7

ಕತ್ತೆಗಳು ಸಾರ್‌..ಔರಾದ್‌ ತುಂಬ ಕತ್ತೆಗಳು!

Published:
Updated:

ಬಾಲ್ಯದಲ್ಲಿ ಕೇಳಿದ ಕತೆಯೊಂದು ಹೀಗಿದೆ:

ಒಂದೂರಿನಲ್ಲಿ ಒಬ್ಬ ರೈತನಿರುತ್ತಾನೆ. ಆತ ಕತ್ತೆ ಮತ್ತು ನಾಯಿಯನ್ನು ಸಾಕಿರುತ್ತಾನೆ. ಅವುಗಳನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿರುತ್ತಾನೆ. ಅವುಗಳಿಗೆ ರೈತನೆಂದರೆ ಅಕ್ಕರೆ. ಒಂದು ದಿನ ರೈತನಿಗೆ ಬಿಡುವಿಲ್ಲದ ಕೆಲಸ. ಆಯಾಸವಾಗಿರುತ್ತದೆ. ಕತ್ತೆ ಮತ್ತು ನಾಯಿಗೆ ಆಹಾರ ಕೊಡುವುದನ್ನು ಮರೆತು ನಿದ್ರೆಗೆ ಜಾರುತ್ತಾನೆ.ಕಳ್ಳರು ತೋಟಕ್ಕೆ ನುಗ್ಗುತ್ತಾರೆ. ಇದನ್ನು ಕತ್ತೆ ಗಮನಿಸಿ ರೈತನನ್ನು ಎಚ್ಚರಿಸಲು ಬೊಗಳುವಂತೆ ನಾಯಿಗೆ ಹೇಳುತ್ತದೆ. ಆದರೆ ನಾಯಿ ‘ರೈತ ಇಂದು ಆಹಾರ ಕೊಟ್ಟಿಲ್ಲ. ನಾನು ಏಕೆ ಬೊಗಳಬೇಕು’ಎಂದು ಹೇಳುತ್ತದೆ. ಕಳ್ಳರು ಕದಿಯುವುದನ್ನು ನೋಡಲಾರದೆ ಕತ್ತೆ ಅರುಚುತ್ತದೆ. ನಿದ್ರಾಭಂಗವಾದ ರೈತ ಎದ್ದು ಬಂದು ‘ನಿನಗೇನು ಕಡಿಮೆ ಮಾಡಿದ್ದೇನೆ’ ಎಂದು ಬಾರುಕೋಲಿನಿಂದ ಬಾರಿಸುತ್ತಾನೆ.ಈ ಕತೆ ಏಕೆ ನೆನಪಾಯಿತು ಎಂದು ಹೇಳುತ್ತೇನೆ. ಮೊನ್ನೆ ಬೀದರ್ ಜಿಲ್ಲೆ ಔರಾದ್‌ ತಾಲ್ಲೂಕಿನಲ್ಲಿ ಸುತ್ತಾಡುತ್ತಿದ್ದೆ. ಮೇವಿಗಾಗಿ ಅಲೆಯುವ, ಮರಳು ಹೊತ್ತು ಸಾಗುವ, ಗುಡ್ಡದಿಂದ ಇಳಿದುಬರುತ್ತಿರುವ, ಮನೆ ಮುಂದೆ ಕಟ್ಟಿರುವ ಕತ್ತೆಗಳ ದರ್ಶನವಾಯಿತು. ಇಷ್ಟೊಂದು ಕತ್ತೆಗಳನ್ನು ಹಿಂದೆಂದೂ ನೋಡಿರಲಿಲ್ಲ! ಜೊತೆಗಿದ್ದವರನ್ನು ವಿಚಾರಿಸಿದೆ.‘ನಮ್ಮ ತಾಲ್ಲೂಕಿನಲ್ಲಿ ನೂರಾರು ಕುಟುಂಬಗಳು, ಸಾವಿರಾರು ರೈತರು ಕತ್ತೆಗಳನ್ನೇ ನಂಬಿ ಬದುಕುತ್ತಿದ್ದಾರೆ. ಇದು ನಿಮಗೆ ಗೊತ್ತಿಲ್ಲ ಅನಿಸುತ್ತದೆ’ ಎಂದರು. ‘ಹೌದು’ ಎನ್ನುವಂತೆ ತಲೆ ಆಡಿಸಿದೆ. ಅವರು ಉದಗೀರ್‌ನ ಪಶುಪರೀಕ್ಷಕ ಅಜುರುದ್ದೀನ್‌ ಪಟೇಲರನ್ನು ಪರಿಚಯಿಸಿದರು. ಪಟೇಲ್‌ ಅವರು ‘ಬ್ರೋಕ್‌ ಇಂಡಿಯಾ’ ಎನ್ನುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ‘ನಮ್ಮ ಸಂಸ್ಥೆಯು ರಾಜ್ಯದಲ್ಲಿ ಕತ್ತೆಗಳ ಸಮೀಕ್ಷೆ ನಡೆಸಿದೆ. ಔರಾದ್‌ ತಾಲ್ಲೂಕಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕತ್ತೆಗಳಿವೆ. ಇಷ್ಟೊಂದು ಕತ್ತೆಗಳು ರಾಜ್ಯದ ಯಾವ ಭಾಗದಲ್ಲೂ ಇಲ್ಲ’ ಎಂದು ಪಟೇಲ್‌ ತಿಳಿಸಿದರು.ಔರಾದ್‌ ತಾಲ್ಲೂಕಿನಲ್ಲಿ ಗುಡ್ಡಗಾಡು, ಎತ್ತರ ಹಾಗೂ ಒಣ ಪ್ರದೇಶ ಹೆಚ್ಚಾಗಿದೆ. ಆದ್ದರಿಂದ ಕತ್ತೆಗಳ ಸಂಖ್ಯೆಯೂ ಜಾಸ್ತಿ. ಬೀದರ್‌ ಜಿಲ್ಲೆಯಲ್ಲಿಯೇ ಔರಾದ್ ಆರ್ಥಿಕವಾಗಿ ಹಿಂದುಳಿದ ತಾಲ್ಲೂಕು. ಜನರ ಆರ್ಥಿಕ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲ. ಆಕಳು, ಎಮ್ಮೆಗೆ ಹೋಲಿಸಿದರೆ ಕತ್ತೆಗಳಿಗೆ ಹೆಚ್ಚು ನಿಗಾ ವಹಿಸಬೇಕಿಲ್ಲ. ಇದು ಕೂಡ ಕತ್ತೆಗಳ ಸಂಖ್ಯೆ ಅಧಿಕವಾಗಿರಲು ಕಾರಣವಾಗಿದೆ.ಇಲ್ಲಿನ ಬಹುತೇಕ ತಾಂಡಾಗಳು ಹಾಗೂ ರೈತರ ಹೊಲಗಳಿಗೆ ಸಂಪರ್ಕ ರಸ್ತೆಯೇ ಇಲ್ಲ. ಅನಿವಾರ್ಯವಾಗಿ ಕತ್ತೆಗಳನ್ನು ಅವಲಂಬಿಸಲೇಬೇಕು. ಕತ್ತೆಗಳು ಕಾಲುದಾರಿಯಲ್ಲೂ ಸಾವಕಾಶವಾಗಿ ಹೆಜ್ಜೆ ಹಾಕುತ್ತವೆ.‘ಕತ್ತೆಗಳ ಕೂಲಿ ತುಂಬಾ ಕಡಿಮೆ. ಇವು ಮಾಡುವಷ್ಟೇ ಕೆಲಸವನ್ನು ಟ್ರ್ಯಾಕ್ಟರ್‌ ಮೂಲಕ ಮಾಡಿಸಿದರೆ ಎರಡುಪಟ್ಟು ಹೆಚ್ಚು ಹಣ ಕೊಡಬೇಕಾಗುತ್ತದೆ’ ಎನ್ನುತ್ತಾರೆ ರೈತರು.ಮೂಟೆಯೊಂದನ್ನು ಕತ್ತೆ ಮೇಲೆ ಹೊಲಕ್ಕೆ ಅಥವಾ ಹೊಲದಿಂದ ಮನೆಗೆ ಸಾಗಿಸಲು ಇಪ್ಪತ್ತೈದು ರೂಪಾಯಿ ಕೊಡಬೇಕು. ಕತ್ತೆಗಳನ್ನು ಬಳಸುವುದರಿಂದ ಕೂಲಿ ಕಾರ್ಮಿಕರು ಹೆಚ್ಚು ಬೇಕಾಗುವುದಿಲ್ಲ. ಏಕೆಂದರೆ ಇವು ಮನೆ ಬಾಗಿಲಿಗೇ ಬರುತ್ತವೆ. ಕೆಲವೊಂದು ಕತ್ತೆಗಳ ಮಾಲೀಕರು ಮತ್ತು ರೈತರ ನಡುವೆ ‘ವಾರ್ಷಿಕ ಒಪ್ಪಂದ’ವೂ ಆಗಿರುತ್ತದೆ. ಕತ್ತೆಗಳ ‘ಸೇವೆ’ಗೆ ಪ್ರತಿಯಾಗಿ ನಿಗದಿಪಡಿಸಿದಷ್ಟು ಜೋಳ, ಬೇಳೆ, ಉದ್ದು, ಅಲಸಂದೆ ಕಾಳು ಸಿಗುತ್ತದೆ.ಬೇಸಿಗೆಯಲ್ಲಿ ಕತ್ತೆಗಳಿಗೆ ಕೆಲಸ ಕಡಿಮೆ. ಹೀಗಾಗಿ ಮರಳು ಸಾಗಣೆಗೆ ಹೆಚ್ಚು ಬಳಕೆ ಆಗುತ್ತವೆ. ಮಳೆಗಾಲದಲ್ಲಿ ಕತ್ತೆಗಳಿಗೆ ಬಿಡುವೇ ಇರುವುದಿಲ್ಲ. ರೈತರು ಹೊಲವನ್ನು ಬಿತ್ತಲು ಹದ ಮಾಡುತ್ತಾರೆ. ಕತ್ತೆಗಳು ಬೀಜ, ಗೊಬ್ಬರದ ಚೀಲಗಳನ್ನು ಹೊತ್ತು ಸಾಗುತ್ತವೆ. ಸುಗ್ಗಿ ಕಾಲದಲ್ಲಿ ರಾಶಿಯನ್ನು ಹೊತ್ತು ಮನೆ ಸೇರಿಸುತ್ತವೆ.‘ಹಿಂದಿನಿಂದಲೂ ನಮ್ಮದು ಇದೇ ಕಸುಬು. ಇದೇ ನಮ್ಮ ಜೀವನ. ಇದನ್ನು ಬಿಟ್ಟು ಬೇರೆ ಗೊತ್ತಿಲ್ಲ’ ಎನ್ನುತ್ತಾರೆ ಏಕಂಬಾ ಗ್ರಾಮದ ಸುಭಾಷ ಸಾಬ್ರಿ.

‘ಹೆಣ್ಣುಕತ್ತೆಗಳನ್ನು ಏಕೆ ಸಾಕುವುದಿಲ್ಲ’ ನಾನು ಕೇಳಿದೆ.‘ಅವುಗಳಿಂದ ಆದಾಯ ಕಡಿಮೆ’ ಸುಭಾಷ ಹೇಳಿದರು. ‘ಅದು ಹೇಗೆ’ ನನ್ನ ಪ್ರಶ್ನೆ.‘ಹೆಣ್ಣುಗಳು ಗಂಡುಕತ್ತೆಗಳಷ್ಟು ಭಾರ ಹೊರುವುದಿಲ್ಲ. ಅವು ಗರ್ಭ ಧರಿಸಿದರೆ ಭಾರ ಹಾಕುವಂತಿಲ್ಲ. ಮರಿ ಹಾಕಿದ ಮೇಲೂ ಕೆಲವು ವಾರ ಕೆಲಸಕ್ಕೆ ಬಳಸುವಂತಿಲ್ಲ. ಆದ್ದರಿಂದ ನಾವು ಗಂಡುಕತ್ತೆಗಳನ್ನು ಮಾತ್ರ ಖರೀದಿಸಿ ತರುತ್ತೇವೆ’ ಎಂದು ಸುಭಾಷ ವ್ಯಾವಹಾರಿಕವಾಗಿ ಮಾತನಾಡಿದರು.

ಇತಿಹಾಸದಲ್ಲಿ ಓದಿದ ನೆನಪು. ಮಾನವರು ಐದು ಸಾವಿರ ವರ್ಷಗಳ ಹಿಂದೆಯೇ ಕತ್ತೆಗಳನ್ನು ಹಿಡಿದು ಪಳಗಿಸಿ ಕೃಷಿ ಚಟುವಟಿಕೆ ಮತ್ತು ಸರಕು ಸಾಗಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು. ಆದರೆ ಕತ್ತೆಗಳು ಗುಡ್ಡಗಾಡು, ಎತ್ತರ ಪ್ರದೇಶ ಮತ್ತು ರಸ್ತೆ ಇಲ್ಲದ ಕಡೆಗಳಲ್ಲಿ ಈಗಲೂ ಅದೇ ಕೆಲಸವನ್ನು ಮಾಡುತ್ತಿವೆ.‘ಐದಾರು ವರ್ಷಗಳಿಂದ ಕತ್ತೆಗಳ ಪೋಷಣೆ ಕಷ್ಟವಾಗಿದೆ. ಕಳ್ಳರ ಕಾಟವೂ ಹೆಚ್ಚಾಗಿದೆ. ಆದಾಯವೂ ಕಡಿಮೆಯಾಗುತ್ತಿದೆ. ನಮ್ಮ ಮಕ್ಕಳು ಕತ್ತೆಗಳನ್ನೇ ನಂಬಿ ಜೀವನ ನಡೆಸಬೇಕು ಎಂದು ಹೇಳುವ ಧೈರ್ಯ ನಮಗಿಲ್ಲ. ಆದ್ದರಿಂದ ಅವರನ್ನು ಶಾಲೆಗೆ ಕಳುಹಿಸುತ್ತಿದ್ದೇವೆ’ ಎನ್ನುತ್ತಾರೆ ಔರಾದ್‌ನ ವಿಠಲ ಕುಂಬಾರ.‘ಇಲ್ಲಿ ಇನ್ನೂ ಎಷ್ಟು ವರ್ಷ ಕತ್ತೆಗಳದೇ ಕಾಲ’ ಎಂದು ಪಟೇಲರನ್ನು ಕೀಟಲೆ ಮಾಡಿದೆ.‘ಈಗ ಕತ್ತೆಗಳನ್ನು ಪೋಷಣೆ ಮಾಡುತ್ತಿರುವವರ ವಯಸ್ಸು ಇಪ್ಪತ್ತರಿಂದ ಐವತ್ತರವರೆಗೆ ಇದೆ. ಅವರು ಇನ್ನೂ ನಲವತ್ತು ವರ್ಷ ಈ ಕಸುಬಿನಲ್ಲೇ ಮುಂದುವರಿಯಬಹುದು’ಎಂದು ಪಟೇಲ್‌ ಅಂದಾಜು ಮಾಡಿದರು.ಹಿಂದೆ ಹಳ್ಳಿಗಳಲ್ಲಿ ಅಗಸರು ಕತ್ತೆಗಳ ಮೇಲೆ ಬಟ್ಟೆಯನ್ನು ಹೇರಿಕೊಂಡು ನೀರು ಇರುವಲ್ಲಿಗೆ ಹೋಗುತ್ತಿದ್ದರು. ಕುಂಬಾರರು ಮಡಿಕೆಗಳನ್ನು ಒಪ್ಪವಾಗಿ ಜೋಡಿಸಿಕೊಂಡು ಮಾರಾಟಕ್ಕೆ ಹೊರಡುತ್ತಿದ್ದರು. ವಡ್ಡರು ರಾಗಿಕಲ್ಲು, ಹೊರಳುಕಲ್ಲು, ಗುಂಡುಕಲ್ಲುಗಳನ್ನು ಹಾಕಿಕೊಂಡು ಊರೂರು ಸುತ್ತುತ್ತಿದ್ದರು. ಸೇಂದಿ ಮಾರುವವರೂ ಕತ್ತೆಗಳನ್ನೇ ಬಳಸುತ್ತಿದ್ದರು. ಇಂಥ ಕತ್ತೆಗಳು ಸೋಮಾರಿ, ಮೊಂಡು, ಬುದ್ಧಿ ಇಲ್ಲದ್ದು ಎನ್ನುವ ತಮಾಷೆ ಕತೆಗಳು ಜನಜನಿತ.‘ಕತ್ತೆ ಮೂರ್ಖ ಪ್ರಾಣಿಯೋ, ಇಲ್ಲವೋ ಎನ್ನುವ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆದಿಲ್ಲ. ಕತ್ತೆ ಅತಿಹೆಚ್ಚು ಕೆಲಸ ಮಾಡುತ್ತದೆ. ಕೆಲ ದೇಶಗಳಲ್ಲಿ ಕತ್ತೆಗಳನ್ನು ಕುರಿಗಳ ಕಾವಲಿಗೆ ಇಡಲಾಗುತ್ತದೆ’ ಎನ್ನುವುದು ಪಶು ವೈದ್ಯರೊಬ್ಬರ ವಿವರಣೆ. ಜೀವವಿಜ್ಞಾನದ ಪ್ರಕಾರ ಯಾವುದು ಶಕ್ತಿಶಾಲಿಯಾಗಿರುತ್ತದೆಯೋ ಅದು ಉಳಿಯುತ್ತದೆ. ಯಾವುದು ದುರ್ಬಲವಾಗಿರುತ್ತದೆಯೋ ಅದು ಅಳಿಯುತ್ತದೆ.  ಬದಲಾಗುವ ಕಾಲಘಟ್ಟದಲ್ಲಿ ‘ಕತ್ತೆ’ಗಳು ‘ಕತೆ’ಯಾಗಬಹುದು. ಏಕೆಂದರೆ ಎಲ್ಲರೂ ಕಾಲದ ಜತೆಗೆ ಹೆಜ್ಜೆ ಹಾಕಬೇಕಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry