6

ದೇವರ ಹೆಣ್ಣುಗಳು, ಮನೆ, ಮಕ್ಕಳು, ಇತ್ಯಾದಿ...

Published:
Updated:
ದೇವರ ಹೆಣ್ಣುಗಳು, ಮನೆ, ಮಕ್ಕಳು, ಇತ್ಯಾದಿ...

ಹುಡುಗ ದಂತ ವೈದ್ಯ. ಲಕ್ಷಣವಾಗಿಯೂ ಇದ್ದನು. ಆತನೊಂದಿಗೆ ಮದುವೆ ಮಾಡಿಕೊಟ್ಟರೆ ಮಗಳು ಸುಖವಾಗಿ ಇರುತ್ತಾಳೆ ಎನ್ನುವುದು ಹೆತ್ತವರ ಎಣಿಕೆ. ಹುಡುಗನನ್ನು ಮನೆಗೆ ಕರೆಸಿಕೊಂಡರು. ಹುಡುಗ ಎಲ್ಲರಿಗೂ ಇಷ್ಟವಾದನು. ಹುಡುಗಿಯ ತಂದೆ ಹುಡುಗನನ್ನು ಕೇಳಿದರು: ‘ನಿಮ್ಮ ತಂದೆ, ತಾಯಿ ಏನು ಮಾಡುತ್ತಾರೆ?’.ಹುಡುಗ ಮುಜುಗರವಿಲ್ಲದೆ ಹೇಳಿದನು: ‘ಅಪ್ಪ ಯಾರೆಂದು ಗೊತ್ತಿಲ್ಲ; ತಾಯಿ ದೇವದಾಸಿ’. ಹುಡುಗಿಯ ತಂದೆ ಆ ಕ್ಷಣವೆ ‘ದೇವದಾಸಿ ಮಗ ಅಳಿಯನಾಗುವುದು ನಮಗೆ ಇಷ್ಟವಿಲ್ಲ’ ಎಂದು ಹೇಳಿದರು. ಹುಡುಗಿಯ ತಂದೆ ಹೇಳಿದ ಮಾತು ಹುಡುಗನ ಮನಸ್ಸನ್ನು ಕೊರೆಯುತ್ತಲೇ ಇತ್ತು. ನೋವು, ಅವಮಾನ, ತಿರಸ್ಕಾರ ಕಣ್ಣೀರಾಗಿತ್ತು. ಎಲ್ಲ ಅರ್ಹತೆ ಇದ್ದರೂ ದೇವದಾಸಿಯರ ಮಕ್ಕಳನ್ನು ಸಮಾಜ ನೋಡುವುದು ಹೀಗೆಯೇ. ಆದರೆ ಡಾ.ಚಂದ್ರಕಾಂತ್‌ ತಾವು ದೇವದಾಸಿ ಮಗ ಎಂದು ಹೇಳಿಕೊಳ್ಳಲು ಹಿಂಜರಿಯುವುದಿಲ್ಲ. ‘ನನಗೆ ತಮ್ಮ ಮಗಳನ್ನು ಕೊಡಲು ಮನೆಗೆ ಕರೆದಿದ್ದವರು ಪೊಲೀಸ್‌ ಅಧಿಕಾರಿ. ವಿದ್ಯಾವಂತರೇ ಹೀಗಾದರೆ, ಅನಕ್ಷರಸ್ಥರು ನಮ್ಮ ಬಗ್ಗೆ ಹೇಗೆ ಪ್ರತಿಕ್ರಿಯಿಸಬಹುದು ಯೋಚಿಸಿ? ಎಂದು ಹೇಳಿದರು. ಡಾ.ಚಂದ್ರಕಾಂತ್‌ ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕು ಚಿಂಚನಸೂರು ಗ್ರಾಮದ ಕಸ್ತೂರಿಬಾಯಿ ಪುತ್ರ. ಕಸ್ತೂರಿಬಾಯಿ ದೇವದಾಸಿಯಾದ ಕಥೆ ಹೀಗಿದೆ: ಕಸ್ತೂರಿಬಾಯಿ ಅವರ ತಂದೆ–ತಾಯಿಗೆ ಒಬ್ಬಳೇ ಮಗಳು. ಮದುವೆಯಾದ ಬಹಳ ವರ್ಷಗಳ ನಂತರ ಹುಟ್ಟಿದವರು.ಮಗಳನ್ನು ಮದುವೆ ಮಾಡಿದರೆ ಬೇರೆ ಮನೆಗೆ ಹೋಗುತ್ತಾಳೆ. ಇಳಿವಯಸ್ಸಿನ ತಮ್ಮನ್ನು ನೋಡಿಕೊಳ್ಳುವವರು ಯಾರೂ ಇರುವುದಿಲ್ಲ ಎನ್ನುವ ಅನಾಥ ಪ್ರಜ್ಞೆ ಪೋಷಕರನ್ನು ಕಾಡಿತು. ಮಗಳನ್ನು ‘ದೇವರಿಗೆ ಬಿಟ್ಟರೆ’ ಮನೆಯಲ್ಲೇ ಇರುತ್ತಾಳೆ ಎನ್ನುವುದು ಅವರ ಲೆಕ್ಕಾಚಾರ. ಕಸ್ತೂರಿಬಾಯಿಗೆ ಆರೇಳು ವರ್ಷ ಇರುವಾಗಲೇ ದೇವರಿಗೆ ಬಿಡಲಾಯಿತು. ಋತುಮತಿಯಾದ ಮೇಲೆ ‘ಮುತ್ತು’ ಕಟ್ಟಿಸಿ ದೇವದಾಸಿಯನ್ನಾಗಿ ಮಾಡಲಾಯಿತು.‘ಮುತ್ತು ಕಟ್ಟುವ’ ಕಾರ್ಯ ಮದುವೆಯಂತೆಯೇ ಇರುತ್ತದೆ. ದೇವದಾಸಿಯನ್ನು ಯಾರಾದರೂ ಕೈಹಿಡಿಯಬಹುದು. ಯಾರೂ ಸಿಗದೇ ಹೋದರೆ ಸೋದರ ಮಾವ ಇಲ್ಲವೇ ಪೂಜಾರಿ ಕೈಹಿಡಿಯುತ್ತಾನೆ. ಅಂದು ಆಕೆ ಆ ವ್ಯಕ್ತಿಯೊಂದಿಗೆ ರಾತ್ರಿ ಕಳೆಯುತ್ತಾಳೆ. ಆನಂತರದಲ್ಲಿ ಯಾರು ಬೇಕಾದರೂ ಆಕೆಯನ್ನು ಬಯಸಬಹುದು, ಕೂಡಬಹುದು. ಆ ವ್ಯಕ್ತಿ ಪ್ರತಿಯಾಗಿ ಒಂದಿಷ್ಟು ಏನಾದರೂ ಕೊಡುತ್ತಾನೆ.ದೇವದಾಸಿಯರು ಹಡೆಯುವ ಕೂಸಿಗೆ ಅಪ್ಪ ಯಾರು ಎನ್ನುವುದು ಗೊತ್ತಿರುವುದಿಲ್ಲ. ಶಾಲಾ ದಾಖಲಾತಿಯಲ್ಲಿ ತಂದೆ ಹೆಸರು ಇರುವುದಿಲ್ಲ. ಇದ್ದರೂ ಅದು ದೇವರ ಹೆಸರು (ಹನುಮಂತ, ಯಲ್ಲಪ್ಪ) ಆಗಿರುತ್ತದೆ. ಕಸ್ತೂರಿಬಾಯಿ ಮಗನನ್ನು ಶಾಲೆಗೆ ಸೇರಿಸಲು ಹೋದಾಗ ತಂದೆ ಹೆಸರನ್ನು ‘ಕಸ್ತೂರಪ್ಪ’ ಎಂದು ನಮೂದಿಸಿದರು. ತಂದೆ ಯಾರು ಎನ್ನುವುದು ಅರಿಯದ ಚಂದ್ರಕಾಂತ್‌, ‘ಕಸ್ತೂರಪ್ಪ’ನನ್ನು ಕಲ್ಪಿಸಿಕೊಳ್ಳಲು ಒದ್ದಾಡಿದರು.ದೇವದಾಸಿಯರ ಮಕ್ಕಳ ಮದುವೆ ವಿಷಯ ಬಂದಾಗ ಸಮಸ್ಯೆ ಇನ್ನೂ ಗಂಭೀರವಾಗುತ್ತದೆ. ಹೆಣ್ಣಿರಲಿ, ಗಂಡಿರಲಿ ಸುಲಭಕ್ಕೆ ‘ಕಂಕಣ ಭಾಗ್ಯ’ ಕೂಡಿಬರುವುದಿಲ್ಲ. ಕಳೆದ ಮೂರು ದಶಕಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ದೇವದಾಸಿ ಪದ್ಧತಿ ಆಚರಣೆ ತುಂಬಾ ಕಡಿಮೆಯಾಗಿದೆ. ಹಿಂದೆ ಬಹಿರಂಗ ಮತ್ತು ಸಾಮೂಹಿಕವಾಗಿ ನಡೆಯುತಿದ್ದದು, ಈಗ ಗುಟ್ಟಾಗಿ, ಅಲ್ಲೊಂದು ಇಲ್ಲೊಂದು ಎನ್ನುವಂತೆ ನಡೆಯುತ್ತಿದೆ. ದೇವದಾಸಿ ಪದ್ಧತಿ ಸಮಾಜದ ಅನಿಷ್ಟ ಮತ್ತು ಅವಮಾನ. ಆದರೂ ಅದು ಸಮಾಜದಲ್ಲಿ ಹೇಗೆ ಆಚರಣೆಯಲ್ಲಿ ಇದೆ ಎನ್ನುವುದಕ್ಕೆ ಈ ಅಂಶಗಳನ್ನು ಗಮನಿಸಬೇಕು.ದೇವದಾಸಿ ಪದ್ಧತಿ ದಲಿತರಲ್ಲಿ ಮಾತ್ರ ಆಚರಣೆಯಲ್ಲಿದೆ. ಮನೆಯಲ್ಲಿ ಯಾರಿಗಾದರೂ ಆರೋಗ್ಯ ಕೆಡುತ್ತಿದ್ದರೆ, ಮಕ್ಕಳು ಅಥವಾ ಗಂಡು ಮಕ್ಕಳು ಇಲ್ಲದಿದ್ದರೆ, ಕನಸಿನಲ್ಲಿ ದೇವಿ ಬಂದು ಅಪ್ಪಣೆ ಕೊಡಿಸಿದರೆ ಅಂಥವರು ಮಗಳನ್ನು ದೇವರಿಗೆ ಬಿಡುವ ಹರಕೆ ಹೊತ್ತುಕೊಳ್ಳುತ್ತಾರೆ. ಕೆಲವು ಸಲ ಮಗು ಭ್ರೂಣದಲ್ಲಿ ಇರುವಾಗಲೇ  ಹರಕೆ ಹೊತ್ತು ಕೊಳ್ಳಲಾಗುತ್ತದೆ! ಗಂಡು ಮಕ್ಕಳಿಲ್ಲ ಎನ್ನುವ ಕಾರಣಕ್ಕಾಗಿ ಕಸ್ತೂರಿಬಾಯಿಯನ್ನು ದೇವರಿಗೆ ಬಿಟ್ಟರೆ, ಅವರ ಪಕ್ಕದ ಮನೆಯವರು ತಮ್ಮನ್ನು ಕಾಡುತ್ತಿದ್ದ ಕಾಯಿಲೆಯಿಂದ ಮುಕ್ತಿ ಪಡೆಯಲು ಮಗಳನ್ನು ದೇವರಿಗೆ ಅರ್ಪಿಸಿದರು.ದಲಿತರ ಮುಗ್ಧತೆ, ಭಕ್ತಿಯ ಪರಾಕಾಷ್ಠೆ, ಮೌಢ್ಯವೇ ಈ ಪದ್ಧತಿಗೆ ಕಾರಣ ಎಂದು ವ್ಯಾಖ್ಯಾನಿಸುವುದು ಸುಲಭ. ಆದರೆ ಅವುಗಳಷ್ಟೇ ಮುಖ್ಯವಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕಾರಣಗಳೂ ಇವೆ. ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗಿ ಊರಿನ ಹೊರಗೆ ಇರುವವರು ದೇವದಾಸಿಯರಾಗಿ ಎಲ್ಲರಿಗೂ ಸಲ್ಲುವವರಾಗಿ ಬಿಡುತ್ತಾರೆ! ಮನೆಯಲ್ಲಿ ಬಡತನವಿದೆ. ಚೂರು ರೊಟ್ಟಿಗೂ ತತ್ವಾರ. ಆಗ ಏನು ಮಾಡಬೇಕು? ದೇವದಾಸಿ ಆಗುವುದರಿಂದ ಯೌವನ ಇರುವ ತನಕ ಒಂದಿಷ್ಟು ಹಣ ಸಿಗುತ್ತದೆ. ಚರ್ಮ ಸುಕ್ಕುಗಟ್ಟಿದ ಮೇಲೆ ‘ಪಡಲಿಗೆ’ (ಬಿದಿರಿನ ಅಗಲವಾದ ತಟ್ಟೆ. ಅದರಲ್ಲಿ ದೇವಿಯ ಮುಖವಾಡ ಇರುತ್ತದೆ) ಹಿಡಿದುಹೊರಟರೆ ಭಿಕ್ಷೆ ಸಿಗುತ್ತದೆ ಎನ್ನುವ ನಂಬಿಕೆ.ದೇವದಾಸಿ ಪದ್ಧತಿ ಆಚರಣೆ ಮತ್ತು ವೇಶ್ಯಾವಾಟಿಕೆ ನಡುವೆ ತೆಳುವಾದ ಗೆರೆ ಇದೆ.  ಸಮಾಜದಲ್ಲಿ ದೇವದಾಸಿ ಪದ್ಧತಿ ಹದ್ದುಬಸ್ತಿಗೆ ಹೇಗೆ ಬಂದಿತು ಎನ್ನುವ ಕುರಿತು ಯೋಚಿಸಿದಾಗ... ಏನೂ ಅರಿಯದ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳನ್ನು ‘ಅನಿಷ್ಟ ಕೂಪ’ಕ್ಕೆ ತಳ್ಳಲಾಗಿರುತ್ತದೆ. ಬಳಿಕ ದೇವರ ಹೆಸರು ಹೇಳಿ ಭಯ, ಭಕ್ತಿಯನ್ನು ಹುಟ್ಟಿಸಲಾಗುತ್ತದೆ. ಹೀಗಾಗಿ ದೇವರಿಗೆ ಅರ್ಪಿಸಿಕೊಂಡವಳೆಂದು ತನ್ನನ್ನು ತಾನು ನಂಬಿಸಿಕೊಳ್ಳುತ್ತಾಳೆ. ಪೋಷಕರು ಮಾಡಿದ ತಪ್ಪಿಗೆ ಮಂಡಿಗಳ ನಡುವೆ ಮುಖ ಉದುಗಿಸಿ ಅಳುತ್ತಾಳೆ. ಅದೇ ಹೆಣ್ಣು ತನ್ನ ಮಗಳು ‘ತನ್ನಂತೆ’ ಆಗುವುದನ್ನು ಒಪ್ಪುವುದಿಲ್ಲ. ಜಾಗೃತೆಯಿಂದ ಕಾಪಾಡಿಕೊಳ್ಳುತ್ತಾಳೆ.ಹೈಸ್ಕೂಲು ಕಲಿತ ಯಾವ ದೇವದಾಸಿಯರ ಗಂಡು ಮಕ್ಕಳೂ ಯಾವುದೇ ಕಾರಣಕ್ಕೂ ತಮ್ಮ ಅಕ್ಕ, ತಂಗಿ ದೇವದಾಸಿ ಆಗುವುದನ್ನು ಒಪ್ಪುವುದಿಲ್ಲ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೇರಿಗಳಲ್ಲಿ ಅರಿವು ಮೂಡಿಸಿದ್ದು ಇಲ್ಲಿ ಉಲ್ಲೇಖಾರ್ಹ. ಸಮಾಜ ಹಿಂದಿನಂತಿಲ್ಲ. ಕಾಲದ ಜೊತೆಗೆ ಬದಲಾಗುತ್ತಲೇ ಇದೆ. ಊರಿನಲ್ಲಿ ದೇವದಾಸಿ ಆಚರಣೆ ಇರುವುದನ್ನು ಪ್ರೋತ್ಸಾಹಿಸುವವರು, ಪೋಷಿಸುವವರು ಇದ್ದರು. ಆ ದಿನಗಳಲ್ಲಿ ಅದು ‘ಒಪ್ಪಿತ’ ಎನ್ನುವಂತೆಯೇ ಇತ್ತು. ಮುಂದೆ ಅದೊಂದು ‘ಅನಿಷ್ಟ’ ಎನ್ನುವುದು ಅರಿವಿಗೆ ಬಂದಿತು.ಅಲ್ಲದೇ ರಾಜ್ಯ ಸರ್ಕಾರ 1982 ರಲ್ಲಿ ದೇವದಾಸಿ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು. ಕಾಯ್ದೆಯು ಸಮರ್ಪಕವಾಗಿ ಅನುಷ್ಠಾನಗೊಳ್ಳಲಿಲ್ಲ ಎನ್ನುವ ಆರೋಪವಿದ್ದರೂ, ಕಾಯ್ದೆಯ ಭಯವನ್ನು ಅಲ್ಲಗಳೆಯಲಾಗದು. ಇವುಗಳಷ್ಟೇ ಮುಖ್ಯವಾಗಿ ಹಲವು ದೇವದಾಸಿಯರು ಎಲ್ಲವನ್ನೂ ಬಿಟ್ಟು ‘ಹೊಸ ಬದುಕು’ ಕಟ್ಟಿಕೊಳ್ಳಲು ಮುಂದಾದರು. ಅದರ ಫಲವಾಗಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸಿದರು.ಹೈನುಗಾರಿಕೆ, ಸಣ್ಣ ವ್ಯಾಪಾರಕ್ಕೆ ಇಳಿದರು. ಕೆಲವರು ಗ್ರಾಮ ಪಂಚಾಯಿತಿ ಸದಸ್ಯೆಯರೂ ಆದರು. ಕಸ್ತೂರಿಬಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಗಿದ್ದರು. ಈಗಲೂ ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಮಹಿಳೆಯರು ‘ಪಡಲಿಗೆ‘ ಹಿಡಿದು ಬಜಾರ್‌ಗಳಲ್ಲಿ ಭಿಕ್ಷೆಗೆ ಬೇಡುವುದು ಕಾಣಸಿಗುತ್ತದೆ. ಅವರಿಗೆ ಅದೇ ಆದಾಯ. ಅದನ್ನೂ ತಪ್ಪಿಸಿ ಅವರಿಗೆ ಹೊಸ ಬದುಕಿನ ದಾರಿಯನ್ನು ಕಲ್ಪಿಸುವ ಬದ್ಧತೆಯನ್ನು ಸರ್ಕಾರ ತೋರಿಸಬೇಕು.‘ದೇವದಾಸಿ ಮಗ ಎಂದು ಹೇಳುವ ಧೈರ್ಯ ನಿಮಗೆ ಹೇಗೆ ಬಂದಿತು’ ಎಂದು ಡಾ.ಚಂದ್ರಕಾಂತ್ ಅವರನ್ನು ಅಳುಕುತ್ತಲೇ ಕೇಳಿದೆ. ‘ಸಮಾಜ ನನ್ನನ್ನು ದೇವದಾಸಿ ಮಗ ಎನ್ನುವಾಗ ನೋವು, ಅವಮಾನವಾಗುತ್ತಿತ್ತು. ಅದನ್ನು ನಾನೇ ಗಟ್ಟಿಯಾಗಿ ಹೇಳುವ ಮೂಲಕ ಜನರು ಗೇಲಿ ಮಾಡುವ ಅವಕಾಶವನ್ನು ಕಸಿದುಕೊಂಡೆ’ ಎಂದು ನಕ್ಕರು. ಕಾಲೇಜು ಮೆಟ್ಟಿಲು ಹತ್ತಿದ ಚಂದ್ರಕಾಂತ್‌ಗೆ ತಾಯಿ ‘ಪಡಲಿಗೆ’ ಹೊತ್ತು ಭಿಕ್ಷೆಗೆ ಹೋಗುವುದು ಅವಮಾನ ಎನಿಸಿತು. ಒಂದು ದಿನ ತಾಯಿಯನ್ನು ಕೂರಿಸಿಕೊಂಡು ‘ನೀನು ಭಿಕ್ಷೆಗೆ ಹೋಗುವುದರಿಂದ ನನಗೆ ಮುಜುಗರವಾಗುತ್ತದೆ. ದಯವಿಟ್ಟು ಅದನ್ನು ಬಿಟ್ಟುಬಿಡು’ ಎಂದು ವಿನಂತಿಸಿಕೊಂಡರು. ಅದೇ ಕೊನೆ, ಆಕೆ ‘ಪಡಲಿಗೆ’ ಮುಟ್ಟಲಿಲ್ಲ.ಏನೂ ತಿಳಿಯದ ಕಸ್ತೂರಿಬಾಯಿಗೆ ‘ಎಲ್ಲವೂ’ ಅರ್ಥವಾಯಿತು. ಅವರ ಬದುಕು ಬದಲಾಯಿತು. ‘ಎಲ್ಲವೂ’ ತಿಳಿದಿರುವ ಸಮಾಜಕ್ಕೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಲಾರದು. ಆದರೆ ಅರ್ಥ ಮಾಡಿಕೊಳ್ಳುವ ವಿಶಾಲ ಹೃದಯ ಇರಬೇಕು ಅಷ್ಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry