ಶಾಪ, ವರಗಳೆರಡರ ನಡುವೆ ಕರ್ನಾಟಕ

7

ಶಾಪ, ವರಗಳೆರಡರ ನಡುವೆ ಕರ್ನಾಟಕ

ರಾಮಚಂದ್ರ ಗುಹಾ
Published:
Updated:
ಶಾಪ, ವರಗಳೆರಡರ ನಡುವೆ ಕರ್ನಾಟಕ

ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ- ಈಗ ಐದು, ಭೌಗೋಳಿಕವಾಗಿ ಮತ್ತು ಚಾರಿತ್ರಿಕವಾಗಿ ಅತ್ಯಂತ ಅನುಗ್ರಹೀತವಾಗಿರುವುದು ಕರ್ನಾಟಕ. ಇಲ್ಲಿ ಕಾಳಿ, ಶರಾವತಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕಾವೇರಿಯಂತಹ ಅನುಪಮ ಸೌಂದರ್ಯದ ನದಿಗಳಿವೆ. ಸುದೀರ್ಘ ಮತ್ತು  ಉಜ್ವಲವಾದ ಕರಾವಳಿಯನ್ನೂ ರಾಜ್ಯ ಹೊಂದಿದೆ. ಕಣ್ಸೆಳೆಯುವ ಮತ್ತು ಉತ್ತಮವಾದ ಅರಣ್ಯವನ್ನು ಹೊಂದಿರುವ ಹಲವು ಬೆಟ್ಟಗಳೂ ಇಲ್ಲಿವೆ (ಉತ್ತರ ಕನ್ನಡದಲ್ಲಿನ ಪಶ್ಚಿಮ ಘಟ್ಟಗಳು ಮತ್ತು ಕೊಡಗಿನ ಬೆಟ್ಟಗಳು).ಕರ್ನಾಟಕದ ನಿಸರ್ಗ ಸೌಂದರ್ಯ ಇಲ್ಲಿನ ಸಾಂಸ್ಕೃತಿಕ ಮತ್ತು ವಿಶೇಷವಾಗಿ ವಾಸ್ತುಶಿಲ್ಪದ ಬೆರಗನ್ನು ಮೀರಿಸುವಂತಿಲ್ಲದಿದ್ದರೂ ಅದಕ್ಕೆ ಸರಿಸಮಾನವಾಗಿದೆ. ಹಳೆ ಮೈಸೂರು ಪ್ರದೇಶದ ಹೊಯ್ಸಳ ದೇವಾಲಯಗಳು ಜಗತ್ತಿನ ಅದ್ಭುತಗಳಲ್ಲಿ ಸೇರಿವೆ. ಐಹೊಳೆ ಮತ್ತು ಪಟ್ಟದಕಲ್ಲು ಮುಂತಾದ ಉತ್ತರ ಕರ್ನಾಟಕದ ದೇವಾಲಯಗಳಿಗೆ ಜನರ ಭೇಟಿ ಕಡಿಮೆಯಾದರೂ ಅವುಗಳ ಚೆಲುವು ಕಡಿಮೆಯೇನಲ್ಲ.ಇವುಗಳೆಲ್ಲವನ್ನೂ ಮೀರಿ ನಿಲ್ಲುವುದು ಹಳೆಯ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ. ತುಂಗಭದ್ರೆಯ ತಟದಲ್ಲಿರುವುದರಿಂದ ಈ ಸ್ಥಳದ ಚೆಲುವು ಇಮ್ಮಡಿಸಿದೆ. ಸುಮ್ಮನೆ ಭೇಟಿ ಕೊಡುವವರಿಗೂ ಅಧ್ಯಯನಕ್ಕಾಗಿ ಬರುವ ಗಂಭೀರ ಪ್ರವಾಸಿಗರಿಗೂ ಇದು ಸುಂದರ ಅನುಭವವನ್ನು ಕಟ್ಟಿ ಕೊಡುತ್ತದೆ.ಇತರ ಹಲವು ರಚನೆಗಳ ನಡುವೆ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪುವಿನ ಬೇಸಿಗೆ ಅರಮನೆ, ವಿಜಯಪುರದ ಗೋಲ ಗುಂಬಜ್ ಇಸ್ಲಾಂ ವಾಸ್ತುಶೈಲಿಯನ್ನು ಪ್ರತಿನಿಧಿಸುತ್ತವೆ. ಹಿಂದೂ ಮತ್ತು ಮುಸ್ಲಿಂ ವಾಸ್ತುಶಿಲ್ಪದಾಚೆಗೆ ಮೂಡಬಿದಿರೆಯ ಪ್ರಾಚೀನ ಜೈನ ದೇವಾಲಯವಿದೆ. ಇಲ್ಲಿನ ಸಾವಿರ ಕಂಬದ ಚಂದ್ರನಾಥ ಬಸದಿ ಭಾರತದಲ್ಲಿರುವ ನನ್ನ ಅಚ್ಚುಮೆಚ್ಚಿನ ರಚನೆಗಳಲ್ಲಿ ಒಂದು.ಭಾಷೆಯ ವಿಷಯಕ್ಕೆ ಬಂದರೂ ಕರ್ನಾಟಕ ಅತ್ಯಂತ ವೈವಿಧ್ಯಮಯ. ತಮಿಳುನಾಡಿನಲ್ಲಿ ತಮಿಳಿನ ಪ್ರಾಬಲ್ಯವಿದೆ; ಕೇರಳದಲ್ಲಿ ಹೆಚ್ಚು ಕಡಿಮೆ ಮಲಯಾಳವೇ ಸರ್ವೋಚ್ಚ. ಕರ್ನಾಟಕದ ರಾಜಧಾನಿ ಬೆಂಗಳೂರು ದಿನವೂ ಆರು ಭಾಷೆಯ ಸಿನಿಮಾಗಳನ್ನು ಪ್ರದರ್ಶಿಸುವ ಜಗತ್ತಿನ ಏಕೈಕ ನಗರ. ಇಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳ, ಹಿಂದಿ ಮತ್ತು ಇಂಗ್ಲಿಷ್ ಸಿನಿಮಾ ಪ್ರದರ್ಶನ ದಿನವೂ ಇದೆ. ರಾಜ್ಯದಲ್ಲಿ ಇತರ ಭಾಷೆಗಳನ್ನು ಮಾತನಾಡುವವರೂ ಇದ್ದಾರೆ.ಕರಾವಳಿಯಲ್ಲಿ ಜೀವಿಸುವ 70 ಲಕ್ಷದಷ್ಟು ಕನ್ನಡಿಗರು ಕೊಂಕಣಿ ಅಥವಾ ತುಳುವನ್ನು ತಮ್ಮ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ; ರಾಜ್ಯದ ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ಇರುವ ಇದಕ್ಕೂ ಹೆಚ್ಚಿನ ಸಂಖ್ಯೆಯ ಜನರು ದಖ್ಖನಿ ಅಥವಾ ಉರ್ದು ತಮ್ಮ ಮಾತೃಭಾಷೆ ಎನ್ನುತ್ತಾರೆ. ಬೆಳಗಾವಿಯ ಕನಿಷ್ಠ ಅರ್ಧದಷ್ಟು ಜನರು ಮರಾಠಿ ಮಾತನಾಡುತ್ತಾರೆ. ನಂತರ ಕೊಡಗಿನಲ್ಲಿ ಕೊಡವ ಭಾಷೆ ಮಾತನಾಡುವವರಿದ್ದಾರೆ. ಕರ್ನಾಟಕದ ಜತೆಗೆ ಅವರ ಸಂಬಂಧ ಈ ಜನಾಂಗದ ಹುಟ್ಟಿನಷ್ಟೇ ಹಳೆಯದು.ಭೌಗೋಳಿಕತೆ ಮತ್ತು ಸಂಸ್ಕೃತಿಯ ಜತೆಗೆ ಇತಿಹಾಸ ಕೂಡ ರಾಜ್ಯಕ್ಕೆ ಅತಿ ಹೆಚ್ಚಿನ ಕರುಣೆ ತೋರಿದೆ. 1920ರ ದಶಕದಲ್ಲಿ ಕೇರಳದಲ್ಲಿ ರಕ್ತಸಿಕ್ತವಾದ ಮಾಪಿಳ್ಳ ಬಂಡಾಯ ನಡೆದರೆ, ಇತ್ತೀಚಿನ ವರ್ಷಗಳಲ್ಲಿಯೂ ಅಷ್ಟೊಂದು ರಕ್ತಸಿಕ್ತ ಅಲ್ಲದಿದ್ದರೂ ಹೆಚ್ಚು ಕಹಿ ಉಣಿಸಿದ ದಂಗೆಗಳು ನಡೆದಿವೆ. 1940ರ ದಶಕದ ಕೊನೆಯಲ್ಲಿ ಆರಂಭಗೊಂಡ ತೆಲಂಗಾಣ ಹೋರಾಟದ ಹಿಂಸೆಗೆ ಆಂಧ್ರಪ್ರದೇಶ ಸಾಕ್ಷಿಯಾಗಿದೆ.ದೀರ್ಘ ಕಾಲದಿಂದ ಈ ರಾಜ್ಯದ ರಾಜಧಾನಿಯಾಗಿರುವ ಹೈದರಾಬಾದ್ ನಿರಂತರವಾಗಿ ಕೋಮು ಸಂಘರ್ಷಕ್ಕೆ ತುತ್ತಾಗಿದೆ. ತಮಿಳುನಾಡು ಆಂತರಿಕವಾಗಿ ತೀವ್ರವಾದ ಜಾತಿ ಸಂಘರ್ಷಕ್ಕೆ ಒಳಗಾಗಿದೆ; ಜತೆಗೆ, ನೆರೆಯ ಶ್ರೀಲಂಕಾದಲ್ಲಿ ನಡೆದ ಜನಾಂಗೀಯ ಸಂಘರ್ಷದ ಬಿಸಿಯೂ ಈ ರಾಜ್ಯಕ್ಕೆ ತಟ್ಟಿದೆ. ಆದರೆ, ಕರ್ನಾಟಕದಲ್ಲಿ ಇವುಗಳಿಗೆ ಹೋಲಿಸಬಹುದಾದ ರಕ್ತ ಹರಿದ ಘಟನೆಗಳನ್ನು ಕಾಣಬೇಕಾದರೆ 1790ರ ಆಂಗ್ಲೊ ಮೈಸೂರು ಯುದ್ಧವನ್ನು ನೋಡಬೇಕಾಗುತ್ತದೆ.ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕ ಅತ್ಯಂತ ವೈವಿಧ್ಯಮಯ ಎಂದು ವಾದಿಸಬಹುದು; ಹಾಗೆಯೇ ನೈಸರ್ಗಿಕ ಸಂಪತ್ತು ಮತ್ತು ಸಾಂಸ್ಕೃತಿಕ ಪರಂಪರೆಯ ದೃಷ್ಟಿಯಿಂದಲೂ ಈ ರಾಜ್ಯ ಅತ್ಯಂತ ಸಮೃದ್ಧ. ಅದೇ ಹೊತ್ತಿಗೆ ಬಹುಶಃ ಅತ್ಯಂತ ಭ್ರಷ್ಟ ಮತ್ತು ಅತಿ ಕೆಟ್ಟ ಆಡಳಿತ ಕಂಡ ರಾಜ್ಯವೂ ಆಗಿದೆ. ಕೇರಳಕ್ಕೆ ಹೋಲಿಸಿದರೆ ಇಲ್ಲಿನ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಅವ್ಯವಸ್ಥೆಯ ಗೂಡು.

ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಹೋಲಿಸಿದರೆ ಇಲ್ಲಿನ ಆರ್ಥಿಕ ಪ್ರಗತಿಯ ವ್ಯಾಪ್ತಿ ಅತ್ಯಂತ ಕಿರಿದಾಗಿದ್ದು ಒಂದು ನಗರದ ಮೇಲೇ ಅವಲಂಬಿತ; ಬೆಂಗಳೂರು ಬಿಟ್ಟರೆ ಇಲ್ಲಿ ಬೇರೆ ಅಭಿವೃದ್ಧಿ ಕೇಂದ್ರಗಳಿಲ್ಲ. ಅವಿಭಜಿತ ಆಂಧ್ರಪ್ರದೇಶದಲ್ಲಿ ಹೈದರಾಬಾದ್ ಜತೆ ಸ್ಪರ್ಧಿಸಲು ವಿಜಯವಾಡ ಮತ್ತು ವಿಶಾಖಪಟ್ಟಣಗಳಿದ್ದವು. ತಮಿಳುನಾಡಿನಲ್ಲಿ ಚೆನ್ನೈಯ ಜತೆಗೆ ಮದುರೆ ಮತ್ತು ಕೊಯಮತ್ತೂರುಗಳಿವೆ. ಆಂಧ್ರಪ್ರದೇಶ ಮತ್ತು ತಮಿಳುನಾಡುಗಳೆರಡೂ ಕರ್ನಾಟಕಕ್ಕಿಂತ ಬಹಳ ಉತ್ತಮವಾದ ಮೂಲ ಸೌಕರ್ಯಗಳನ್ನು (ರಸ್ತೆ ಮತ್ತು ಬಂದರು ವಿಚಾರದಲ್ಲಿ) ಹೊಂದಿವೆ.ಜನಸಾಮಾನ್ಯರಿಗೆ ನಿತ್ಯದ ಅಗತ್ಯ ಸೇವೆಗಳ ವಿಚಾರದಲ್ಲಿಯೂ ರಾಜ್ಯದ ಸ್ಥಿತಿ ಅತ್ಯಂತ ಕಳಪೆ. ಅನುಭವದಿಂದ ಹೇಳುವುದಾದರೆ, ಕರ್ನಾಟಕಕ್ಕೆ ಹೋಲಿಸಿದರೆ ತಮಿಳುನಾಡಿನಲ್ಲಿ ಸರ್ಕಾರಿ ಅಧಿಕಾರಿಗಳ ಜತೆ ವ್ಯವಹರಿಸುವುದು ಕಡಿಮೆ ಶ್ರಮದಾಯಕ. ದೂರವಾಣಿ ಲೈನ್‌ಮ್ಯಾನ್, ವಿದ್ಯುತ್ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸರು ಎಲ್ಲರ ವಿಷಯದಲ್ಲಿಯೂ ಇದು ನಿಜ. ತಮಿಳುನಾಡು ಮತ್ತು ಆಂಧ್ರಪ್ರದೇಶದ ಮಟ್ಟದಲ್ಲಿಯೇ ಇರುವ ಕೇರಳವೂ  ಕರ್ನಾಟಕಕ್ಕಿಂತ ಬಹಳ ಮೇಲೆ ಇದೆ ಎಂಬುದು ನಾನು ಅಲ್ಲಿನ ಗೆಳೆಯರಿಂದ ಕಂಡುಕೊಂಡ ವಿಷಯ.ಕರ್ನಾಟಕದ ಪರಿಸ್ಥಿತಿ ಯಾಕೆ ಇಷ್ಟೊಂದು ಕೆಟ್ಟದಾಗಿದೆ? ಈ ರಾಜ್ಯ ರೂಪುಗೊಂಡ ರೀತಿಯೇ ಅದಕ್ಕೆ ಒಂದು ಕಾರಣ ಆಗಿರಬಹುದು. ಸಮಕಾಲೀನ ಕರ್ನಾಟಕವು ನಾಲ್ಕು ಭಿನ್ನ ಭಾಗಗಳನ್ನು ಹೊಂದಿದೆ- ಒಡೆಯರ್ ಆಳ್ವಿಕೆಯಲ್ಲಿದ್ದ ಹಿಂದಿನ ಮೈಸೂರು ರಾಜ್ಯ ಅದರ ಒಂದು ಭಾಗ; ನಿಜಾಮರು ಆಳುತ್ತಿದ್ದ ಹೈದರಾಬಾದ್ ರಾಜ್ಯದ ಕೆಲವು ಭಾಗಗಳು ಇನ್ನೊಂದು ಭಾಗ; ಮೂರನೆಯ ಭಾಗ ಬಾಂಬೆ ಪ್ರಾಂತ್ಯಕ್ಕೆ ಸೇರಿದ್ದಾದರೆ ನಾಲ್ಕನೆಯದು ಮದ್ರಾಸ್ ಪ್ರಾಂತ್ಯದ್ದು. ಭಿನ್ನ ಕಾನೂನು, ಕಂದಾಯ, ಆಡಳಿತ ವ್ಯವಸ್ಥೆಗಳು ಹಾಗೂ ಪರಂಪರೆಗೆ ಸೇರಿದ ಜನರನ್ನು ಒಂದಾಗಿಸುವುದು ಬಹಳ ಕಠಿಣ.

ಇದಕ್ಕೆ ಹೋಲಿಸಿದರೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಪ್ರದೇಶವಷ್ಟೇ ತಮಿಳುನಾಡು ರಾಜ್ಯವಾಗಿದೆ. ಬ್ರಿಟಿಷ್ ಇಂಡಿಯಾದ ಈ ಪ್ರದೇಶವು 19ನೇ ಶತಮಾನದ ಆರಂಭದಿಂದಲೇ ಸರ್ ಥಾಮಸ್ ಮನ್ರೊ ಅಧೀನದಲ್ಲಿ ಪ್ರಗತಿಪರ ಮತ್ತು ಜನಪರ ಆಡಳಿತಕ್ಕೆ ಹೆಸರಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟಾಚಾರಕ್ಕೆ ಒಳಗಾದರೂ ರಾಜ್ಯದ ಇಲಾಖೆಗಳು ಸಾಕಷ್ಟು ಉತ್ತಮವಾಗಿಯೇ ಕೆಲಸ ಮಾಡುತ್ತಿವೆ.ಕರ್ನಾಟಕದ ಆಡಳಿತ ಇಷ್ಟೊಂದು ಕೆಟ್ಟು ಹೋಗಲು ಎರಡನೆಯ ಕಾರಣ ಇಲ್ಲಿನ ತೀರಾ ಸಾಮಾನ್ಯ (ಅಥವಾ ಅದಕ್ಕಿಂತ ಕೆಟ್ಟ) ರಾಜಕೀಯ ನಾಯಕರು. ಇಲ್ಲಿನ ಯಾವ ರಾಜಕೀಯ ಮುಖಂಡನೂ ಸಾಮರ್ಥ್ಯದಲ್ಲಿ ಇ.ಎಂ.ಎಸ್. ನಂಬೂದಿರಿಪಾಡ್ ಅಥವಾ ಸಿ. ಅಚ್ಯುತ ಮೆನನ್ ಅವರಿಗೆ ಸರಿಸಾಟಿ ಅಲ್ಲ; ದಕ್ಷವಾಗಿ ಕೆಲಸ ಮಾಡುವ ವಿಚಾರದಲ್ಲಿ ಕೆ. ಕಾಮರಾಜ್ ಮತ್ತು ಸಿ.ಎನ್. ಅಣ್ಣಾದೊರೆ ಅವರ ಹತ್ತಿರಕ್ಕೂ ಬರುವುದಿಲ್ಲ.ಆಂಧ್ರಪ್ರದೇಶದ ಯಾವ ಮುಖ್ಯಮಂತ್ರಿಯೂ ಇ.ಎಂ.ಎಸ್ ಅಥವಾ ಅಣ್ಣಾ ಅವರಂತೆ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲದಷ್ಟು ಭ್ರಷ್ಟಾಚಾರ ರಹಿತರಲ್ಲ. ಆದರೆ ನಗರಗಳಲ್ಲಿ ಕೈಗಾರಿಕೆ ಮೂಲಕ ಉದ್ಯೋಗ ಸೃಷ್ಟಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸೇವೆ ನೀಡಿಕೆಗೆ ಹಲವು ಮುಖ್ಯಮಂತ್ರಿಗಳು (ವೈ.ಎಸ್. ರಾಜಶೇಖರ ರೆಡ್ಡಿ ಅಂಥವರು) ಶ್ರಮಿಸಿದ್ದಾರೆ. ಕರ್ನಾಟಕ ಇನ್ನೂ ಒಬ್ಬ ವೈಎಸ್‍ಆರ್‌ಗೆ ಕಾಯುತ್ತಲೇ ಇದ್ದರೆ, ಅಣ್ಣಾ ಅಥವಾ ಅಚ್ಯುತ ಮೆನನ್‌ ತರಹದವರ ಬಗ್ಗೆ ಹೇಳುವುದೇ ಬೇಡ.ಕರ್ನಾಟಕದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಅವರಲ್ಲಿ ದೇವರಾಜ ಅರಸು ಕೃಷಿ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿ ಕೆಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ; ರಾಮಕೃಷ್ಣ ಹೆಗಡೆ ಮತ್ತು ಅವರ ಸಚಿವರು (ವಿಶೇಷವಾಗಿ ದಾರ್ಶನಿಕ ವ್ಯಕ್ತಿತ್ವದ ಅಬ್ದುಲ್ ನಜೀರ್ ಸಾಬ್) ವಿಕೇಂದ್ರೀಕೃತ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ.ಉಳಿದ ಯಾರನ್ನೂ ಇಲ್ಲಿ ಉಲ್ಲೇಖಿಸುವುದಕ್ಕೆ ಸಾಧ್ಯ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಉಲ್ಲೇಖಿಸುವುದಕ್ಕೆ ಅರ್ಹತೆ ಇರುವವರೇ ಇಲ್ಲ. ಕಳೆದ ಹನ್ನೊಂದು ಮುಖ್ಯಮಂತ್ರಿಗಳನ್ನು ನೋಡಿದರೆ, ಕೆಲವರು ಭ್ರಷ್ಟಾಚಾರದಲ್ಲಿ ಮುಳುಗಿ ಹೋದವರಾದರೆ ಕೆಲವರು ಅತಿ ಸೋಮಾರಿಗಳು; ಕೆಲವರು ಕಣ್ಣಿಗೆ ರಾಚುವಷ್ಟು ಜಾತಿವಾದಿಗಳು ಅಥವಾ ಕೋಮುವಾದಿಗಳು.2013ರ ಮೇಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಅವರ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಅವರು ಸಚಿವರಾಗಿ ಸಾಕಷ್ಟು ದಕ್ಷವಾಗಿಯೇ ಕೆಲಸ ಮಾಡಿದ್ದವರು. ಅವರು ದೇವೇಗೌಡರ ಪಕ್ಷದ ಕುಟುಂಬ ರಾಜಕಾರಣದ ವಿರುದ್ಧ ಬಂಡೆದ್ದವರು; ನಂತರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ತಂದವರು.ಮುಖ್ಯಮಂತ್ರಿ ಹುದ್ದೆಗೆ ಅತ್ಯುತ್ತಮ ಅಭ್ಯರ್ಥಿ ತಾವೇ ಎಂದು ಏಕಪಕ್ಷೀಯವಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಡ್ಡು ಹೊಡೆದವರು. ರೈತರು, ಕುಶಲಕರ್ಮಿಗಳು ಮತ್ತು ಕುರುಬರ ಸಮಸ್ಯೆಗಳನ್ನು ಕಣ್ಣಾರೆ ಕಂಡವರು ಮತ್ತು ಇತರರಿಗೆ ಹೋಲಿಸಿದರೆ ಹೆಚ್ಚು ಸ್ವಚ್ಛ ವ್ಯಕ್ತಿತ್ವ ಹೊಂದಿದ್ದವರು (ಕನಿಷ್ಠ 2013ರ ಮೇವರೆಗೆ). ಹಾಗಾಗಿಯೇ ಅವರು ತಮ್ಮ ಹಿಂದಿನವರಿಗಿಂತ ಕಡಿಮೆ ಭ್ರಷ್ಟ ಮತ್ತು ಹೆಚ್ಚು ದಕ್ಷ ಆಡಳಿತ ನೀಡಬಹುದು ಎಂಬ ನಿರೀಕ್ಷೆ ಇತ್ತು.ಈ ಎಲ್ಲ ನಿರೀಕ್ಷೆಗಳು ಸುಳ್ಳಾಗಿವೆ. ಮುಖ್ಯಮಂತ್ರಿಯಾಗುವ ಮೊದಲು ಸಿದ್ದರಾಮಯ್ಯ ತಮ್ಮ ಕುಟುಂಬ ಸದಸ್ಯರನ್ನು ಕೈಯಳತೆಯ ದೂರದಲ್ಲಿಯೇ ಇರಿಸಿ

ಕೊಂಡಿದ್ದರು; ಆದರೆ ಈಗ ಕುಟುಂಬದ ಸದಸ್ಯರು ಆಡಳಿತಾತ್ಮಕ ನಿರ್ಧಾರಗಳಲ್ಲಿ ಪ್ರಭಾವಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಹೈಕಮಾಂಡ್ ತನ್ನ ಪ್ರತಿನಿಧಿಯಾಗಿ ಜಿ. ಪರಮೇಶ್ವರ್‌ ಅವರನ್ನು ಸದಾ ಮುಖ್ಯಮಂತ್ರಿಯ ಸಮೀಪದಲ್ಲಿಯೇ ಇರಿಸಿದೆ; ಪರಮೇಶ್ವರ್‌ ಮತ್ತು ಹೈಕಮಾಂಡನ್ನು ಸುರಕ್ಷಿತ ಅಂತರದಲ್ಲಿ ಇರಿಸುವುದಕ್ಕೆ ಸಿದ್ದರಾಮಯ್ಯ ಹೆಚ್ಚಿನ ಸಮಯ ವ್ಯಯ ಮಾಡಿದ್ದಾರೆ; ‘10 ಜನಪಥ’ವನ್ನು ತೃಪ್ತಿಪಡಿಸಲು ಸಾಕಷ್ಟು ಶಕ್ತಿ ವೆಚ್ಚ ಮಾಡಿದ್ದಾರೆ (ಇದು ಹೊಗಳಿಕೆಯ ಪದಗಳ ಮೂಲಕ ಮಾತ್ರ ಅಲ್ಲ ಎಂದು ಹೇಳಲಾಗುತ್ತಿದೆ). ಟಿಪ್ಪು ಸುಲ್ತಾನ್ ಜನ್ಮದಿನವನ್ನು ಸರ್ಕಾರಿ ವೆಚ್ಚದಲ್ಲಿ ಆಚರಿಸುವ ಮೂರ್ಖ ಪ್ರಯತ್ನ ಜನರನ್ನು ಧರ್ಮದ ನೆಲೆಯಲ್ಲಿ ಧ್ರುವೀಕರಣಗೊಳಿಸಿತು.ಹೆಚ್ಚು ಸಾಮಾನ್ಯೀಕರಿಸಿ ಹೇಳುವುದಾದರೆ, ರಾಜ್ಯ ಸರ್ಕಾರ ಮಾಡುವ ಅಥವಾ ಮಾಡದಿರುವ ಪ್ರತಿಯೊಂದು ಕೆಲಸದ ಸುತ್ತಲೂ ನಿರಾಸಕ್ತಿ ಮತ್ತು ದಣಿವು ಕಾಣಿಸುತ್ತಿದೆ. ಮುಖ್ಯಮಂತ್ರಿಯಾಗುವ  ತಮ್ಮ ಜೀವನದ ಅಭಿಲಾಷೆಯನ್ನು ಈಡೇರಿಸಿಕೊಂಡ ಸಂತೃಪ್ತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದಾದರೆ ಈಗ ಅವರಿಗೆ ತಮ್ಮ ಬಗ್ಗೆಯಾಗಲಿ ಅಥವಾ ರಾಜ್ಯದ ಜನರ ಬಗ್ಗೆ ಆಗಲಿ ಯಾವುದೇ ಕಾಳಜಿ ಇಲ್ಲ ಎಂದು ಅರ್ಥ.ರಾಜಕಾರಣ, ಆಳ್ವಿಕೆ ಮತ್ತು ಆಡಳಿತದ ವಿಷಯದಲ್ಲಿ ಕರ್ನಾಟಕದ ಜನರಿಗೆ ಮೋಸ ಆಗಿದೆ. ಅದೃಷ್ಟವಶಾತ್, ಸಾಮಾಜಿಕ ವಲಯದಲ್ಲಿ ಅದಕ್ಕೆ ಕೆಲವು ಪರಿಹಾರಗಳು ದೊರೆತಿವೆ. ಇಲ್ಲಿ ಅತ್ಯುತ್ತಮವಾದ ಹವಾಮಾನ ಇದೆ. ಜನರು ಸ್ನೇಹಪರರು ಮತ್ತು ಸಹಿಷ್ಣುಗಳು. ಬೆರಗು ಹುಟ್ಟಿಸುವ ದೇವಾಲಯಗಳು, ಅಚ್ಚರಿ ಮೂಡಿಸುವ ಅರಣ್ಯ ಮತ್ತು ನದಿಗಳಿವೆ. ಹಾಗಾಗಿ, ನನ್ನ ತಂದೆ, ತಾತ, ಮುತ್ತಾತಂದಿರ ಹಾಗೆಯೇ ನಾನೂ ಕರ್ನಾಟಕದಲ್ಲಿಯೇ ಜೀವಿಸಿ, ಇಲ್ಲಿಯೇ ಸಾಯುವುದನ್ನು ಬಯಸುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry