7

ಬೆಳಕಿಲ್ಲದ ಹಾದಿ ಮತ್ತು ಕನಸುಗಳು...

Published:
Updated:

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ನಿಂಬಾಳ ಎನ್ನುವ ಗ್ರಾಮವಿದೆ. ಇದು ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿಗೆ ಸೇರಿದೆ. ಈ ಊರು ವೀಳ್ಯೆದೆಲೆ ಮತ್ತು ವಿಶಿಷ್ಟ ಸ್ವಾದದ ಬಾಳೆಹಣ್ಣಿಗೆ ಹೆಸರುವಾಸಿ. ಅಲ್ಲಿನ ವೀಳ್ಯೆದೆಲೆ ಮತ್ತು ಬಾಳೆಹಣ್ಣಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬಹು ಬೇಡಿಕೆ. ಇಡೀ ಊರು ಇವೆರಡು ಬೆಳೆಯನ್ನೇ ನಂಬಿ ಬದುಕುತಿದೆ. ಹಲವು ವರ್ಷಗಳ ಹಿಂದೆ ನೀರಿನ ಕೊರತೆಯಿಂದಾಗಿ ವೀಳ್ಯೆದೆಲೆ ಮತ್ತು ಬಾಳೆತೋಟಗಳು ನಾಶವಾದವು.ರೈತರು ಸಂಕಷ್ಟಕ್ಕೆ ಸಿಲುಕಿಕೊಂಡರು. ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರಿಗೆ ಆ ಊರಿನ ವಿಶೇಷತೆ ಬಗೆಗೆ ಚೆನ್ನಾಗಿ ಅರಿವಿತ್ತು. ಜನರ ಸಂಕಟವೂ ತಿಳಿದಿತ್ತು. ತಮ್ಮ ಹಿಂದಿನ ಅವಧಿಯಲ್ಲಿ ನಿಂಬಾಳದಲ್ಲಿ ಕೆರೆಯೊಂದನ್ನು ನಿರ್ಮಿಸಿದರು. ಅಲ್ಲಿ ಮಳೆ ನೀರು ಸಂಗ್ರಹವಾಗತೊಡಗಿತು. ಮತ್ತೆ ತೋಟಗಳಲ್ಲಿ ಎಲೆಬಳ್ಳಿಗಳು ಹಬ್ಬತೊಡಗಿದವು. ಬಾಳೆಗಿಡಗಳಲ್ಲಿ ಗೊನೆಗಳು ಮೂಡತೊಡಗಿದವು. ಈಗ ಆ ಊರಿನಲ್ಲಿ ನಲವತ್ತು ಎಲೆತೋಟಗಳಿವೆ. ಒಂದು ಲಕ್ಷದಷ್ಟು ಬಾಳೆಗಿಡಗಳನ್ನು ನೆಡಲಾಗಿದೆ. ಪ್ರತಿ ವರ್ಷ ಆ ಊರಿನ ರೈತರು ಇವೆರಡು ಬೆಳೆಯಿಂದ ಮೂರು ಕೋಟಿ ರೂಪಾಯಿಗಳಿಗೂ ಮೀರಿ ವಹಿವಾಟು ನಡೆಸುತ್ತಾರೆ. ಇಷ್ಟೆಲ್ಲ ಹೇಳಲು ಕಾರಣವಿದೆ.ಮೊನ್ನೆ ಶಾಸಕ ಬಿ.ಆರ್‌.ಪಾಟೀಲ್‌ ಅವರು ಆಳಂದದಿಂದ ಕಲಬುರ್ಗಿವರೆಗೆ ನಲವತ್ತೆರಡು  ಕಿಲೋಮೀಟರ್‌ಗಳಷ್ಟು ‘ಜಲ ಸಂವರ್ಧನೆ ಸಂಕಲ್ಪ ಪಾದಯಾತ್ರೆ’ ಹಮ್ಮಿಕೊಂಡಿದ್ದರು. ಪಾದಯಾತ್ರೆಗೆ ರೈತರಿಂದ ಉತ್ತಮ ಸ್ಪಂದನೆಯೂ ಸಿಕ್ಕಿತು. ರಾಜಕಾರಣಿಗಳು ಕೈಗೊಳ್ಳುವ ಪಾದಯಾತ್ರೆಗಳಿಗೆ  ‘ರಾಜಕೀಯ ಉದ್ದೇಶ’ ಇದ್ದೇ ಇರುತ್ತದೆ. ಇಂಥ ವೇಳೆ ವಿರೋಧಿಗಳು ಎಚ್ಚರಗೊಂಡು ಟೀಕಿಸಲು ಶುರು ಮಾಡುತ್ತಾರೆ. ಆದರೆ, ಬಿ.ಆರ್‌.ಪಾಟೀಲ್‌ ಅವರ ಪಾದಯಾತ್ರೆ ರಾಜಕೀಯವನ್ನೂ ಮೀರಿ ಮುಂದಿನ ಪೀಳಿಗೆಯ ಬಗೆಗಿನ ಕಾಳಜಿಯನ್ನು ವ್ಯಕ್ತಪಡಿಸಿತು. ‘ನೀರು ಅಮೂಲ್ಯ ’ ಎನ್ನುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿ ಆಯಿತು. ಈ ಪಾದಯಾತ್ರೆಯಿಂದ ಕಲಬುರ್ಗಿ ಜಿಲ್ಲೆಯ ರಾಜಕಾರಣಿಗಳಲ್ಲಿ ಸಣ್ಣದೊಂದು ಸಂಚಲನ ಉಂಟಾಯಿತು. ಚರ್ಚೆಯೂ ನಡೆಯಿತು. ಸಮಾಜವಾದಿ ಹಿನ್ನೆಲೆಯ ಬಿ. ಆರ್‌.ಪಾಟೀಲ್‌ ಅವರು ಹಿಂದಿನಿಂದಲೂ ‘ನೀರು’ ಕುರಿತು ಕಾಳಜಿ ವಹಿಸುತ್ತಲೇ ಬಂದಿದ್ದಾರೆ. ಇವರು ಇಪ್ಪತ್ತು ವರ್ಷಗಳ ಹಿಂದೆ ಮಹಾರಾಷ್ಟ್ರದ ರಾಳೆಗಾವ್‌ ಸಿದ್ದಿಯಲ್ಲಿ ಅಣ್ಣಾ ಹಜಾರೆ ಅವರನ್ನು ಭೇಟಿಯಾದರು. ಅವರು ನೀರು ಸಂರಕ್ಷಣೆ ಕುರಿತು ಕೈಗೊಂಡಿರುವ ಕೆಲಸಗಳನ್ನು ನೋಡಿದರು. ಅಣ್ಣಾ ಹಜಾರೆ ಜನರನ್ನು ಕಟ್ಟಿಕೊಂಡು ‘ಕ್ರಾಂತಿ’ಯನ್ನೇ ಮಾಡಿದ್ದರು. ಇವರು ಅವುಗಳಿಂದ ಪ್ರೇರಣೆ ಪಡೆದರು. ತಾವು ಸಹ ತಮ್ಮ ಕ್ಷೇತ್ರದಲ್ಲಿ ‘ರಚನಾತ್ಮಕ’ ಕೆಲಸ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದರು. ತಮ್ಮ ಹಿಂದಿನ ಎರಡು ಅವಧಿಯಲ್ಲಿ ಇಪ್ಪತ್ತು ಕೆರೆಗಳನ್ನು ನಿರ್ಮಿಸಿದರು. ಜಲ ಸಂರಕ್ಷಣೆ ಕುರಿತು ತಿಳಿವಳಿಕೆ ನೀಡಲು ಜಲತಜ್ಞ ರಾಜೇಂದ್ರಸಿಂಗ್‌ ಅವರನ್ನು ಕ್ಷೇತ್ರಕ್ಕೆ ಕರೆಸಿದರು. ಅವರಿಂದಲೇ ಎಲೆನಾವದಗಿ ಕೆರೆ ನಿರ್ಮಾಣಕ್ಕೆ ಚಾಲನೆಯನ್ನೂ ಕೊಡಿಸಿದರು. ಹೈದರಾಬಾದ್‌ ಕರ್ನಾಟಕ ಬಲ್ಲವರಿಗೆ ತೆರೆದ ಬಾವಿಗಳ ಮಹತ್ವ ಗೊತ್ತಿರುತ್ತದೆ. ಈ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ತೆರೆದ ಬಾವಿಗಳಿವೆ. ಅವುಗಳಿಂದ ರೈತರು ಹೂವು, ಹಣ್ಣು, ತರಕಾರಿ ಬೆಳೆಯುತ್ತಿದ್ದರು. ಒಂದಿಷ್ಟು ಆದಾಯವನ್ನು ಗಳಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಾವಿಗಳೂ ಬತ್ತಿ ಹೋಗುತ್ತಿವೆ. ಹೈದರಾಬಾದ್‌ ಕರ್ನಾಟಕ ಭಾಗದ ಯಾರನ್ನೇ ಕೇಳಿದರೂ ತಾವು ಬಾವಿಯಲ್ಲಿ ಈಜು ಕಲಿತದ್ದು, ಬೇಸಿಗೆಯಲ್ಲಿ ಬಾವಿಯಲ್ಲಿ ಈಜಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ. ಮಳೆ ಕೊರತೆಯಿಂದ ಬಾವಿಗಳು ಒಣಗುತ್ತಿವೆ.  ಈಗಿನ ತಲೆಮಾರಿನವರಿಗೆ ಇಂಥ ನೆನಪೇ ಇಲ್ಲದಂತಾಗಿದೆ. ನಾಗರಿಕತೆ ರೂಪುಗೊಂಡಿದ್ದೇ ನದಿ ದಂಡೆಯಲ್ಲಿ. ನೀರು ಬದುಕಿಗೆ ಬಹಳ ಮುಖ್ಯ. ಆದರೆ ಜನ, ಜಾನುವಾರು ಕುಡಿಯಲು, ರೈತರು ಬೆಳೆ ಬೆಳೆಯಲು ನೀರು ಇಲ್ಲದಂತಾಗಿದೆ.ಹಳ್ಳಿಯ ಜನರು ದಾರಿ ಕಾಣದೆ ವಲಸೆ ಹೋಗುತ್ತಿದ್ದಾರೆ. ರಾಜ್ಯ ಸರ್ಕಾರವು ರೈತರ ಹೊಲದಲ್ಲಿ ಚೆಕ್‌ ಡ್ಯಾಂಗಳು, ಕೃಷಿ ಹೊಂಡಗಳನ್ನು ನಿರ್ಮಿಸಲು ಹಣ ನೀಡುತ್ತದೆ. ಇಲಾಖೆ ಅಧಿಕಾರಿಗಳು ನೀಡುವ ದಾಖಲೆಗಳನ್ನು ಹಿಡಿದು ಹೊಲಗಳಿಗೆ ಹೋದರೆ ಅವುಗಳು ಅದೃಶ್ಯವಾಗಿರುತ್ತವೆ! ಒಂದು ವೇಳೆ ಇದ್ದರೂ ಕಳಪೆಯಾಗಿರುತ್ತವೆ. ಆದ್ದರಿಂದ ಸರ್ಕಾರ ಹೈದರಾಬಾದ್‌ ಕರ್ನಾಟಕದಲ್ಲಿ ನೀರಿನ ತೀವ್ರ ಕೊರತೆ ಇರುವ ಪ್ರದೇಶಗಳನ್ನು ಗುರುತಿಸಬೇಕು. ಅಲ್ಲಿನ ಭೌಗೋಳಿಕ ಸನ್ನಿವೇಶವನ್ನು ತಜ್ಞರಿಂದ ಸಮೀಕ್ಷೆ ಮಾಡಿಸಬೇಕು. ಯಾವ ಸ್ಥಳಕ್ಕೆ ಯಾವ ರೀತಿಯ ಯೋಜನೆ ಸೂಕ್ತ ಎನ್ನುವುದನ್ನು ಅರಿಯಬೇಕು.ನಂತರವಷ್ಟೇ ಯೋಜನೆಯನ್ನು ನಿಗದಿತ ಕಾಲಾವಧಿಯಲ್ಲಿ ಅನುಷ್ಠಾನಕ್ಕೆ ತರಬೇಕು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಹಳ್ಳಿಗಳ ನೀರಿನ ಮೂಲಗಳನ್ನು ಉಳಿಸಿಕೊಳ್ಳುವಂತಹ ಮಹತ್ವದ ಕೆಲಸವನ್ನು ಮಾಡಬಹುದು. ಇದಕ್ಕೆ ಉತ್ತಮ ನಿದರ್ಶನ ಕಲಬುರ್ಗಿ ಸಮೀಪವೇ ಇರುವ ಆಜಾದಪುರ. ಈ ಊರಿನ ಕೆರೆ ಸ್ಥಳದಲ್ಲಿ ಕಾಡು ಬೆಳೆದಿತ್ತು. ಜನವಾದಿ ಮಹಿಳಾ ಸಂಘಟನೆಯ ಚಂದಮ್ಮ ಹೋರಾಟವನ್ನು ಕೈಗೆತ್ತಿಕೊಂಡರು. ಸ್ಥಳೀಯರನ್ನು ಸೇರಿಕೊಂಡು ಉದ್ಯೋಗ ಖಾತರಿ ಯೋಜನೆಯಲ್ಲಿ ಕೆರೆ ಉಳಿಸಲು ಮುಂದಾದರು. ನೂರು ದಿನಗಳ ಕಾಲ ನೂರಾರು ಮಂದಿ ದುಡಿದರು. ಈಗ ಕೆರೆಯಲ್ಲಿ ನೀರು ನಿಂತಿದೆ. ಇದೇ ಜನವಾದಿ ಸಂಘಟನೆ ಪಾಳಾ ತಾಂಡಾ ಕೆರೆ ಸಂರಕ್ಷಣೆಗೆ ಮುಂದಾಗಿದೆ. ಉದ್ಯೋಗ ಖಾತರಿ ಯೋಜನೆಯಿಂದ ಇಂಥ ಹಲವು ಜಲ ಸಂರಕ್ಷಣೆಯಂಥ ರಚನಾತ್ಮಕ ಕೆಲಸವನ್ನು ಮಾಡಬಹುದು.ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಕ್ರಿಯಾಶೀಲ ಮತ್ತು ಪ್ರಾಮಾಣಿಕತೆ ಇರಬೇಕಾಗುತ್ತದೆ. ಅತ್ಯವಶ್ಯವಾದ ಯೋಜನೆಗಳು ಭ್ರಷ್ಟಾಚಾರದಿಂದಾಗಿ  ವಿಫಲವಾಗುತ್ತಿವೆ. ರೈತರು ತಮ್ಮ ಜಮೀನಿಗೆ ಹೋಗುವ ರಸ್ತೆಯನ್ನು ದುರಸ್ತಿ ಮಾಡಿಸಿಕೊಂಡರೆ ಅಥವಾ ಕೆರೆಯ ಹೂಳನ್ನು ತೆಗೆದು ಹೊಲಕ್ಕೆ ಹಾಕಿಕೊಂಡರೆ ಅದಕ್ಕೆ ದಾಖಲೆ ಸೃಷ್ಟಿಸಿ ಹಣ ತೆಗೆದುಕೊಳ್ಳುವ ಗುತ್ತಿಗೆದಾರರೂ ನಮ್ಮ ವ್ಯವಸ್ಥೆಯಲ್ಲಿಯೇ ಇದ್ದಾರೆ! ಇವರನ್ನು ಪೊರೆಯುವ ಜನಪ್ರತಿನಿಧಿಗಳೂ ಇದ್ದಾರೆ. ‘ಜಲ ಸಂರಕ್ಷಣೆ ಸಂಕಲ್ಪ ಪಾದಯಾತ್ರೆ ಮೂಲಕ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಯತ್ನಿಸಿದ್ದೀರಿ ಎನ್ನುವ ಟೀಕೆಗಳಿವೆ’ ಎಂದು ಬಿ.ಆರ್‌.ಪಾಟೀಲ್‌ ಅವರನ್ನು ಕೇಳಿದೆ. ‘ನಾನು ರಾಜಕಾರಣಿ. ಆದರೆ ಜನಪರ ರಾಜಕಾರಣಿ.ವ್ಯವಸ್ಥೆಯಲ್ಲಿ ಜನರು ಶಾಶ್ವತ. ನಾವು ತಾತ್ಕಾಲಿಕ. ನನ್ನದು ಜನರ ಬದುಕಿನ ಹೋರಾಟವೇ ಹೊರತು, ವೋಟಿಗಾಗಿ ಹೋರಾಟವಲ್ಲ’ ಎಂದರು. ಇವರಿಗೆ ತಮ್ಮ ಕ್ಷೇತ್ರದಲ್ಲಿ ‘ಜಲಕ್ರಾಂತಿ’ ಮಾಡಬೇಕು ಎನ್ನುವ ಬಹುದೊಡ್ಡ ಕನಸು ಇದೆ. ಇದಕ್ಕಾಗಿ ಮಹಾರಾಷ್ಟ್ರದಲ್ಲಿ ಸುತ್ತಾಡಿ, ತಮ್ಮ ಕ್ಷೇತ್ರಕ್ಕೆ ಸೂಕ್ತವಾದ ಮಾದರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳು ಕೈಗೊಳ್ಳುವ ಯಾವುದೇ ಜನಪರ ಕಾರ್ಯಕ್ರಮಗಳು ಹೆಚ್ಚು ಟೀಕೆಗೆ ಒಳಗಾಗುತ್ತವೆ. ಏಕೆಂದರೆ ಇಂಥ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ಜನಪ್ರತಿನಿಧಿಗಳು ಜನರ ಮನಸ್ಸು ಗೆಲ್ಲಬಹುದು. ಅದು ಮತಗಳಾಗಿಯೂ ಪರಿವರ್ತನೆಗೊಳ್ಳಬಹುದು.ಆಗ ವಿರೋಧಿಗಳಿಗೆ ಅಧಿಕಾರ ಮರೀಚಿಕೆ ಆಗಲೂಬಹುದು. ಇದೇನೇ ಇರಲಿ, ಮುಂದಿನ ಪೀಳಿಗೆ ಕುರಿತು ಕನಸು, ಕಾಳಜಿ, ಬದ್ಧತೆ, ಕಾರ್ಯಕ್ರಮ ಹೊಂದಿರುವ ಜನಪ್ರತಿನಿಧಿಗಳು ನಮ್ಮ ನಡುವೆ ಇರುವುದು ತೀರಾ ವಿರಳ. ಇಂಥ ಸಮಯದಲ್ಲಿ ಕನಸುಗಳನ್ನು ಹೊಂದಿರುವ ಜನಪ್ರತಿನಿಧಿಗಳನ್ನು ಮೆಚ್ಚುವುದು, ಬೆಂಬಲಿಸುವುದು ಮುಖ್ಯವಾಗುತ್ತದೆ. ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರ ‘ಯಯಾತಿ’ ನಾಟಕದಲ್ಲಿ ಯಯಾತಿ ತನ್ನ ಮಗ ಪುರುವಿಗೆ ‘ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸುಗಳಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ?’ ಎಂದು ಕೇಳುತ್ತಾನೆ. ಈ ಮಾತು ನನಗೆ ಏಕೋ ಕಾಣೆ, ಇಲ್ಲಿ ನೆನಪಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry