ವಿಕಿಪೀಡಿಯಾ–15: ಕನ್ನಡದ ತಲ್ಲಣಗಳು

7

ವಿಕಿಪೀಡಿಯಾ–15: ಕನ್ನಡದ ತಲ್ಲಣಗಳು

ಎನ್.ಎ.ಎಂ. ಇಸ್ಮಾಯಿಲ್
Published:
Updated:

ಈ ವರ್ಷದ ಜನವರಿ 15ಕ್ಕೆ ಸರಿಯಾಗಿ ವಿಕಿಪೀಡಿಯಾ ಎಂಬ ಆನ್‌ಲೈನ್ ವಿಶ್ವಕೋಶಕ್ಕೆ 15 ವರ್ಷ ತುಂಬಿತು. ತಿಂಗಳಿಗೆ 49.3 ಕೋಟಿ ಓದುಗರಿರುವ ಈ ವಿಶ್ವಕೋಶವನ್ನು ರೂಪಿಸಿರುವುದು ಒಂದು ಸಂಪಾದಕ ಮಂಡಳಿಯಲ್ಲ. ಇದನ್ನು ಆರಂಭಿಸುವುದರ ಹಿಂದೆ ಒಂದು ತಂಡವಿತ್ತಾದರೂ ಅದು ಬೆಳೆದದ್ದು ವಿಶ್ವವ್ಯಾಪಿಯಾಗಿರುವ ಬಳಕೆದಾರ ಸಂಪಾದಕರಿಂದ. ಪ್ರತಿಯೊಬ್ಬ ಬಳಕೆದಾರನೂ ಒಬ್ಬ ಸಂಪಾದಕನೇ ಎಂಬ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವಿಕಿಪೀಡಿಯಾ ಇಂದು ಪ್ರಪಂಚದಲ್ಲೇ ಅತಿ ಹೆಚ್ಚು ಮಂದಿ ಬಳಸುವ ಜಾಲತಾಣಗಳಲ್ಲಿ ಒಂದು.ಇದರಲ್ಲಿ ಲೇಖನಗಳು ಮತ್ತು ಚಿತ್ರಗಳೆಲ್ಲವೂ ಮುಕ್ತ ಹಕ್ಕುಸ್ವಾಮ್ಯದಡಿಯಲ್ಲಿವೆ. ಇಂಗ್ಲಿಷ್‌ನ ವಿಕಿಪೀಡಿಯಾ ಕನ್ನಡವೂ ಸೇರಿದಂತೆ ಪ್ರಪಂಚದ ಅನೇಕ ಭಾಷೆಗಳಿಗೆ ವಿಸ್ತರಿಸಿಕೊಂಡಿದೆ. ಆದರೆ ಇಂಗ್ಲಿಷ್ ಮತ್ತು ಯೂರೋಪಿನ ಕೆಲವು ಭಾಷೆಗಳಲ್ಲಿ ಇದಕ್ಕೆ ದೊರೆತ ಯಶಸ್ಸು ಉಳಿದ ಭಾಷೆಗಳಲ್ಲಿ ದೊರೆತಿಲ್ಲ. ಭಾರತೀಯ ಭಾಷೆಗಳ ಸಂದರ್ಭಕ್ಕೆ ಬಂದರಂತೂ ಲೇಖನಗಳ ಸಂಖ್ಯೆಯಲ್ಲಿ ಕೆಲವು ಸಾಧನೆಗಳನ್ನು ಕಾಣಬಹುದೇ ಹೊರತು ಒಟ್ಟಾರೆ ಬಳಕೆಯ ದೃಷ್ಟಿಯಲ್ಲಿ ನೋಡಿದರೆ ಇಂಗ್ಲಿಷ್‌ ವಿಕಿಪೀಡಿಯಾದ ವಿಷಯ ವ್ಯಾಪ್ತಿಗೆ ಸಾಟಿಯಾಗುವಂಥ ಯಾವ ಭಾಷೆಯೂ ಇಲ್ಲ ಎನ್ನುವುದು ವಾಸ್ತವ.ವಿಕಿಪೀಡಿಯಾದ ಹದಿನೈದು ವರ್ಷಗಳ ಅಸ್ತಿತ್ವವನ್ನು ಹೇಳುವಾಗಲೇ ಈ ಅವಧಿಯಲ್ಲಿ ನಡೆದ ಇನ್ನಷ್ಟು ಬೆಳವಣಿಗೆಗಳನ್ನೂ ಗಮನಿಸ

ಬೇಕಾಗುತ್ತದೆ. ‘ವಿಶ್ವಕೋಶ’ ಎಂಬುದಕ್ಕೆ ಪರ್ಯಾಯ ನಾಮವೆಂಬಂತೆ ಇದ್ದ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ 2010ರಲ್ಲಿ ತನ್ನ ಮುದ್ರಿತ ಆವೃತ್ತಿಗಳ ಪ್ರಕಟಣೆಯನ್ನು ನಿಲ್ಲಿಸಿತು. 244 ವರ್ಷಗಳ ಕಾಲ ನಿರಂತರವಾಗಿ ಪರಿಷ್ಕೃತ ಮುದ್ರಣಗಳನ್ನು ಕಂಡಿದ್ದ ಬ್ರಿಟಾನಿಕಾ ಈಗ ಕೇವಲ ಆನ್‌ಲೈನ್ ಆಗಿ ಮಾತ್ರ ಉಳಿದುಕೊಂಡಿದೆ. 2010ರಲ್ಲಿಯೇ ಮುದ್ರಿತ ಆವೃತ್ತಿಯ ಪ್ರಕಟಣೆ ನಿಲ್ಲಿಸಿದ ಮತ್ತೊಂದು ಕೋಶವಿದೆ–ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿ. 153 ವರ್ಷಗಳ ನಿರಂತರ ಪ್ರಕಟಣೆಯ ನಂತರ ಇದು ತನ್ನ ಪರಿಷ್ಕೃತ ಆವೃತ್ತಿಯನ್ನು ಕೇವಲ ಆನ್‌ಲೈನ್‌ಗಷ್ಟೇ ಸೀಮಿತಗೊಳಿಸಿತು.ಇಂಗ್ಲಿಷ್ ವಿಕಿಪೀಡಿಯಾಕ್ಕೆ 15 ತುಂಬುವಾಗಲೇ ಕನ್ನಡದ ವಿಕಿಪೀಡಿಯಾಕ್ಕೆ 13 ತುಂಬಿತು. ಇಂಗ್ಲಿಷ್‌ನಲ್ಲಿ ಆರಂಭವಾಗಿದ್ದ ‘ವಿಕಿ ಆಂದೋಲನ’ ಬಹಳ ಬೇಗ ಕನ್ನಡಕ್ಕೂ ತಲುಪಿತ್ತು. ಕನ್ನಡ ವಿಕಿಪೀಡಿಯಾಕ್ಕೆ ಭಾರತೀಯ ಭಾಷೆಗಳ ವಿಕಿಪೀಡಿಯಾಗಳ ನಡುವೆ 10ನೇ ಸ್ಥಾನವಿದ್ದರೆ ವಿಶ್ವಭಾಷೆಗಳ ಮಧ್ಯೆ 107ನೇ ಸ್ಥಾನವಿದೆ. ಲೇಖನಗಳ ಸಂಖ್ಯೆಯನ್ನು ನೋಡಿದರೆ ಭಾರತೀಯ ಭಾಷೆಗಳ ವಿಕಿಪೀಡಿಯಾ

ಗಳಲ್ಲಿ ಉರ್ದು ವಿಶ್ವಕೋಶಕ್ಕೆ ಮೊದಲ ಸ್ಥಾನವಿದೆ. ನಂತರದ ಸ್ಥಾನಗಳನ್ನು ಹಿಂದಿ, ತಮಿಳು, ತೆಲುಗು, ಮರಾಠಿ ,ಮಲಯಾಳಂಗಳು ಹಂಚಿಕೊಂಡಿವೆ. ಉತ್ಸಾಹಿ ಸ್ವಯಂ ಸೇವಕರ ಹೊರತಾಗಿ ಬೇರೇನನ್ನೂ ಬಯಸದ ಕನ್ನಡ ವಿಕಿಪೀಡಿಯಾ ಏಕೆ ಹೀಗೆ ಬಡವಾಗಿದೆ? ಈ ಪ್ರಶ್ನೆಯನ್ನು ಕೇವಲ ಕನ್ನಡ ವಿಕಿಪೀಡಿಯಾಕ್ಕೆ ಸೀಮಿತವಾಗಿ ಕೇಳಿಕೊಳ್ಳಬೇಕಾಗಿಲ್ಲ.ಉಳಿದ ಭಾರತೀಯ ಭಾಷೆಗಳ ಸ್ಥಿತಿಯೂ ಹೀಗೆಯೇ ಇದೆ. ಬಳಸುವವರ ಸಂಖ್ಯೆಯನ್ನು ಪರಿಗಣಿಸಿ ನೋಡಿದರೆ ವಿಶ್ವಮಟ್ಟದಲ್ಲಿ ಅವುಗಳ ಸ್ಥಿತಿ ಬಹಳ ಉತ್ತಮವೇನೂ ಅಲ್ಲ. ಫಿಲಿಫೀನ್ಸ್‌ನಲ್ಲಿ ಎರಡು ಕೋಟಿಯಷ್ಟು ಮಂದಿ ಮಾತನಾಡುವ ಸೆಬುವಾನೋ ಭಾಷೆಯ ವಿಕಿಪೀಡಿಯಾ ವಿಶ್ವಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.ವಿಕಿಪೀಡಿಯಾದಂಥ ಜ್ಞಾನ ಪ್ರಸರಣದ ವೇದಿಕೆಯಲ್ಲಿ  ಭಾರತೀಯ ಭಾಷೆಗಳಿಗೆ ಒಂದು ಉತ್ತಮ ಸ್ಥಾನವಿಲ್ಲದಿರುವುದರ ಕಾರಣಗಳು ಬಹಳ ಸಂಕೀರ್ಣವಾದವು. ಕನ್ನಡದ ಉದಾಹರಣೆಯನ್ನೇ ನೋಡೋಣ. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ 244 ವರ್ಷಗಳ ಸತತವಾಗಿ ಪರಿಷ್ಕರಣೆಗೆ ಒಳಗಾಗಿ ಮುದ್ರಣ ಕಾಣುತ್ತಿತ್ತು.ವಿಶ್ವಕೋಶದಂಥ ಗ್ರಂಥಗಳನ್ನು ಪರಾಮರ್ಶಿಸುವವರು ಸಂಪೂರ್ಣವಾಗಿ ಆನ್‌ಲೈನ್ ಸೇವೆಗಳನ್ನು ಅವಲಂಬಿಸಲು ಆರಂಭಿಸಿದ ನಂತರವಷ್ಟೇ ಅದು ತನ್ನ ಮುದ್ರಿತ ಆವೃತ್ತಿಯನ್ನು ನಿಲ್ಲಿಸಿ ಆನ್‌ಲೈನ್‌ಗೆ ಸೀಮಿತಗೊಂಡಿತು. ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿಯೂ 153 ವರ್ಷಗಳ ಕಾಲ ಸತತವಾಗಿ ಮುದ್ರಿತ ಆವೃತ್ತಿಗಳನ್ನು ತಂದು ಆಮೇಲೆ ತನ್ನನ್ನು ಆನ್‌ಲೈನ್ ವೇದಿಕೆಯಲ್ಲಷ್ಟೇ ಪರಿಷ್ಕರಿಸಿಕೊಳ್ಳಲು ತೊಡಗಿತು.ಕನ್ನಡದ ಮೊದಲ ಸಂಪಾದಿತ ವಿಶ್ವಕೋಶ ಯೋಜನೆ ಆರಂಭಗೊಂಡದ್ದೇ 1967ರಲ್ಲಿ. ಎಲ್ಲಾ ಸಂಪುಟಗಳು ಮುದ್ರಣ ರೂಪದಲ್ಲಿ ಹೊರಬರುವುದಕ್ಕೆ 40 ವರ್ಷ ಬೇಕಾಯಿತು. ಈ ನಲವತ್ತು ವರ್ಷಗಳಲ್ಲಿ ಪರಿಷ್ಕರಣೆ ನಡೆಯಲಿಲ್ಲ. ಈಗಲೂ ಅದು ನಡೆಯುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯೋಜನೆ ಆರಂಭಗೊಂಡದ್ದು 1950ರ ದಶಕದಲ್ಲಿ. ಐದಾರು ದಶಕಗಳ ಅವಧಿಯಲ್ಲಿ ಕುಂಟುತ್ತಾ ಎಡವುತ್ತಾ ಹೇಗೋ ಪೂರ್ಣಗೊಂಡ ಈ ಯೋಜನೆ ಮುದ್ರಿತ ಸಂಪುಟಗಳಲ್ಲಿ ‘ಸುರಕ್ಷಿತ’ವಾಗಿದೆಯೇ ಹೊರತು ಪರಿಷ್ಕರಣೆಯ ಪರಂಪರೆಯೇ ಅಲ್ಲಿಲ್ಲ.ವಿಶ್ವಕೋಶ ಮತ್ತು ನಿಘಂಟಿನಂಥ ಗ್ರಂಥಗಳು ನಿರಂತರ ಪರಿಷ್ಕರಣೆಯ ಜೊತೆಗೆ ಪೂರ್ಣರೂಪದಲ್ಲಿ ಲಭ್ಯವಿದ್ದರೆ ಮಾತ್ರ ಅವು ವ್ಯಾಪಕ ಬಳಕೆಯಲ್ಲಿರುವ ಪರಾಮರ್ಶನ ಗ್ರಂಥಗಳಾಗಿರುತ್ತವೆ. ಇಲ್ಲವಾದರೆ ಅವು ಕೇವಲ ದಾಖಲೆಯಲ್ಲೇ ಇರುವ ಗ್ರಂಥಗಳಾಗಿಬಿಡುತ್ತವೆ.

ಕನ್ನಡವೂ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳ ಸ್ಥಿತಿ ಇದುವೇ. ಬ್ರಿಟಾನಿಕಾವೂ ಸೇರಿದಂತೆ ಇಂಗ್ಲಿಷ್‌ನಲ್ಲಿ ವಿಶ್ವಕೋಶಗಳ ದೊಡ್ಡ ಪರಂಪರೆಯೇ ಇತ್ತು.ಸಹಜವಾಗಿಯೇ ಅದು ಆನ್‌ಲೈನ್‌ಗೂ ಬಂತು. ಕನ್ನಡದಲ್ಲಿ ವಿಶ್ವಕೋಶದಂಥ ಪರಾಮರ್ಶನ ಗ್ರಂಥವೊಂದರ ಯೋಜನೆ ರೂಪುಗೊಂಡದ್ದೇ ಬಹಳ ತಡವಾಗಿ. ಅದು ವ್ಯಾಪಕ ಬಳಕೆಗೆ ಲಭ್ಯವಾಗುವ ಮೊದಲೇ ಆ ಯೋಜನೆ ಅಕ್ಷರಶಃ ಸಾವನ್ನಪ್ಪಿತ್ತು. ಅಂದರೆ ಕನ್ನಡಿಗರಿಗೆ ತಮ್ಮದೇ ಭಾಷೆಯಲ್ಲಿ ವಿಶ್ವಕೋಶವೊಂದನ್ನು ಬಳಸುವ ಅವಕಾಶವೇ ಇರಲಿಲ್ಲ.ಈ ಮಧ್ಯೆ ಇಂಟರ್ನೆಟ್ ಏನೋ ವ್ಯಾಪಕವಾಯಿತು. ಅದು ಬಂದದ್ದೂ ಇಂಗ್ಲಿಷ್‌ನ ಮೂಲಕವೇ. ಹೊಸ ಸಹಸ್ರಮಾನ ಆರಂಭ

ಗೊಂಡ ಮೇಲಷ್ಟೇ ಕಂಪ್ಯೂಟರಿನಲ್ಲಿ ಕನ್ನಡದ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಪರಿಹಾರವಾದವು. ಆ ಪರಿಹಾರ ಜನ ಸಾಮಾನ್ಯರನ್ನು ತಲುಪುವುದಕ್ಕೆ ಮತ್ತೂ ಒಂದು ದಶಕ ಬೇಕಾಯಿತು.ಸಾಮಾಜಿಕ ಜಾಲತಾಣಗಳು, ಬ್ಲಾಗ್‌ಗಳಲ್ಲಿ ಕನ್ನಡವನ್ನು ಬಳಸುತ್ತಿದ್ದ ಮೊದಲ ತಲೆಮಾರಿಗೆ ಇಂಗ್ಲಿಷ್ ಕೂಡಾ ಗೊತ್ತಿತ್ತು. ಅವರ ಪರಾಮರ್ಶೆಯ ಅಗತ್ಯಗಳನ್ನು ಇಂಗ್ಲಿಷ್ ತಾಣಗಳೇ ಪೂರೈಸಿದವು. ಪರಿಣಾಮವಾಗಿ ಕನ್ನಡದ್ದೇ ಆದ ‘ಜ್ಞಾನ ತಾಣ’ವೊಂದರ ಅಗತ್ಯ ಆಗ ಕಾಣಿಸಲಿಲ್ಲ. ಕನ್ನಡವನ್ನಷ್ಟೇ ಬಲ್ಲವರು ಆನ್‌ಲೈನ್ ಜಗತ್ತಿಗೆ ಈಗಷ್ಟೇ ಪ್ರವೇಶ ಪಡೆದಿದ್ದಾರೆ. ಅವರಿಗೆ ಬೇಕಿರುವ ಜ್ಞಾನವನ್ನು ಪೂರೈಸಲು ಬೇಕಿರುವ ಕೆಲಸ ಮಾತ್ರ ಆಫ್‌ಲೈನ್ ಕಾಲಘಟ್ಟದಲ್ಲಿರುವಂತೆಯೇ ಈಗಲೂ ಕುಂಟುತ್ತಲೇ ಇದೆ.ಇನ್ನು ವಿಕಿಪೀಡಿಯಾದಂಥ ಸ್ವಯಂ ಸೇವೆಯಿಂದ ಶ್ರೀಮಂತವಾಗಬೇಕಾದ ಯೋಜನೆಗಳು ಎದುರಿಸುವ ಸಮಸ್ಯೆ ಮತ್ತೊಂದು ಬಗೆಯದ್ದು. ಕನ್ನಡ ವಿಕಿಪೀಡಿಯಾಕ್ಕೆ ಲೇಖನಗಳನ್ನು ಬರೆಯಬಲ್ಲ ಸಾಮರ್ಥ್ಯವುಳ್ಳವರು ವಾಸ್ತವದಲ್ಲಿ ಕನ್ನಡ ವಿಕಿಪೀಡಿಯಾದ ಬಳಕೆದಾರರಲ್ಲ. ಅವರು ತಮ್ಮ ಜ್ಞಾನದ ವಿಸ್ತರಣೆಗೆ ಇಂಗ್ಲಿಷ್ ಬಳಸಬಲ್ಲ ಸಾಮರ್ಥ್ಯವುಳ್ಳವರು.ಆದರೆ ಕನ್ನಡದ್ದೇ ಆದ ಜ್ಞಾನವನ್ನು ಹೊಂದಿರುವವರಿಗೆ ತಮ್ಮಲ್ಲಿರುವುದು ಜ್ಞಾನ ಎಂಬುದರ ಅರಿವಾಗಲೀ ಅದನ್ನು ವಿಕಿಪೀಡಿಯಾದಂಥ ವೇದಿಕೆಗಳ ಮೂಲಕ ಹಂಚಿಕೊಳ್ಳುವುದಕ್ಕೆ ಬೇಕಿರುವ ಕೌಶಲವಾಗಲೀ ಇಲ್ಲ. ಈ ಸ್ಥಿತಿಯಲ್ಲಿ ಕನ್ನಡ ವಿಕಿಪೀಡಿಯಾ ಬೆಳೆಯು ಬೇಕೆಂದರೆ ಅದಕ್ಕೆ ಜ್ಞಾನದ ಪ್ರಸರಣದಲ್ಲಿ ಆಸಕ್ತರಾಗಿರುವ ಸ್ವಯಂ ಸೇವಕರು ಬೇಕು. ವಿಕಿಪೀಡಿಯಾಕ್ಕೆ ಲೇಖನ ಬರೆಯುವುದು ಹಣಕಾಸಿನ ಲಾಭ ತಂದುಕೊಡುವ ಕೆಲಸವಲ್ಲ. ಅಥವಾ ವೃತ್ತಿಯಲ್ಲಿ ಮೇಲೇರುವುದಕ್ಕೆ ಒಂದು ಮೆಟ್ಟಿಲಾಗುವಂಥ ಚಟುವಟಿಕೆಯೂ ಅಲ್ಲ. ಈ ಸ್ವಯಂ ಸೇವಕರನ್ನು ಹುಟ್ಟು ಹಾಕುವುದು ಹೇಗೆ?ಈ ವಿಷಯದಲ್ಲಿ ವಿಶ್ವವಿದ್ಯಾಲಯಗಳಂಥ ಜ್ಞಾನ ಸೃಷ್ಟಿಯ ಕೇಂದ್ರಗಳಿಂದ ಆರಂಭಿಸಿ ‘ಕನ್ನಡದ ಅಭಿವೃದ್ಧಿ’ಗಾಗಿ ಸರ್ಕಾರ ರೂಪಿಸಿರುವ ಸಂಸ್ಥೆಗಳಂಥ ಎಲ್ಲರೂ ಕಾಳಜಿವಹಿಸುವ ಅಗತ್ಯವಿದೆ. ಇಂಥದ್ದೊಂದು ಪ್ರಕ್ರಿಯೆಯನ್ನು ಕರ್ನಾಟಕ ಜ್ಞಾನ ಆಯೋಗದ ಸಲಹೆಯ ಮೇರೆಗೆ ಆರಂಭಗೊಂಡಿತ್ತು.‘ಕಣಜ’ ಎಂಬ ಜಾಲತಾಣವನ್ನು ಇದಕ್ಕಾಗಿಯೇ ರೂಪಿಸಲಾಯಿತು. ಉತ್ಸಾಹಿ ಸಮನ್ವಯಕಾರರೊಬ್ಬರು ಅದಕ್ಕೊಂದು ಸ್ಪಷ್ಟ ರೂಪವನ್ನೇನೋ ಕೊಟ್ಟರು. ಆದರೆ ಅದನ್ನು ಮುಂದುವರಿಸುವ ಕೆಲಸ ಸರ್ಕಾರದ ಕಡೆಯಿಂದ ನಡೆಯಲಿಲ್ಲ. ಈಗ ಕೇಂದ್ರ ಸರ್ಕಾರ ಅನೇಕ ಭಾರತೀಯ ಭಾಷೆಗಳಲ್ಲಿ ಇದೇ ಬಗೆಯ ಯೋಜನೆಯೊಂದನ್ನು ರೂಪಿಸಿದೆ.ಕನ್ನಡದ ‘ಕಣಜ’ವನ್ನು ಬಹುಪಾಲು ತುಂಬಿಸಿದವರೊಬ್ಬರು ಕೇಂದ್ರ ಸರ್ಕಾರದ ‘ಭಾರತ್‌ವಾಣಿ’ ಯೋಜನೆಯ ಸಮನ್ವಯಕಾರರಾಗಿದ್ದಾರೆ. ‘ಕಣಜ’ದಲ್ಲಿ ಸಾಧ್ಯವಾಗದೇ ಹೋದದ್ದು ‘ಭಾರತ್‌ವಾಣಿ’ಯಲ್ಲಿ ಆಗಬಹುದೆಂದು ನಿರೀಕ್ಷಿಸಬಹುದೇನೋ. ಇದು ಸಂಭವಿಸುವುದಕ್ಕೆ ಕೇವಲ ಬೌದ್ಧಿಕ ಸಂಪನ್ಮೂಲವಷ್ಟೇ ಸಾಕಾಗುವುದಿಲ್ಲ. ಅದಕ್ಕೆ ಅಗತ್ಯವಿರುವ ತಾಂತ್ರಿಕ, ಆರ್ಥಿಕ ಸಂಪನ್ಮೂಲಗಳು ನಿರಂತರವಾಗಿ ಲಭ್ಯವಾಗಬೇಕು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ವಿಕಿಪೀಡಿಯಾದಂಥ ಯೋಜನೆಗಳ ಅಭಿವೃದ್ಧಿಗೆ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಹೇಗೆ ಸಹಕರಿಸಬಹುದು ಎಂಬುದರ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಹೇಳಿದ್ದಾರೆ. ಪ್ರಾಧಿಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವುದೇನೋ ಸ್ವಾಗತಾರ್ಹ. ಈ ಬಗೆಯ ಸಮಾಲೋಚನೆಗಳನ್ನು ಅರ್ಥಪೂರ್ಣವಾಗುವುದಕ್ಕೆ ಸರ್ಕಾರಿ ವೆಬ್‌ಸೈಟ್‌ಗಳಲ್ಲಿರುವ ಮಾಹಿತಿ ಸಂಪೂರ್ಣವಾಗಿ ಕನ್ನಡದಲ್ಲಿ ದೊರೆಯಬೇಕಾದ ಅಗತ್ಯವಿದೆ.ಇಂಗ್ಲಿಷ್ ವಿಕಿಪೀಡಿಯಾ ತಾನೇ ತಾನಾಗಿ ಬೆಳೆಯಲಿಲ್ಲ. ಅದು ಬೆಳೆಯುವುದಕ್ಕೆ ಬೇಕಾದಷ್ಟು ಮಾಹಿತಿ ಆನ್‌ಲೈನ್‌ನಲ್ಲಿ ಆಗಲೇ ಲಭ್ಯ

ವಿತ್ತು ಎಂಬ ಅಂಶವನ್ನೂ ನಾವು ಮರೆಯಬಾರದು. ಇದರಲ್ಲಿ ಸರ್ಕಾರಗಳು ಒದಗಿಸುವ ಮಾಹಿತಿಯೂ ಸೇರಿತ್ತು. ಆನ್ ಲೈನ್ ವಿಶ್ವಕೋಶವೊಂದು ಬೆಳೆಯುವುದಕ್ಕೆ ಆನ್‌ಲೈನ್‌ನಲ್ಲಿ ಅದಕ್ಕೆ ಪೂರಕವಾದ ಮಾಹಿತಿ ಸಂಪನ್ಮೂಲ ಲಭ್ಯವಿರಬೇಕು.ಕನ್ನಡದಲ್ಲಿ ಅದರ ಕೊರತೆಯಿನ್ನೂ ಉಳಿದುಕೊಂಡಿದೆ. ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಸರ್ಕಾರಿ ಇಲಾಖೆಗಳು ತಮ್ಮಲ್ಲಿರುವ ಮಾಹಿತಿ ಕಣಜವನ್ನು ತಮ್ಮದೇ ತಾಣಗಳಲ್ಲಿ ಮುಕ್ತವಾಗಿರಿಸಲು ತೊಡಗಿದರೆ ವಿಕಿಪೀಡಿಯಾದಂಥ ಯೋಜನೆಗಳು ತಾವಾಗಿಯೇ ಬೆಳೆಯುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry