6

ಅವರ ಮುತ್ತಿನ ಕಥೆ, ನಮ್ಮ ಮುಟ್ಟಿನ ಕಥೆ

ಆರ್‌. ಪೂರ್ಣಿಮಾ
Published:
Updated:
ಅವರ ಮುತ್ತಿನ ಕಥೆ, ನಮ್ಮ ಮುಟ್ಟಿನ ಕಥೆ

ಹೊಸ ಕಾಲದಲ್ಲಿ ಹಳೆಯ ವಿವಾದಗಳ ಜೊತೆಗೆ ಹೊಸ ವಿವಾದಗಳೂ ಸೇರಿಕೊಳ್ಳುತ್ತವೆ; ಹಳೆಯ ವಿಷಯಗಳ ಬಗ್ಗೆ ಹೊಚ್ಚಹೊಸ ವಿವಾದಗಳೂ ಏಳುತ್ತವೆ. ಇವುಗಳನ್ನು ವಿವಾದಗಳು ಎನ್ನುವುದಕ್ಕಿಂತ ಚರ್ಚೆಗಳು ಎಂದು ಸಮಾಧಾನದಿಂದ ಕರೆಯುವುದೇ ಸೂಕ್ತ. ದಿನದಿನಾ ಹಲವಾರು ವಿಷಯಗಳು ನಮ್ಮ ದೇಶೋವಿಶಾಲ ಚರ್ಚಾಚಾವಡಿಗೆ ಬಂದು ಬೀಳುತ್ತಿವೆ. ಅವುಗಳಲ್ಲಿ ಒಂದು ಮುತ್ತಿನ ಕಥೆಯೂ ಇದೆ, ಒಂದು ಮುಟ್ಟಿನ ಕಥೆಯೂ ಇದೆ!ಈ ಎರಡು ವಿಷಯಗಳಲ್ಲಿ ಏನು ಹೊಸತಿದೆ ಎಂದು ಮೂಗುಮುರಿದು ಬದಿಗೆ ಸರಿಸುವಂತಿಲ್ಲ. ಈ ಎರಡೂ ವಿಷಯಗಳು ಒಂದಲ್ಲಾ ಒಂದು ಬಗೆಯಲ್ಲಿ ಹಳತು, ಆದರೆ ಅವು ಹುಟ್ಟುಹಾಕುವ ಚರ್ಚೆಗಳು, ಸಂವಾದಗಳು ಮಾತ್ರ ಹೊಸತು. ಈ ಹಳೆಯ ವಿಷಯಗಳ ಬಗ್ಗೆ ಹೊಸ ತಲೆಮಾರು ಏನು ಹೇಳುತ್ತದೆ, ಹಳೆಯ ತಲೆಮಾರು ಈಗ ಇದಕ್ಕೆ ಏನು ಹೇಳುತ್ತಿದೆ ಎನ್ನುವುದೆಲ್ಲ ವ್ಯಾಪಕವಾಗಿ ಪ್ರಕಟವಾಗುತ್ತಿವೆ. ಕ್ಷಣಮಾತ್ರದಲ್ಲಿ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ಹಾರಿಬಿಡುವ ಈ ದಿನದಲ್ಲಿ, ಯಾವ ವಿಚಾರ ತಿಳಿಯಲೂ  ಮುಂದಿನ ಗಂಟೆಯವರೆಗೂ ಕಾಯಬೇಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ದೇಶದಲ್ಲಿ ಏನೇನಾಗುತ್ತಿದೆ, ಮುಂದೇನು ಆಗಲಿದೆ ಎನ್ನುವುದಕ್ಕೂ ಈ ಚರ್ಚೆಗಳು ಕನ್ನಡಿ ಹಿಡಿಯುತ್ತಿವೆ.  ಜೇಮ್ಸ್ ಬಾಂಡ್ ಯಾರಿಗೆ ಗೊತ್ತಿಲ್ಲ? ಏನೋ ಒಂದು ರಹಸ್ಯ ಬಿಡಿಸುವ ಕಾರ್ಯಾಚರಣೆ, ಅಂದಂದಿನ ವಿನೂತನ ಸಲಕರಣೆ ಮತ್ತು ಹಲವು ಹುಡುಗಿಯರೊಂದಿಗೆ ಪ್ರಣಯ ಇಂಥವೆಲ್ಲ ಧಾರಾಳವಾಗಿ ಇರದ ಜೇಮ್ಸ್ ಬಾಂಡ್ ಯಾರಿಗೂ ಗೊತ್ತಿಲ್ಲ. ಭಾರತೀಯ ಬಾಂಡ್ ಪ್ರಿಯರನ್ನು ಸಾಕಷ್ಟು ದಿನ ಕಾಯಿಸಿದ ಮೇಲೆ ಬಾಂಡ್‌ನ ಹೊಸ ಚಿತ್ರ ‘ಸ್ಪೆಕ್ಟ್ರ್’ (ಭೂತ, ಪ್ರೇತ, ಪಿಶಾಚಿ, ಭ್ರಾಂತಿ ಎಂದೆಲ್ಲ ಅರ್ಥವಿದೆ) ಕಳೆದ ತಿಂಗಳು ಬಿಡುಗಡೆ ಆಯಿತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಲಿ (ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಶನ್- ಇದಕ್ಕೆ ಸೆನ್ಸಾರ್ ಬೋರ್ಡ್ ಎಂದೂ ಕರೆಯುತ್ತಾರೆ) ಅಧ್ಯಕ್ಷ ಪಹ್ಲಜ್ ನಿಹಲಾನಿ ಬಿಡುಗಡೆಗೆ ಮುನ್ನ ಇದಕ್ಕೆ ಭೂತ ಬಿಡಿಸಿ ಕಳಿಸಿದ್ದರು.‘ಛೇ ಛೇ, ಜೇಮ್ಸ್ ಬಾಂಡ್ ಹುಡುಗಿಯರನ್ನು ತುಂಬಾ ಹೊತ್ತು ಚುಂಬಿಸುತ್ತಾನೆ’ ಎಂದು ಕಸಿವಿಸಿಗೊಂಡ ನಿಹಲಾನಿ, ಚುಂಬನವನ್ನು ಅರ್ಧಕ್ಕರ್ಧ ಕಟ್ ಮಾಡಿ ಬಿತ್ತರಿ ದೃಶ್ಯಗಳಿಗೆ ಕತ್ತರಿ ಹಾಕಿದ್ದರು. ಈ ಸುದ್ದಿ ಬಯಲಾದೊಡನೆ ‘ಹೋ, ನಮ್ಮ ಖುಷಿಯೂ ಅರ್ಧಕ್ಕರ್ಧ ಕಡಿಮೆ ಆಯಿತು. ಬಾಂಡ್ ಎಷ್ಟು ಹೊತ್ತು ಬೇಕಾದರೂ ಚುಂಬಿಸಿಕೊಳ್ಳಲಿ, ಇವರೇಕೆ ಅವಸರ ಮಾಡಬೇಕು? ಪ್ರಣಯದಾಟಕ್ಕೆ ಸೀಟಿ ಊದುವ ಅಂಪೈರ್ ಬೇಕೆ?’ ಎಂದು ಬಾಂಡ್ ಪ್ರಿಯರು ಹುಯಿಲೆಬ್ಬಿಸಿದರು.‘ಸಂಸ್ಕಾರಿಜೇಮ್ಸ್‌ಬಾಂಡ್’ ಎಂಬ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದು ಅಲ್ಲಿ, ಜೇಮ್ಸ್ ಬಾಂಡ್ ಪಾತ್ರ ಮಾಡಿರುವ ನಟ ಡೇನಿಯಲ್ ಕ್ರೇಗ್‌ಗೆ ದೀನದಯಾಳ್ ಕ್ರೆಗಸ್ವಾಮಿ ಎಂದು ಹೆಸರಿಟ್ಟರು. ಅವನ ಹಣೆಗೆ ವಿಭೂತಿ, ಕುಂಕುಮ ಇಟ್ಟು ಜನಿವಾರ ತೊಡಿಸಿದರು. ಆರಂಗುಲದ ಬಟ್ಟೆ ತೊಟ್ಟಿದ್ದ ಅವನ ಪ್ರೇಯಸಿಗೆ ಆರುಗಜದ ಸೀರೆ ಉಡಿಸಿದರು. ನಿಹಲಾನಿ ಸೆನ್ಸಾರ್ ಬೋರ್ಡ್ ಅಧ್ಯಕ್ಷರಾಗುವ ಮೊದಲು ಎಲ್ಲಾ ಧಾರಾಳವಾಗಿದ್ದ ಎಂಥೆಂಥ ಮುಕ್ತಚಿತ್ರಗಳನ್ನು ಮಾಡಿದ್ದರು, ಅಧ್ಯಕ್ಷರಾದ ಮೇಲೆ ನರೇಂದ್ರ ಮೋದಿ ಕುರಿತು ಎಂಥ ಭಕ್ತಿಚಿತ್ರ ಮಾಡಿದ್ದಾರೆ ಎಂದೆಲ್ಲ ಉರಿದು ಬರೆದರು. ಒಟ್ಟಿನಲ್ಲಿ ಪಹ್ಲಜ್ ಅವರಿಗೇ ಸರಿಯಾಗಿ ಭೂತ ಬಿಡಿಸಿದರು.ಸರ್ಕಾರ ಬದಲಾದ ಮೇಲೆ ದೇಶದಲ್ಲಿ ಯಾವ್ಯಾವ ಸಂಸ್ಥೆಗಳು, ಸಮಿತಿಗಳು, ಮಂಡಲಿಗಳು ಇವೆಯೋ ಅವುಗಳಿಗೆಲ್ಲಾ ಹೊಸ ನೇತಾರರು ಬರಲೇಬೇಕು ತಾನೆ? ಚಲನಚಿತ್ರ ಪ್ರಮಾಣೀಕರಣ ಮಂಡಲಿ, ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್ತು (ಐಸಿಎಚ್‌ಆರ್), ಪುಣೆಯ ಫಿಲಂ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ (ಎಫ್‌ಟಿಐಐ) ಎಲ್ಲದರ ಸಿಂಹಾಸನಗಳ ಮೇಲೂ ನಮ್ಮ ಪರಿವಾರ ದೇವತೆಗಳನ್ನೇ ಕೂರಿಸುತ್ತೇವೆ ಎನ್ನುವ ಹಟದ ಹಿಂದೆ ಏನು ಅಜೆಂಡಾ ಇರುತ್ತದೆ ಎನ್ನುವುದನ್ನು ಅರಿಯಲು ದೊಡ್ಡ ಸಂಶೋಧನೆ ಅಗತ್ಯವಿಲ್ಲ. ಚಲನಚಿತ್ರ ಪ್ರಮಾಣೀಕರಣ ಮಂಡಲಿ ಅಧ್ಯಕ್ಷರಾಗಿದ್ದ ಕಲಾವಿದೆ ಲೀಲಾ ಸ್ಯಾಮ್ಸನ್ ಮತ್ತು ಇತರ ಸದಸ್ಯರು ಒತ್ತಡಗಳನ್ನು ತಾಳಲಾರದೆ ನಿರೀಕ್ಷೆಯಂತೆ ರಾಜೀನಾಮೆ ಕೊಡಬೇಕಾಯಿತು. ಆಮೇಲೆ ಈ ಪಹ್ಲಜ್ ನಿಹಲಾನಿ ಅಧ್ಯಕ್ಷರಾದರು.ಆಗಲಿ, ಸಿನಿಮಾದಲ್ಲಿ ಇರುವಂತೆ ಸಿನಿಮಾ ವಲಯದ ಸಂಸ್ಥೆಯಲ್ಲೂ ವಿದೂಷಕರು ಇರಬಾರದೆಂದಿಲ್ಲ. ಆದರೆ ‘ಸಂಸ್ಕೃತಿ ರಕ್ಷಣೆ’ಯ ಹೆಸರಿನಲ್ಲಿ ಪಹ್ಲಜ್ ಅವರು ಈಗಿನ ಎಲ್ಲ ಚಲನಚಿತ್ರಗಳ ಮಲಿನ ದೃಶ್ಯಗಳಿಗೆ ತೆರೆ ಹಾಕಲು ತೊಡಗಿದರೆ? ಚಲನಚಿತ್ರಗಳಲ್ಲಿ ಕಾಮಕ್ಕೆ ಫುಲ್‌ಸ್ಟಾಪು ಹಾಕುತ್ತೇನೆ ಅಂತ ಪಣ ತೊಟ್ಟರೆ? ‘ಹಳೆಯದೆಲ್ಲ ಹೊನ್ನು, ಹೊಸದೆಲ್ಲ ಟಿನ್ನು’ ಎನ್ನುವುದೇ ಹೊಸ ಸರ್ಕಾರದ ಸ್ಲೋಗನ್ನು ಎಂದು ಸಾರಲು ಹೊರಟರೆ? ಚಿತ್ರಗಳ ಪ್ರಮಾಣೀಕರಣದ ಬದಲು ಶುದ್ಧೀಕರಣವೇ ನನ್ನ ಕರ್ತವ್ಯ ಅಂದುಕೊಂಡುಬಿಟ್ಟರೆ? ಆಮೇಲೆ ಆ ಕೆಲಸ ಮುಗಿಸಿದ ನಂತರ ಅವರು ನಮ್ಮ ಸಾವಿರಾರು ವರ್ಷಗಳಿಗೂ ಹಳೆಯದಾದ ಖಜುರಾಹೋ, ಕೋಣಾರ್ಕ ಮುಂತಾದ ನೂರಾರು ದೇವಾಲಯಗಳ ಹೊರಮೈಯಲ್ಲಿ ಮೈತೋರುವ ಗಂಡುಹೆಣ್ಣಿನ ಮುಕ್ತಶಿಲ್ಪಗಳಿಗೂ ಮುಸುಕು ತೊಡಿಸಲು ಹೊರಟರೆ? ಏಕೆಂದರೆ ನಮ್ಮ ಹಿರೀಕರು ಕಾಮಸೂತ್ರಗಳನ್ನು ಬರೆದಿರುವುದು ಮಾತ್ರವಲ್ಲ, ಅವುಗಳ ಪಾಠ ಹೇಳಲು ಕಲ್ಲಿನ ಗೋಡೆಗಳ ಮೇಲೆ ಪ್ರಯೋಗ ಭಂಗಿಗಳನ್ನೂ ಚಿತ್ರಿಸಿದ್ದಾರಲ್ಲ!ನೇಮಕಾತಿಯಿಂದ ಶುರುವಾದ ಹಲವು ಅವಾಂತರಗಳ ಹೀರೋ ಪಹ್ಲಜ್ ನಿಹಲಾನಿ ಸ್ವತಃ ಹೊಸೆದ ಹೊಸ ರಗಳೆಯೇ ಜೇಮ್ಸ್ ಬಾಂಡ್ ಮುತ್ತಿನ ಕಥೆ. ಚಿತ್ರದಲ್ಲಿ ಚುಂಬಿಸುವುದನ್ನು ತೋರಿಸಿಬಿಟ್ಟ ಮೇಲೆ ಆಯಿತು, ಚುಂಬನ ಅಂದಮೇಲೆ ಚುಂಬನವೇ, ಅದು ಎಷ್ಟು ದೀರ್ಘವಾಗಿ ಇದ್ದರೇನು, ಚುಟುಕಾಗಿದ್ದರೇನು?-ಹೀಗೆಂದು ನಮ್ಮ ಪ್ರಾದೇಶಿಕ ಪ್ರಮಾಣೀಕರಣ ಮಂಡಲಿಯ ಮುಖ್ಯಸ್ಥರು ಪ್ರಶ್ನೆ ಎತ್ತಿದೊಡನೆ ಅವರನ್ನು ಆ ಜಾಗದಿಂದ ಎತ್ತಂಗಡಿ ಮಾಡಲಾಯಿತು. ಆದರೆ ಚಿತ್ರಪ್ರಿಯರ ಬಾಯಿ ಮುಚ್ಚಿಸಲು, ಅವರ ಟೀಕೆಗಳನ್ನು ಸೆನ್ಸಾರ್ ಮಾಡಲು ಸಾಧ್ಯವಿಲ್ಲವಲ್ಲ. ಚುಂಬನ ಅರ್ಧಕ್ಕೆ ಕಟ್ ಆದರೇನು, ಈ ಜೇಮ್ಸ್ ಬಾಂಡ್ ಚಿತ್ರ ಸೂಪರ್‌ಹಿಟ್ ಆಗಿ ಯಾವ ದೇಶದಲ್ಲೂ ಗಳಿಸಿರದಷ್ಟು ಅಗಾಧ ಹಣವನ್ನು ಭಾರತದಲ್ಲಿ ಮೊದಲ ದಿನವೇ ಗಳಿಸಿಬಿಟ್ಟಿತು.ದೇಶದ ಪ್ರಮುಖ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿ ಆ ಮೂಲಕ ಏಕರೂಪಿ ಸೈದ್ಧಾಂತಿಕ ವಿಚಾರವನ್ನು ಪ್ರಸಾರ ಮಾಡುವುದು ಹೇಗೆ ಎನ್ನುವುದನ್ನು ಆಡಳಿತ ನಡೆಸುವವರಿಗೆ ಯಾರೂ ಹೊಸದಾಗಿ ಹೇಳಿಕೊಡಬೇಕಿಲ್ಲ. ಒಟ್ಟಿನಲ್ಲಿ ಬೆಳ್ಳಿತೆರೆಯ ಮೇಲೆ ಚಿನ್ನದಂಥ ಸಂಸ್ಕೃತಿಯನ್ನು ನೋಡಿ ಆನಂದಿಸುವ ಭಾಗ್ಯ ಭಾರತೀಯ ಪ್ರಜೆಗಳಿಗೆ ಇದೆ ಎನ್ನುವುದು ಖಚಿತ- ಆಹಾ ‘ಫಾರ್ ಯುವರ್ ಐಸ್ ಓನ್ಲೀ’! ಏಕೆಂದರೆ ಎಲ್ಲರಿಗೂ ಗೊತ್ತು, ಪ್ರಧಾನ ಮಂತ್ರಿಗಳ ಕಟ್ಟಾಭಿಮಾನಿಯಾದ ಪಹ್ಲಜ್ ನಿಹಲಾನಿ ಖಂಡಿತವಾಗಿ ‘ಆನ್ ಹಿಸ್ ಮೆಜೆಸ್ಟೀಸ್ ಸೀಕ್ರೆಟ್ ಸರ್ವೀಸ್’!ಮುತ್ತಿಗೆ ಕತ್ತರಿ ಹಾಕಿದ ಈ ಕಥೆ ಮುಂದಿನ ನೂರಾರು ಕಥೆಗಳಿಗೆ ಮುನ್ನುಡಿ ಇರಬಹುದು. ಈ ಬೋರ್ಡ್ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಬಹುದೇ ಹೊರತು ಸೆನ್ಸಾರ್ ಮಾಡಲು ಸಾಧ್ಯವಿಲ್ಲ ಎಂಬುದೂ ಸೇರಿ ಹಲವು ಬಗೆಯ ಚರ್ಚೆಗಳನ್ನು ಇದು ಹುಟ್ಟುಹಾಕಿದೆ. ಬಾಲಿವುಡ್ ನೇತೃತ್ವದಲ್ಲಿ ಇಡೀ ಭಾರತೀಯ ಚಿತ್ರರಂಗವೇ ಮಂಡಲಿಯ ಈ ನಿಷೇಧ, ಕತ್ತರಿ ಪ್ರಯೋಗಗಳ ವಿರುದ್ಧ ಸಿಡಿಮಿಡಿಗೊಂಡಿದೆ. ಚಿತ್ರರಂಗವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸುವುದು ಭ್ರಾಂತಿಯೇ ಸರಿ ಎಂದು ಲೇವಡಿ ಮಾಡಿದೆ. ಮುತ್ತಿನ ಕಥೆಯನ್ನು ಇಷ್ಟಕ್ಕೆ ಬಿಟ್ಟು, ಮುಟ್ಟಿನ ಕಥೆಗೆ ಹೋಗೋಣ. ದೇಶದಾದ್ಯಂತ ಚರ್ಚೆಗೆ ಬಿದ್ದಿರುವ ಈ ಇನ್ನೊಂದು ವಿಷಯ ದೇವಸ್ಥಾನಗಳ ಒಳ ಓವರಿಗೆಯದು. ಆದರೇನು ಮಾಡೋಣ, ಇದು ಹೆಣ್ಣಿನ ದೇಹದ ಒಳಭಾಗದಲ್ಲಿರುವ ‘ಓವರಿ’ಗೆ ಕೂಡ ಸಂಬಂಧಿಸಿದ್ದು! (ಓವರಿ ಎಂದರೆ ಪ್ರತೀ ತಿಂಗಳು ಅಂಡಾಣುಗಳನ್ನು ಬಿಡುಗಡೆ ಮಾಡುವ ಅಂಗ).ನಮ್ಮ ದೇವಾಲಯಗಳಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆ ಆಗಿರುವ ಸ್ಥಳವನ್ನು ‘ಗರ್ಭಗುಡಿ’ ಎಂದು ಕರೆಯುತ್ತಾರಲ್ಲವೇ? ಆದರೆ ಗರ್ಭ ಧರಿಸುವ ಹೆಣ್ಣು ಮಾತ್ರ ಅಲ್ಲಿಗೆ ಸಲೀಸಾಗಿ ಹೋಗುವಂತಿಲ್ಲ. ಅವಳ ಋತುಚಕ್ರದ ಮೇಲೇ ಮನುಕುಲ ಮುಂದುವರೆಯುತ್ತದೆ. ಆದರೆ ಅವಳು ಗರ್ಭಗುಡಿಯೊಳಗೆ ಕಾಲಿಡುವುದು ಖಡಾಖಂಡಿತವಾಗಿ ನಿಷಿದ್ಧ. ಮುಟ್ಟಾಗಿರಲಿ, ಇಲ್ಲದಿರಲಿ ಬಹುತೇಕ ಕಡೆ ಅವಳಿಗೆ ಅದು ನಿಷಿದ್ಧ.ಹೀಗೇಕೆ ಎಂದು ಕೇಳಿದರೆ, ‘ಮುಟ್ಟಾಗುವುದರಿಂದ ಅವಳು ಮಲಿನ’ ಎಂಬ ಉತ್ತರ ಸಿದ್ಧ. ಅವಳು ಹೀಗೆ ‘ಮಲಿನ’ ಆಗದಿದ್ದರೆ ಮಕ್ಕಳು ಹುಟ್ಟುವುದು ಹೇಗೆ ಎಂದು ಹೆಚ್ಚು ಮಾತಿಗಿಳಿದರೆ ಬಾಯಿ ಮುಚ್ಚಿಸಲು ‘ಏನೋ ನಮ್ಮ ಪದ್ಧತಿ, ನಮ್ಮ ಪರಂಪರೆ, ಹಿಂದಿನಿಂದ ಬಂದದ್ದು’ ಎಂಬ ಪೆದ್ದ ಉತ್ತರ ಅಥವಾ ಜಾಣ ಉತ್ತರ ಇದ್ದೇ ಇದೆ. ಪರಂಪರೆ ಎನ್ನುವುದು ಇಂಥ ಅತಾರ್ಕಿಕ ಸಂಗತಿಗಳ ಪರ್ವತವೇ ಆಗಿದೆ.ಈ ಹಳೆಯ ವಿಷಯ ಇತ್ತೀಚೆಗೆ ಹೊಸ ಚರ್ಚೆಗಳನ್ನು ಹುಟ್ಟುಹಾಕಿತು. ಶಬರಿಮಲೆಯ ಅಯ್ಯಪ್ಪನ ದೇಗುಲದೊಳಗೆ ಮಹಿಳೆಯರ ಪ್ರವೇಶ ನಿಷಿದ್ಧ ಕುರಿತು ಮಾತನಾಡಿದ ದೇವಾಲಯ ಮಂಡಲಿ ಅಧ್ಯಕ್ಷ ಗೋಪಾಲಕೃಷ್ಣನ್ ‘ಮಹಿಳೆಯರು ಮುಟ್ಟಾಗಿದ್ದಾರಾ ಅವರಿನ್ನೂ ಮುಟ್ಟಾಗುತ್ತಿದ್ದಾರಾ ಎಂಬುದನ್ನು ಪತ್ತೆಹಚ್ಚುವ ಡಿಟೆಕ್ಟರ್ ಮೆಷಿನ್ ಬರಲಿ, ಆಮೇಲೆ ಮಹಿಳೆಯರನ್ನು ದೇವಾಲಯದೊಳಗೆ ಬಿಡುವ ಬಗ್ಗೆ ಯೋಚಿಸೋಣ’ ಎಂಬರ್ಥದ ಮಾತುಗಳನ್ನು ಪತ್ರಿಕಾಗೋಷ್ಠಿಯಲ್ಲಿ ಆಡಿದರು.ಸಮಾನತೆ ಸಾರುವ ಸಂವಿಧಾನಕ್ಕೆ ಅಪಚಾರ ಎಸಗಿದ ಅಪರಾಧವಲ್ಲವೇ ಇದು? ಅಯ್ಯಪ್ಪ ಬ್ರಹ್ಮಚಾರಿ ಆಗಿರುವುದರಿಂದ ದೇಗುಲಕ್ಕೆ ಮಹಿಳೆಯರು ಬರಕೂಡದಂತೆ. ಪುಣ್ಯಕ್ಕೆ ಗಣಪತಿ, ಹನುಮಂತ ಮುಂತಾದ ಬ್ರಹ್ಮಚಾರಿಗಳಿಗೆ ಹೆಂಗಸರ ಹೆದರಿಕೆಯಿಲ್ಲ! ಮುಟ್ಟು ಪತ್ತೆಮಾಡುವ ಮೆಷಿನ್‌ನಂತೆಯೇ ದೇಗುಲಗಳಲ್ಲಿ ನಡೆಯುವ ಲೂಟಿ ಪತ್ತೆ ಮಾಡುವ ಮೆಷಿನ್ ಬರುವುದಾದರೆ ಇನ್ನೂ ಒಳ್ಳೆಯದು. ಏಕೆಂದರೆ ವಾರ್ಷಿಕ ಸೀಸನ್‌ನಲ್ಲಿ ಶಬರಿಮಲೆ ದೇಗುಲ ಗಳಿಸುವ ಅಂದಾಜು ಇನ್ನೂರು ಮುನ್ನೂರು ಕೋಟಿ ರೂಪಾಯಿ ಆದಾಯದಲ್ಲಿ ಆಡಳಿತ ಮಾಫಿಯಾ ತಿಂದುತೇಗುವ ಪಾಲು ಊಹೆಗೆ ಬಿಟ್ಟದ್ದು ಎಂದು ಹೇಳುತ್ತಾರೆ. ಅವರು ಪಾಲಿಸುತ್ತಿರುವ ಭ್ರಷ್ಟಾಚಾರವೂ ನಮ್ಮ ಪರಂಪರೆಯಲ್ಲಿ ಇತ್ತೇ?

ಮುಟ್ಟಿನ ವಿಷಯ ಹೀಗೆ ಮುಟ್ಟಬಾರದು.ಮುಟ್ಟಾಗಿದ್ದ ದ್ರೌಪದಿಯನ್ನು ಸಭೆಯಲ್ಲಿ ಎಳೆದಾಡಿದ್ದೇ ಮಹಾಭಾರತ ಯುದ್ಧವಾಯಿತು. ಭೂತಾಯಿಯೂ ಮುಟ್ಟಾಗುತ್ತಾಳೆ ಎಂದು ಕೃಷಿ ಸಂಸ್ಕೃತಿ ಪೂಜಿಸುತ್ತದೆ. ಈಗ ನಿಕಿತಾ ಆಜಾದ್ ಎಂಬ ಹುಡುಗಿ ‘ಹ್ಯಾಪಿ ಟು ಬ್ಲೀಡ್’ ಎಂಬ ನುಡಿಗೋಲು ಹಿಡಿದು ನವಮಾಧ್ಯಮದಲ್ಲಿ ಹುಟ್ಟು ಹಾಕಿದ ಚರ್ಚೆ ಒಂದು ಆಂದೋಲನವಾಗಿ ಬೆಳೆದಿದೆ. ಆದರೆ ಇಷ್ಟು ಸಾಲದು. ಈಗ ತುರ್ತಾಗಿ ಬೇಕಾಗಿರುವುದು, ಮುಟ್ಟಾದ ಹೆಣ್ಣುಮಕ್ಕಳನ್ನು ಪದ್ಧತಿ ಹೆಸರಿನಲ್ಲಿ ಹಟ್ಟಿಹಾಡಿಗಳಾಚೆ ಗುಡಿಸಲಿಗೆ ದೂಕುವುದನ್ನು ತಪ್ಪಿಸುವುದಕ್ಕೆ, ಹಳ್ಳಿಯ ಹೆಣ್ಣುಮಕ್ಕಳೆಲ್ಲರಿಗೆ ಸುಲಭ ಬೆಲೆಯಲ್ಲಿ ಸುಸ್ಥಿರ ಪ್ಯಾಡ್ ಒದಗಿಸುವುದಕ್ಕೆ, ಮುಟ್ಟಾದವರ ಮರ್ಯಾದೆ ಕಾಪಾಡಲು ಶೌಚಾಲಯಗಳನ್ನು ನಿರ್ಮಿಸುವುದಕ್ಕೆ ಅಗತ್ಯವಾದ ಸಾಮಾಜಿಕ ಆಂದೋಲನಗಳು. ಗ್ರಾಮ ಪಂಚಾಯ್ತಿಗಳು ಈ ವಿಷಯವನ್ನು ಹಾಗೆ ಮುಟ್ಟಬೇಕು.ಮುಟ್ಟಾದ ದಿನಗಳಲ್ಲೂ ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರು ‘ಸೃಷ್ಟಿಯಲ್ಲಿ ಆಗುವ ಎಲ್ಲವೂ ದೇವರಿಗೆ ತಿಳಿಯುತ್ತದೆ ಅಂದಮೇಲೆ, ನಾನು ಮುಟ್ಟಾಗಿರುವ ವಿಷಯವೂ ತಿಳಿದಿರುತ್ತದೆ. ಆದ್ದರಿಂದ ಹೋದರೆ ತಪ್ಪೇನಿದೆ?’ ಎಂದು ನಾಲ್ಕು ದಶಕಗಳ ಹಿಂದೆ ಸಮರ್ಥಿಸಿಕೊಳ್ಳುತ್ತಿದ್ದರು.‘ಅತ್ಯಾಚಾರಿಗಳು, ಕೊಲೆಗಾರರು ದೇವಾಲಯದೊಳಗೆ ಹೋಗಬಹುದಂತೆ, ಕೇವಲ ಮುಟ್ಟಾದ ನಾನು ಬೇಡವಾ? ನನಗೆ ಇಂಥ ದೇವರೇ ಬೇಡ’ ಎಂದು ಇಂದು ಫೇಸ್‌ಬುಕ್‌ನಲ್ಲಿ ಹುಡುಗಿಯೊಬ್ಬಳು ಹೇಳುತ್ತಾಳೆ. ಆದರೆ ಅಹಮದ್‌ನಗರ ಜಿಲ್ಲೆಯ ಶನಿ ಶಿಂಗ್ಣಾಪುರದ ಶನಿ ವಿಗ್ರಹವನ್ನು ಮಹಿಳೆಯೊಬ್ಬಳು ಮುಟ್ಟಿದ್ದನ್ನು ಒಪ್ಪದೆ ಮಹಾರಾಷ್ಟ್ರದ ಮಕ್ಕಳ ತಾಯಿ ಸಚಿವೆಯೊಬ್ಬರು ಸಂಪ್ರದಾಯವನ್ನೇ ಸಮರ್ಥಿಸಿಕೊಂಡದ್ದು ಸರ್ವಥಾ ಸರಿಯಲ್ಲ. ಸ್ವಚ್ಛ ಭಾರತ ಆಂದೋಲನ ಎಂದರೆ ಬರೀ ನೆಲದ ಮೇಲಿರುವ ಕಸ ತೆಗೆಯುವುದಲ್ಲ ಎಂದು ದೊಡ್ಡವರು ಎಷ್ಟು ಸರಿಯಾಗಿ ಹೇಳಿದ್ದಾರಲ್ಲ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry