಬಿಜೆಪಿಯ ಇಷ್ಟವಾದರೂ ಅದು ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ತನ್ನ ಮೂಲ ಬಂಡವಾಳ ಬಳಸಿ ರಾಜಕೀಯ ಸಾಧನೆ ಮಾಡಿರುವ ಬಿಜೆಪಿ, ಈಗ ತನ್ನ ರಾಜಕೀಯ ಬಂಡವಾಳ ಬಳಸಿ ಮೂಲ ಗುರಿ ಸಾಧನೆ ಮಾಡಬೇಕಾಗಿದೆ.   ಆದರೆ ಏನು ಕಸರತ್ತು ಮಾಡಿದರೂ ಮೂಲ ಉದ್ದೇಶಗಳನ್ನು ಮುಚ್ಚಿಡುವುದು ಯಾರಿಂದಲೂ ಸಾಧ್ಯವಿಲ್ಲವಾಗಿ, ಬಾಯಿ ಬಿಟ್ಟರೂ ಬಿಡದಿದ್ದರೂ ಎಲ್ಲರಿಗೂ ಅದೆಷ್ಟು ಗಟ್ಟಿಯಾಗಿ ಕೇಳುತ್ತಿದೆ! ದಾದ್ರಿ ಘಟನೆಯೊಂದೇ ಇದಕ್ಕೆ ಗಟ್ಟಿ ಸಾಕ್ಷ್ಯಗಳನ್ನು ಒದಗಿಸುತ್ತಿದೆ. ಗೋವಧೆ ಮತ್ತು ಗೋಮಾಂಸ ಸೇವನೆ ನಿಷೇಧ ಕುರಿತು ಆಡದವನೇ ಪಾಪಿ ಅನ್ನುವಂತೆ ಬಿಜೆಪಿ ಮತ್ತು ಸಂಘ ಪರಿವಾರದ ಎಲ್ಲರೂ ತಲೆಗೊಂದು ಮಾತು ಆಡಿ ತಾವೇನೆಂಬುದನ್ನು ಮತ್ತೆ ತೋರಿಸಿಕೊಂಡರು. ಸಂಸ್ಕೃತಿ ಸಚಿವ ಮಹೇಶ್ ಶರ್ಮ, ಶಾಸಕ ಸಂಗೀತ್ ಸಿಂಗ್ ಸೋಮ್, ಸಚಿವ ಸಂಜೀವ್ ಬಲ್ಯಾನ್ ಎಲ್ಲ ಕೋಮುದ್ವೇಷದ ಉರಿಯುವ ಬೆಂಕಿಗೆ ತುಪ್ಪ ಸುರಿದರು. ಸದಸ್ಯರ ಬಾಯಿಹರುಕತನ ವಿಪರೀತವಾದಾಗ ಗಾಬರಿಗೊಂಡ ಬಿಜೆಪಿ, ‘ದಾದ್ರಿ ಘಟನೆಯ ಬಗ್ಗೆ ಚಿಕ್ಕವರು, ದೊಡ್ಡವರು ಯಾರೂ ಮಾತನಾಡಬೇಡಿ, ನೀವು ದೊಡ್ಡದಾಗಿ ಬಾಯಿ ತೆರೆದು ಹೀಗೆ ಕಿರುಚಾಡಿದರೆ ನಮ್ಮ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಅಜೆಂಡಾ ಹಳಿ ತಪ್ಪುತ್ತದೆ. ನೀವು ಗೋವಧೆ, ಗೋಮಾಂಸ ಸೇವನೆ ಬಗ್ಗೆ ಮಾತನಾಡಬೇಡಿ, ಬದಲಿಗೆ ಉತ್ತರ ಪ್ರದೇಶ ಸರ್ಕಾರದ ಮುಖ್ಯಮಂತ್ರಿಯ ಕಾನೂನು ಪಾಲನೆ ವೈಫಲ್ಯ ಕುರಿತು ಮಾತನಾಡಿ’ ಎಂದು ತಾಕೀತು ಮಾಡಬೇಕಾಯಿತು. ಆದರೆ ಪಕ್ಷಗಿಕ್ಷಗಳ ಹಂಗಿಲ್ಲದ ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್, ಸಾಧ್ವಿ ನಿರಂಜನ ಜ್ಯೋತಿ ಮೊದಲಾದ ಸಂಸತ್ ಸದಸ್ಯರು ಸಂವಿಧಾನದ ಧ್ಯೇಯಕ್ಕೆ ಅಜೀರ್ಣವಾಗುವಷ್ಟು ‘ಕೇಸರಿಬಾತ್’ ಉಣಬಡಿಸಿದರು.ಆದರೆ ಎಲ್ಲದಕ್ಕೂ ಥಟ್ಟನೆ ಟ್ವೀಟ್ ಮಾಡುವ ಪ್ರಧಾನ ಮಂತ್ರಿಗಳು ಮಾತ್ರ ದಾದ್ರಿ ಘಟನೆ ಕುರಿತು ಏನನ್ನೂ ಹೇಳಿರಲಿಲ್ಲ. ಆದರೆ ರಾಷ್ಟ್ರಪತಿಗಳೇ ಅದರ ಬಗ್ಗೆ ಮಾತನಾಡಿ, ದೇಶದ ಮೌಲ್ಯಗಳನ್ನು ನೆನಪಿಸಿದ ಮೇಲೆ ಅವರು ಸುಮ್ಮನಿರಲು ಸಾಧ್ಯವಿಲ್ಲವಲ್ಲ. ಘಟನೆಯನ್ನು ಒಂದಕ್ಷರದಲ್ಲೂ ಖಂಡಿಸದೆ, ಅದನ್ನು ಇಡಿಯಾಗಿ ತಮಗೆ ಬೇಕಾದಂತೆ ಬಳಸಿಕೊಂಡ ಅವರ ರಾಜಕೀಯ ಚಾತುರ್ಯ, ಈಗ ಆ ಹಿಂಸಾಚಾರವನ್ನು ಹಿಂದಿಕ್ಕಿ ಮಾಧ್ಯಮದಲ್ಲಿ ವಿಶ್ಲೇಷಣೆಗೆ ವಸ್ತುವಾಗಿದೆ. ಇನ್ನು ಅಮಿತ್ ಷಾ, ಮೇನಕಾ ಗಾಂಧಿ ಮುಂತಾದವರ ಮಾತುಗಳು ಪಕ್ಷದ ಪ್ರತಿಕ್ರಿಯೆಗಳೇ ಆಗಿರುತ್ತವಷ್ಟೆ.ದಾದ್ರಿ ಘಟನೆ ಮತ್ತು ಅದಕ್ಕೆ ಸುತ್ತಿಕೊಂಡ ವಿದ್ಯಮಾನಗಳು ನಮ್ಮ ದೇಶದ ರಾಜಕಾರಣದ ದಿಕ್ಕುದೆಸೆಯನ್ನು ನಿರ್ಧರಿಸುತ್ತಿರುವುದು ಸ್ಪಷ್ಟವಾಗಿದೆ. ಪರಿವಾರದ ಸಿದ್ಧಾಂತವೇ ಪಕ್ಷದ ಸಿದ್ಧಾಂತ. ಹಾಗಿಲ್ಲದೆ ಬೇರೆ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಹಲವು ಚಿಂತನೆಗಳು, ವಿಚಾರಧಾರೆಗಳನ್ನು ಒಳಗೊಂಡ ಹಿಂದೂ ಧರ್ಮ ಎನ್ನುವುದೆಲ್ಲ ಈಗ ಹಿಂದಕ್ಕೆ ಹೋಗಿ, ಒಂದೇ ಗೊತ್ತುಗುರಿಯುಳ್ಳ ‘ಹಿಂದುತ್ವ’ವೇ ಮುಂದಕ್ಕೆ ಬಂದಿದೆ. ಗೋವಧೆ ಮತ್ತು ಗೋಮಾಂಸ ನಿಷೇಧವೇ ಈ ಹಿಂದುತ್ವದ ಸದ್ಯದ ಮತ್ತು ಸಾರ್ವಕಾಲಿಕ ಸತ್ವ.ಈ ಹಿನ್ನೆಲೆಯಲ್ಲಿ, ಚಿಂತಕ ಶಿವ ವಿಶ್ವನಾಥನ್ ಹೇಳುವಂತೆ, ‘ಹುಸಿ ಧಾರ್ಮಿಕತೆ’ಯೇ ನಿಮ್ಮ ಬಂಡವಾಳ ಎಂದು ಬಿಜೆಪಿಯ ಜುಟ್ಟು ಹಿಡಿದು ಗಟ್ಟಿಯಾಗಿ ಹೇಳಬೇಕಾದ ಕಾಲ ಬಂದಿದೆ. ದಶಕಗಳ ಹಿಂದೆ ಬಿಜೆಪಿಯ ಲಾಲ್ ಕೃಷ್ಣ ಅಡ್ವಾಣಿ ಅವರು ಭಾರತೀಯ ರಾಜಕಾರಣಕ್ಕೆ ಕೊಡುಗೆ ನೀಡಿದ ‘ಹುಸಿ ಧರ್ಮನಿರಪೇಕ್ಷತೆ/ ಹುಸಿ ಜಾತ್ಯತೀತತೆ’ ಎಂಬ ಪದಗಳು, ರಾಜಕೀಯ ವ್ಯಾಖ್ಯಾನದ ಮೇಲೆ ಭಯಂಕರ ಪರಿಣಾಮ ಬೀರಿದುವಂತೆ. ಇದೀಗ ಬಿಜೆಪಿಯ ‘ಹುಸಿ ಧಾರ್ಮಿಕತೆ’ ನಮ್ಮ ರಾಜಕಾರಣಕ್ಕೆ ಹೊಸ ಉಗ್ರ ಆಯಾಮವನ್ನು ಕೊಡುತ್ತಿದೆ.ಗೋಮಾತೆಯ ಜೊತೆಗೆ ಗಂಜಲ, ಗಾಯತ್ರಿ, ಗೀತೆ, ಗುಡಿಗುಂಡಾರ ಎಲ್ಲವೂ ಹಿಂದುತ್ವದ ಧಾರ್ಮಿಕ-ರಾಜಕೀಯ ಮಂತ್ರಗಳೇ ಆಗಿರುತ್ತವೆ. ಹಾಗಾದರೆ ಈ ಹುಸಿ ಧಾರ್ಮಿಕತೆಯ ಪ್ರತಿಪಾದಕರ ಪ್ರಕಾರ ಹಿಂದೂ ಧರ್ಮ, ಹಿಂದೂ ವಿಚಾರಧಾರೆ ಎಂದರೆ ಇಷ್ಟನ್ನು ಮಾತ್ರ ಎತ್ತಿ ಹಿಡಿಯುವ ಹಿಂದುತ್ವ ಮಾತ್ರವೇ? ಸಾವಿರಾರು ವರ್ಷಗಳಲ್ಲಿ ಹಿಂದೂ ಧರ್ಮವೂ ಅನೇಕ ಚಳವಳಿಗಳು, ಚಿಂತನೆಗಳು, ಪ್ರತಿಚಿಂತನೆಗಳು, ಪರ್ಯಾಯ ಚಿಂತನೆಗಳು, ಅನ್ಯ ಪ್ರಭಾವಗಳು, ಆಂತರಿಕ ಹೋರಾಟಗಳನ್ನು ಅರಗಿಸಿಕೊಂಡು ಬೆಳೆದಿದೆ. ಅದಕ್ಕಿರುವ ಐತಿಹಾಸಿಕ ಮಹತ್ವವನ್ನು ಮರೆತು, ಹಿಂದೂ ಧರ್ಮ ಎಂದರೆ ಗೋರಕ್ಷಕ ಧರ್ಮ ಎಂದು ಸಮೀಕರಿಸುವುದು ಎಷ್ಟು ಸರಿ? ಹಾಗಾದರೆ, ದನದ ಮಾಂಸ ತಿನ್ನುವ ದಲಿತರು ಮತ್ತು ಇತರ ಜಾತಿಗಳ ಜನರು ಹಿಂದೂ ಧರ್ಮದಲ್ಲಿ ಉಳಿಯಬಾರದು, ಬೇರೆ ಧರ್ಮಕ್ಕೆ ಹೋಗಬೇಕು ಎನ್ನುವುದು ಇದರ ಇರಾದೆಯೇ?ಬಿಜೆಪಿ ಮತ್ತು ಸಮಕಾಲೀನ ರಾಜಕಾರಣವನ್ನು ಅದರ ‘ಹುಸಿ ಧಾರ್ಮಿಕತೆ’ಯ ತಳಹದಿಯ ಮೇಲೇ ವ್ಯಾಖ್ಯಾನಿಸುವುದು ನಮಗೆ ಅನಿವಾರ್ಯವಾಗಬಹುದು. ಕಾಂಗ್ರೆಸ್ ಪಕ್ಷದ ‘ಹುಸಿ ಧರ್ಮನಿರಪೇಕ್ಷತೆ/ಹುಸಿ ಜಾತ್ಯತೀತತೆ ದೇಶ ಮತ್ತು ಸಮಾಜವನ್ನು ಒಡೆದು ಚೂರು ಮಾಡಿತು’ ಎಂದು ಬಿಜೆಪಿ ಎಂದಿನಿಂದಲೂ ಆಪಾದಿಸುತ್ತಿದೆ. ಆದರೆ, ಅದಕ್ಕಿಂತ ಹೆಚ್ಚಿನದನ್ನು ಬಿಜೆಪಿಯ ‘ಹುಸಿ ಧಾರ್ಮಿಕತೆ’ ಮಾಡಬಹುದು ಎಂದು ಈಗಾಗಲೇ ಅನೇಕರು ಭಯ ವ್ಯಕ್ತಪಡಿಸುತ್ತಿದ್ದಾರೆ. ಧರ್ಮವೇ ಜನರ ಪಾಲಿನ ಅಫೀಮು ಎಂದಾದರೆ ‘ಹುಸಿ ಧಾರ್ಮಿಕತೆ’ ಇನ್ನೇನು ಆಗಬಹುದು ಎಂಬ ಆತಂಕ ಮೂಡುತ್ತಿದೆ.ಏಕೆಂದರೆ ಅದು ಪ್ರತಿಪಾದಿಸುವ ಏಕರೂಪದ ಏಕಾಕಾರದ ಸಮಾಜ ಭಾರತದಲ್ಲಿ ಎಂದೂ ಇರಲು ಸಾಧ್ಯವಿಲ್ಲ. ಎಂದಿಗೂ ಹಳೆಯದರ ಬಗ್ಗೆ ಹೊರಳು ನೋಟ ಹೊತ್ತ ಹುಸಿ ಧಾರ್ಮಿಕತೆ, ಅದೇ ಮತ್ತೆ ಮರಳಿ ಬರಬೇಕೆಂದು ಬಯಸುತ್ತದೆ. ತಾನು ಹೇಳುವ ವಿಚಾರಗಳು ಸಮಕಾಲೀನ ಸಮಾಜದ ಚೌಕಟ್ಟಿನಲ್ಲಿ ಅಧರ್ಮ, ಅನ್ಯಾಯ ಆಗಿದ್ದರೂ ತಾನು ಧರ್ಮಕ್ಕೆ, ನ್ಯಾಯಕ್ಕೆ ಹೋರಾಡುವುದಾಗಿ ಕೂಗುತ್ತದೆ. ಹುಸಿ ಧಾರ್ಮಿಕತೆಯೇ ಧರ್ಮಕ್ಕೆ ನಿಜವಾದ ಶತ್ರುವೂ ಆಗಬಹುದು. ಆದರೆ ಧರ್ಮದಂತೆ ಅದು ಕೂಡ ಅಧಿಕಾರ ಮತ್ತು ಸಂಪತ್ತಿಗೆ ಅಧೀನವಾಗಿಯೇ ಇರುತ್ತದೆ. ಈಗ ಅದರ ಹಾನಿಯಿಂದ ನಮ್ಮ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಬಗ್ಗೆ ಚಿಂತಿಸಬೇಕಾಗಿದೆ.ಹುಸಿ ಧಾರ್ಮಿಕತೆ ಎನ್ನುವುದು ಹಿಂದೂ ಧರ್ಮದ ಬೆಳವಣಿಗೆ ಮಾತ್ರ ಅಲ್ಲವೆನ್ನುವುದೂ ಎಲ್ಲರಿಗೆ ಗೊತ್ತು. ಅದಕ್ಕೆ ಉಜ್ವಲ ಮಾದರಿಯೋ ಎಂಬಂತೆ ಇಸ್ಲಾಂ ಧರ್ಮದಲ್ಲೂ ಅದು ಅನೂಹ್ಯ ಪ್ರಮಾಣದಲ್ಲಿ ಬೆಳೆದಿರುವುದು ಮನುಕುಲವನ್ನು ತಲ್ಲಣಕ್ಕೆ ದೂಡಿದೆ. ‘ಮುಗ್ಧರನ್ನು ಕೊಂದರೆ ಶಾಶ್ವತ ನರಕದ ಶಿಕ್ಷೆ ಕಾದಿದೆ’ ಎಂದು ಕುರಾನ್ ಸರಳವಾಗಿ ಸಾರುತ್ತದೆ. ಆದರೆ ಜಗತ್ತಿನಲ್ಲಿ ಏನಾಗುತ್ತಿದೆ?‘ನನ್ನ ಸ್ವಂತ ತಮ್ಮ ಚೆನ್ನಾಗಿ ಓದಿ, ಹೆಸರಾಂತ ಐಟಿ ಕಂಪೆನಿಯಲ್ಲಿ ಒಳ್ಳೆಯ ಕೆಲಸದಲ್ಲಿದ್ದಾನೆ. ಅವನ ವೇಷಭೂಷಣವೆಲ್ಲ ಅಪ್ಪಟ ಪಾಶ್ಚಾತ್ಯ ಶೈಲಿಯದು. ಅವನು ಸಿಗರೇಟು ಸೇದುತ್ತಾನೆ, ಮದ್ಯ ಸೇವಿಸುತ್ತಾನೆ. ಅವಿವಾಹಿತನಾದ ಅವನು ಹುಡುಗಿಯರ ಜೊತೆ ಫ್ಲರ್ಟ್ ಮಾಡುತ್ತಾನೆ. ಬೇರೆ ನಗರಗಳಿಗೆ, ದೇಶಗಳಿಗೆ ಹೋದಾಗ ಗೆಳೆಯರ ಗುಂಪಿನಲ್ಲಿ ಮೋಜು ಮಾಡುತ್ತಾನೆ. ಆದರೆ ಅಪ್ಪ ಅಮ್ಮ ಹೇಳಿಕೊಟ್ಟಿಲ್ಲವಾದರೂ ಪ್ರತಿದಿನ ಹಣೆಗೆ ಕುಂಕುಮ ಇಟ್ಟು, ಜಾತಿಮತದ ಆಚರಣೆಗಳನ್ನು ಬಿಡದೆ ಪಾಲಿಸುತ್ತಾನೆ. ಹಿಂದೂ ಧರ್ಮದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಅವನು ಬೇರೆ ಧರ್ಮದವರ ಬಗ್ಗೆ ಕೆಂಡ ಕಾರುತ್ತಾನೆ.ಎಲ್ಲರಿಗಿಂತ ನಾವೇ ಶ್ರೇಷ್ಠ ಎಂದು ಅಸಹ್ಯವಾಗಿ ವಾದಿಸುತ್ತಾನೆ. ಜಾತಿಯಲ್ಲೇ ಮದುವೆ ಆಗುತ್ತೇನೆ ಎಂದಿದ್ದಾನೆ. ತನ್ನ ಕಂಪೆನಿಯ ವಿದೇಶಿ ಸಹೋದ್ಯೋಗಿಗಳ ಬಗ್ಗೆ ಅವನಿಗೆ ಅಸಹನೆ ಬದಲು ಮೆಚ್ಚುಗೆಯೇ ಇದೆ. ಆದರೆ ಅನ್ಯ ಧರ್ಮಗಳಿಗೆ ಸೇರಿದವರ ಬಗ್ಗೆ ಅಸಹನೆ ಇದೆ. ಅವನ ನಡೆಗೂ ನುಡಿಗೂ ತೀರಾ ವ್ಯತ್ಯಾಸವಿದೆ. ಉಡುಗೆತೊಡುಗೆಯಲ್ಲಿ ಯಾವ ರೀತಿಯಲ್ಲೂ ಹಿಂದೂ ಹುಡುಗನಂತೆ ಕಾಣದ, ನಡೆದುಕೊಳ್ಳದ ಅವನು ಆಲೋಚನೆಯಲ್ಲಿ, ಮಾತಿನಲ್ಲಿ ಮಾತ್ರ ಉಗ್ರ ಹಿಂದೂ ಆಗಿರುವುದು ಹೇಗೆ? ಹುಸಿ ಧಾರ್ಮಿಕತೆ ಎಂದರೆ ಇದೇ ಇರಬೇಕು...’ ಎಂಬ ನಮ್ಮ ನಡುವಿನ ಅಣ್ಣನೊಬ್ಬ ಸಂವಾದವೊಂದರಲ್ಲಿ ತೋಡಿಕೊಂಡ ಅಳಲು ಮೇಲ್ನೋಟಕ್ಕೆ ಬಹಳಷ್ಟನ್ನು ಹೇಳುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry