7

ನೆಹರೂ ಹೇಳಿಕೆ ನೆನಪಿಸಿದ ಜೇಟ್ಲಿ

Published:
Updated:

ನವದೆಹಲಿ (ಪಿಟಿಐ): ಸಂಸತ್ತಿನ ಚಳಿಗಾಲ ಅಧಿವೇಶನವೂ ವ್ಯರ್ಥವಾಗುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.



ಸಂಸತ್ತಿನ ಮೂಲಕ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಸಂಸದರದ್ದು ಎಂಬ ಜವಾಹರಲಾಲ್ ನೆಹರೂ ಅವರ ಹೇಳಿಕೆಯನ್ನು ಜೇಟ್ಲಿ ಕಾಂಗ್ರೆಸ್ ಸಂಸದರಿಗೆ ನೆನಪಿಸಿದ್ದಾರೆ. ಸತತ ಗದ್ದಲದಿಂದಾಗಿ ಕಳೆದ ಬಾರಿಯ ಅಧಿವೇಶನ ಸಂಪೂರ್ಣ ವ್ಯರ್ಥವಾಗಿದೆ. ಈ ಅಧಿವೇಶನವೂ ಅದೇ ಹಾದಿ ಹಿಡಿದಿದೆ  ಎಂದು ಅವರು ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.



‘ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಚರ್ಚೆ, ಮಸೂದೆಗಳು ಮತ್ತು ಜಿಎಸ್‌ಟಿ ಜಾರಿಗೆ ಸಂಬಂಧಿಸಿದ ಐತಿಹಾಸಿಕ ಸಂವಿಧಾನ ತಿದ್ದುಪಡಿ ಮಸೂದೆ ಅಂಗಿಕಾರ ಇವೇ ಮೊದಲಾದವುಗಳ ಬಗ್ಗೆ ದೇಶದ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಈ ದೇಶದ ಜನತೆಯ ಆಶೋತ್ತರಗಳಿಗೆ ತಕ್ಕಂತೆ ನಾವು ವರ್ತಿಸುತ್ತಿದ್ದೆವೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.



ಮೊದಲ ಲೋಕಸಭೆಯ ಕೊನೆಯ ದಿನ ಅಂದರೆ 1957ರ ಮಾರ್ಚ್ 28ರಂದು ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣದ ಒಂದು ಪ್ಯಾರಾವನ್ನು ಜೇಟ್ಲಿ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ‘ಭಾರತದ ಸಾರ್ವಭೌಮ ಅಧಿಕಾರ ಹೊಂದಿದ ಸಂಸತ್ತಿನಲ್ಲಿ ಕುಳಿತಿರುವ ನಾವು, ಈ ದೇಶದ ಆಡಳಿತಕ್ಕೆ ಜವಾಬ್ದಾರರು. ಇದಕ್ಕಿಂತ ದೊಡ್ಡ ಜವಾಬ್ದಾರಿ ಮತ್ತು ಮಹಾ ಗೌರವ ಮತ್ತೊಂದಿಲ್ಲ’ ಎಂದು ನೆಹರೂ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry