7

ಗರ್ಭಗಳ ಮೇಲೆ ನಿಗಾ ವ್ಯವಸ್ಥೆ ಕಾರ್ಯ ಸಾಧುವೆ?

Published:
Updated:
ಗರ್ಭಗಳ ಮೇಲೆ ನಿಗಾ ವ್ಯವಸ್ಥೆ ಕಾರ್ಯ ಸಾಧುವೆ?

ಹೆಣ್ಣು ಭ್ರೂಣ ಹತ್ಯೆ ಎಂಬುದು ಗರ್ಭದೊಳಹೊಕ್ಕ ಸಾಮಾಜಿಕ ತಾರತಮ್ಯ. ಕಾಶ್ಮೀರ ಕಣಿವೆಯಿಂದ ಕನ್ಯಾಕುಮಾರಿಯವರೆಗೆ ಪ್ರಚಲಿತವಿರುವ ಈ ಪಿಡುಗಿನ ವಿರುದ್ಧ ಬಲವಾದ ಕಾನೂನು ಜಾರಿಯಾಗಿದೆ. ಈ ಕಾನೂನಿನ ಅನ್ವಯ ಭ್ರೂಣಲಿಂಗ ಪತ್ತೆಗೆ ನಿಷೇಧವಿದೆ.ಆದರೆ ಭ್ರೂಣ ಲಿಂಗ ಪತ್ತೆ ಕಡ್ಡಾಯ ಮಾಡುವ ಮೂಲಕ ಹೆಣ್ಣು ಭ್ರೂಣ ಹತ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂಬಂತಹ ವಿಚಾರವನ್ನು ಕಳೆದ ವಾರ ಇದ್ದಕ್ಕಿದ್ದಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಮುಂದಿಟ್ಟಿದ್ದು ಸ್ಫೋಟಕ ವಿದ್ಯಮಾನವಾಯಿತು. ಸಹಜವಾಗಿಯೇ ಇದು ವಿವಾದಾಸ್ಪದ ವಿಚಾರವಾಗಿ ಚರ್ಚೆ ಆರಂಭವಾಯಿತು.  ನಂತರ, ಮೇನಕಾ ಗಾಂಧಿ ಕಚೇರಿಯಿಂದ ಸ್ಪಷ್ಟೀಕರಣವನ್ನೂ ನೀಡಲಾಯಿತು. ‘ಭ್ರೂಣ ಲಿಂಗ ಪತ್ತೆಯಿಂದ ಹೆಣ್ಣು ಭ್ರೂಣ ಹತ್ಯೆಯಾಗದಂತೆ ತಡೆಯುವುದು ಸಾಧ್ಯವಿದೆ. ಈ ವಿಚಾರ ಇನ್ನೂ ಹೆಚ್ಚು ಚರ್ಚೆಗೆ ಒಳಪಡಬೇಕಿದ್ದು ಮಾಧ್ಯಮ ವ್ಯಕ್ತಿಗಳಿಂದ ಸಲಹೆಗಳನ್ನು ಕೋರಲಾಗಿತ್ತು ಅಷ್ಟೆ. ಈ ಹಂತದಲ್ಲಿ ಈ ಕುರಿತಾದ ಯಾವುದೇ ಪ್ರಸ್ತಾವ ಸಚಿವಾಲಯದ ಮುಂದಿಲ್ಲ’ ಎಂದು ಮೇನಕಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.‘ಇದೊಂದು ಪರ್ಯಾಯ ದೃಷ್ಟಿಕೋನ. ಪ್ರತಿ ಬಸಿರನ್ನೂ ನೊಂದಾಯಿಸಿ ಭ್ರೂಣದ ಲಿಂಗ ಪತ್ತೆ ಮಾಡಿ ದಾಖಲು ಮಾಡಿದಲ್ಲಿ ಮುಂದೆ ಆ ಮಗು ಜನಿಸುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ನಿಗಾ ಇಡುವುದು ಸುಲಭ’ ಎಂದು ಮೇನಕಾ ತಮ್ಮ ದೃಷ್ಟಿಕೋನವನ್ನು ಸಮರ್ಥಿಸಿಕೊಂಡೂ ಇದ್ದಾರೆ.ಈ ಹೇಳಿಕೆ ಹಾಗೂ ಸ್ಪಷ್ಟನೆಗಳೇನೇ ಇರಲಿ, ಲಿಂಗ ಪತ್ತೆ ಕಡ್ಡಾಯ ಮಾಡುವ ಮೂಲಕ ಹಾಗೂ ತಾಯಂದಿರ ಮೇಲೆ ನಿಗಾ ವಹಿಸುವ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಯಬಹುದು ಎಂಬ ವಿಚಾರವನ್ನು ಮೇನಕಾ ಹೇಳಿದ್ದರೆ ಎಂಬುದಂತೂ ನಿಜ.ಸಮಸ್ಯೆ ಇರುವುದು ಇಲ್ಲೇ. ಈಗ  ಅಸ್ತಿತ್ವದಲ್ಲಿರುವ ಕಾನೂನಿಗೆ ಸಂಪೂರ್ಣ ವ್ಯತಿರಿಕ್ತವಾದ ವಾದ ಇದು. ಗರ್ಭಧಾರಣೆ ಪೂರ್ವ ಹಾಗೂ ಪ್ರಸವಪೂರ್ವ ಪತ್ತೆ ತಂತ್ರಜ್ಞಾನ ಲಿಂಗ ಆಯ್ಕೆ ನಿಷೇಧ (ಪಿಸಿ ಪಿಎನ್‌ಡಿಟಿ) ಕಾಯಿದೆ 2003ರಿಂದ ರಾಷ್ಟ್ರದಲ್ಲಿ ಈಗಾಗಲೇ ಜಾರಿಯಲ್ಲಿದೆ.ಈ ಕಾನೂನಿನ ಅನುಷ್ಠಾನದ ಹಿಂದೆ ಸಾಕಷ್ಟು ಅಧ್ಯಯನಗಳು, ಹೋರಾಟಗಳು ನಡೆದಿವೆ. ಈಗ  ಇದ್ದಕ್ಕಿದ್ದಂತೆ ಮಂಡಿಸಲಾಗುತ್ತಿರುವ ಭಿನ್ನ ನಿಲುವಿನ ವಾದ  ಎಷ್ಟರಮಟ್ಟಿಗೆ ಕಾರ್ಯಸಾಧುವಾದುದು? 

ಭಾರತದಲ್ಲಿರುವ ಆಸ್ಪತ್ರೆಗಳ ಸಂಖ್ಯೆಯಾದರೂ ಎಷ್ಟು? ಹಳ್ಳಿಗಳಿರಲಿ ಅನೇಕ ಪಟ್ಟಣ ಪ್ರದೇಶಗಳಲ್ಲೂ ಸೂಕ್ತ  ಆಸ್ಪತ್ರೆ ಸೌಲಭ್ಯಗಳಿಲ್ಲ. ತನ್ನ ಹಳ್ಳಿಯಲ್ಲಿ ಹೆರಿಗೆ ಆಸ್ಪತ್ರೆ  ಸ್ಥಾಪಿಸಬೇಕೆಂದು ನಮ್ಮ ಸಾಲುಮರದ ತಿಮ್ಮಕ್ಕ ಸರ್ಕಾರಕ್ಕೆ ಪರಿಪರಿಯಾಗಿ ಸಲ್ಲಿಸಿರುವ ಬೇಡಿಕೆಯ ಸ್ಥಿತಿ ಏನಾಗಿದೆ ಎಂಬುದು ನಮಗೆ ಗೊತ್ತಿದೆ. 

ಇನ್ನು ಆಸ್ಪತ್ರೆ, ಕ್ಲಿನಿಕ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯುವ ಗರ್ಭಪಾತಗಳ ದಾಖಲಾತಿ ಕ್ರಮವೂ ಸಮರ್ಪಕವಾಗಿ ನಡೆಯುವುದಿಲ್ಲ ಎಂಬುದನ್ನು ಪರಿಗಣಿಸಿದಲ್ಲಿ ಮೇನಕಾ ಗಾಂಧಿಯವರು ಮಂಡಿಸಿರುವ ವಿಚಾರ ಎಷ್ಟೊಂದು ಅವಾಸ್ತವಿಕ ಎಂಬುದು ಅರ್ಥವಾಗುತ್ತದೆ. ಸದ್ಯಕ್ಕೆ ಪಿಸಿ ಪಿಎನ್‌ಡಿಟಿ ಕಾಯಿದೆಯ ಪ್ರಕಾರ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳನ್ನು ನೊಂದಾವಣೆ ಮಾಡುವುದು ಕಡ್ಡಾಯ.ಅಲ್ಲದೆ ಭ್ರೂಣದ ಲಿಂಗದ ಮಾಹಿತಿಯನ್ನು ಅಮ್ಮಅಪ್ಪನಿಗೆ   ಸ್ಕ್ಯಾನಿಂಗ್ ಕೇಂದ್ರದ ತಜ್ಞರು ಅಥವಾ ವೈದ್ಯರು ಬಿಟ್ಟುಕೊಡಬಾರದೆಂದು ಈ ಕಾನೂನು ಹೇಳುತ್ತದೆ.ಅಂಕಿಅಂಶಗಳ ಪ್ರಕಾರ, ರಾಷ್ಟ್ರದಲ್ಲಿ ಪ್ರತಿ ವರ್ಷ 2.5 ರಿಂದ 2.7 ಕೋಟಿ ಮಹಿಳೆಯರು ಗರ್ಭ ಧರಿಸುತ್ತಾರೆ. ಈ ಎಲ್ಲಾ ಮಹಿಳೆಯರನ್ನೂ ನೊಂದಾವಣೆಗೊಳಿಸುವುದು ಸಾಧ್ಯವಾಗುತ್ತದೆಯೆ?ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆ ಹಾಗೂ ಲಸಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ‘ಆಶಾ’ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ ಮಹಿಳೆಯರ ಜೊತೆ ಈಗಾಗಲೇ ಕೆಲಸ ಮಾಡುತ್ತಿದ್ದಾರೆ.  ಹೀಗಾಗಿ ಭ್ರೂಣದ ಲಿಂಗ ಪತ್ತೆ ಮಾಡಿ ಹುಟ್ಟಲಿರುವ ಹೆಣ್ಣು ಶಿಶುವಿನ ಜಾಡು ಹಿಡಿಯಲು ಮತ್ತೊಂದು ವಿಧಾನ ಅನುಸರಿಸಿದರೆ ತಪ್ಪೇನು ಎಂಬಂತಹ ಪ್ರಶ್ನೆ ಕೇಳುವವರೂ ಇದ್ದಾರೆ.ಆದರೆ ಪುತ್ರ ವ್ಯಾಮೋಹದ ಸಮಾಜ ನಮ್ಮದು ಎಂಬ ಕಟುವಾಸ್ತವವನ್ನು ನಾವು ಮರೆಯುವಂತಿಲ್ಲ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಹೆಣ್ಣು ಎಂಬುದು ಮೊದಲೇ ಪತ್ತೆಯಾದಲ್ಲಿ ಅದು ಗರ್ಭಿಣಿ ಮಹಿಳೆ ಹಾಗೂ ಆಕೆಯ ಕುಟುಂಬದವರಲ್ಲಿ ಸೃಷ್ಟಿಸಬಹುದಾದ ಒತ್ತಡ  ಅಪಾರವಾದುದು.  ಕುಟುಂಬದೊಳಗಿನ ಮನಸ್ತಾಪ, ಬೇಗುದಿ ಹೆಚ್ಚಾಗಿ ಗರ್ಭಿಣಿಗೆ ಆರೈಕೆಯೂ ಸಿಗದಂತಾಗುವ ಸ್ಥಿತಿ ನಿರ್ಮಾಣವಾಗಬಹುದು.ಜೊತೆಗೆ ಗರ್ಭಪಾತಕ್ಕೆ ಅಕ್ರಮವಾದ ಅಡ್ಡದಾರಿಗಳನ್ನು ಹಿಡಿಯುವುದು ಹೆಚ್ಚಾಗುತ್ತದೆ ಎಂಬ ಬಗ್ಗೆ ಅನುಮಾನವೇ ಬೇಡ. ದಿನನಿತ್ಯದ ಬದುಕಿನಲ್ಲಿ ಮಹಿಳೆ ಎದುರಿಸುತ್ತಿರುವ ಇಂತಹ ಸೂಕ್ಷ್ಮ ಸವಾಲುಗಳು ಮೇನಕಾ ಗಾಂಧಿ ಅವರ ಪರಿಗಣನೆಗೆ  ಬಂದಿಲ್ಲದಿರುವುದು ಅಚ್ಚರಿಯ ಸಂಗತಿ.ಮಹಿಳೆಯರ ಗರ್ಭಪಾತದ ಹಕ್ಕಿನ ಮೇಲೆ ಸರ್ಕಾರದ ಅತಿಕ್ರಮಣವಾಗುತ್ತದೆ ಇದು ಎಂದೂ ವ್ಯಾಖ್ಯಾನಿಸಬಹುದು. ಸದ್ಯದ ಸಾಮಾಜಿಕ  ವ್ಯವಸ್ಥೆಯಲ್ಲಿ ಹೆಣ್ಣು ಮಗು ಜನನದ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ತಾಯಿಗೆ ಎಲ್ಲಿದೆ? ಆಕೆ ಗರ್ಭ ಧರಿಸಿರಬಹುದು. ಆದರೆ ಆಕೆಗೇ ಅದು ಬೇಡದ ಗರ್ಭವಾಗಿರಬಹುದು. ಅನೇಕ ಸಂದರ್ಭಗಳಲ್ಲಿ ಭಾರತದಂತಹ ರಾಷ್ಟ್ರದಲ್ಲಂತೂ ಸುರಕ್ಷಿತ ಲೈಂಗಿಕತೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿಯಲ್ಲೂ ಮಹಿಳೆ ಇರುವುದಿಲ್ಲ. ಇನ್ನು ಮಗು ಬೇಕೊ ಬೇಡವೊ ಎಂಬುದನ್ನು ನಿರ್ಧರಿಸುವ ಆಯ್ಕೆಯಂತೂ ಆಕೆಯದಾಗಿರುವುದಿಲ್ಲ.ಮೂಲಭೂತವಾದ ಯಾವ ಪ್ರಜನನ ಹಕ್ಕುಗಳೂ ಆಕೆಗಿರುವುದಿಲ್ಲ. ಏಕೆಂದರೆ ಆ ಹಕ್ಕುಗಳನ್ನು ಗೌರವಿಸುವಂತಹ ವಾತಾವರಣ ಇಲ್ಲಿಲ್ಲ. ಇಂತಹ ಸಂದರ್ಭದಲ್ಲಿ ಗರ್ಭಿಣಿಯಾದದ್ದನ್ನೇ ನೆಪವಾಗಿಟ್ಟುಕೊಂಡು ಆಕೆಯ ಮೇಲೆ ನಿಗಾ ವಹಿಸಿ ಆಕೆಯ ಕಾವಲು ಕಾಯುವುದು ಎಷ್ಟು ಸರಿ? ಹೆಣ್ಣು ಭ್ರೂಣವಿದ್ದು ತಾನಾಗೇ ಒಂದು ವೇಳೆ  ಗರ್ಭಪಾತವಾದಲ್ಲಿ ಆಗ ಆಕೆಯನ್ನು ಅಪರಾಧಿಯಾಗಿಸಬಹುದಾದ ಬೆಳವಣಿಗೆಗಳಂತೂ ಅಹಿತಕರವಾದದ್ದು.ತಮ್ಮ  ಆಯ್ಕೆಯಿಂದಾಗಿಯೇ ಅವರು ಗರ್ಭಿಣಿಯರಾಗಿರುವುದಿಲ್ಲ  ಎಂಬಂತಹ ಸೂಕ್ಷ್ಮಗಳನ್ನು ಗ್ರಹಿಸಿಕೊಳ್ಳುವುದು ಪ್ರಭುತ್ವಕ್ಕೆ ಸಾಧ್ಯವಾಗುತ್ತದೆಯೆ ಎಂಬುದು ಪ್ರಶ್ನೆ.ಭಾರತದಲ್ಲಿ ವೈದ್ಯಕೀಯ ಗರ್ಭಪಾತ ಶಾಸನಬದ್ಧವಾದುದಾಗಿದೆ. ಮಹಿಳೆಯರು, ಪುರುಷರ ಪ್ರಜನನ  ಆಯ್ಕೆಯ ಸ್ವಾತಂತ್ರ್ಯವನ್ನು ಬೆಂಬಲಿಸುವಂತಹ ನೀತಿ ಇದು. ಗರ್ಭ ನಿರೋಧಕಗಳ ವೈಫಲ್ಯ, ಅತ್ಯಾಚಾರ ಫಲ ಅಥವಾ ಮಹಿಳೆಯ ದೈಹಿಕ, ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿಯಾಗುವಂತಹ ಸಂದರ್ಭಗಳಿದ್ದಲ್ಲಿ ವೈದ್ಯಕೀಯ ಗರ್ಭಪಾತ ಕಾಯಿದೆ (1971) ಪ್ರಕಾರ ಗರ್ಭಪಾತಕ್ಕೆ ಅವಕಾಶ  ಇದ್ದೇ ಇದೆ.ಆದರೆ ಗರ್ಭಗಳ ಮೇಲೆ ನಿಗಾ ವ್ಯವಸ್ಥೆ ಹೆಚ್ಚಾದಲ್ಲಿ ಅಸುರಕ್ಷಿತ ಗರ್ಭಪಾತಗಳ ಮೊರೆ ಹೋಗಬಹುದಾದ ಸನ್ನಿವೇಶಗಳು ಹೆಚ್ಚಾಗಬಹುದು. ಈಗಾಗಲೇ ಹೆರಿಗೆ ಸಂದರ್ಭದಲ್ಲಿ ಬಾಣಂತಿಯರ ಸಾವುಗಳ ಪ್ರಮಾಣ ರಾಷ್ಟ್ರದಲ್ಲಿ ಹೆಚ್ಚಿನ ಮಟ್ಟದಲ್ಲೇ ಇದೆ ಎಂಬುದನ್ನು ಗಮನಿಸಿದಾಗ  ಇದು ಮತ್ತೊಂದು ಸಮಸ್ಯೆಯಾಗಿ ಬೆಳೆಯಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.ಎಲ್ಲಾ ಗರ್ಭಿಣಿಯರೂ ಅಪರಾಧ ಮಾಡಬಹುದಾದವರು ಎಂಬಂತಹ ಊಹೆಯ ನೆಲೆಯಲ್ಲಿ ಕೆಲಸ ಮಾಡುವ ಈ ಸ್ಥಿತಿಯನ್ನು ಈಗಾಗಲೇ ಅನೇಕ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಟೀಕಿಸಿದ್ದಾರೆ.ಇದು ಖಾಸಗಿತನದ ಅತಿಕ್ರಮಣ. ಜೊತೆಗೆ ಲಿಂಗ ಆಯ್ಕೆಯ ಅಪರಾಧದಲ್ಲಿನ ಪಾಲ್ಗೊಳ್ಳುವಿಕೆಯನ್ನು ವೈದ್ಯಕೀಯ ವೃತ್ತಿಪರರಿಂದ ಮಹಿಳೆಗೆ ವರ್ಗಾಯಿಸುವಂತಹ ವ್ಯವಸ್ಥೆಯ ಸೃಷ್ಟಿಗೆ ದಾರಿ ಮಾಡಿಕೊಡುವಂತಹದ್ದು ಎಂಬ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.ವೈದ್ಯರ ಮೇಲಿನ ಹೊಣೆಯನ್ನು ಕಿತ್ತುಹಾಕಿ ಅದನ್ನು ಮಹಿಳೆಯ ತಲೆಗೆ ವರ್ಗಾಯಿಸುವ ಈ ಯತ್ನ  ಎಷ್ಟು ಸರಿ? ಲಕ್ಷಾಂತರ ಹೆರಿಗೆಗಳ ಮೇಲೆ ನಿಗಾ ವಹಿಸುವುದಾದರೂ ಹೇಗೆ? ಅದನ್ನು ನಿರ್ವಹಿಸುವವರು ಯಾರು?  ಎಂಬಂತಹ ಸಂಕೀರ್ಣತೆಗಳನ್ನು ಅರಿಯುವುದು ಅಗತ್ಯ.ಇಂತಹ ಸಂದರ್ಭದಲ್ಲಿ ಮೇನಕಾ ಗಾಂಧಿ ಅವರು ಸೃಷ್ಟಿಸಲು ಬಯಸುತ್ತಿರುವ ಹೊಸ ವ್ಯವಸ್ಥೆ ರೂಪುಗೊಳ್ಳುವುದು ಹೇಗೆ? ಸಮಾಜದ ಪಿಡುಗುಗಳನ್ನು ನಿರ್ವಹಿಸುವಲ್ಲಿ ಪ್ರಭುತ್ವದ ಅಸಾಮರ್ಥ್ಯವನ್ನು ಮುಚ್ಚಿಹಾಕಲು ಪ್ರತಿಗಾಮಿಯಾದಂತಹ ಉತ್ಪ್ರೇಕ್ಷಿತ ನಿಲುವಿಗೆ ಉದಾಹರಣೆಯಾಗಿದೆ ಮೇನಕಾ ಅವರ ಚಿಂತನೆಯ ಧಾಟಿ. ಕಾರ್ಪೊರೆಟ್ ಅಥವಾ ಸರ್ಕಾರಿ ಸಂಸ್ಥೆಗಳ ಮೇಲೆ ನಿಗಾ ಇಡುವುದಕ್ಕಿಂತ ಜನಸಾಮಾನ್ಯರನ್ನು ಗುರಿಯಾಗಿಸಿಕೊಳ್ಳುವುದು ಸುಲಭ ಎಂಬಂಥ ತರ್ಕವನ್ನು ಇಲ್ಲಿ ಮಂಡಿಸಬಹುದು.ಜೊತೆಗೆ ಗರ್ಭಿಣಿಯರಂತೂ ಯಾವುದೇ ರೀತಿಯ ಬಲ ಅಥವಾ ಸಾಂಘಿಕ ಶಕ್ತಿ ಇಲ್ಲದವರು. ಅವರನ್ನು ಗುರಿಯಾಗಿಸಿಕೊಂಡು ಕಾನೂನು ಚಲಾಯಿಸಲು ಹೊರಡುವುದು ಅಮಾನವೀಯ. ಹೀಗಾಗಿಯೇ ಮೇನಕಾ ಅವರ ಚಿಂತನೆಯಿಂದ ‘ಬೇಟಿ ಬಚಾವೊ’ ಎಂಬುದು ಸಾಧ್ಯವಾಗುವುದಿಲ್ಲ. ಬದಲಿಗೆ ‘ಡಾಕ್ಟರ್, ಟೆಕ್ನಿಷಿಯನ್ ಬಚಾವೊ’ ಆಗುತ್ತದೆ ಅಷ್ಟೆ ಎಂದು ಸಾಮಾಜಿಕ ಕಾರ್ಯಕರ್ತರು ತೀವ್ರವಾಗಿ ಟೀಕಿಸಿದ್ದಾರೆ.ಪಿಸಿ ಹಾಗೂ ಪಿಎನ್‌ಡಿಟಿ ಕಾಯಿದೆ ಹೆಣ್ಣು ಭ್ರೂಣ ಹತ್ಯೆ ಹಾಗೂ ಪ್ರಸವ ಪೂರ್ವ ಲಿಂಗ ಪತ್ತೆಗೆ ಕಠಿಣ ಶಿಕ್ಷೆ ವಿಧಿಸಿದೆ ಎಂಬುದು ನಿಜ. ಆದರೆ ಎರಡು ದಶಕಗಳ ನಂತರ  ಈ ಕಾನೂನಿನಿಂದ ಹೆಚ್ಚು ಪ್ರಯೋಜನ ಆಗದಿರುವುದೂ  ಸುವ್ಯಕ್ತವೇ. ಏಕೆಂದರೆ ಮಕ್ಕಳ ಲಿಂಗಾನುಪಾತ  ಅನೇಕ ಪ್ರದೇಶಗಳಲ್ಲಿ ಕುಸಿದಿದೆ. ತನ್ನ ಗುರಿ ಸಾಧನೆಯಲ್ಲಿ ಕಾನೂನು ವಿಫಲವಾಗಿದೆ ಎಂಬುದು ಸ್ಪಷ್ಟ.

1991ರಲ್ಲಿ 0-6 ವಯೋಮಾನದ  1,000 ಹುಡುಗರಿಗೆ ಹೆಣ್ಣುಮಕ್ಕಳ ಸಂಖ್ಯೆ 945 ಇತ್ತು. 2001ರಲ್ಲಿ ಇದು 927ಕ್ಕೆ ಕುಸಿಯಿತು.  ಈಗ 2011ರಲ್ಲಿ 918ಕ್ಕೆ ಕುಸಿದಿದೆ. ಇಂತಹ ಸ್ಥಿತಿಯಲ್ಲಿ  ಗರ್ಭಗಳ ಮೇಲೆ ನಿಗಾ ವಹಿಸುವ ಕ್ರಮ ಮಹಿಳಾ ಹಕ್ಕುಗಳಿಗೆ ಉತ್ತೇಜನವನ್ನೇನೂ ನೀಡದು.ಹೆಣ್ಣುಮಗುವಿನ  ಅಪಮೌಲ್ಯೀಕರಣ ಅಥವಾ ಕ್ಷುಲ್ಲಕೀಕರಣದ ಮೂಲ ಕಾರಣಗಳನ್ನು ಪತ್ತೆ ಹಚ್ಚುವುದು ಇಲ್ಲಿ  ಮುಖ್ಯ.ಕಳೆದ ಶತಮಾನದಲ್ಲಿ ಸುಮಾರು 80 ವರ್ಷಗಳಿಗೂ ಹಿಂದೆ ಕೆಲವು ಹಳ್ಳಿಗಳಲ್ಲಿ ನವಜಾತ ಹೆಣ್ಣುಮಗುವಿಗೆ ಚೂರು ಬೆಲ್ಲ ನೀಡಿ ಮೃದುವಾಗಿ ಲಾಲಿ ಹೇಳುತ್ತಿದ್ದದ್ದು ಹೀಗೆ: ಈ ಬೆಲ್ಲ ತಿನ್ನು , ಸ್ವರ್ಗಕ್ಕೆ ಹೋಗು ವಾಪಸಾಗಬೇಡ ತಮ್ಮನನ್ನು ಕಳಿಸು ವಿಷದ ಸಸ್ಯದ ಹಾಲಿನಲ್ಲಿ ಅದ್ದಿದ ಬೆಲ್ಲವಾಗಿರುತ್ತಿತ್ತು ಅದು ಎಂಬುದು ಮೈ ನಡುಗಿಸುವಂತಹದ್ದು.ತಮಿಳುನಾಡಿನ ಕೆಲವು ಭಾಗಗಳು ಸೇರಿದಂತೆ ರಾಷ್ಟ್ರದ ಹಲವೆಡೆ ಹೆಣ್ಣು ಶಿಶುವನ್ನು ನಿರ್ದಯವಾಗಿ ಹತ್ಯೆ ಮಾಡುವ ಇಂತಹ ಅನೇಕ ವಿಧಾನಗಳ ತಣ್ಣಗಿನ ಕ್ರೌರ್ಯ ಸಮಾಜದಲ್ಲಿ ನಡೆದುಕೊಂಡೇ ಬಂದಿದೆ.ಈಗ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಭ್ರೂಣ ಲಿಂಗ ಪತ್ತೆ ಮಾಡಿ ಹೆಣ್ಣಿನ ಹುಟ್ಟಡಗಿಸುವುದು ಇನ್ನೂ ಹೆಚ್ಚು ಸುಲಭವಾಗಿದೆ. ಆಧುನಿಕತೆ  ಎಂಬುದು ದುಷ್ಟ ಸಂಪ್ರದಾಯಗಳನ್ನು ಮತ್ತಷ್ಟು ಸುಲಭವಾಗಿಸಿತು ಎಂಬುದು ವಿಪರ್ಯಾಸ.ಆದರೆ ಇಂತಹ ಪುತ್ರ ವ್ಯಾಮೋಹ ಏಕೆ? ಹೆಣ್ಣುಮಕ್ಕಳೂ ಕುಲದೀಪಕರಾಗಬಲ್ಲರು ಎಂಬುದನ್ನು ಕುಟುಂಬಗಳಿಗೆ ಅರ್ಥ ಮಾಡಿಸಬೇಕಿರುವುದು  ಸದ್ಯದ ತುರ್ತು. ಹೆಣ್ಣುಮಕ್ಕಳು ಕುಟುಂಬಗಳಿಗೆ ಆರ್ಥಿಕ ಕೊಡುಗೆ ನೀಡುವುದಿಲ್ಲ. ಬದಲಿಗೆ ಕುಟುಂಬಗಳಿಗೆ ಆರ್ಥಿಕವಾಗಿ ಹೊರೆ ಎಂಬಂಥ ಸಮಾಜದಲ್ಲಿ ಬೇರೂರಿರುವ ಭಾವನೆ ತೊಲಗಿಸಬೇಕಾಗಿದೆ.ಈ ಮಧ್ಯೆ ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 2015ರ ವರ್ಷಾಂತ್ಯಕ್ಕೆ ಹರಿಯಾಣದಲ್ಲಿ 0-6 ವಯೋಮಾನದ ಮಕ್ಕಳ ಲಿಂಗಾನುಪಾತ 900 ದಾಟಿದೆ ಎಂಬುದೊಂದು ಸಕಾರಾತ್ಮಕ ಸುದ್ದಿ. ಹರಿಯಾಣದ ಪಾಣಿಪತ್‌ನಲ್ಲಿ 2015ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಕೇಂದ್ರ ಸರ್ಕಾರದ ‘ಬೇಟಿ ಬಚಾವೊ ಬೇಟಿ ಪಢಾವೊ’ ಪ್ರಚಾರಾಂದೋಲನ ಈ  ಬೆಳವಣಿಗೆಗೆ ಕಾರಣ ಎಂದು ವ್ಯಾಖ್ಯಾನಿಸಲಾಗಿದೆ.ಇದು ನಿಜವೇ ಆಗಿದ್ದಲ್ಲಿ ಮೇನಕಾ ಗಾಂಧಿಯವರೂ ಈಗ ಹರಿಯಬಿಟ್ಟಿರುವ ಚಿಂತನೆಯನ್ನು ಕೈಬಿಡುವುದು ಒಳ್ಳೆಯದು. ಏಕೆಂದರೆ ಅತಿಯಾದ ಕಾನೂನುಗಳಿಂದ ಸಾಮಾಜಿಕ ಬದಲಾವಣೆ ಅಸಾಧ್ಯ.ಈಗಿರುವ ಕಾನೂನುಗಳನ್ನೇ ಸರಿಯಾಗಿ ಜಾರಿಗೊಳಿಸಿದರೆ ಸಾಕು. ಇದಕ್ಕೂ ಮಿಗಿಲಾದದ್ದು ಹೆಣ್ಣು ಮಗು ಕುರಿತಾದ ಸಾಮಾಜಿಕ ದೃಷ್ಟಿಕೋನ ಬದಲಾವಣೆಗೆ ಹೆಚ್ಚುಹೆಚ್ಚು ಕಾರ್ಯಕ್ರಮಗಳ ಅನುಷ್ಠಾನ. ಇವು ದೀರ್ಘಾವಧಿಯಲ್ಲಿ ಫಲ ನೀಡುವಂತಹದ್ದಾಗಿರುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry