7

ಪಿತೃತ್ವ ಹಾಗೂ ಮಾತೃತ್ವ ರಜೆ ಸುತ್ತ…

Published:
Updated:

ಪ್ರಮುಖ ಕಾರ್ಪೊರೆಟ್ ಕಂಪೆನಿಗಳ ಸಿಇಓಗಳು ಅಪ್ಪಅಮ್ಮಂದಿರಾಗುವ ವಿಚಾರ ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಸುದ್ದಿಯಾದದ್ದು ವಿಶೇಷ. ಡಿಸೆಂಬರ್ 1ರಂದು  ಫೇಸ್‌ಬುಕ್ ಸಂಸ್ಥಾಪಕ ಹಾಗೂ ಸಿಇಓ  ಮಾರ್ಕ್ ಝುಕರ್‌ಬರ್ಗ್‌ (31), ಮಗಳು ಮ್ಯಾಕ್ಸ್ ಹುಟ್ಟಿದ ಸಂಭ್ರಮ ಹಂಚಿಕೊಂಡರು. ಜೊತೆಗೆ ಫೇಸ್‌ಬುಕ್‌ನ ಶೇ 99ರಷ್ಟು ಷೇರುಗಳನ್ನು ದಾನವಾಗಿ ನೀಡುವ ಯೋಜನೆಯನ್ನೂ ಪ್ರಕಟಿಸಿದರು. ಇದಾಗಿ ವಾರ ಕಳೆಯುತ್ತಿದ್ದಂತೆಯೇ  ಡಿಸೆಂಬರ್ 10ರಂದು ತಮಗೆ ಅವಳಿ ಹೆಣ್ಣುಮಕ್ಕಳು ಜನಿಸಿದ ವಿಚಾರವನ್ನು ಯಾಹೂ ಸಿಇಓ ಮರಿಸಾ ಮಯೆರ್ (40) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು.ಈ ಕಾರ್ಪೊರೆಟ್ ದಿಗ್ಗಜರ ವೈಯಕ್ತಿಕ ಬದುಕಿನ ವಿವರಗಳ ಪ್ರಕಟಣೆ, ಎರಡು ವಿಭಿನ್ನ ಧಾರೆಗಳಲ್ಲಿ ಜಗತ್ತಿನಲ್ಲಿ ಚರ್ಚೆಗೆ ನಾಂದಿ ಹಾಡಿದ್ದು ವಿಶೇಷ. ಮಗಳ ಜನನದ ನಂತರ ಎರಡು ತಿಂಗಳ ಪಿತೃತ್ವ ರಜೆ ತೆಗೆದುಕೊಳ್ಳುವುದಾಗಿ  ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ ಪ್ರಕಟಿಸಿದ್ದು ಚರ್ಚೆಗಳಿಗೆ ಕಾರಣವಾಗಿದೆ. ಕುಟುಂಬ ಹಾಗೂ  ಕಚೇರಿಯ ಕೆಲಸಗಳ ಮಧ್ಯೆ ಕಾಯ್ದುಕೊಳ್ಳಬೇಕಾದ ಸಮತೋಲನ ಹಾಗೂ ಲಿಂಗತ್ವ ವಿಚಾರಗಳ ಚರ್ಚೆಗೊಂದು ಇದು ಹೊಸ ಹುರುಪು ತಂದಿದೆ. ಹಾಗೆಯೇ ಅವಳಿ ಹೆಣ್ಣುಮಕ್ಕಳು ಜನಿಸುವವರೆಗೂ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಲೇ ಇದ್ದು  ಕೇವಲ ಎರಡು ವಾರಗಳ ತಾಯ್ತನ ರಜೆ ತೆಗೆದುಕೊಳ್ಳುವುದಾಗಿ ಯಾಹೂ ಸಿಇಓ ಮರಿಸಾ ಮಯೆರ್ ಈಗಾಗಲೇ ಕಳೆದ ಸೆಪ್ಟೆಂಬರ್‌ನಲ್ಲಿಯೇ ಪ್ರಕಟಿಸಿದ್ದರು. ಈ ವಿಚಾರದಲ್ಲಿ ಈ ಇಬ್ಬರು ದಿಗ್ಗಜರ ವಿಭಿನ್ನ ನಡೆಗಳು ಸಾಮಾಜಿಕವಾಗಿ ಹೊಸ ದೃಷ್ಟಿಕೋನಗಳನ್ನು ಹುಟ್ಟುಹಾಕಬಲ್ಲವೆ ಎಂಬುದು ಇಲ್ಲಿನ ಜಿಜ್ಞಾಸೆ.2012ರಲ್ಲಿ ಯಾಹೂ ಕಂಪೆನಿಯ ಸಿಇಓ ಆಗಿ ಅಧಿಕಾರ ವಹಿಸಿಕೊಂಡಾಗಲೂ ಮರಿಸಾ ಮಯೆರ್ ಗರ್ಭಿಣಿಯಾಗಿದ್ದರು. ನಂತರ ಗಂಡುಮಗುವಿಗೆ ಜನ್ಮ ನೀಡಿ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದ ಅವರು ಆಗಲೂ ಹೆರಿಗೆಯಾದ 15 ದಿನಗಳಲ್ಲೇ ಕಚೇರಿ ಕೆಲಸಗಳಿಗೆ ವಾಪಸಾಗಿದ್ದರು. ‘ಬಸಿರಿನ ತೊಂದರೆಗಳು ಈ ಬಾರಿಯೂ ಹೆಚ್ಚಿಲ್ಲದೆ ಆರೋಗ್ಯವಂತಳಾಗಿರುವ ಕಾರಣ ಮೂರು ವರ್ಷಗಳ ಹಿಂದೆ ನನ್ನ ಮಗನನ್ನು ಹೆತ್ತಾಗ ಅನುಸರಿಸಿದ ಕ್ರಮವನ್ನೇ ಈಗಲೂ ಅನುಸರಿಸುತ್ತೇನೆ’ ಎಂದಿದ್ದರು ಅವರು.ಈ ವಿಚಾರ ಹೊರಜಗತ್ತಿಗೆ ಗೊತ್ತಾಗುತ್ತಿದ್ದಂತೆಯೇ ಯಾಹೂ ಷೇರುಗಳ ಮೌಲ್ಯ ಏಕಾಏಕಿ ಕುಸಿತ ಕಂಡಿದ್ದೂ ಸಹ ಹೊಸ ವಿದ್ಯಮಾನವೇ! ಆದರೆ ಮಯೆರ್ ಅವರ ಈ ನಿರ್ಧಾರ ಟೀಕೆಗಳಿಗೆ ಗುರಿಯಾಯಿತು. ಪೋಷಕತ್ವ ರಜೆ ವಿಚಾರವನ್ನು ಕಾರ್ಪೊರೆಟ್ ನಾಯಕರು ನಿರ್ವಹಿಸುವ ರೀತಿ, ಮಾದರಿಯೊಂದನ್ನು ಸೃಷ್ಟಿಸುತ್ತದೆ. ಮಹಿಳಾ ಬಾಸ್ ವಿಚಾರದಲ್ಲಂತೂ ಜಾಗತಿಕವಾಗಿ ಇದು ಸಾಂಕೇತಿಕವಾಗುತ್ತದೆ. ಈ ಹಿಂದೆ ಯಾಹೂಗೆ ಆಗಷ್ಟೇ ಪ್ರವೇಶಿಸಿದ್ದ ಮೆಯರ್ ಕೆಲವೇ ದಿನಗಳ ತಾಯ್ತನದ ರಜೆ ತೆಗೆದುಕೊಂಡಿದ್ದು ಸರಿ. ಆದರೆ ಈಗ ಅದರ ಪುನರಾವರ್ತನೆ ಏಕೆ? ಸಿಇಓ ಆಗಿ ತನ್ನ ದಕ್ಷತೆಯನ್ನು ಅವರಿನ್ನೂ ಸಾಬೀತುಪಡಿಸುತ್ತಲೇ ಇರಬೇಕಾದ ಅಗತ್ಯ ಇದೆಯೇ ಎಂಬಂತಹ ಪ್ರಶ್ನೆಗಳು ಕೇಳಿಬಂದವು. ನಿಜ ಹೇಳಬೇಕೆಂದರೆ, ಪುರುಷ ಸಿಇಓಗಳಿಗೆ ಇಂತಹವು ಪ್ರಶ್ನೆಗಳೇ ಆಗುವುದಿಲ್ಲ.ತಮ್ಮ ನಿರ್ಧಾರಗಳ ಬಗ್ಗೆ ವಿವರಣೆ ನೀಡುವುದು ಅಥವಾ ಸಮರ್ಥಿಸಿಕೊಳ್ಳುವ ಅಗತ್ಯವೂ ಇರುವುದಿಲ್ಲ ಎಂಬುದಂತೂ ನಿಜ. ಅಥವಾ ಇದು ಅಂತಹ ಚರ್ಚೆ ವಿಚಾರ ಯಾಕಾಗಬೇಕು ಎಂಬುದೂ ಪ್ರಶ್ನೆ. ಏಕೆಂದರೆ ತಾಯ್ತನದ ರಜೆ ಮುಗಿದ ನಂತರ ಮಕ್ಕಳ ಪಾಲನೆಗೆ ಮಯೆರ್‌ಗೆ ಹೆಚ್ಚಿನ ಸಂಪನ್ಮೂಲಗಳಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಜೊತೆಗೆ, ಫಾರ್ಚೂನ್ 1000 ಕಂಪೆನಿಗಳ ಸಿಇಓಗಳಲ್ಲಿ ಶೇ 4ರಷ್ಟು ಮಂದಿ ಮಾತ್ರ ಮಹಿಳೆಯರು ಎಂಬುದನ್ನು ಹೇಗೆ ಮರೆಯಲಾದೀತು? ಹಾಗಿದ್ದಾಗ, ಸಾಮರ್ಥ್ಯವನ್ನು ಪದೇಪದೇ ಸಾಬೀತು ಪಡಿಸಬೇಕಾದ ಒತ್ತಡ ಇದ್ದೇ ಇರುತ್ತದೆಯೆ? ಜೊತೆಗೆ ಈಗ ಸ್ಪರ್ಧಾತ್ಮಕತೆಯ ಸಂಕಷ್ಟದಲ್ಲಿ  ಯಾಹೂ ಸಿಲುಕಿದ್ದು, ಮಯೆರ್ ಪದಚ್ಯುತಿಗೂ  ಒತ್ತಡವೂ ಸೃಷ್ಟಿಯಾಗಿದೆ.ಇಂತಹ ಸಂದರ್ಭದಲ್ಲಿ ಝುಕರ್‌ಬರ್ಗ್‌ ಅವರ ಪಿತೃತ್ವ ರಜೆಯ ವಿಚಾರ ಮುಖ್ಯ ವಿಷಯವೊಂದನ್ನು ಮುಖ್ಯವಾಹಿನಿಗೆ ತಂದಿದೆ. ಕೆಲಸ ಹಾಗೂ ಕುಟುಂಬದ ಸಮತೋಲನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಪೀಳಿಗೆಯ ಭಾಗವಾದವರು ಇವರು. ಪುರುಷ ಹಾಗೂ ಮಹಿಳಾ ನೌಕರರಿಗೆ 4 ತಿಂಗಳ ವೇತನ ಸಹಿತ ಪೋಷಕತ್ವ ರಜೆ ನೀಡುತ್ತದೆ ಫೇಸ್‌ಬುಕ್ ಕಂಪೆನಿ. ಎಂದರೆ,  ಫೇಸ್‌ಬುಕ್‌ನಲ್ಲಿ ಕೆಲಸ ಮಾಡುವ ಸರಾಸರಿ ಅಪ್ಪನಿಗಿಂತ  ಝುಕರ್‌ಬರ್ಗ್‌ ತೆಗೆದುಕೊಳ್ಳುತ್ತಿರುವ ರಜೆ ಕಡಿಮೆಯೇ! ಹೀಗಿದ್ದೂ  ಮಗುವಿನ ಜೊತೆಗಿರುವುದು ಮಗುವಿನ ದೃಷ್ಟಿಯಿಂದ ಒಳ್ಳೆಯದು ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ ಎಂಬುದನ್ನು ಝುಕರ್‌ಬರ್ಗ್‌ ಫೇಸ್‌ಬುಕ್ ಪೇಜ್‌ನಲ್ಲಿ ಬರೆದಿದ್ದಾರೆ. ಡಯಾಪರ್ ಬದಲಿಸುತ್ತಿರುವ, ಕೆಲವೇ ದಿನಗಳ ಪುಟ್ಟ ಮಗಳಿಗೆ ಪುಸ್ತಕ ಓದಿ ಹೇಳುತ್ತಿರುವ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತಾ ಪೋಷಕತ್ವಕ್ಕೊಂದು ಹೊಸ ಸಂಭ್ರಮ ತಂದಿದ್ದಾರೆ ಝುಕರ್‌ಬರ್ಗ್‌.ಹೊಸಯುಗದ ತಂತ್ರಜ್ಞಾನದ ಕಂಪೆನಿಗಳಾದ ಫೇಸ್‌ಬುಕ್‌ನಂತಹ ಕಂಪೆನಿಗಳು ಉತ್ತಮ ಹಾಗೂ ಗುಣಮಟ್ಟದ ಜೀವನಕ್ಕಾಗಿ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವುದಷ್ಟೇ ಅಲ್ಲ, ನೌಕರರ ಸರ್ವತೋಮುಖ ಏಳಿಗೆಗೂ ಮಾನವ ಸಂಪನ್ಮೂಲ (ಎಚ್‌ಆರ್) ನೀತಿಗಳಿಗೆ ಗಮನನೀಡುತ್ತಿವೆ ಎಂಬುದು ಗಮನಾರ್ಹ. ಇದನ್ನು ಸ್ವಾರ್ಥರಹಿತವಾದ ಸಾಮಾಜಿಕ ಕಾಳಜಿ ಎಂದೇನೂ ಭಾವಿಸಬೇಕಿಲ್ಲ. ಪ್ರತಿಭೆಯನ್ನು ಆಕರ್ಷಿಸಿ ಕಂಪೆನಿಗಳಲ್ಲೇ ಉಳಿಸಿಕೊಳ್ಳಲು ಇಂತಹ ಕ್ರಮಗಳೀಗ ಅಗತ್ಯವೂ ಆಗಿದೆ.ಭಾರತದಲ್ಲಿ  ಕೇಂದ್ರ ನಾಗರಿಕ ಸೇವೆ (ರಜೆ) ನಿಯಮ 551 (ಎ) ಅನ್ವಯ, ಕೇಂದ್ರ ಸರ್ಕಾರದ ಪುರುಷ ನೌಕರನಿಗೆ 15 ದಿನಗಳ ಪಿತೃತ್ವ ರಜೆಗೆ 1999ರಲ್ಲೇ ಅವಕಾಶಗಳನ್ನು ಕಲ್ಪಿಸಲಾಗಿದೆ. ಇದೇ ನಿಯಮ ಮಗು ದತ್ತು ಪಡೆದಾಗಲೂ ಅನ್ವಯವಾಗುತ್ತದೆ. ರಾಜ್ಯ ಸರ್ಕಾರ ಹಾಗೂ ಅನೇಕ ಖಾಸಗಿ ಸಂಸ್ಥೆಗಳಲ್ಲೂ ಪಿತೃತ್ವ ರಜೆ ಸೌಲಭ್ಯವಿದೆ. ಆದರೆ,  ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಏಕಾಂಗಿ ತಂದೆಗೂ ಎರಡು ವರ್ಷಗಳ ಕಾಲದ ಮಕ್ಕಳ ಪಾಲನಾ ರಜೆ (ಚೈಲ್ಡ್ ಕೇರ್ ಲೀವ್- ಸಿಸಿಎಲ್) ನೀಡಲು  ಏಳನೇ ವೇತನ ಆಯೋಗ ಶಿಫಾರಸು ಮಾಡಿರುವುದು ಹೊಸ ವಿಚಾರ.ಮಕ್ಕಳಿಗೆ 18 ವರ್ಷ ತುಂಬುವವರೆಗೆ, ಮಕ್ಕಳ ಪಾಲನೆಗಾಗಿ ಎರಡು ವರ್ಷಗಳ ಅವಧಿಯ ‘ಮಕ್ಕಳ ಪಾಲನಾ ರಜೆ’  ತೆಗೆದುಕೊಳ್ಳುವ ಅವಕಾಶವನ್ನು ಮಹಿಳೆಯರಿಗೆ 2008ರಲ್ಲಿ 6ನೇ ವೇತನ ಆಯೋಗ ಮೊದಲ ಬಾರಿಗೆ ನೀಡಿತ್ತು.  ಎರಡು ಮಕ್ಕಳಿಗೆ ಈ ರಜೆ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ.  ಶಾಲಾ ಪರೀಕ್ಷೆ ಸಮಯದಲ್ಲಿ ಮಕ್ಕಳನ್ನು ಸಿದ್ಧಪಡಿಸುವುದಕ್ಕಾಗಿ ಅಥವಾ ಮಕ್ಕಳು ಕಾಯಿಲೆ ಬಿದ್ದ ಸಂದರ್ಭದಲ್ಲಿ ನೋಡಿಕೊಳ್ಳುವುದಕ್ಕಾಗಿ ಮಹಿಳೆ ಈ ರಜೆಯನ್ನು ಬಳಸಿಕೊಳ್ಳಬಹುದಾಗಿದೆ. ಎರಡು ವರ್ಷ ಕಾಲದ ಈ ರಜೆಯನ್ನು ತನಗೆ ಬೇಕೆಂದಾಗ ವರ್ಷದಲ್ಲಿ ಮೂರು ಬಾರಿ ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಈಗ ಏಳನೇ ವೇತನ ಆಯೋಗದ ಶಿಫಾರಸಿನಲ್ಲಿ,  ಇದೇ ಮೊದಲ ಬಾರಿಗೆ  ಏಕಾಂಗಿ ತಂದೆಯರನ್ನೂ ಇದರ ವ್ಯಾಪ್ತಿಗೆ ತರಲಾಗಿದೆ. ಮಕ್ಕಳ ಆರೈಕೆ,  ಹೊಣೆಗಾರಿಕೆಯನ್ನು ಪುರುಷರೂ ಹೊತ್ತುಕೊಳ್ಳಲು ಈ ಮೂಲಕ ಮಾನ್ಯತೆ ನೀಡಲಾಗಿದೆ ಎಂಬುದು ವಿಶೇಷ.  ಇದಕ್ಕೊಂದು ಟೀಕೆಯೂ ಇದೆ. ಏಕಾಂಗಿ ಅಪ್ಪಂದಿರಿಗೆ ಮಾತ್ರ ಈ ಜವಾಬ್ದಾರಿ ಏಕೆ? ಎಲ್ಲಾ ಅಪ್ಪಂದಿರಿಗೂ ಏಕಿಲ್ಲ ಎಂಬ ಮಾತು ಅದು. ಎಂದರೆ ಅಮ್ಮಂದಿರೇ ಮುಖ್ಯ ಪೋಷಕರು. ಏಕಾಂಗಿಯಾಗಿದ್ದಾಗ ಮಾತ್ರ ಅಪ್ಪಂದಿರಿಗೆ ಜವಾಬ್ದಾರಿ ಎಂಬಂತಹ ಧ್ವನಿ ಇಲ್ಲಿದೆ ಎಂಬಂತಹ ಆಕ್ಷೇಪಗಳು ವ್ಯಕ್ತವಾಗಿವೆ. ಅದೇನಾದರೂ ಇರಲಿ. ಕುಟುಂಬದ ಹೊಣೆಗಾರಿಕೆ ಸಮನಾಗಿ ಹಂಚಿಕೊಳ್ಳುವ ಪ್ರಕ್ರಿಯೆ ಇನ್ನೂ ಆರಂಭವೇ ಆಗಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಇದು ಒಂದು ಹೊಸ ಹೆಜ್ಜೆ.ಸರಿಯಾದ ಸಂದೇಶ ನೀಡುವಂತಹದ್ದು ಎಂದು ಭಾವಿಸಬಹುದು. ಮಹಿಳಾ ನೌಕರರಿಂದ  ಸಿಸಿಎಲ್ ದುರ್ಬಳಕೆ ನಿಯಂತ್ರಣ ವಿಚಾರವನ್ನೂ ವೇತನ ಆಯೋಗದ ವರದಿ ಪ್ರಸ್ತಾಪಿಸಿದೆ. ಮಕ್ಕಳ ಪಾಲನಾ ರಜೆಯುದ್ದಕ್ಕೂ ಮಹಿಳಾ ನೌಕರರಿಗೆ ಈಗ ಪೂರ್ಣ ವೇತನ ನೀಡಲಾಗುತ್ತದೆ.  ಈ ಅನುಕೂಲ ಇರುವುದರಿಂದ  ಅದನ್ನು ಹೇಗಾದರೂ ಸರಿ ಬಳಸಿಕೊಳ್ಳಬೇಕು ಎಂದಾಗಬಾರದು. ಇದಕ್ಕಾಗಿ ಮೊದಲ 365 ದಿನಗಳಿಗೆ ಶೇ 100ರಷ್ಟು ವೇತನ ಸಹಿತ  ರಜೆ ನೀಡಬೇಕು. ಮುಂದಿನ 365 ದಿನಗಳ  ರಜೆಯನ್ನು ಶೇ 80ರಷ್ಟು ವೇತನದ ಜೊತೆಗೆ ನೀಡಬೇಕು ಎಂಬಂತಹ ಶಿಫಾರಸನ್ನೂ ಮಾಡಲಾಗಿದೆ. ಏಕಾಂಗಿ ಅಮ್ಮಂದಿರಿಗೆ ಇನ್ನೊಂದಿಷ್ಟು ರಿಯಾಯಿತಿಗೂ ಆಯೋಗ ಸಲಹೆ ಮಾಡಿದೆ. ಅಗತ್ಯ ಬಿದ್ದಲ್ಲಿ ಅವರಿಗೆ ವರ್ಷಕ್ಕೆ 6 ಬಾರಿ ಮಕ್ಕಳ ಪಾಲನಾ ರಜೆ ನೀಡಬಹುದು ಎಂಬಂಥ ಶಿಫಾರಸು. ಜಗತ್ತಿನಲ್ಲಿ ಪಿತೃತ್ವ ರಜೆ ಪರಿಕಲ್ಪನೆಯನ್ನು ಮೊದಲು ಹುಟ್ಟು ಹಾಕಿದ್ದು ಸ್ವೀಡನ್.  1974ರಲ್ಲಿ ಪೋಷಕ ರಜೆ (ಪೇರೆಂಟಲ್ ಲೀವ್) ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಲಾಯಿತು. ಆದರೆ ಆಗ ಈ ರಜೆಯನ್ನು ಕೇವಲ ಶೇ 6ರಷ್ಟು ತಂದೆಯರು ಬಳಸಿಕೊಂಡಿದ್ದರು. 1995ರಲ್ಲಿ ಒಂದು ತಿಂಗಳ ಪಿತೃತ್ವ ರಜೆ ಯನ್ನು ಜಾರಿ ಮಾಡಿದ ಸ್ವೀಡನ್ ಸರ್ಕಾರ  ಒಂದು ಷರತ್ತನ್ನೂ ವಿಧಿಸಿತ್ತು. ಈ ರಜೆಯನ್ನು  ಪುರುಷರು ಬಳಸಿಕೊಳ್ಳದಿದ್ದಲ್ಲಿ ಸರ್ಕಾರದಿಂದ ದೊರೆಯುವ ಸಬ್ಸಿಡಿಗಳನ್ನು  ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು. ಕುಟುಂಬದಲ್ಲಿ ತಂದೆಯ ಪಾತ್ರದ ಒಳಗೊಳ್ಳುವಿಕೆ ಹೆಚ್ಚಾದಂತೆ ಸ್ವೀಡನ್‌ನಲ್ಲಿ ವಿಚ್ಛೇದನ ಹಾಗೂ ದಂಪತಿ ಪ್ರತ್ಯೇಕಗೊಳ್ಳುವ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗಿದೆ.ಪಿತೃತ್ವ  ರಜೆ ಸೌಲಭ್ಯ ಸಮಕಾಲೀನ ಸಂದರ್ಭದ ಅಗತ್ಯ ಎಂಬುದನ್ನೀಗ ಮನಗಾಣಲಾಗಿದೆ ಎಂಬುದು ಮುಖ್ಯ. ಅಧ್ಯಯನವೊಂದರ ಪ್ರಕಾರ,  ಮನೆಗೆಲಸ ಹಾಗೂ ಮಕ್ಕಳ  ಪಾಲನೆ ಕೆಲಸದಲ್ಲಿ  ಭಾರತೀಯ ತಂದೆ ದಿನಕ್ಕೆ ಸರಾಸರಿ 52 ನಿಮಿಷ ವ್ಯಯಿಸುತ್ತಾನೆ. ಆದರೆ ಇದಕ್ಕೆ ಹತ್ತು ಪಟ್ಟು ಸಮಯ ಮಹಿಳೆಯರು ವಿನಿಯೋಗಿಸುತ್ತಾರೆ.  ಪುರುಷನಿಗೆ ಅದು ಬೇಕಾದರೆ ಮಾಡಬಹುದು ಅಥವಾ ಬಿಡಬಹುದು. ಶತಶತಮಾನಗಳ ಸಾಮಾಜಿಕ ಪೂರ್ವಗ್ರಹಗಳು ಇದಕ್ಕೆ ಕಾರಣ. ಆದರೆ ಈಗ ನಗರಗಳಲ್ಲಿ ಕುಟುಂಬದ ಪರಿಕಲ್ಪನೆ ಬದಲಾಗುತ್ತಿದೆ. ತಂದೆತಾಯಿ ಇಬ್ಬರೂ ಜವಾಬ್ದಾರಿ ಹಂಚಿಕೊಳ್ಳುವ ಅನಿವಾರ್ಯತೆಗಳು ಸೃಷ್ಟಿಯಾಗಿವೆ. ಝುಕರ್‌ಬರ್ಗ್ ಮಾದರಿ ಇದಕ್ಕೆ ಪೂರಕವಾಗಿದೆ.ಹಾಗೆಯೇ ವಾಣಿಜ್ಯ ದಿಗ್ಗಜರು ವೈಯಕ್ತಿಕ ವಿವರಗಳನ್ನು ಹೆಚ್ಚು ಬಹಿರಂಗಪಡಿಸುವಂತಹ ಪ್ರವೃತ್ತಿಗೂ ಈ ಬೆಳವಣಿಗೆ ಸೂಚಕವಾಗಬಹುದೆ? ಏಕೆಂದರೆ,  ಮಗುವನ್ನು ನಿರೀಕ್ಷಿಸುತ್ತಿರುವ ಬಗ್ಗೆ ಝುಕರ್‌ಬರ್ಗ್ ಮೊದಲು ಫೇಸ್‌ಬುಕ್‌ನಲ್ಲಿ ಬರೆದಾಗ, ಈ ಹಿಂದೆ ಪತ್ನಿಗೆ ಮೂರು ಗರ್ಭಪಾತಗಳಾಗಿದ್ದ ನೋವನ್ನೂ ಹಂಚಿಕೊಂಡಿದ್ದರು. ಹಾಗೆಯೇ ಈ ವರ್ಷದ ಆರಂಭದಲ್ಲಿ ತಮ್ಮ ಪತಿ ತೀರಿಕೊಂಡ ಬಗ್ಗೆ  ಫೇಸ್‌ಬುಕ್ ಸಿಓಓ ಶೆರಿಲ್ ಸ್ಯಾಂಡ್‌ಬರ್ಗ್ ಅವರು ಆನ್‌ಲೈನ್‌ನಲ್ಲಿ ದುಃಖ ತೋಡಿಕೊಂಡಿದ್ದರು. ಸಾಮಾಜಿಕ ಮಾಧ್ಯಮ ಕಂಪೆನಿಯ ನೇತಾರರಿಂದ ಇಂತಹದ್ದು ನಿರೀಕ್ಷಿತವೇ ಎಂಬ ವಾದ ಮಂಡಿಸಬಹುದು. ಆದರೆ ಅವರಷ್ಟೇ ಅಲ್ಲ. ಆಪಲ್ ಸಿಇಓ ಟಿಮ್ ಕುಕ್ ತೀರಾ ಖಾಸಗಿ ವ್ಯಕ್ತಿ ಎನಿಸಿಕೊಂಡಂತಹವರು.ಆದರೆ, ಕಳೆದ ವರ್ಷ ಬರೆದ ಪ್ರಬಂಧವೊಂದರಲ್ಲಿ ತಾವು ‘ಗೇ’ ಎಂಬುದನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ವಿವರಗಳನ್ನು ಹಂಚಿಕೊಳ್ಳುವ ವಿಶ್ವದಲ್ಲಿ ನಾವಿಂದು ಇದ್ದೇವೆ. ಇದನ್ನು ಮೌಲ್ಯಯುತವಾಗಿಯೂ ಪರಿಗಣಿಸಲಾಗುತ್ತದೆ. ಉದ್ಯೋಗದಾಚೆಗಿನ ಬದುಕಿನ ವಿವರಗಳನ್ನು ಹಂಚಿಕೊಳ್ಳುವುದು, ಹೊಸ ಸಹಸ್ರಮಾನದ ಯುವಪೀಳಿಗೆಗೆ ಹೆಚ್ಚು ಹತ್ತಿರವಾಗುವ ಅಥವಾ ವಿಶ್ವಾಸ ಗಳಿಸಿಕೊಳ್ಳುವ ಹೊಸ ಮಾರ್ಗವೂ ಆಗಿರುವುದು ಸ್ಪಷ್ಟ ಎಂಬಂತಹ ವ್ಯಾಖ್ಯಾನಗಳಿವೆ. ಒಟ್ಟಾರೆ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದು ಪ್ರಮುಖ ನಾಯಕತ್ವ ಗುಣವಾಗಿದೆ ಈಗ. ಝುಕರ್‌ಬರ್ಗ್, ಮಯೆರ್ ಅವರು ಇದಕ್ಕೆ ಸಂಕೇತವಾಗಿದ್ದಲ್ಲಿ ಇಂತಹದು ಮುಂದುವರಿಯಲಿದೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ನಲ್ಲಿ ಜೆನಾ ಮ್ಯಾಕ್ ಗ್ರೆಗರ್ ಬರೆಯುತ್ತಾರೆ. ಇದು ಸಿಇಓ ಪಾತ್ರವನ್ನು ಹೆಚ್ಚು ಮಾನವೀಯಗೊಳಿಸುವುದಾದಲ್ಲಿ ಒಳ್ಳೆಯದೇ ಅಲ್ಲವೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry