7
ಕೊಳೆಗೇರಿ ಒತ್ತುವರಿ ತೆರವು ಸಂದರ್ಭದಲ್ಲಿ ಮಗು ಸಾವು

ಸದನದ ಒಳಗೆ, ಹೊರಗೆ ವಾಕ್ಸಮರ

Published:
Updated:

ನವದೆಹಲಿ (ಪಿಟಿಐ): ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿ ರಾಜಕೀಯ ಕೆಸರೆರಚಾಟ ಮುಂದುವರಿದಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಹರಿ ಹಾಯ್ದಿದ್ದಾರೆ. ಇಂತಹ ತೆರವು ಕಾರ್ಯಾಚರಣೆಗಳು ಕಾಂಗ್ರೆಸ್‌ ಆಡಳಿತ ಇದ್ದಾಗಲೂ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ರಾಹುಲ್‌ ಗಾಂಧಿ ‘ಮಗು’ ಎಂದು ಹೇಳಿದ್ದಾರೆ.ಪಶ್ಚಿಮ ದೆಹಲಿಯ ಶಾಕೂರ್‌ ಬಸ್ತಿ ಪ್ರದೇಶದಲ್ಲಿ ಗುಡಿಸಲುಗಳನ್ನು ಧ್ವಂಸ ಮಾಡಿರುವುದನ್ನು ಖಂಡಿಸಿ ಎಎಪಿ ಮತ್ತು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಸಂಸತ್‌ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಲೋಕಸಭೆಯಲ್ಲಿ ಈ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವಕಾಶ ನೀಡಲಿಲ್ಲ. ನಂತರ ಎಎಪಿ ಸಂಸದರು ಗದ್ದಲ ನಡೆಸಿದರು.ಒತ್ತುವರಿ ತೆರವು ಸ್ಥಳಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಈ ಪರಿಸ್ಥಿತಿಗೆ ಕೇಜ್ರಿವಾಲ್ ಮತ್ತು ನರೇಂದ್ರ ಮೋದಿ ಸರ್ಕಾರಗಳೆರಡೂ ಕಾರಣ ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಎಪಿ ಮುಖಂಡ ಅಶುತೋಷ್‌, ಲೋಕಸಭೆಯಲ್ಲಿ ಕಾಂಗ್ರೆಸ್‌ ಸ್ಥಾನಗಳು 44ಕ್ಕೆ ಇಳಿಯಲು ಕಾರಣ ಏನು ಎಂಬುದು ಈಗ ಸ್ಪಷ್ಟವಾಯಿತು ಎಂದು ಹೇಳಿದ್ದಾರೆ.ರಾಹುಲ್‌ ಅವರಿಗೆ ನೆನಪು ಶಕ್ತಿ ನಷ್ಟವಾಗಿದೆ. ಅಥವಾ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರಾಹುಲ್‌ ನಡುವೆ ಒಪ್ಪಂದ ಏರ್ಪಟ್ಟಿದೆ. ಹಾಗಾಗಿ ರಾಹುಲ್ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಎಎಪಿಯ ಸಂಜಯ ಸಿಂಗ್‌ ಹೇಳಿದ್ದಾರೆ.‘ಒತ್ತುವರಿ ತೆರವಿಗೆ ಮೊದಲೇ ಮಗು ಸಾವು’: ಒತ್ತುವರಿ ‘ಸುರಕ್ಷತಾ ಸಮಸ್ಯೆ’ ಮಾತ್ರವಲ್ಲದೆ ರೈಲ್ವೆ ಬೆಳವಣಿಗೆಗೂ ತೊಡಕಾಗಿದೆ. ಇಂತಹ ಒತ್ತುವರಿಗಳನ್ನು ತೆರವುಗೊಳಿಸುವ ಮಾರ್ಗಗಳ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರೊಂದಿಗೆ ಚರ್ಚೆ ನಡೆಸುವುದಾಗಿ ರೈಲ್ವೆ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ.ಲೋಕಸಭೆಯಲ್ಲಿ ಎಎಪಿಯ ಭಗವಂತ ಮಾನ್‌ ಕೇಳಿದ ಪ್ರಶ್ನೆಗೆ ಸಚಿವರು ಹೀಗೆ ಉತ್ತರಿಸಿದ್ದಾರೆ. ಇದಕ್ಕೂ ಮೊದಲು ಮಾನ್‌ ಅವರು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಖಂಡಿಸಿದರು. ಪರ್ಯಾಯ ವ್ಯವಸ್ಥೆಗಳನ್ನು ರೂಪಿಸದೆ ಒತ್ತುವರಿ ತೆರವು ಕಾರ್ಯಾ ಚರಣೆ ನಡೆಸಬಾರದು ಎಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ಕಡೆಗಣಿಸಿ ಒತ್ತುವರಿ ತೆರವು ಮಾಡಲಾಗಿದೆ ಎಂದು ಅವರು ಆರೋಪಿಸಿದರು.ಒತ್ತುವರಿಗೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಮೂರು ಪತ್ರಗಳನ್ನು ಬರೆದಿದ್ದಾರೆ. ಹಾಗಿ ದ್ದರೂ ಒತ್ತುವರಿ ಮಾಡಲಾಗಿದೆ ಎಂದು ಮಾನ್‌ ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ಇಲಾಖೆ ನಡೆಸಿದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿಯೇ ಮಗು ಮೃತಪಟ್ಟಿದೆ ಎಂದು ದೆಹಲಿ ಸರ್ಕಾರ ಆರೋಪಿಸಿದೆ.ಪ್ರಕರಣ ದಾಖಲು: ಏಳು ತಿಂಗಳ ಮಗು ಸಾವಿಗೆ ಸಂಬಂಧಿಸಿ ‘ನಿರ್ಲಕ್ಷ್ಯದಿಂದಾದ ಸಾವು’ ಎಂಬ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮಗುವಿನ ತಂದೆ ಮೊಹಮ್ಮದ್‌ ಅನ್ವರ್‌ ಅವರ ಹೇಳಿಕೆ ಆಧರಿಸಿ ಪಂಜಾಬಿ ಬಾಗ್‌ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry